ಬೆಂಗಳೂರು: 'ಕಾರ್ಬನ್ ಡೈಆಕ್ಸೈಡ್' ಅಂದರೆ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ನಿಯಂತ್ರಿಸಲು ನಾವು 'ಹಸಿರು ಹೈಡ್ರೋಜನ್' ಅಂದರೆ 'ಗ್ರೀನ್ ಹೈಡ್ರೋಜನ್' ಅನ್ನು ಆಶ್ರಯಿಸುವ ಕಾಲ ಬಂದಿದೆ. ಇದರಿಂದ ಪಳೆಯುಳಿಕೆ ಇಂಧನ ಮೂಲಗಳ ಬಳಕೆಯಿಂದ ಆಗುವ ಪರಿಸರ ಹಾನಿಯನ್ನು ತಪ್ಪಿಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಶನಲ್ ಹೈಡ್ರೋಜನ್ ಮಿಶನ್ (ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಶನ್) ಅನ್ನು ಸ್ಥಾಪಿಸಿರುವ ಉದ್ದೇಶವೇ ಈ ನಿಟ್ಟಿನಲ್ಲಿ ಅಗತ್ಯ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವುದಾಗಿದೆ. ಗ್ರೀನ್ ಹೈಡ್ರೋಜನ್ ಉತ್ಪಾದನೆಯ ವೆಚ್ಚವನ್ನು ತಗ್ಗಿಸುವಲ್ಲಿ ಈ ಸಂಶೋಧನೆಗಳು ನೆರವಾಗಬಲ್ಲವು. ಆಗ ಮಾತ್ರವೇ ನಮ್ಮ ದೇಶ, ಇಂಗಾಲದ ನಿರಂತರ ಹೊರಸೂಸುವಿಕೆಯಿಂದ ಅನಾಹುತಗಳನ್ನು ತಪ್ಪಿಸಿ, ದೇಶವನ್ನು ಪ್ರಗತಿ ಪಥದಲ್ಲಿ ಒಯ್ಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೊಟ್ ಹೇಳಿದರು.
ಅವರು, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 'ನ್ಯಾಶನಲ್ ಹೈಡ್ರೋಜನ್ ಮತ್ತು ಫ್ಯುಯಲ್ ಸೆಲ್ ದಿನಾಚರಣೆ', ಹಾಗೂ ಸಂಸ್ಥೆಯಲ್ಲಿ ಸ್ಥಾಪಿತಗೊಂಡಿರುವ 'ಶುದ್ಧಇಂಧನ ಮೂಲಗಳ ಕುರಿತ ಉನ್ನತ ಸಂಶೋಧನಾ ಕೇಂದ್ರ' ದ ಉದ್ಘಾಟನಾ ಕಾರ್ಯಕ್ರಮಗಳ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಈ ನಿಟ್ಟಿನಲ್ಲಿ ಕಡಿಮೆ ವೆಚ್ಚದಲ್ಲಿ ಸಮುದ್ರ ನೀರನ್ನು ವಿಭಜಿಸಿ 'ಗ್ರೀನ್ ಹೈಡ್ರೋಜನ್' ಉತ್ಪಾದನೆ ಮಾಡಬಹುದೆಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಮಹತ್ವದ ಸಂಶೋಧನೆ ಮಾಡಿದೆ ಹಾಗೂ ತನ್ನ ಸಂಶೋಧನೆಯನ್ನು ಮತ್ತಷ್ಟು ಸುಧಾರಿಸಲು ಪ್ರಯತ್ನ ಮುಂದುವರಿಸಿದೆ. ಭೂಮಿಯಲ್ಲಿರುವ ನೀರಿನ ಪ್ರಮಾಣದ ಬಹುತೇಕ ಭಾಗ ಸಮುದ್ರಕ್ಕೆ ಸೇರಿದೆ, ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕೆ ಲಭ್ಯವಿರುವ ಸಿಹಿನೀರಿನ ಪ್ರಮಾಣ ಅತ್ಯಲ್ಪ. ಈ ಸಂಶೋಧನೆಯಿಂದ ನಾವು ನಮ್ಮ ಸಿಹಿನೀರನ್ನೂ ಕಾಪಾಡಬಹುದು ಹಾಗೂ ಅಪಾರವಾಗಿ ಲಭ್ಯವಿರುವ ಸಮುದ್ರದ ನೀರನ್ನು ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಬಳಸಿಕೊಳ್ಳಬಹುದು. ಇಂತಹ ಮಹತ್ವಪೂರ್ಣ ಕಾರ್ಯ ನೆರವೇರಿಸಲು ಭಾರತದ ಇಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು 2030ರ ಹೊತ್ತಿಗೆ ನಮ್ಮ ದೇಶವನ್ನು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಯಿಂದ ಪಾರುಮಾಡಬೇಕು', ಎಂದು ರಾಜ್ಯಪಾಲರು ನುಡಿದರು.
ನಂತರ ಅವರು ಸಂಸ್ಥೆಯಲ್ಲಿ ಸ್ಥಾಪಿತವಾಗಿರುವ 'ಅಡ್ವಾನ್ಸ್‌ಡ್ ರಿಸರ್ಚ್ ಸೆಂಟರ್ ಫಾರ್ ಕ್ಲೀನ್ ಎನರ್ಜಿ'ಯನ್ನು ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ 'ಗ್ರೀನ್ ಎನರ್ಜಿ' ಕುರಿತ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯ ಹಾಗೂ ಉಡ್ಜನ್ ಸಂಸ್ಥೆಗಳ ನಡುವೆ ಪರಸ್ಪರ ಒಪ್ಪಂದದ ಅಧಿಕೃತ ವಿನಿಮಯ ಕೂಡ ನೆರವೇರಿತು.
ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ನಾಗರಾಜ್ ಸ್ವಾಗತಿಸಿದರು. ಸಂಸ್ಥೆಯ ಜೈವಿಕ ತಂತ್ರಜ್ಞಾನದ ಮುಖ್ಯಸ್ಥ ಪ್ರೊ. ಎಂ. ಎಸ್. ಠಾಕುರ್ ಅವರು ಗ್ರೀನ್ ಎನರ್ಜಿ ಕುರಿತು ನಡೆದಿರುವ ಸಂಶೋಧನೆಯ ವಿವರ ನೀಡಿದರು. ಉಡ್ಜನ್ ಸಂಸ್ಥೆಯ ಡಾ. ಹೆಚ್.ಪಿ. ನಾಯಕ್, ನಿಟ್ಟೆ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಹಾಗೂ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವರ್ಗದವರು ಉಪಸ್ಥಿತರಿದ್ದರು. ಪ್ರೊ. ಕೆ.ಬಿ. ರಾವ್ ಅವರು ವಂದನಾರ್ಪಣೆ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ