ಮನೆಯ ಹೊರಗೆ ಸೊಳ್ಳೆಗಳ ಉತ್ಪಾದನೆ-ಮನೆಯೊಳಗೆ ಸೊಳ್ಳೆಗಳೊಂದಿಗೆ ಸೆಣಸಾಟ

Upayuktha
0


- ಡಾ.ಎ.ಜಯಕುಮಾರ ಶೆಟ್ಟಿ



ಕಿರಿಕಿರಿ ಮಾತ್ರವಲ್ಲದೆ ಅಪಾಯಕಾರಿಯೂ ಹೌದು

ಸೊಳ್ಳೆ ಎಂದರೆ ತಕ್ಷಣ ಕೆಲವರಿಗೆ ಕಿರಿಕಿರಿ ಇನ್ನೂ ಕೆಲವರಿಗೆ ಭಯ. ಸಂಜೆ ಮತ್ತು ಬೆಳಿಗ್ಗಿನ ಸಮಯದಲ್ಲಿ ಈ ಸೊಳ್ಳೆಗಳ ಕಾಟ ಅಸಾಧ್ಯವಾಗಿದೆ. ರಾತ್ರಿ ಹಗಲೆನ್ನದೆ ಮಲಗಲು ಬಿಡದೆ ಕಿವಿಯ ಬಳಿ ಗುಂಯಿಗುಡುತ್ತಿದ್ದರೆ ಅಸಾಧ್ಯ ಸಿಟ್ಟು ಬರುತ್ತದೆ. 

ಸೊಳ್ಳೆ ಕಚ್ಚಿ ಅದರಿಂದ ಬರುವ ತುರಿಕೆಗಿಂತಲೂ ಅದು ತರುವ ಅಪಾಯದಿಂದಾಗಿ ಸೊಳ್ಳೆಯನ್ನು ನೋಡಿದರೆ ಭಯ ಉಂಟಾಗುತ್ತದೆ. ಮಾನವನ ಪರಮ ಶತ್ರು ಕೀಟಗಳಲ್ಲಿ ಸೊಳ್ಳೆಯೂ ಒಂದು. ಈ ಚಿಕ್ಕ ರೆಕ್ಕೆಯ ಜೀವಿ ಯುಗಯುಗಾಂತರಗಳಿಂದ  ಮಾನವರನ್ನು ಕಿರಿಕಿರಿಗೊಳಿಸುತ್ತಾ ಮಾನವಕುಲಕ್ಕೇ ಸಂಕಟವನ್ನು ಉಂಟುಮಾಡುವ ಅನೇಕ ರೋಗಗಳ  ವಾಹಕ ಆಗಿದೆ. ಸುಮಾರು 3,500ಕ್ಕೂ ತೆರನಾದ ಸೊಳ್ಳೆಗಳು ನೂರಕ್ಕೂ ಮಿಕ್ಕಿ ವಿವಿಧ ರೋಗಗಳನ್ನು ಪ್ರಪಂಚದಾದ್ಯಂತ ಹರಡುತ್ತಾ ಪ್ರತಿವರ್ಷ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಳ್ಳುತ್ತವೆ.


ಸಣ್ಣ ಕಡಿತ, ದೊಡ್ಡ ಹೊಡೆತ

ಸೊಳ್ಳೆಯ ಇಂಗ್ಲಿಷ್ ಹೆಸರಾದ “ಮಸ್ಕಿಟೋ” ಪದದ ಮೂಲ ಸ್ಪಾನಿಷ್. ಇದರ ಮೂಲ ಅರ್ಥ “ಚಿಕ್ಕ ಕೀಟ” ಎಂದರ್ಥ. ಈ ಚಿಕ್ಕ ಕೀಟದ ಸಣ್ಣ ಕಡಿತವೇ ದೊಡ್ಡ ಹೊಡೆತವನ್ನು ನೀಡುತ್ತದೆ.

ಸೊಳ್ಳೆಗಳು ಕಡಿತದಿಂದ ಉರಿ, ನವೆ, ಚರ್ಮದ ಅಲರ್ಜಿಯನ್ನಷ್ಟೇ ತರುವುದಿಲ್ಲ, ಹಲವು ರೋಗಾಣುಗಳ ವಾಹಕಗಳು ಸಹ ಇವಾಗಿರುತ್ತವೆ. ಮಾನವನಲ್ಲಿ ಮಲೇರಿಯಾ, ಡೆಂಗಿ, ಚಿಕೂನ್‍ಗುನ್ಯ, ಆನೆಕಾಲು ರೋಗ, ಹಳದಿ ಜ್ವರ, ಮೆದುಳು ಜ್ವರದಂತಹ ಹತ್ತಾರು ರೋಗಗಳನ್ನು ಹರಡಿಸುತ್ತಾ ಸಾರ್ವಜನಿಕ ಸ್ವಾಸ್ಥ್ಯಕ್ಕೆ ಸವಾಲೊಡ್ಡುತ್ತಿವೆ.

ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ವಿಶಕಾರಿ ಹಾವುಗಳಿಗಿಂತಲೂ ಅಪಾಯಕಾರಿಯಾದ ಪ್ರಾಣಿ ಸೊಳ್ಳೆ. ಯಾವುದೇ ಪ್ರಾಣಿಗಳಿಗಿಂತಲೂ ಸೊಳ್ಳೆಗಳೇ ಹೆಚ್ಚು ಜನರನ್ನು ಕೊಲ್ಲುವ ಜೀವಿಗಳು. ಜಗತ್ತಿನಲ್ಲಿ ಸುಮಾರು 5 ಲಕ್ಷ ಜೀವವನ್ನು ಬಲಿ ತೆಗೆದುಕೊಳ್ಳುವುದು ಸೊಳ್ಳೆಗಳೇ.


ಮಲೇರಿಯಾ ಕೊರೋನಾ ರೋಗಕ್ಕಿಂತ ಅಪಾಯಕಾರಿ:

ಸೊಳ್ಳೆ ಕಡಿತದಿಂದ ಬರುವ ಕಾಯಿಲೆಗಳಲ್ಲಿ ಮಲೇರಿಯಾ ಮುಖ್ಯವಾದದ್ದು ಮತ್ತು ಬಹಳ ವ್ಯಾಪಕವಾದದ್ದು. ಪ್ರಪಂಚದ ಸಾವಿಗೆ ಕಾರಣವಾಗುವ ಎಲ್ಲಾ ಸೋಂಕು ರೋಗಗಳಲ್ಲಿ ಮಲೇರಿಯಾಕ್ಕೆ ಐದನೇ ಸ್ಥಾನ. 

ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತದೆ. ಇತ್ತೀಚೆಗಿನ ಮಾಹಿತಿಯ ಪ್ರಕಾರ, ಪ್ರತಿ ವರ್ಷ 4,35,000 ಜನರು ಮಲೇರಿಯಾದಿಂದ ಸಾಯುತ್ತಾರಂತೆ. ಇದಲ್ಲದೆ ಜಾಗತಿಕವಾಗಿ ವರ್ಷಕ್ಕೆ 219 ಮಿಲಿಯನ್ ಮಲೇರಿಯಾ ಪ್ರಕರಣಗಳು  ದಾಖಲಾಗುತ್ತವೆ ಎಂದು ಅಂದಾಜಿಸಲಾಗಿದೆ. ಮಲೇರಿಯಾವನ್ನು ಕನಿಷ್ಠ 100 ದೇಶಗಳಲ್ಲಿ ಕಾಣಬಹುದು.


ಆರ್ಥಿಕ ಹೊರೆ

ಸೊಳ್ಳೆಗಳಿಂದ ಹರಡುವ ರೋಗಗಳಿಂದಾಗಿ ಸಾಮಾಜಿಕ-ಆರ್ಥಿಕ ಹೊರೆಯ ತೀವೃ ಏರಿಕೆಯನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಸೇರಿದಂತೆ ಸದಸ್ಯ ರಾಷ್ಟçಗಳು ಸೊಳ್ಳೆ ನಿಯಂತ್ರಣದತ್ತ ಗಮನ ಹರಿಸುವಂತೆ ಕೇಳಿದೆ. ಭಾರತದಲ್ಲಿ ಕೇವಲ ಮಲೇರಿಯಾದಿಂದ ಉಂಟಾಗುವ ಸಾಮಾಜಿಕ-ಆರ್ಥಿಕ ಹೊರೆಯು ಸುಮಾರು 1.94 ಬಿಲಿಯನ್ ಡಾಲರ್ ಅಂದರೆ 11640 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸುಮಾರು 95% ಜನಸಂಖ್ಯೆಯು ಮಲೇರಿಯಾ-ಸೋಂಕಿತ ಪ್ರದೇಶದಲ್ಲಿರುವುದು ಇನ್ನೂ ಚಿಂತೆಗೀಡು ಮಾಡಿದೆ. ಇದರ ಜೊತೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು ವಾರ್ಷಿಕ ಒಂದು ಬಿಲಿಯನ್ ಡಾಲರ್ (ಸುಮಾರು ರೂ.6000 ಕೋಟಿ) ಹೆಚ್ಚುವರಿ ಹೊರೆಯನ್ನು ತಂದೊಡ್ಡಿದೆ. ಈ ಅಂಕಿ ಅಂಶಗಳು ಸೊಳ್ಳೆ ಕಡಿತದ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ಬೊಟ್ಟು ಮಾಡುತ್ತವೆ.


ಸೊಳ್ಳೆಗೂ ಒಂದು ದಿನ!

ಸೊಳ್ಳೆಗೂ ಒಂದು ದಿನವೇ ಎಂದು ತಮಾಷೆ ಮಾಡುವ ಬದಲು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. 1902ರಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಬ್ರಿಟನ್ ವೈದ್ಯ ರೊನಾಲ್ಡ್ ರೋಸ್ 1897ರಲ್ಲಿ ಮಲೇರಿಯಾ ಹರಡಲು ಅನಾಫಿಲೀಸ್ ಎಂಬ ಹೆಣ್ಣೆ ಸೊಳ್ಳೆಯೇ ಕಂಡು ಹಿಡಿದಿದ್ದು 1897ರ ಅಗಸ್ಟ್ 20ರಂದೇ. ಈ ಸಂಶೋಧನೆಯ ಸ್ಮರಣಾರ್ಥ ಅಗೋಸ್ತು 20ರಂದು ಜಗತ್ತಿನಾಧ್ಯಂತ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತಿದೆ. ಹತ್ತೊಂಬತ್ತನೇ ಶತಮಾನದವರೆಗೂ ಸೊಳ್ಳೆ ಇಷ್ಟೊಂದು ಅಪಾಯಕಾರಿ ಎಂದು ಯಾರ ಗಮನಕ್ಕೂ ಬರಲಿಲ್ಲ. ಬ್ರಿಟಿಷ್ ವೈದ್ಯ ಪ್ಯಾಟ್ರಿಕ್ ಮ್ಯಾನ್ಸನ್ ಆನೆಕಾಲು ರೋಗಕ್ಕೆ ಸೊಳ್ಳೆ ಮೂಲ ಕಾರಣ ಎಂದು ಕಂಡುಕೊAಡರು.


ಸೊಳ್ಳೆಯ ಸಾಮರ್ಥ್ಯವನ್ನು ನಿರ್ಲಕ್ಷಿಸಿದರೆ ಜೋಕೆ!

ರೋಮ್ ಸಾಮ್ರಾಜ್ಯದ ಪತನಕ್ಕೆ ಮೂಲ ಕಾರಣ ಮಲೇರಿಯಾ ರೋಗ ಎನ್ನಲಾಗಿದೆ. ಆಗ ಅಲ್ಲಿನ ಅನೇಕ ಜನರು ಮಲೇರಿಯಾ ರೋಗಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದರು. ಆಗ ಈ ರೋಗವನ್ನು ರೋಮನ್ ಫೀವರ್ ಎಂದು ಕರೆಯಲಾಗಿತ್ತು ಎನ್ನಲಾಗಿದೆ.


ಮನೆಯ ಹೊರಗೆ ಮತ್ತು ಒಳಗೂ ಸೊಳ್ಳೆಯ ಭಯ!

ಮನೆಯ ಹೊರಗೆ ಸೊಳ್ಳೆಗಳ ಉತ್ಪಾದನೆ ಮಾಡಿ, ನಂತರ ಮನೆಯೊಳಗೆ ಅವುಗಳ ವಿರುದ್ಧ ಸೆಣಸಾಡುವುದೇ ನಮ್ಮ ಸಮಸ್ಯೆಯಾಗಿದೆ. ಸೊಳ್ಳೆ ಬೆಳವಣಿಗೆಯಾಗದಂತೆ ಕ್ರಮ ಕೈಗೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಾಗೃತ ಜೀವನ ಕ್ರಮದಿಂದ ರೋಗ ಬಾರದಂತೆ ರಕ್ಷಣೆ ಪಡೆಯಬಹುದು.


ಮನೆಯೊಳಗೆ ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಕಿ ಬಾಗಿಲುಗಳನ್ನು ಮುಚ್ಚುವುದು,  ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸುವುದು ಹಾಗೂ ಸೊಳ್ಳೆ ಪರದೆಗಳನ್ನು ಬಳಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು. ಸೊಳ್ಳೆ ನಿವಾರಕ ಮುಲಾಮುಗಳನ್ನು ಬಳಸಿ ಸೊಳ್ಳೆಕಡಿತದಿಂದ ತಪ್ಪಿಸಿಕೊಳ್ಳಬಹುದು. ಮೈಯನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಧರಿಸಿದರೆ ಉತ್ತಮ.


ಸೊಳ್ಳೆಗಳನ್ನು ನಿಯಂತ್ರಿಸಲು ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಬೇಕು ಎಂಬ ವಿವೇಕ ನಮ್ಮದಾಗಲಿ. ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾದಿಂದ ಪಾರಾಗಲು ಇರುವ ಏಕೈಕ ಮಾರ್ಗೋಪಾಯ ಸೊಳ್ಳೆಗಳ ನಿಯಂತ್ರಣ ಮತ್ತು ನಿವಾರಣೆ. 


ಕಾಯಿಲೆ ಹರಡುವ ಸೊಳ್ಳೆ ಸಂತಾನಾಭಿವೃದ್ದಿಯಾಗುವ ಸ್ಥಳ ನಿಂತ ನೀರು. ಮನೆಯ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಪಾತ್ರೆಯಲ್ಲಿ ತುಂಬಿಟ್ಟ ನೀರನ್ನು ಬದಲಾಯಿಸುತ್ತಿರಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಸುತ್ತಮುತ್ತ ನೀರು ಸಂಗ್ರಹವಾಗದAತೆ ನೋಡಿಕೊಳ್ಳಬೇಕು.


ನೀರು ನಿಲ್ಲುವಂತಹ ತಗ್ಗು ಪ್ರದೇಶಗಳನ್ನು ಸಮತಟ್ಟುಗೊಳಿಸುವುದು ಹಾಗೂ ಬಾವಿಗೆ ಗಪ್ಪಿ ಮೀನುಗಳನ್ನು ಹಾಕುವುದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದು.


ಹಳೆಯ ಟೈರುಗಳು, ಎಳೆನೀರಿನ ಚಿಪುö್ಪಗಳಲ್ಲಿ, ತೆರೆದ ಟ್ಯಾಂಕ್ ಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಮನೆಯಲ್ಲಿರುವ ನೀರು ಶೇಖರಣಾ ತೊಟ್ಟಿಗಳು, ಹೂವಿನ ಕುಂಡಗಳು, ಸುತ್ತಮುತ್ತ ಎಸೆದ ಎಳನೀರಿನÀ ಚಿಪುö್ಪಗಳು, ಪ್ಲಾಸ್ಟಿಕ್ ಲೋಟಗಳು, ಬಾಟಲ್ ಗಳು, ಟೈರುಗಳು, ಕೃತಕವಾಗಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗುತ್ತವೆ-ಇವುಗಳ ಬಗ್ಗೆ ಎಚ್ಚರವಿರಲಿ. ಏರ್ ಕೂಲರ್ ಗಳು, ಶೀತಲ ಪೆಟ್ಟಿಗೆಗಳ ಕೆಳಭಾಗದಲ್ಲಿ ಶೇಖರಣೆಗೊಂಡ ನೀರಿನಲ್ಲೂ ಸೊಳ್ಳೆಗಳು ಮರಿ ಮಾಡಬಹುದು. ಮನೆಗಳ ಸುತ್ತ ತುಳಸಿ, ಲಾವಂಚ, ಗೊಂಡೆ ಹೂ, ನೆಲನೆಲ್ಲಿ, ಕಹಿಬೇವು ಮತ್ತಿತರ ಗಿಡಗಳನ್ನು ಬೆಳೆಸುವುದರಿಂದ ಗಾಳಿಯೂ ಶುದ್ಧವಾಗಿರುವುದು ಮತ್ತು ಸೊಳ್ಳೆಕಾಟದಿಂದ ಮುಕ್ತಿ ನೀಡುತ್ತದೆ. 


ಚಿಕಿತ್ಸೆಗಿಂತ ತಡೆಗಟ್ಟುವಿಕೆ ಪರಿಣಾಮಕಾರಿ 

ಹೆಚ್ಚಿನ ಆದಾಯದ ದೇಶಗಳಲ್ಲಿ ರೋಗವು ನಿಯಂತ್ರಣದಲ್ಲಿದೆ. ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಆಕ್ರಮಣಕಾರಿ ತಡೆಗಟ್ಟುವ ಕ್ರಮಗಳು ಇದಕ್ಕೆ ಕಾರಣ.


ಅಭಿವೃದ್ಧಿಶೀಲ ದೇಶಗಳ ಅಭಿವೃದ್ಧಿಗೆ ಸಾಂಕ್ರಾಮಿಕ ರೋಗಗಳು ಮಾರಕವಾಗಿ ಪರಿಣಮಿಸಿವೆ. ಖಾಯಿಲೆಯ ಮೂಲವಾದ ಸೊಳ್ಳೆಗಳ ನಿಯಂತ್ರಣವನ್ನು ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ, ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಮಾಡುವುದು ಇಂದಿನ ಅಗತ್ಯ. ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆಯ ವತಿಯಿಂದ ಕ್ರಮಗಳು, ಅಭಿಯಾನಗಳು ಜಾರಿಯಲ್ಲಿದೆ. ಸರಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಯಶಸ್ವಿಯಾಗಬೇಕಾದರೆ ಸಾರ್ವಜನಿಕ ಜಾಗೃತಿ ಮತ್ತು ಸಹಭಾಗಿತ್ವ ಅತ್ಯಗತ್ಯ.


ಹೊಣೆಯರಿತ ನಡಿಗೆಯಿರಲಿ

ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡುವ ಮೂಲಕ ಸೊಳ್ಳೆಗೆ ವಾಸಸ್ಥಾನ ಕಲ್ಪಿಸದಿರೋಣ ಹಾಗೂ ಸೊಳ್ಳೆಗೆ ಹಗಲು ಹೊತ್ತಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸದಿರೋಣ. ನೆನಪಿರಲಿ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಪರಿಣಾಮಕಾರಿ. ಸೊಳ್ಳೆ ಕಚ್ಚಿದರೆ ಕಚ್ಚಲಿ ಎನ್ನುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡಿ, ಸೊಳ್ಳೆಗಳು ಬೆಳೆಯದಂತೆ ಮುನ್ನೆಚರಿಕೆ ವಹಿಸಿ ಉತ್ತಮ ಅರೋಗ್ಯಕ್ಕಾಗಿ ಸೊಳ್ಳೆಮುಕ್ತ ಪರಿಸರ ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇದರೊಂದಿಗೆ ಸೊಳ್ಳೆ ನಿಯಂತ್ರಣದಲ್ಲಿ ಅಧಿಕಾರಿಗಳ ಜೊತೆಗೆ ಜನರು ಕೂಡಾ ತಮ್ಮ ಜವಾಬ್ದಾರಿ ಮೆರೆಯುವ ಅಗತ್ಯ ಇದೆ.  



- ಡಾ.ಎ. ಜಯಕುಮಾರ ಶೆಟ್ಟಿ

ಉಜಿರೆ-574240

9448154001

ajkshetty@sdmcujire.in


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top