ರಾಮಾಯಣ ಹಕ್ಕಿನೋಟ-36: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0
ಶ್ರೀರಾಮಾಯನಮ:


ರಾಮ ಲಕ್ಷ್ಮಣ ಜಾನಕೀ 

ಜೈ ಬೋಲೋ ಹನುಮಾನ್ ಕೀ!

ಕಳಕೊಳ್ಳುವುದು ಪಡಕೊಳ್ಳುವುದು

ಇದು ಜೀವನದ ಅವಿಭಾಜ್ಯ ಕ್ರಿಯೆ.


ರಾಮ ತಾತ್ಕಾಲಿಕವಾಗಿ ರಾಜ್ಯವನ್ನು ಕಳಕೊಂಡ.ಪಡಕೊಂಡದ್ದು?

ಜೀವನದುದ್ದಕ್ಕೂ ಬಂದ ತಮ್ಮಂದಿರ ಪ್ರೀತಿ!

ರಾಮನಿರುವ ತನಕ ರಾಮನೊಂದಿಗೆ ಪೂಜಿಸಲ್ಪಡುವ ನಂಬಿಕೆಯ ಬಂಟ ಹನುಮಂತ!


ಅಯೋಧ್ಯೆಯಲ್ಲಿ ಪರಿಜನ ಪುರಜನರೊಂದಿಗೆ ರಥದಲ್ಲಿ ಸುತ್ತಾಟ ನಡೆಸುತ್ತಿದ್ದ ರಾಮ ಸತಿ ಸೀತೆಯೊಂದಿಗೆ ಲಕ್ಷ್ಮಣನೊಬ್ಬನ ಬೆಂಗಾವಲಿನೊಂದಿಗೆ ಕಾಲ್ನಡಿಗೆಯಲ್ಲಿ ತಂದೆ ದಶರಥನಿದ್ದ ಕೈಕೇಯಿಯ ಅರಮನೆಗೆ ಬಂದನು.ಬರುವ ದಾರಿಯಲ್ಲಿ ಪುರಜನರ ವಿವಿಧ ರೀತಿಗಳ ಅನುಕಂಪದ ಶೋಕದ ರೋಷದ ಮಾತುಗಳು ಕಿವಿಗಳಿಗೆ ಬೀಳುತ್ತಿದ್ದರೂ ಗಮನಗೊಡದೆ ನಸುನಗುವಿನೊಂದಿಗೆ  ಬಂದನು.ಸುಮಂತ್ರನ ಮೂಲಕ ದಶರಥನಿಗೆ ತಾನು ಬಂದ ವಿಚಾರವನ್ನು ಹೇಳಿ ಕಳುಹಿಸಿದನು.ದಶರಥನು ತನ್ನೆಲ್ಲಾ ರಾಣಿಯರನ್ನು ಅಲ್ಲಿಗೆ ಬರಲು ಹೇಳಿ ಅವರು ಬಂದು ಸೇರಿದ ಬಳಿಕ ರಾಮ ಸೀತೆ ಲಕ್ಷ್ಮಣರನ್ನು ಬರಹೇಳಿದನು.


ರಾಹುಗ್ರಸ್ತ ಸೂರ್ಯನಂತಿದ್ದ ರಾಜನ ಬಳಿಗೆ ಬಂದ ರಾಮನು-ಮಹಾರಾಜ! ನೀನು ನಮ್ಮೆಲ್ಲರಿಗೂ ಸ್ವಾಮಿಯಾಗಿರುವೆ.ದಂಡಕಾರಣ್ಯಕ್ಕೆ ಹೊರಟಿರುವ ನನ್ನನ್ನು ಶುಭ ದೃಷ್ಟಿಯಿಂದ ನೋಡಿ ಅನುಗ್ರಹಿಸಿ ಕಳುಹಿಸಿ ಕೊಡು-ಎಂದು ಪ್ರಾರ್ಥಿಸಿದನು.


ನೊಂದ ಬೆಂದ ರಾಜ ದಶರಥನು-ಮಗು!ಪಾರಲೌಕಿಕವಾದ ಫಲವನ್ನು ಪಡೆಯುವುದಕ್ಕೂ,ಐಹಿಕವಾದ ಅಭಿವೃದ್ಧಿಯನ್ನು ಹೊಂದುವುದಕ್ಕೂ, ಪುನಃ ಅಯೋಧ್ಯೆಗೆ ಹಿಂದಿರುಗುವುದಕ್ಕೂ ಏಕಾಗ್ರಚಿತ್ತನಾಗಿ ಅರಣ್ಯಕ್ಕೆ ಪಯಣಿಸು.ನಿನಗೆ ಶುಭವಾಗಲಿ.ಮಾರ್ಗವು ದುಷ್ಟಜಂತುಗಳ ಭಯದಿಂದ ರಹಿತವಾಗಲಿ-ಎಂದು ರೋದಿಸುತ್ತಾ ಹರಸಿದನು.


ಒಮ್ಮೆಗೆ ಮುಗಿಯಿತೆಂದು ಕಂಡರೂ....

ಕೈಕೇಯಿಯ ಅರಮನೆಯಲ್ಲಿ-

.ರಾಜನು ಪುನಃ ವರವನ್ನು ಹಿಂಪಡೆಯಲು ವಿನಂತಿಸಿದ್ದು

. ಆಗಾಗ ಶೋಕದಿಂದ ಎಚ್ಚರ ತಪ್ಪುತ್ತಿದ್ದುದು

.ಸುಮಂತ್ರನು ಕೈಕೇಯಿಯನ್ನು ಆಕೆಯ ತಾಯಿಯ ಕೆಟ್ಟ ನಡೆಯನ್ನು ಉಲ್ಲೇಖಿಸಿ ನಿಂದಿಸಿದುದು

. ಕೈಕೇಯಿಯು ತಿರಸ್ಕಾರದಿಂದ ಇದ್ದು ರಾಮ,ಸೀತೆ,ಲಕ್ಷ್ಮಣರಿಗೆ ನಾರುಮಡಿ ತಂದುಕೊಟ್ಟು ಅವನ್ನೇ ಧರಿಸಿ ವನವಾಸಕ್ಕೆ ಹೊರಡಲು ಹೇಳಿದ್ದು

.ಸೀತೆಯು ಉಡಲು ತಿಳಿಯದೆ ಸಂಕಟ ಪಟ್ಟಾಗ ರಾಮನೇ ಉಡಿಸಿದ್ದು

. ದಶರಥನು ತಾನೂ ವನವಾಸಕ್ಕೆ ಬರುತ್ತೇನೆಂದು ಹೇಳಿದ್ದು

. ವಸಿಷ್ಠ ಮಹರ್ಷಿಗಳು ಕೈಕೇಯಿಯನ್ನು ನಿಂದಿಸುತ್ತಾ  ನಿನ್ನ ಮಗ ಭರತನೂ ಸೇರಿದಂತೆ ಲೋಕದಲ್ಲಿ ಇರುವ ಎಲ್ಲರೂ ರಾಮನನ್ನು ಅನುಸರಿಸುವರು, ನೀನೊಬ್ಬಳೇ ಈ ರಾಜ್ಯದ ಲ್ಲುಳಿಯ ಬೇಕಾದೀತೆಂದು ಎಚ್ಚರಿಸಿದ್ದು

. ರಾಮನು ತಂದೆಯಲ್ಲಿ ತಾಯಿ ಕೌಸಲ್ಯೆಯ ಮೇಲೆ ಕೃಪಾ ದೃಷ್ಟಿಯನ್ನಿಡುವಂತೆ ಕೇಳಿಕೊಂಡದ್ದು

. ಕೌಸಲ್ಯೆಯು ಸರ್ವಾಲಂಕಾರ ಭೂಷಿತೆಯಾದ ಸೀತೆಯನ್ನು ತಬ್ಬಿಕೊಂಡು ಸತಿಧರ್ಮವನ್ನು ಉಪದೇಶಿಸಿ ಅದನ್ನು ಪಾಲಿಸಲು ಹೇಳಿದ್ದು

. ರಾಮನು ತನ್ನೆಲ್ಲಾ ತಾಯಂದಿರಲ್ಲಿ ತಾನು ತಪ್ಪೆಸಗಿದ್ದಲ್ಲಿ ಕ್ಷಮಿಸಿ ಎಂದು ವಿನಂತಿಸಿದ್ದು...

ಮುಂತಾದ ಘಟನಾವಳಿಗಳು ನಡೆದವು.

ಹಾ ಪುತ್ರಾ! ಹಾ ರಾಮ! ಎನ್ನುವ ಎದೆಕರಗುವ ರೋದನಗಳ ಮಧ್ಯೆ ರಾಮ ವನವಾಸಕ್ಕೆ ಹೊರಟನು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top