
ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 'ಕಾಸರಗೋಡಿನ ಸಾಂಸ್ಕೃತಿಕ ವೈವಿಧ್ಯ' ಕುರಿತು 2023ರ ನವೆಂಬರ್ 14 ರಿಂದ 16 ರ ತನಕ ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಆಯೋಜಿಸುತ್ತಿದೆ. ಕೇರಳ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಷಯ ತಜ್ಞರು ಭಾಗವಹಿಸಲಿದ್ದಾರೆ.
ಕಾಸರಗೋಡು ಸಾಂಸ್ಕೃತಿಕ ವೈವಿಧ್ಯದ ನಾಡು, ಇಲ್ಲಿ 20ಕ್ಕೂ ಹೆಚ್ಚು ಭಾಷೆಗಳು ಮತ್ತು ಉಪಭಾಷೆಗಳು ಕಂಡುಬರುತ್ತವೆ. 30ಕ್ಕೂ ಹೆಚ್ಚು ಯಕ್ಷಗಾನ ತಂಡಗಳು ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿವೆ. 50ಕ್ಕೂ ಹೆಚ್ಚು ಸಮುದಾಯಗಳು ಸಹಜೀವನ ನಡೆಸುತ್ತಿವೆ. 100 ಕ್ಕೂ ಹೆಚ್ಚು ವೈವಿಧ್ಯಮಯ ದೈವಗಳನ್ನು ಆರಾಧಿಸಲಾಗುತ್ತಿದೆ. ಹೀಗಿದ್ದರೂ ಸೂಕ್ಷ್ಮ ಮತ್ತು ಸ್ಥೂಲ ಮಟ್ಟದಲ್ಲಿ ಅಥವಾ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂದರ್ಭಗಳಲ್ಲಿ 'ಕಾಸರಗೋಡಿನ ಸಾಂಸ್ಕೃತಿಕ ವೈವಿಧ್ಯ' ಕುರಿತು ಸಂಶೋಧಕರ ತೊಡಗಿಸಿಕೊಳ್ಳುವಿಕೆ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ.
ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸಗಳು ಮತ್ತು ಕಾರ್ಯಾಗಾರಗಳ ಹೊರತಾಗಿ ಕಾಲೇಜು ಅಧ್ಯಾಪಕರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಪ್ರಬಂಧ ಮಂಡನೆಗೆ ಅವಕಾಶವಿದೆ. ಸಂಶೋಧನಾ ಪ್ರಬಂಧ ಮಂಡಿಸುವರು ಈ ಮುಂದಿನ ವಿಷಯಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.
1. ಕಾಸರಗೋಡಿನ ಭಾಷೆ ಮತ್ತು ಸಾಹಿತ್ಯ, 2. ಕಾಸರಗೋಡಿನ ರಂಗಭೂಮಿ, 3. ಕಾಸರಗೋಡಿನ ಜಾನಪದ ಸಂಪ್ರದಾಯಗಳು- ಆಚರಣೆಗಳು, 4. ಕಾಸರಗೋಡಿನ ಮಾಧ್ಯಮ, 5.ಕಾಸರಗೋಡಿನ ಕಲೆ ಮತ್ತು ವಾಸ್ತುಶಿಲ್ಪ.
ಸಾರಲೇಖ ಸಲ್ಲಿಕೆ: ಸಂಶೋಧನಾ ಸಮಸ್ಯೆ, ಆಕರ ಸಾಮಗ್ರಿ, ವೈದಾನಿಕತೆಯ ಸಂಕ್ಷಿಪ್ತ ಮಾಹಿತಿ ಒಳಗೊಂಡ 200 ಪದಗಳ ಮಿತಿಯ ಸಾರಲೇಖಗಳನ್ನು (abstract) ಸಲ್ಲಿಸಲು ಅಕ್ಟೋಬರ್ 10ರ ವರೆಗೆ ಕಾಲಾವಕಾಶ ನೀಡಲಾಗಿದೆ. ಸಾರಲೇಖ ಸಲ್ಲಿಕೆಯಾದ ಏಳು ದಿನಗಳ ಒಳಗೆ ಸ್ವೀಕೃತಿಯ ಮಾಹಿತಿ ನೀಡಲಾಗುತ್ತದೆ.
6000 ದಿಂದ 8000 ಪದಗಳ ವ್ಯಾಪ್ತಿಯ ಪೂರ್ಣ ಪ್ರಮಾಣದ ಸಂಶೋಧನಾ ಪ್ರಬಂಧಗಳನ್ನು 2023ರ ನವೆಂಬರ್ 10ರ ಒಳಗೆ ಸಲ್ಲಿಸುವುದು ಕಡ್ಡಾಯ. ತಿದ್ದುಪಡಿ ಇದ್ದಲ್ಲಿ ಮಾತ್ರ ಸಮಾವೇಶ ನಡೆದು ಒಂದು ತಿಂಗಳ ಒಳಗೆ ಪೂರ್ಣ ಪ್ರಬಂಧ ಸಲ್ಲಿಸಬೇಕಾಗುತ್ತದೆ. ನಂತರ ತಜ್ಞರ ಸಮಿತಿ ಆಯ್ಕೆ ಮಾಡಿದ ಉತ್ಕೃಷ್ಟ ಸಂಶೋಧನಾ ಪ್ರಬಂಧಗಳನ್ನು ನಡಾವಳಿ ರೂಪದಲ್ಲಿ ಅಥವಾ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ.
ಗಮನಿಸಿ: ಉತ್ಕೃಷ್ಟತೆಯ ಆಧಾರದ ಮೇಲೆ ಗರಿಷ್ಠ 40 ಸಾರಲೇಖಗಳನ್ನು ಆಯ್ಕೆಮಾಡಲಾಗುತ್ತದೆ. ಸಾರಲೇಖಗಳನ್ನು ಈ ಮುಂದಿನ ಗೂಗಲ್ ಫಾರ್ಮ್ ಲಿಂಕ್‌ಗೆ ಸಲ್ಲಿಸಬಹುದು; https://docs.google.com/forms/d/e/1FAIpQLSfkK0xfXAlQTtggA8rEx2Xqm3qzyJZe_vs1xE0Kug5R59aeTQ/viewform?usp=sf_link
ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತನ್ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸುತ್ತಿರುವ ಈ ಅಂತರಾಷ್ಟ್ರೀಯ ಸಮಾವೇಶದಲ್ಲಿ ಪ್ರಬಂಧ ಮಂಡಿಸುವವರಿಗೆ ಯಾವುದೇ ನೋಂದಣಿ ಶುಲ್ಕವಿಲ್ಲ ಮತ್ತು ಯಾವುದೇ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದಿಲ್ಲ.
ಹೆಚ್ಚುವರಿ ಮಾಹಿತಿಗಾಗಿ ಸಮಾವೇಶದ ಸಂಯೋಜಕರಾದ ಸಹ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರನ್ನು bk.hosangadi@gck.ac.in ಮೂಲಕ ಸಂಪರ್ಕಿಸಬಹುದಾಗಿದೆ.
ಸಮಾವೇಶದ ನಿರ್ವಹಣೆಗಾಗಿ ಪ್ರಾಂಶುಪಾಲರಾದ ಡಾ.ಅನಿಲ್ ಕುಮಾರ್ ವಿ.ಎಸ್., ವಿಭಾಗ ಮುಖ್ಯಸ್ಥರಾದ ಪ್ರೊ.ಸುಜಾತಾ ಎಸ್., ಸಹ ಪ್ರಾಧ್ಯಾಪಕರಾದ ಡಾ.ರತ್ನಾಕರ, ಎಂ. ಡಾ.ರಾಧಾಕೃಷ್ಣ ಎನ್.ಬೆಳ್ಳೂರು, ಡಾ. ಶ್ರೀಧರ ಎನ್., ಸಹಾಯಕ ಪ್ರಾಧ್ಯಾಪಕರಾದ ಡಾ. ಸವಿತಾ ಬಿ., ಡಾ. ವೇದಾವತಿ ಎಸ್., ಡಾ. ಆಶಾಲತಾ ಸಿ.ಕೆ., ಪ್ರೊ.ಲಕ್ಷ್ಮಿ ಕೆ. ಇವರನ್ನು ಒಳಗೊಂಡ ಅಂತಾರಾಷ್ಟ್ರೀಯ ಸಮಾವೇಶ ಸಮಿತಿಯನ್ನು ರಚಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ