ಹಾಸನ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜೀವನವೇ ಈ ಜಗತ್ತಿಗೆ ಒಂದು ಸಂದೇಶವಾಗಿದ್ದು, ಸತ್ಯ ಮತ್ತು ಅಹಿಂಸಾ ತತ್ವಾದರ್ಶಗಳು, ಶ್ರಮದಾನ ಹಾಗೂ ಸ್ವಚ್ಛತಾ ಮನೋಭಾವವನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಗಂಧದ ಕೋಠಿ ಅವರಣದಲ್ಲಿರುವ ಜಿ.ಜಿ.ಜೆ.ಸಿ. ಪ್ರಧಾನ ಶಾಲೆಯ ಉಪಪ್ರಾಂಶುಪಾಲರಾದ ಮಂಜುನಾಥ್ ಹೇಳಿದರು.
ನಗರದ ಆರ್. ಸಿ. ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರಧಾನ) ಹಾಗೂ ಪ್ರೌಢಶಾಲಾ ವಿಭಾಗ ಇಲ್ಲಿ ಆಯೋಜನೆಗೊಂಡಿದ್ದ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗಾಂಧೀಜಿ ಮತ್ತು ಶಾಸ್ತ್ರೀಜಿ ಇಬ್ಬರೂ ಸರಳತೆ, ಸತ್ಯ ಮತ್ತು ಅಹಿಂಸಾ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದ ಮೇರು ವ್ಯಕ್ತಿತ್ವದ ಮಹಾಪುರುಷರು ಎಂದು ಹೇಳಿದರು. ಸ್ವಚ್ಛತೆಯ ಬದುಕನ್ನು ವಿದ್ಯಾರ್ಥಿಗಳು ಅನುಸರಿಸಬೇಕು ಎಂದರು. ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಶಾಲಾವರಣದ ಸುತ್ತ ಸ್ವಚ್ಛತೆಯನ್ನು ಮಾಡಲಾಗಿದೆ. ಆ ಮೂಲಕ ಮಕ್ಕಳಲ್ಲಿ ಸ್ವಚ್ಛತೆಯ ಅರಿವನ್ನು ಉಂಟು ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕರಾದ ಕೆ. ಎನ್. ಚಿದಾನಂದ ಅವರು ಮಾತನಾಡುತ್ತಾ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ನಿಸ್ವಾರ್ಥ ಬದುಕಿನ ಅದ್ವಿತೀಯ ಶಕ್ತಿಯಾಗಿದ್ದು ಸಾರ್ವಜನಿಕ ಜೀವನದ ಬಹುದೊಡ್ಡ ಆಸ್ತಿ ಎಂದು ಹೇಳಿದರು. ಮಹಾತ್ಮಾ ಗಾಂಧೀಜಿಯವರ ಬಾಲ್ಯ, ವಿದ್ಯಾಭ್ಯಾಸ, ತಾಯಿಯಿಂದ ಪ್ರೇರಣೆಗೊಂಡದ್ದು, ಸತ್ಯ ಹೇಳುವುದನ್ನು ಮತ್ತು ಉಪವಾಸ ಮಾಡುವುದನ್ನು ಕಲಿತದ್ದು, ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ವ್ಯವಹಾರಗಳ ಪ್ರತಿನಿಧಿಯಾಗಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ಘಟನೆಗಳನ್ನು ಸವಿವರವಾಗಿ ತಿಳಿಸಿದರು. ಭಾರತಕ್ಕೆ ಬಂದ ಮೇಲೆ ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ನಡೆದ ಚಂಪಾರಣ್ಯ ಮತ್ತು ಖೇಡಾ ಸತ್ಯಾಗ್ರಹಗಳು, ಜಲಿಯನ್ ವಾಲಾಬಾಗ್ ಘಟನೆ, ಖಿಲಾಫತ್ ಚಳವಳಿ, ಅಸಹಕಾರ ಚಳುವಳಿ, 1924 ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು, ಕಾನೂನು ಭಂಗ ಚಳುವಳಿ, ದಂಡಿ ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಚಳುವಳಿ, ಇಪ್ಪತ್ತೊಂದು ದಿನಗಳ ಉಪವಾಸ ಸತ್ಯಾಗ್ರಹ, 1942ರ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ, 1947 ರ ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯ ಪಡೆದ ಎಲ್ಲಾ ಘಟನೆಗಳನ್ನು ವಿವರಿಸುತ್ತಾ ಮಹಾತ್ಮಾ ಗಾಂಧೀಜಿಯವರನ್ನು ಇಂದು ಇಡೀ ವಿಶ್ವವೇ ಸುರಿಸುತ್ತದೆ ಎಂದು ತಿಳಿಸಿದರು. ಸರಳತೆಯ ಸಾಕಾರ ಮೂರ್ತಿ ಎನಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತದ ಪ್ರಧಾನಮಂತ್ರಿ ಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಸ್ವಾಭಿಮಾನಿ ರಾಷ್ಟ್ರವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ರಾಷ್ಟ್ರದ ರಕ್ಷಣೆಯಲ್ಲಿ ರೈತರ ಮತ್ತು ಸೈನಿಕರ ಪಾತ್ರ ಪ್ರಮುಖವಾಗಿದೆ ಎಂದು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡುವ ಮೂಲಕ ಚರಿತ್ರೆಯ ಪುಟಗಳಲ್ಲಿ ಅಜರಾಮರರಾಗಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಅನ್ನಪೂರ್ಣರವರು ಅಧ್ಯಕ್ಷತೆಯ ಸ್ಥಾನದಿಂದ ಮಾತನಾಡುತ್ತಾ ಗಾಂಧೀಜಿ ಮತ್ತು ಶಾಸ್ತ್ರೀಜಿಯವರು ಸರಳ ಜೀವನ ಮತ್ತು ಉದಾತ್ತ ಚಿಂತನೆಗಳ ಮೂಲಕ ಚಿರಸ್ಥಾಯಿಯಾಗಿದ್ದು ಅವರ ಜೀವನಾದರ್ಶಗಳು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದರು. ಸಂಗೀತ ಶಿಕ್ಷಕರಾದ ಸತ್ಯ ನಾರಾಯಣ ಮುರಳಿಯವರು ಕಾರ್ಯಕರ್ಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸರ್ವ ಧರ್ಮ ಪ್ರಾರ್ಥನೆ, ಪವಿತ್ರ ಗ್ರಂಥಗಳಾದ ಖುರಾನ್, ಬೈಬಲ್ ಹಾಗೂ ಭಗವದ್ದೀತೆಗಳ ಪಠಣ ಮಾಡಿಸಲಾಯಿತು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಪ್ರೌಢಶಾಲೆಯ ಸಹಶಿಕ್ಷಕರು ಮತ್ತು ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ