ದೇಶ ಧರ್ಮಗಳಲ್ಲಿ ಒಡಕು ಹುಟ್ಟಿಸುವವರ ವಿರುದ್ಧ ಜಾಗೃತರಾಗಿ: ಪೇಜಾವರ ಶ್ರೀ ಕರೆ

Upayuktha
0


ಮೈಸೂರು: ಸನಾತನ ಧರ್ಮೀಯರೇ ಬಹುಸಂಖ್ಯೆಯಲ್ಲಿರುವ ಭಾರತದಲ್ಲಿ ಆ ಸನಾತನ ಧರ್ಮವನ್ನೇ ಕಿತ್ತೊಗೆಯಬೇಕು ಎನ್ನುವ ಮೂಲಕ ಭಾರತವನ್ನು ಛಿದ್ರ ಮಾಡಲು ಹೊರಟಿರುವ ಯಾರೇ ಆಗಲಿ ಅಥವಾ ಅವರನ್ನು ಬೆಂಬಲಿಸುವ ಯಾವುದೇ ರಾಜಕೀಯ ಅಥವಾ ದೇಶದ್ರೋಹಿ ಶಕ್ತಿಗಳ ವಿರುದ್ಧ ಜಾಗೃತರಾಗಿದ್ದು ಸಂದರ್ಭ ಬಂದಾಗ ಅಂಥವರಿಗೆ  ಅವಶ್ಯವಾಗಿ ಪಾಠ ಕಲಿಸಬೇಕು. ಅದಕ್ಕಾಗಿ ಸಮಸ್ತ ಹಿಂದೂ ಸಮಾಜ ಸದಾ ಜಾಗೃತರಾಗಿರಬೇಕು ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.

 ‌

ತಮ್ಮ‌ 36ನೇ ಚಾತುರ್ಮಾಸ್ಯದ ಅಂಗವಾಗಿ ಚಾತುರ್ಮಾಸ್ಯ ವ್ರತ ಸಮಿತಿ ಮತ್ತು ವಿಶ್ವಹಿಂದು ಪರಿಷತ್ ಮೈಸೂರು ಜಿಲ್ಲೆ ಇವುಗಳ ಸಂಯೋಜನೆ ಮತ್ತು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆಶ್ರಯದಲ್ಲಿ ಭಾನುವಾರ ಶ್ರೀ ಗಣಪತಿ ಸಚ್ಚಿದಾನದಂದ ಆಶ್ರಮದ ಸಭಾಂಗಣದಲ್ಲಿ ನಡೆದ ಸಂತ ಸಮಾವೇಶ ಮತ್ತು ಬೃಹತ್ ಧರ್ಮ ಸಭೆಯ ಕೊನೆಯಲ್ಲಿ ಅಧ್ಯಕ್ಷೀಯ ಮಾತುಗಳ ಮೂಲಕ ಮಾರ್ಗದರ್ಶನ ನೀಡಿದರು.

 

ಸುಮಾರು 30ಕ್ಕೂ ಅಧಿಕ ವಿವಿಧ ಮಠಾಧೀಶರು ಸಾಧು ಸಂತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಿಂದು ಸಮಾಜ ಎದುರಿಸುತ್ತಿರುವ ಗೋಹತ್ಯೆ, ಲವ್ ಜಿಹಾದ್, ಕೌ ಜಿಹಾದ್, ಜಾತ್ರಾ ಜಿಹಾದ್, ಮತಾಂತರ, ಸಾಮಾಜಿಕ ಜಾಲತಾಣಗಳಿಂದಾಗಿ ಸಂಸ್ಕೃತಿಯ ಮೇಲಾಗುತ್ತಿರುವ ಅನಾಹುತ, ಮೊದಲಾದ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಜಾಗೃತಿಯ ಸಂದೇಶ ನೀಡಿದರು.

 

ಆಶ್ರಮದ ವೇದ ವಿದ್ಯಾರ್ಥಿಗಳ ವೇದ ಘೋಷದೊಂದಿಗೆ ಆರಂಭವಾದ ಧರ್ಮಸಭೆಯಲ್ಲಿ ಚಾತುರ್ಮಾಸ್ಯ ಸಮಿತಿಯ ಎಂ‌.ಕೆ ಪುರಾಣಿಕ್ ಸ್ವಾಗತಿಸಿದರು. ವಿಶ್ವ ಹಿಂದು ಪರಿಷತ್ ಪ್ರಾಂತ ಅಧ್ಯಕ್ಷ ಎಂ.ಬಿ ಪುರಾಣಿಕ್ ಪ್ರಸ್ತಾವನೆಗೈದರು. ವಿದ್ವಾನ್ ಬಿ.ಎನ್ ವಿಜಯೀಂದ್ರಾಚಾರ್ಯರು ಕಾರ್ಯಕ್ರಮ‌ ನಿರೂಪಿಸಿ ವಂದಿಸಿದರು. ವಿಶ್ವಹಿಂದು ಪರಿಷತ್ ಮೈಸೂರು ಜಿಲ್ಲಾ ಉಪಾಧ್ಯಕ್ಷ ಜಗದೀಶ ಹೆಬ್ಬಾರ್ ನಿರ್ಣಯ ಮಂಡಿಸಿದರು. ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ರವಿಶಾಸ್ತ್ರಿ , ವಿಹಿಂಪ ಜಿಲ್ಲಾಧ್ಯಕ್ಷ ಪ್ರಶಾಂತ್, ಆಶ್ರಮದ ಪ್ರಧಾನ ವ್ಯವಸ್ಥಾಪಕ ಹೆಚ್.ವಿ ಪ್ರಸಾದ್, ವಿಹಿಂಪ ವಿಭಾಗ ಸಂಯೋಜಕಿ ಸವಿತಾ ಘಾಟ್ಗೆ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
To Top