ಪುಷ್ಫೋದ್ಯಮಕ್ಕೆ ಬೇಕು ಬೆಂಬಲ

Upayuktha
0

ಸಾಲು ಸಾಲು ಹಬ್ಬಗಳು ಹೂ ಬೆಳೆಗಾರರಲ್ಲಿಯೂ ಸಂತಸ ತರಲಿ



ಗ ಸಾಲು ಸಾಲು ಹಬ್ಬಗಳ ಸಮಯ. ಹಬ್ಬಗಳ ಮುಖ್ಯ ಉದ್ದೇಶ ಸಂತೋಷವನ್ನು ತರುವುದಷ್ಟೇ ಅಲ್ಲ, ವ್ಯಾಪಾರದ ದೃಷ್ಟಿಯಿಂದಲೂ ಹಬ್ಬಗಳು ಮುಖ್ಯ. ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಉತ್ಸಾಹವಿದೆ, ಇದರಿಂದಾಗಿ ಪ್ರತಿಯೊಬ್ಬ ಸಣ್ಣ ಮತ್ತು ದೊಡ್ಡ ವ್ಯಾಪಾರಿಗಳಿಗೆ ವ್ಯಾಪಾರ ಅವಕಾಶ ಸಿಗುತ್ತದೆ. ದೇಶದ ಆರ್ಥಿಕ ಸ್ಥಿತಿಯಲ್ಲಿ ಈ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಈ ದಿನಗಳಲ್ಲಿ ಮಾರುಕಟ್ಟೆಯ ವಾತಾವರಣವು ಹೆಚ್ಚಾಗುತ್ತದೆ, ಇದರಿಂದಾಗಿ ಹಣದ ಚಲನೆ ಇರುತ್ತದೆ, ಇದು ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಹಬ್ಬಗಳು ಮನಸ್ಸನ್ನು, ಮನೆಯನ್ನು ಬೆಳಗಿಸುತ್ತದೆ ಮಾತ್ರವಲ್ಲದೆ ಆರ್ಥಿಕತೆಯಲ್ಲಿ ಸಂಚಲನ ಮೂಡಿಸುತ್ತದೆ.


ದೇಶಾದ್ಯಂತ ಓಣಂನಿಂದ ಆರಂಭಗೊಂಡ ಹಬ್ಬದ ಋತುವಿನ ಖರೀದಿ, ದಸರಾ ಸಂದರ್ಭದಲ್ಲಿ ರಂಗು ಪಡೆದುಕೊಂಡು ದೀಪಾವಳಿಯ ಸಡಗರದಲ್ಲಿ ಮತ್ತಷ್ಟು ಉತ್ತುಂಗಕ್ಕೇರುತ್ತದೆ. ಈ ಸಮಯದಲ್ಲಿ ಪುಷ್ಪೋದ್ಯಮದಲ್ಲಿ ತೊಡಗಿಸಿಕೊಂಡಿರುವ ರೈತರ ಬಾಳೂ ಹಸನಾಗಲಿ.


ಅಂಗಳದಿಂದ ಮಾರ್ಗದಂಚಿಗೆ ಬರುವ ಪುಷ್ಪಗಳು:

ಮುಂಜಾನೆ ವಾಹನದಲ್ಲಿ ಹೋಗುವಾಗ ಸಾಮಾನ್ಯವಾಗಿ ಕಾಣಸಿಗುವ ದೃಶ್ಯ ಕೈಯಲ್ಲಿ ಹೂಹಾರ ಹಿಡಿದು ಹೂ ಕೊಂಡುಕೊಳ್ಳಿ ಎಂದು ಅಂಗಲಾಚುವ ಮಕ್ಕಳು, ಮಹಿಳೆಯರು. ವಾಹನದ ದೇವರ ಚಿತ್ರಕ್ಕೋ, ವಾಹನಕ್ಕೋ ಹೂ ಹಾಕಿದರೆ ಸಾಮಾನ್ಯವಾಗಿ ಸೂರ್ಯ ನೆತ್ತಿ ಏರುವ ಸಮಯದಲ್ಲಿ ಬಾಡಿಹೋಗುವ ಹೂ ಯಾಕೆ, ಸುಮ್ಮನೆ ಅಪವ್ಯಯ ಎಂದುಕೊಳ್ಳುತ್ತೇವೆ. ಎಲ್ಲರೂ ನಮ್ಮ ಅಲೋಚನೆಯವರೇ ಆಗಿದ್ದರೆ, ಪ್ರಾಯಶಃ ಮಾರ್ಗದಂಚಿನಲ್ಲಿ ಹೂಮಾರುವ ಮಹಿಳೆಯರು, ಮಕ್ಕಳಿರುತ್ತಿರಲಿಲ್ಲ, ಅವರ ಬದುಕೂ ಅರಳುತ್ತಿರಲಿಲ್ಲ.


ಶಾಲಾ ರಜಾದಿನಗಳಲ್ಲಿಯಂತೂ ಹೂ ಕೀಳಿ, ಮಾಲೆ ಕಟ್ಟಿ, ಮಾರ್ಗದಂಚಿನಲ್ಲಿ ನಿಂತು ಮಾರಾಟ ಮಾಡುವ ಮಕ್ಕಳದೇ ಕಾರುಬಾರು. ನಾವು ಕೊಂಡುಕೊಳ್ಳುವ ಹೂ ಮಕ್ಕಳಲ್ಲಿ ಸ್ವಾಭಿಮಾನದ ಚಿಂತನೆಯನ್ನು ಅರಳಿಸುವುದು ಹಾಗೂ ಮಹಿಳೆಯರ ಸ್ವಾವಲಂಬನೆಗೆ ಪೂರಕವಾಗಬಲ್ಲುದು ಎಂದು ಕೊಂಡುಕೊಂಡಾಗ ಸಹಜವಾಗಿ ಸಾರ್ಥಕ್ಯದ ಭಾವ ಮೂಡಿಸುವುದು.


ಪುಷ್ಪ ಕೃಷಿ ಎಂಬುದು ಇತ್ತೀಚಿನ ದಿನಗಳವರೆಗೆ ಕೇವಲ ಮನೆಯಂಗಳದಲ್ಲಿ ಅಂದಕ್ಕಾಗಿ ಅಥವಾ ದೇವರ ಪೂಜೆಗಾಗಿ ಪ್ರಾಧಾನ್ಯತೆ ಪಡೆದಿತ್ತು. ಆದರೆ ಇದೀಗ ಇದೊಂದು  ಪ್ರಮುಖ ಕೃಷಿ ಉದ್ದಿಮೆಯಾಗಿ ಹೊರಹೊಮ್ಮುತ್ತಿದೆ. ಸುಖ ದುಖಃ ದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಈ ಉದ್ದಿಮೆ ಆರ್ಥಿಕತೆಯ ಸಮೃದ್ಧಿಯಲ್ಲೂ ಮೌನವಾಗಿ ಸಂಚಲನ ಮೂಡಿಸುತ್ತಿದೆ.


ಪುಷ್ಪ ಕೃಷಿಯ ವಿಸ್ತೀರ್ಣದ ದೃಷ್ಟಿಯಿಂದ ಕರ್ನಾಟಕವು ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು, ವಾಣಿಜ್ಯ ರೀತಿಯಲ್ಲಿ ಬೆಳೆಯುವ ಪುಷ್ಪಗಳಾದ ಗುಲಾಬಿ, ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಅಂಥೋರಿಯಂ ಇತ್ಯಾದಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಿದೆ.


''ಹೂವಿನ ಬೆಲೆಯಲ್ಲಿ ಹಾವು ಏಣಿಯಾಟ"

ಶ್ರಾವಣ ಮಾಸ ಶುರುವಾದರೆ ಸಾಲು ಸಾಲು ಹಬ್ಬಗಳು ಬರುತ್ತವೆ. ಹೂವುಗಳಿಗೆ ಸಾಕಷ್ಟು ಬೇಡಿಕೆ ಬರಲಿದೆ. ಉತ್ತಮ ಬೆಲೆ ಸಿಗುತ್ತದೆ ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಆಗಷ್ಟ್ ತಿಂಗಳಲ್ಲಿ ಮಳೆಯಿಲ್ಲದ ಕಾರಣ ಸೇವಂತಿ, ಚೆಂಡು, ಗುಲಾಬಿ ಹೂವು ಹೆಚ್ಚಿನ ಫಸಲು ಬಂದಿದ್ದು, ಬೇಡಿಕೆಗಿಂತ ಹೆಚ್ಚು ಮಾರುಕಟ್ಟೆಗೆ ಬಂದ ಕಾರಣ ದಿಢೀರ್ ಬೆಲೆ ಕುಸಿತ ಆಗಿದೆ. ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಕೇಳುವವರಿಲ್ಲದೇ, ಖರೀದಿ ಮಾಡುವವರಿಲ್ಲದೇ  ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಎಸೆದು ಹೋಗಿದ್ದಾರೆ.


ತುಂಬಾ ನಿರೀಕ್ಷೆಗಳಿಂದ ಬೆವರು ಸುರಿಸಿ ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಬರದೆ ರೈತ ಸ್ಥಿತಿ ಅಯೋಮಯವಾಗಿದೆ. ಆರ್ಥಿಕ ಸ್ಥಿರತೆಯಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುವ ಕೃಷಿ ಕ್ಷೇತ್ರದ ಈ ನಡೆಗಳು ಬೆಳೆಗಾರನನ್ನು ಅಸಹಾಯಕ ಸ್ಥಿತಿಗೆ ದೂಡುವುದರೊಂದಿಗೆ ಋಣಾತ್ಮಕವಾದ ದೂರಗಾಮಿ ಪರಿಣಾಮ ಬೀರುತ್ತದೆ.


ಕೃಷಿ ಇಂದು ಏಕರೂಪಿಯಲ್ಲ:

ಆದಾಯ ಹಾಗೂ ಅನುಭೋಗಗಳ ಹೆಚ್ಚಳವು ಆರ್ಥಿಕತೆಯ ಬೆಳವಣಿಗೆಯ ನಾಂದಿ. ಆರ್ಥಿಕ ಬೆಳವಣಿಗೆಯಾಗಬೇಕಾದರೆ ಉತ್ಪಾದನೆ, ಉದ್ಯೋಗ, ಆದಾಯ ಹೆಚ್ಚಳವಾಗಬೇಕು. ಇವೆಲ್ಲದರ ಪ್ರೇರಣೆಯೇ ಹೆಚ್ಚುವ ಅನುಭೋಗ ಅಥವಾ ಬೇಡಿಕೆ. ಮಾರುಕಟ್ಟೆಯ ಬೆಳವಣಿಗೆಯು ಬೇಡಿಕೆಯ ಮಟ್ಟವನ್ನು ಅವಲಂಬಿಸಿದೆ. ಹಾಗಾಗಿ ಬೇಡಿಕೆಯನ್ನು ಬಲಪಡಿಸುವ ಪ್ರಕ್ರಿಯೆಗಳು ದೇಶದ ಆರ್ಥಿಕತೆಯನ್ನು ಮೇಲ್ಮಟ್ಟಕ್ಕೆ ಒಯ್ಯುತ್ತವೆ.

ಕೃಷಿ ಇಂದು ಏಕರೂಪಿಯಲ್ಲ ಕೇವಲ ಜೀವನ ವಿಧಾನವಾಗಿಯೂ ಉಳಿದಿಲ್ಲ. ನಿಧಾನವಾಗಿ ಕೃಷಿಯಲ್ಲಿ ವಾಣಿಜ್ಯೀಕರಣದ ಪ್ರಕ್ರಿಯೆ ನಡೆಯುತ್ತಿದೆ, ಬೆಳವಣಿಗೆಯ ದೃಷ್ಟಿಯಿಂದ ಇದು ಸ್ವಾಗತಾರ್ಹ. ಮನೆಯಂಗಳದಲ್ಲಿ, ಕೈತೋಟದಲ್ಲಿ, ತಾರಸಿ ಮೇಲೆ ಹೂಗಿಡಗಳನ್ನು ಬೆಳೆದು, ಸ್ಥಳೀಯ ಮಾರುಕಟ್ಟೆಯಲ್ಲಿ ಹೂಮಾರಾಟ ಮಾಡಿ ಆಮೂಲಕ ಪರ್ಯಾಯ ಆದಾಯಮೂಲಗಳನ್ನು ಕಂಡುಕೊಳ್ಳುವ ಕುಟುಂಬಗಳನ್ನು ಪ್ರತಿಯೊಂದು ಊರಲ್ಲಿಯೂ ಇಂದು ಕಾಣಬಹುದಾಗಿದೆ. ತಮ್ಮ ಸುತ್ತಮುತ್ತ ಇರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಉತ್ಪಾದನೆಯಲ್ಲಿ ತೊಡಗಿಕೊಂಡು, ಅಗತ್ಯ ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಅಭಿವೃದ್ಧಿ ದೃಷ್ಠಿಯಿಂದ ಧನಾತ್ಮಕ ಚಲನೆ ಎಂಬುದನ್ನು ಗುರುತಿಸುವುದು, ಪ್ರೋತ್ಸಾಹಿಸುವುದು ಇಂದಿನ ಅಗತ್ಯವು ಕೂಡಾ. ಗ್ರಾಮೀಣ ಪ್ರದೇಶದ ಇಂತಹ ಚಟುವಟಿಕೆಗಳನ್ನು ಗುರುತಿಸಿ ಬೆಂಬಲಿಸುವ ಅಗತ್ಯ ಇದೆ. ಸ್ಥಳೀಯವಾಗಿ ಜೀವನೋಪಾಯ ಸೃಷ್ಟಿಸುವುದಲ್ಲದೆ ಇತರ ಚಟುವಟಿಕೆಗಳಲ್ಲೂ ಸಂಚಲನ ಮೂಡಿಸಬಲ್ಲುದು.


ಪುಷ್ಪೋದ್ಯಮದ ಸುಸ್ಥಿರ ಬೆಳವಣಿಗೆಗೆ ಆದ್ಯತೆ ನೀಡಬೇಕಿದೆ:

ಮುಂಜಾನೆ ಮೊದಲ ಕೆಲಸವೇ ಮನೆಯಂಗಳದಲ್ಲಿ ಬೆಳೆಸಿದ ಗಿಡಗಳಲ್ಲಿ ಅರಳಿದ ಹೂಗಳನ್ನು ಆಯ್ದು, ಸಂಗ್ರಹಿಸಿ, ಪೋಣಿಸಿ ಭಗವಂತನಿಗರ್ಪಿಸುವುದು ಪಾರಂಪರಿಕ ಸಂಪ್ರದಾಯವಾಗಿ ಬೆಳೆದುಬಂದಿದೆ. ಬದಲಾದ ಆರ್ಥಿಕ ಸನ್ನಿವೇಶದಲ್ಲಿ ಹೂ ಬೆಳೆಯುವುದು, ಮಾರಾಟಮಾಡುವುದೂ ಒಂದು ಆರ್ಥಿಕ ಚಟುವಟಿಕೆಯಾಗಿ, ಉದ್ಯಮವಾಗಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಆರಂಭಿಕ ದಿನಗಳಲ್ಲಿ ಉಪಕಸುಬಾಗಿ ವಿಕಸನಗೊಂಡು ಇದೀಗ ಪುಷ್ಪೋದ್ಯಮವಾಗಿ ಲಕ್ಷಾಂತರ ಜನರ ಜೀವನಾಧಾರವಾದ ಪುಷ್ಪಕೃಷಿಯ ಸುಸ್ಥಿರ ಬೆಳವಣಿಗೆಗೆ ಆಧ್ಯತೆ ನೀಡಬೇಕಾಗಿದೆ.


ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯಲ್ಲಿ ಸಹಜವಾಗಿ ಪೂರೈಕೆ ಮತ್ತು ಬೇಡಿಕೆಯ ಮಟ್ಟ ಆರ್ಥಿಕತೆಯ ಬೆಳವಣಿಗೆ ಹಾಗೂ ಸ್ಥಿರತೆಯನ್ನು ನಿರ್ಧರಿಸುತ್ತದೆ. ಸುಸ್ಥಿರ ಆರ್ಥಿಕ ಬೆಳವಣಿಗೆಯಲ್ಲಿ ಪುಷ್ಪೋದ್ಯಮದಲ್ಲಿ ಮೌಲ್ಯವರ್ಧನೆಗೆ ಹೆಚ್ಚು ಮಹತ್ವವನ್ನು ನೀಡಬೇಕು. ಪ್ರತಿ ಚಟುವಟಿಕೆಯ ಮಾರುಕಟ್ಟೆ ಸಾಮರ್ಥ್ಯವನ್ನು ಅಧ್ಯಯನ ಮಾಡಿ ಸೂಕ್ತ ಪ್ರೋತ್ಸಾಹ ನೀಡುವುದು ಆರ್ಥಿಕತೆಯ ಬೆಳವಣಿಗೆಗೆ ಪೂರಕ ನಡೆಯಾಗಲಿದೆ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಬೆಲೆ ದೊರಕುವಂತೆ ಮಾಡುವುದು ಆರ್ಥಿಕತೆಯ ಸ್ಥಿರತೆ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಅತೀ ಅಗತ್ಯ. ಕಷ್ಟಪಟ್ಟು ಬೆವರಿಳಿಸಿ ದುಡಿಯುವ ರೈತನ ಬಾಳು ಹಸನಾದರೆ ಆರ್ಥಿಕತೆಯೂ ಸುಸ್ಥಿರ ಬೆಳವಣಿಗೆಯನ್ನು ಪಡೆಯುಂತಾಗುವುದು.


ರೈತರು ಹಾವು ಏಣಿಯಾಟದಲ್ಲಿ ಬದುಕು ಕಟ್ಟಿಕೊಳ್ಳುವ ಅಸಹಾಯಕ ನಡೆಯ ಬದಲು ಚದುರಂಗದಾಟದಂತೆ ಹೊಣೆಯರಿತ, ಎಚ್ಚರಿಕೆಯ ಜಾಗೃತ ಹೆಜ್ಜೆ ಇಡುವಂತಾದಾಗ ಸಹಜವಾಗಿ ಭಾರತ ಅಭಿವೃದ್ಧಿಯತ್ತ ಸುದೃಢವಾದ ಹೆಜ್ಜೆ ಇಡಲು ಸಾಧ್ಯ ಎಂಬುದನ್ನು ನಾವೆಲ್ಲರೂ ಮನಗಾಣಬೇಕಾದ ದಿನ ಬಂದಿದೆ.



- ಡಾ. ಎ. ಜಯ ಕುಮಾರ ಶೆಟ್ಟಿ

ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾದ್ಯಾಪಕರು

ಶ್ರೀ. ಧ. ಮಂ. ಕಾಲೇಜು (ಸ್ವಾಯತ್ತ), ಉಜಿರೆ

9448154001

ajkshetty@sdmcujire.in


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top