ಚಂದಾಮಾಮನ ಬಗೆಗಿರುವ ಕತೆಗಳು ಬದಲಾಗಲಿವೆ: ಮೋದಿ ಮಾವ...!!

Upayuktha
0


ಹೌದು, ಮಕ್ಕಳ ರೀತಿ ಕೈಯಲ್ಲಿ ಪುಟ್ಟ ರಾಷ್ಟ್ರ ಧ್ವಜ ಹಿಡಿದ ಮೋದಿ ಮಾವ ಹೇಳಿದಂತೆ ಚಂದ್ರನ ಬಗೆಗಿನ ಕಾಲ್ಪನಿಕ ಕತೆಗಳು, ಕಲ್ಪನೆಯ ಪದ್ಯಗಳು ಬದಲಾಗುತ್ತವೆ!!! ಚಂದ್ರಯಾನದ ಪ್ರಯೋಗಗಳಿಂದ, ಚಂದ್ರನ ಬಗೆಗಿನ ಕಾಲ್ಪನಿಕ ಕತೆಗಳಿಗೆ 'ಅರ್ಧ ಚಂದ್ರ ಪ್ರಯೋಗ' ಆಗಬಹುದು!!


ಯಾರೂ ಹೋಗಿರದ, ನೋಡಿರದ ಚಂದ್ರನ ದಕ್ಷಿಣದ ಮೇಲೆ ಭಾರತದ AI 'ವಿಕ್ರಮ' ಕಾಲಿಟ್ಟಿದ್ದಾನೆ. ಪ್ರಗ್ಯಾನ್ ರೋವರ್ ನೆಡೆಯುವುದಕ್ಕೆ ಶುರು ಮಾಡಿದೆ. ಭಾರತಕ್ಕೆ ಇದು ಮತ್ತೊಂದು 'ಚಾಂದ್ರಮಾನ ಯುಗಾದಿ!, ಮತ್ತೊಂದು ವಿಕ್ರಮ ಶಕೆ!. ಭೂಮಿಯಿಂದ ಹೊರಟ 'ಬಂಗಾರದ ಬಣ್ಣದ ರಥ' ಚಂದ್ರನ ಮೇಲೆ ದಿಗ್ವಿಜಯಕ್ಕೆ ಹೆಜ್ಜೆ ಇರಿಸಿದ ಸಪ್ತಮಿ - ರಥ ಸಪ್ತಮಿ!


ಮೋದಿಜಿ ಹೇಳಿದ ನಾವೆಲ್ಲ 'ಚಂದಾಮಾಮಾ ಬಡೇ ದೂರ್ ಕೆ ಹೆ' ಅಂತಿದ್ವಿ, ಈಗಿನ ಮಕ್ಕಳು 'ಚಂದಾಮಾಮಾ ಏಕ್ ಟೂರ್ ಕೆ ಹೆ' ಅಂತ ಕಲಿಯುತ್ತಾರೆ ಎಂಬಂತೆ ಭೂಮಿಯ ಅಂಗಳದಿಂದ ತಿಂಗಳನ ಅಂಗಳಕ್ಕೆ ಏಣಿ ಇಡುವ ದಿನ 'ಬಡೇ ದೂರ್ ಕೆ ನಹಿ ಹೆ!'


ಜ್ಯೋತಿಷ್ಯದ ಪ್ರಕಾರ ಚಂದ್ರನು ನವಗ್ರಹಗಳಲ್ಲೊಂದು. ಶುದ್ಧತೆ, ಬುದ್ಧಿವಂತಿಕೆ, ಆರೋಗ್ಯ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಚಂದ್ರನನ್ನು ಬಿಂಬಿಸಿ,  ಅಂತಹ ಚಂದ್ರನನ್ನು ವರ್ಷದ ಪ್ರಾರಂಭದ ದಿನವಾದ ಯುಗಾದಿಯಂದು ವೀಕ್ಷಿಸಿದರೆ ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಬಾಳಬಹುದೆಂಬ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿಯ ಚಂದ್ರನನ್ನು ನೋಡುವ ಸಂಪ್ರದಾಯವಿದೆ. ಚಂದ್ರನ ಮೇಲೆ ತಂತ್ರಜ್ಞಾನದ 'ವಾಮನಮೂರ್ತಿಯಂತಹ ಪುಟ್ಟ ಯಂತ್ರ' ಕಾಲಿಟ್ಟಿದೆ, ಆ ಪಾದ ತ್ರಿವಿಕ್ರಮವಾಗಿ ಬೆಳೆಯಲಿದೆ. ಭಾರತಕ್ಕೆ ಇದು ಮತ್ತೊಂದು 'ಚಂದ್ರದರ್ಶನ ಯುಗಾದಿ!!, ಚಂದ್ ರಾತ್!!


**


ದಿನಗಳು ಕಳೆದಂತೆ, ಒಂದಿಷ್ಟು ಅಮವಾಸ್ಯೆ ಹುಣ್ಣಿಮೆಗಳು ಉರುಳಿದಂತೆ..... ಯುಗಾದಿಗೆ ಚಂದ್ರ ದರ್ಶನ ಮಾಡಲು ಚಂದ್ರನಲ್ಲಿಗೇ ಹೋಗುವಂತೆ ಆಗಬಹುದು.  


ಮುಖ್ಯಮಂತ್ರಿ ಆಕಾಂಕ್ಷೆಯ ಜನ ಪ್ರತಿನಿಧಿಯ ಜಾತಕದಲ್ಲಿ ಚಂದ್ರ ಆರನೆ, ಎಂಟನೆ ಅಥವಾ ಹನ್ನೆರಡನೆ ಮನೆಯಲ್ಲಿದ್ದು 'ಚಂದ್ರ ದೋಷ' ಉಂಟಾದರೆ, ಜ್ಯೋತಿಷಿ ಅನಾರ್ಯವರ್ದಿ ಸೂಚನೆಯಂತೆ, ಚಂದ್ರ ಲೋಕಕ್ಕೇ ಹೋಗಿ ಚಂದ್ರ ದೋಷ ಹೋಮ ಮಾಡಿ ಬರಬಹುದು!


ಬಾಲಕ ರಾಮ "ನನಗೆ ಅಲ್ಲಿ ಕಾಣುವ ಚಂದ್ರ ಬೇಕು" ಅಂತ ಹಟ ಹಿಡಿದಾಗ, ಅನ್ನ ತಿನ್ನಿಸುತ್ತಿದ್ದ ತಾಯಿ ಕೌಸಲ್ಯೆ ಕನ್ನಡಿ ತೋರಿಸಿ... ರಾಮನನ್ನೇ 'ಚಂದ್ರ' ಅಂತ ಹೇಳಿ ಮತ್ತೆರಡು ತುತ್ತು ಜಾಸ್ತಿ ತಿನ್ನಿಸಿದಳಂತೆ!!.  


ಇನ್ನು ಮುಂದೆ ಕೌಸಲ್ಯೆ, ಯಶೋದೆಯರು ಕತೆ ಬದಲಿಸುತ್ತಾರೆ...! ಹಟ ಮಾಡಿದ ಮಕ್ಕಳಿಗೆ "ನಾಳೆ ಚಂದ್ರನನ್ನು ತೋರಿಸುತ್ತೇನೆ, ಊಟ ಮಾಡು" ಅಂತ ಹೇಳಿ, ಮರುದಿನ ಮಗುವನ್ನೂ ಕರ್ಕೊಂಡು... 'ಶ್ರೀಹರಿ'ಕೋಟದಿಂದ ರಾಕೇಟ್‌ನಲ್ಲಿ ಹೋಗಿ ಮಗುವಿಗೆ ಚಂದ್ರ ದರ್ಶನ ಮಾಡಿಸಿ, ನೆಕ್ಷ್ಟ್ ಡೆ ವಾಪಾಸ್ ಬರಬಹುದು!!!


ಚಂದ್ರನ ಒಳಗಿರುವ 'ಮೊಲದ ಕತೆ'ಗೆ ಟ್ವಿಸ್ಟ್ ಸಿಕ್ಕಿ, ಹೊಸ 'ದಂತ' ಕತೆ ಆಗಬಹುದು!!? 


ನವ ದಂಪತಿಗಳು ಅರುಂಧತಿ ನಕ್ಷತ್ರ ವೀಕ್ಷಣೆಗೆ ಚಂದ್ರಯಾನ ಮಾಡಿ, ಅಲ್ಲೇ ಹನಿಮೂನ್ ಮುಗಿಸಿ ಬರಬಹುದು!!!

 

ಚಂದ್ರನ ಬಗೆಗಿನ ಕಾಲ್ಪನಿಕ ಕತೆಗಳು ನಿಧಾನವಾಗಿ ಬದಲಾಗಬಹುದು. ಲಾರ್ಡ್ 'ಸೋಮನಾಥನೇ' ಬೆರಗುಗೊಳ್ಳುವಂತಹ ಹೊಸ ಸತ್ಯ ಕತೆಗಳು ಸೃಷ್ಟಿಯಾಗಬಹುದು!!!


ಆಗಲಿ.


ಹಾಗಾಗುವ ಈ ಕಾಲದ ಹೊಸ್ತಿಲಲ್ಲಿ ನಿಂತು, ಪುರಾಣದ 'ಅಂಗಳಕ್ಕೆ ಇಳಿದು', ಚಂದಿರನನ್ನೇ ನೋಡುತ್ತ... ಚಂದಿರನ ಬಗೆಗಿನ ಒಂದೆರಡು ಪುರಾಣ ಕತೆಗಳನ್ನು ನೋಡಿ ಬರೋಣ ಬನ್ನಿ.  


ಈ ಪುರಾಣ ಪೂರ್ಣಿಮ ಕತೆಗಳನ್ನು 'ಪುರಾಣನಾಮ ಚೂಡಾಮಣಿ ಮತ್ತು ಅಂತರ್ಜಾಲದಲ್ಲಿ ರೋವರ್ ಸರ್ಚಿಂಗ್ ಬಳಸಿ, ಪ್ರಗ್ಯಾನ್‌ನಲ್ಲಿ ಸೆರೆ ಹಿಡಿದಿದ್ದು!!! 


*


ಚಂದ್ರ ಅತ್ರಿ ಮುನಿಯ ಮಗ, ಚಂದ್ರನ ತಾಯಿ ಅನಸೂಯೆ.  ದತ್ತಾತ್ರೇಯ ಮತ್ತು ದೂರ್ವಾಸ ಮಹರ್ಷಿಗಳು ಚಂದ್ರನ ಸಹೋದರರು.


ಚಂದ್ರನು ದಕ್ಷನ ಇಪ್ಪತ್ತೇಳು ಪುತ್ರಿಯರನ್ನು ವಿವಾಹವಾಗುತ್ತಾನೆ. ಇತರ ಎಲ್ಲ ಪತ್ನಿಯರಿಗಿಂತ ಚಂದ್ರನು ಶತಭಿಶ, ರೋಹಿಣಿ ಮತ್ತು ಆಶ್ಲೇಷಾರಿಗೆ ಪಕ್ಷಪಾತ ತೊರಿಸುತ್ತಾನೆ. ಇತರ ಪತ್ನಿಯರು ನಿರಾಸೆಗೊಂಡು ದಕ್ಷನಿಗೆ ದೂರು ನೀಡುತ್ತಾರೆ. ದಕ್ಷನು ಚಂದ್ರನನ್ನು ಶಪಿಸುತ್ತಾನೆ. ಚಂದ್ರನು ತನ್ನನ್ನು ಶಿವನಿಗೆ ಸಮರ್ಪಿಸಿಕೊಂಡಾಗ ಶಾಪ ವಿಮೋಚನೆಯಾಗುತ್ತದೆ. ಶಿವನು ಚಂದ್ರನನ್ನು ಶಾಪದಿಂದ ಭಾಗಶಃ ಬಿಡುಗಡೆ ಮಾಡುತ್ತಾನೆ. ಶಾಪ ಬಿಡುಗಡೆ ಆದ ಮೇಲೆ ಶಿವನು ಚಂದ್ರನನ್ನು ಶಿರದಲ್ಲಿ ಧರಿಸಿ ಚಂದ್ರಶೇಖರನಾದ.


**


ಚಂದ್ರನ ಮಗನ ಹೆಸರು ಬುಧ. 


ಈ ಚಂದ್ರ ನೋಡೋದಕ್ಕೆ ಸಾಫ್ಟ್ ಇದ್ದರೂ, ಶಾಲೆಯ ಕೊನೇ ಬೇಂಚಿನ ತಂಟೆ ಕೋರ ಕಿಲಾಡಿ ಹುಡುಗನಂತೆ!!


ಚಂದ್ರ ಕಾಲೇಜಿಗೆ ಸೇರಿದ್ದು ದೇವಗುರು ಬೃಹಸ್ಪತಿಯವರ 'ಯುನಿವರ್ಸಿಟಿಗೆ'!!.  ಬೃಹಸ್ಪತಿಯವರು (ಗುರು) ತಾರಾಳ ಪತಿ.  ಆಕೆ ಅನುರೂಪ ಸುಂದರಿ, ಸದ್ಗುಣ ಸಂಪನ್ನೆ, ಪರಿಶುದ್ಧ, ನಿಷ್ಠಾವಂತೆ ಮತ್ತು ಆಕರ್ಷಕತೆ ಪಡೆದವಳು.  ಒಮ್ಮೆ ಬೃಹಸ್ಪತಿ ಗುರುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಚಂದ್ರನು ಮನಸ್ಸಿನ ನಕಾರಾತ್ಮಕ ಉನ್ಮಾದದಲ್ಲಿ, ಬಲವಂತವಾಗಿ ತಾರಾಳನ್ನು ಕರೆದುಕೊಂಡು ಓಡಿಹೋದನು (ಅವತ್ತು ಸೋಮ ವಾರ ಇರಬೇಕು!!?). ಬಳಿಕ ಅಸುರ ಗುರು, ಶುಕ್ರ ನಲ್ಲಿ ಆಶ್ರಯ ಪಡೆದನು. ಆಗ ದೇವ ಗುರು ಬೃಹಸ್ಪತಿಯು ಎಲ್ಲಾ ದೇವರಿಗೆ ಚಂದ್ರನಿಂದ ತನ್ನ ಪತ್ನಿಯನ್ನು ಮರಳಿ ಪಡೆಯಲು ಸಹಾಯ ಮಾಡುವಂತೆ ಪ್ರಾಮಾಣಿಕವಾಗಿ ಮನವಿ ಮಾಡಿದನು.


ಆದರೆ ಶುಕ್ರನ ಆಶ್ರಯದಲ್ಲಿ ಚಂದ್ರ ಮತ್ತು ತಾರಾ ಇದ್ದಿದ್ದರಿಂದ ದೇವತೆಗಳು ತಾರಾಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ( ಶುಕ್ರ ನಿಗೆ ಶನಿ ಕಾಟ!!?).  


ಕೆಲವು ದಿನಗಳು ಕಳೆದ ಮೇಲೆ, ಚಂದ್ರನಿಗೆ ಉತ್ತಮ ಮನಸ್ಥಿತಿ ಹಿಂದಿರುಗಿದಾಗ, ಚಂದ್ರನು ಸಮತೋಲನ ಹೊಂದಿದನು. ತಾನು ಮಾಡಿದ್ದು ತಪ್ಪು ಎನಿಸಿ ತಾರಾಳನ್ನು ಗುರುವಿಗೆ ಹಿಂದಿರುಗಿಸಿದನು. ದುರದೃಷ್ಟವಶಾತ್, ಆ ಹೊತ್ತಿಗೆ ತಾರಾ ಚಂದ್ರನ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದಳು. 


ಸ್ವಲ್ಪ ಸಮಯದ ತಾರಾ ಬೃಹಸ್ಪತಿಯ ಮನೆಯಲ್ಲಿ ಒಂದು ಮಂಗಳ ಕರವಾದ ರವಿ ವಾರದ ಮುಹೂರ್ತದಲ್ಲಿ ಬುಧ ಎಂಬ ಆಕರ್ಷಕ ಮಗುವಿಗೆ ಜನ್ಮ ನೀಡಿದಳು ಮತ್ತು ಮಗುವಿನ ವಂಶಾವಳಿಯನ್ನು ಪ್ರಾಮಾಣಿಕವಾಗಿ ಬಹಿರಂಗಪಡಿಸಿದಳು. ಅವಳ ಪ್ರಾಮಾಣಿಕತೆಗಾಗಿ, ಗುರು ಅವಳನ್ನು ಕ್ಷಮಿಸಿದನು, ಅಷ್ಟೇ ಅಲ್ಲ, ಮಗುವನ್ನು ತನ್ನದಾಗಿ ಸ್ವೀಕರಿಸಿದನು ಮತ್ತು ಅವನ ಮಲತಂದೆಯಾದನು. ಈ ಮೂಲಕ ಬುಧ ಗ್ರಹದ ನಿಜವಾದ ತಂದೆ ಚಂದ್ರನಾಗಿದ್ದು, ಗುರುವು ಸಾಕುತಂದೆಯಾಗಿದ್ದಾನೆ. 


**


ಚಂದ್ರನ ಮಗ ಬುಧನಿಗೆ ಇಳಾದೇವಿಯಲ್ಲಿ ಜನಿಸಿದವ ಪುರೂರವ.  ಅಲ್ಲಿಂದ ಮುಂದಿನ ತಲೆಮಾರು 'ಚಂದ್ರವಂಶ' ಅಂತ ಖ್ಯಾತಿಯನ್ನು ಪಡೆಯುತ್ತದೆ.  ಮಹಾಭಾರತ ಬರುವುದು ಇದೇ ಚಂದ್ರವಂಶದಲ್ಲಿ.


**


ನವಗ್ರಹಗಳಲ್ಲಿ ಮನಸ್ಸನ್ನು ನಿಗ್ರಹಿಸುವ ಏಕೈಕ ಗ್ರಹ ಅದು ಚಂದ್ರ ಗ್ರಹ. ಅಂಥ ಚಂದ್ರನ ಅವತರಿಸಿದ್ದು ಕಾರ್ತೀಕ ಮಾಸದ ಪೌರ್ಣಮಿಯಂದು. (ಚಂದ್ರ ಹುಟ್ಟುವುದಕ್ಕೆ ಮುಂಚೆಯೇ ಪೌರ್ಣಮಿ ಹೇಗೆ? ಎನ್ನು ಪ್ರಶ್ನೆಗೆ ಚಂದ್ರನಿಂದ ಉತ್ತರ ಬರಬೇಕು!!!).  ಮತ್ತೆ ಹಿಂದಕ್ಕೆ ಹೋಗುವುದಾದರೆ.... ಚಂದ್ರನ ಉದ್ಭವದ ಕುರಿತಾಗಿ ಎರಡು ಕಥೆಗಳಿದ್ದಾವೆ. ಮೊದಲನೆಯದ್ದು ದೇವ ದಾನವರು ಹಾಲ್ಗಡಲನ್ನು ಕಡೆದಾಗ ಅದರಲ್ಲಿ ಹುಟ್ಟಿದ ಅನರ್ಘ್ಯರತ್ನಗಳ ಜೊತೆ ಚಂದ್ರನೂ ಹುಟ್ಟಿದ ಎಂಬುದು.


ಮತ್ತೊಂದು ಕಥೆಯ ಪ್ರಕಾರ ಅತ್ರಿ ಅನಸೂಯೆಯರಿಗೆ ತ್ರಿಮೂರ್ತಿಗಳು ಸಂತಾನ ಅನುಗ್ರಹ ಮಾಡಿದಾಗ ಬ್ರಹ್ಮನಿಂದ ವರವಾಗಿ ಬಂದವನು ಈ ಚಂದ್ರ ಅಂತ. ಅಂತೂ ಚಂದ್ರನ ಅವತಾರವಾಗಿದ್ದು ಹೀಗೆ. 


ನಮಗೆ ಬೆಳದಿಂಗಳನ್ನು ಕರುಣಿಸುವ ಚಂದ್ರಕಿರಣದ ಹಿಂದೆ ಮನುಷ್ಯನಿಗೂ ಚಂದ್ರನಿಗೂ ಇರುವ ಅವಿನಾಭಾವದ ನಂಟಿನ ಒಂದು ಲಿಂಕ್ ಇದೆ. 


ಮುಖ್ಯವಾಗಿ ಚಂದ್ರನನ್ನು ಓಷಧೀ ಪತಿ ಅಂತ ಕರೀತಾರೆ. ಚಂದ್ರ ತನ್ನ ಹಿಮಕಿರಣ ಗಳಿಂದ ನಾವು ತಿನ್ನುವ ಆಹಾರಗಳಲ್ಲಿ ಪುಷ್ಠಿಯನ್ನ ತುಂಬುತ್ತಾನೆ. ಆ ಚಂದ್ರನ ಪುಷ್ಠಿಯಿಂದಲೇ ನಮ್ಮ ಶರೀರಕ್ಕೆ ಕಾಂತಿ ಬರೋದು. ಹೀಗಾಗಿ ನಾವು ತಿನ್ನುವ ಅನ್ನಕ್ಕೂ ಚಂದ್ರನಿಗೂ ನಿಕಟ ಸಂಬಂಧವಿದೆ. ನಮ್ಮ ಮನಸ್ಸು-ರೂಪಗಳು ಸಿದ್ಧವಾಗುವುದೇ ನಾವು ತಿನ್ನುವ ಅನ್ನದಿಂದ. ಹೀಗಾಗಿ ಅನ್ನಕ್ಕೂ ನಮಗೂ ಹಾಗೂ ಅನ್ನದೊಳಗೆ ಶಕ್ತಿ ತುಂಬುವ ಚಂದ್ರನಿಗೂ ನಿಕಟ ನಂಟಿದೆ. ಇನ್ನು ಜ್ಯೋತಿಷ ಶಾಸ್ತ್ರಕ್ಕೆ ಬಂದ್ರೆ ಅಲ್ಲಿ ನಮ್ಮ ಮನಸ್ಸಾಳುವ ಗ್ರಹವೇ ಚಂದ್ರ. 


ಚಂದ್ರನೆಂದರೆ ಮನುಷ್ಯನಿಗೆ ಅದೇನೋ ನಂಟು. ಮನಸ್ಸಿನ ಮೇಲೂ ಪರಿಣಾಮ ಬೀರುವ ಈ ಶಶಿಯ ಬಗ್ಗೆ ಎಲ್ಲಿಲ್ಲದ ಕುತೂಹಲ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಈ ಚಂದ್ರನ ಹ್ಯಾಪಿ ಬರ್ತ್‌ಡೆ (ಕಾರ್ತಿಕ ಪೌರ್ಣಿಮೆ) ಈ ವರ್ಷ 27 November 2023 ಬರುತ್ತೆ.  ಚಂದ್ರಯಾನದ ನಂತರದ ವಿಶೇಷವಾಗಿ, ಚಂದ್ರಾಕಾರದ ಬೆಳ್ಳಿ ತಟ್ಟೆಯಲ್ಲಿ ಆರತಿ ಮಾಡುತ್ತಿರುವ ಅಥವಾ ಮಾರ್ಡನ್ ಆಗಿ ಚಂದ್ರಾಕಾರದ ಕೇಕ್‌‌ನ ಎಮೋಜಿಯನ್ನು ಈ ವರ್ಷ ಚಂದ್ರನಿಗೇ ಕಳಿಸಬಹುದು!!!


ಇವತ್ತು 140+ ಕೋಟಿ ಭಾರತೀಯರ (ಅದರಲ್ಲಿ ಬೇಕಾದರೆ ಒಂದೆರೆಡು ರಾಹು, ಕೇತು ಗಳಾದ ದಾನವ 'ಚೇತನ'ಗಳನ್ನು, ಮಂದ 'ಪ್ರಕಾಶ'ಗಳನ್ನು ಬಿಡಿ!!) ಮನಸ್ಸುಗಳು ಸಂಭ್ರಮಿಸುತ್ತಿರುವಲ್ಲಿ ಜ್ಯೋತಿಷ್ಯ ಕಾರಣ ಚಂದ್ರನೇ ಮನಸ್ಸಿಗೆ ಅಧಿಪತಿಯಾಗಿರುವುದು.  ವೇದದಲ್ಲಂತೂ ‘ಚಂದ್ರಮಾ ಮನಸೋ ಜಾತಃ’ಎಂದು ಹೇಳುತ್ತಾರೆ. ಚಂದ್ರನೇ ಮನಸ್ಸಿಗೆ ಅಧಿಪತಿ ಅಂತ. ಹೀಗಾಗಿ ನಮ್ಮ ಮನಸ್ಸಿನ ನೆಮ್ಮದಿ ಹಾಗೂ 'ಮನೋವ್ಯಾಧಿ' ಎರಡಕ್ಕೂ ಚಂದ್ರನೇ ಮುಖ್ಯಕಾರಣ. (ದಾನವ 'ಚೇತನ'ಗಳನ್ನು, ಮಂದ 'ಪ್ರಕಾಶ'ಗಳ ಮನೋವ್ಯಾಧಿಗೂ ಜಾತಕದ ಚಂದ್ರನೇ ಕಾರಣ!!)  ಇತರರನ್ನು ನೋಡಿ ನಮ್ಮ ಮನಸ್ಸು ಕರಗುತ್ತಿದೆ, ಅಥವಾ ಕುದಿಯುತ್ತಿದೆ ಎಂದರೆ ಅದಕ್ಕೆ ಕಾರಣೀ ಕರ್ತನೇ ಚಂದ್ರ. ಯಾರ ಜಾತಕದಲ್ಲಿ ಚಂದ್ರ ಚನ್ನಾಗಿದ್ದಾನೋ ಆ ವ್ಯಕ್ತಿ ಸದಾ ಚಿಂತಾರಹಿತನಾಗಿರ್ತಾನೆ.  ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದ ಕೂಲ್ ಮ್ಯಾನ್ ಆಗಿರ್ತಾನೆ.  


**


ಜಾತಕದಲ್ಲಿ ಚಂದ್ರ ಯಾವ ಮನೆಯಲ್ಲಿದ್ದಾನೆ ಅನ್ನುವುದರ ಮೇಲೆ ನಮ್ಮ ಮನಸ್ಸಿನ ಸ್ಥಿತಿಯೂ ಬದಲಾವಣೆ ಆಗುತ್ತದೆಯಂತೆ.  ಸದ್ಯದಲ್ಲೇ (ಮುಂದಿನ ಎರಡು-ಮೂರು ತಲೆಮಾರಿನಲ್ಲಿ!!?) ನಾವು ಚಂದ್ರನಲ್ಲೇ ಮನೆ ಮಾಡುವ ಸಾಧ್ಯತೆ ಇದೆ!!! ಆಗ ಮನಸ್ಥಿತಿಯ ಮೇಲೆ ಚಂದ್ರ ಹೇಗೆ ಪ್ರಭಾವ ಬೀರುತ್ತಾನೆ ಅಂತ ಈಗಲೇ ಭವಿಷ್ಯ ಹೇಳುವುದಕ್ಕೆ ಆಗುವುದಿಲ್ಲ!!!


ಇನ್ನು ಚಂದ್ರನ ಮಗ ಬುಧ ಗ್ರಹವು ಬುದ್ಧಿವಂತಿಕೆಯ ಅಧಿಪತಿಯಂತೆ!!. (ಬುದ್ದಿ ಜೀವಿಗಳ ಅಧಿಪತಿ ಶುಕ್ರಗ್ರಹದ ನಂತರ ಬರುವವ!!?)


***


ಚಂದ್ರನ ಬಗ್ಗೆ, ಇನ್ನೊಂದು ಪುರಾಣ ಕಥೆಯ ಪ್ರಕಾರ, ಭಾದ್ರಪದ ಚೌತಿಯ ರಾತ್ರಿ ಕುಬೇರ ಕೊಟ್ಟ ಭಾರಿ ಸವಿಯೂಟ ಮುಗಿಸಿಕೊಂಡು ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಮನೆಗೆ ಮರಳುತ್ತಿದ್ದನು. ವಾಪಾಸು ಪ್ರಯಾಣದಲ್ಲಿ, ಅವರ ದಾರಿಗೆ ಒಂದು ಹಾವು ಅಡ್ಡಬಂದು, ಅವನ ವಾಹನವಾದ ಇಲಿ ಹೆದರಿ ಓಡಿ ಹೋಯಿತು. ಆಗ ಗಣೇಶನು ಕೆಳಗೆ ಬಿದ್ದುಬಿಟ್ಟನು. ಹೊಟ್ಟೆಬಿರಿದ ಗಣೇಶನ ಹೊಟ್ಟೆ ಒಡೆದುಹೋಯಿತು ಮತ್ತು ಅವನು ತಿಂದಿದ್ದ ಮೋದಕಗಳು ಆಚೆ ಚೆಲ್ಲಿಬಿಟ್ಟವು. ಇದನ್ನು ನೋಡಿ, ಚಂದ್ರನು ನಕ್ಕುಬಿಟ್ಟ. ಗಣೇಶನಿಗೆ ಸಿಟ್ಟುಬಂದು ತನ್ನ ಒಂದು ದಂತವನ್ನು ಮುರಿದು ಚಂದ್ರನತ್ತ ಎಸೆದನು. (ಎರಡು ದಂತಗಳಲ್ಲಿ ಒಂದೇ ಉಳಿದು, ಗಣಪತಿ ಏಕದಂತನಾದ!!) ಇದರಿಂದ ಚಂದ್ರನಿಗೆ ಪೆಟ್ಟಾಯಿತು. ಜೊತೆಗೆ ಚಂದ್ರನಿಗೆ ಇನ್ಯಾವತ್ತೂ ಪೂರ್ಣವಾಗಿರಲಾರೆ ಎಂದು ಶಾಪಕೊಟ್ಟನು. ಹಾಗಾಗಿ, ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡುವುದು ನಿಷಿದ್ಧ. ಈ ಪುರಾಣಕಥೆ ಚಂದ್ರನ ವರ್ಧಿಸುವಿಕೆ ಮತ್ತು ಕ್ಷೀಣಿಸುವಿಕೆಯನ್ನು ಹಾಗೂ ಭೂಮಿಯಿಂದಲೂ ಕಾಣುವ ಚಂದ್ರನ ಮೇಲಿನ ಒಂದು ದೊಡ್ಡ ಕುಳಿಯನ್ನು ವಿವರಿಸುತ್ತದೆ.  ಆ ಕುಳಿ ಗಣಪತಿಯ ದಂತದಿಂದಾಗಿದ್ದು ದಂತ ಕತೆ!!!  ಆ ಕುಳಿಯಲ್ಲಿ ಮೊಲ ವಾಸ ಮಾಡ್ತಾ ಇರುವುದು ಕಾಲ್ಪನಿಕ ಕತೆ.  


ನಿಜವಾಗಿಯೂ ಆ ಕುಳಿ ಏನು ಅಂತ ಗೊತ್ತಾದರೆ ಅದು ವೈಜ್ಞಾನಿಕ ಕತೆ!!!


ಚಂದ್ರ ಯಾನ ಆಗಿದ್ದು 23.8.23

ಅದನ್ನು ಹೀಗೂ ಬರೆಯಬಹುದು : 23.2³.23.  ಇದು ಗಣಿತ ಕತೆ!!


ಇದಿಷ್ಟು ಕತೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ.


(ಕೆಲವಷ್ಟು ಮಾಹಿತಿಗಳನ್ನು ಅಂತರ್ಜಾಲ ಮತ್ತು ಪುರಾಣನಾಮ ಚೂಡಮಣಿಯಿಂದ ಪಡೆಯಲಾಗಿದೆ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top