ಶಿವಮೊಗ್ಗ: ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರವು 1-4-2006 ರಿಂದ ತನ್ನ ನೌಕರರಿಗೆ ಹೊಸ ಅಂಶದಾಯಿ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರದ ಅಧೀನದ ವಿಶ್ವವಿದ್ಯಾಲಯಗಳೂ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಹೇಳಲಾಗಿದೆ. ಅನೇಕ ಜನ ನೌಕರರುಗಳು ಈ ಮೊದಲು ಪಿಂಚಣಿಯುಕ್ತ ಸೇವೆಯಲ್ಲಿದ್ದು, ಅಲ್ಲಿಂದ ವಿಶ್ವವಿದ್ಯಾಲಯದಲ್ಲಿ ಬೋಧಕ ಅಥವಾ ಬೋಧಕೇತರ ಹುದ್ದೆಗೆ ಸೂಕ್ತ ಪ್ರಾಧಿಕಾರದ ಮೂಲಕ ಅರ್ಜಿ ಹಾಕಿ, ಆಯ್ಕೆಯಾದಾಗ, ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆದು ವಿಶ್ವವಿದ್ಯಾಲಯದ ಹೊಸ ಹುದ್ದೆಯನ್ನು 1-4-2006 ರ ನಂತರ ಸೇರಿದವರನ್ನು ಬಲವಂತವಾಗಿ ಹೊಸ ಪಿಂಚಣಿ ಯೋಜನೆಗೆ ಸೇರಿಸಲಾಗಿದೆ. ಅನೇಕ ವರ್ಷ ಪಿಂಚಣಿಯುಕ್ತ ಸೇವೆಯಲ್ಲಿ ಸೇವೆ ಸಲ್ಲಿಸಿ ನಂತರ ಸೂಕ್ತ ನಿಯಮ ಅನುಸರಿಸಿ ವಿಶ್ವವಿದ್ಯಾಲಯಕ್ಕೆ ಸೇರಿದ ನೌಕರರಿಗೆ ಇದರಿಂದ ಅನ್ಯಾಯವಾಗಿದೆ.
1-4-2006 ಕ್ಕಿಂತ ಮೊದಲು ಹಳೆಯ ಪಿಂಚಣಿ ಯೋಜನೆಯಲ್ಲಿದ್ದು ಸರ್ಕಾರದ ಒಂದು ಇಲಾಖೆಯಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪಿಂಚಣಿಯುಕ್ತ ಸೇವೆ ಸಲ್ಲಿಸಿ ಮತ್ತೊಂದು ಇಲಾಖೆಯ ಹುದ್ದೆಗೆ ಯುಕ್ತ ರೀತಿಯಲ್ಲಿ ಅರ್ಜಿ ಹಾಕಿ ಆಯ್ಕೆಯಾಗಿ ಹೊಸ ಹುದ್ದೆಗೆ ಸೇರಿದವರನ್ನು ಹಳೆಯ ಪಿಂಚಣಿ ಯೋಜನೆಯಲ್ಲಿ ಮುಂದುವರೆಸಲಾಗಿದೆ. ಆದರೆ ಈ ಆದೇಶವು ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಾಗಿರುವುದರಿAದ ಅಲ್ಲಿನ ಹೊಸ ಹುದ್ದೆಗೆ 1-4-2006 ರ ನಂತರ ವರದಿ ಮಾಡಿಕೊಂಡ ನೌಕರರುಗಳಿಗೆ ಹಳೆಯ ಪಿಂಚಣಿಯನ್ನು ಮುಂದುವರೆಸಲು ಸಾಧ್ಯವಿಲ್ಲ ಎನ್ನುವುದು ಆರ್ಥಿಕ ಇಲಾಖೆಯ ಅಭಿಪ್ರಾಯ.
ಹಳೆಯ ಪಿಂಚಣಿಯನ್ನು ವಿಶ್ವವಿದ್ಯಾಲಯದ ಈ ರೀತಿಯ ನೌಕರರಿಗೆ ಮುಂದುವರೆಸಿದ ಅನೇಕ ನಿದರ್ಶನಗಳು ಕೇಂದ್ರ ಸರ್ಕಾರ, ಒರಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿವೆ. ಈ ಮಲತಾಯಿ ದೋರಣೆಯ ವಿರುದ್ಧ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರಿನ 38 ಜನ ಪ್ರಾಧ್ಯಾಪಕರು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ 2016 ರಲ್ಲಿ ದಾವೆ ಹೂಡಿದ್ದರು. ಸುಮಾರು 7 ವರ್ಷಗಳ ನಂತರ ಈ ದಾವೆಯ (ಡಬ್ಲ್ಯುಪಿ 1439/2016) ಕುರಿತು ಶ್ರೀಮತಿ ಹೇಮಲೇಖ ಇವರ ನ್ಯಾಯಪೀಠವು ಐತಿಹಾಸಿಕ ತೀರ್ಪು ನೀಡಿ ಪಿಂಚಣಿಯು ನೌಕರರ ಅತ್ಯಂತ ನ್ಯಾಯಯುಕ್ತ ಹಕ್ಕಾಗಿದ್ದು ಇದನ್ನು “ಆಸ್ತಿ ಹಕ್ಕು” ಎಂದು ಪರಿಗಣಿಸಿ ನೀಡಬೇಕು ಎಂದು ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಅನೇಕ ತೀರ್ಪುಗಳನ್ನು ಉಲ್ಲೇಖಿಸಿ ತೀರ್ಪು ನೀಡಿ ಇದನ್ನು ಎರಡು ತಿಂಗಳೊಳಗೆ ಪಾಲಿಸಬೇಕು ಎಂದು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ.
ಇದೇ ರೀತಿಯ ಪ್ರಕರಣದಲ್ಲಿ ಶ್ರೀ ಕೃಷ್ಣ ದೀಕ್ಷಿತ್ ಇವರ ನ್ಯಾಯಪೀಠ ನೀಡಿದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ ಅರ್ಜಿಯನ್ನು ದ್ವಿಸದಸ್ಯ ಪೀಠ ವಜಾಗೊಳಿಸಿದೆ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಪಪಮೀವಿವಿ, ಬೀದರದ ಶಿಕ್ಷಕರ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಅರ್ಜಿದಾರರಲ್ಲಿ ಒಬ್ಬರಾದ ಡಾ: ಎನ್.ಬಿ.ಶ್ರೀಧರ ಇವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ