ಕುಪ್ಪಂ: “ಆಂಧ್ರಪ್ರದೇಶದ ಗಡಿಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ತುಮಕೂರು ಪ್ರದೇಶಗಳನ್ನು ಒಂಬತ್ತನೇ ಶತಮಾನದಿಂದಲೂ ‘ಮೊರಸುನಾಡು’ ಎಂದು ಕರೆಯಲಾಗುತ್ತಿದ್ದು ಇದು ಕೃಷಿ, ಶ್ರಮ, ದುಡಿಮೆಗೆ ಸಂಬಂಧಿಸಿದ ಪದವಾಗಿದೆ. ಹದಿಮೂರನೇ ಶತಮಾನದ ತೆಲುಗಿನ ಕವಿಸಾರ್ವಭೌಮ ಶ್ರೀನಾಥನೂ ಮೊರಸುನಾಡಿನ ಬಗ್ಗೆ ಉಲ್ಲೇಖಿಸಿದ್ದನು. ಈ ಪ್ರದೇಶದ ಭಾಷೆಯು ಅನನ್ಯವಾಗಿದ್ದು ಕನ್ನಡ, ತೆಲುಗು, ತಮಿಳುಗಳ ನಡುವಿನ ಸಂಬಂಧ ಇಲ್ಲಿ ಎದ್ದು ಕಾಣುತ್ತದೆ. ಪಿನ ಓಬಳಾಚಾರ್ಯರ ಗೊಡಗೂಚಿ ಕಥಾ, ಕೈವಾರ ತಾತಯ್ಯನವರ ತತ್ವಪದಗಳ ತೆಲುಗು-ಕನ್ನಡ ಬಳಕೆಯ ವಿಧವು ಮೊರಸುನಾಡು ಕನ್ನಡದ ಬೆಳವಣಿಗೆಗೆ ಸಾಕ್ಷಿಗಳಾಗಿವೆ. ಇಲ್ಲಿ ಇಂದಿಗೂ ಮೌಖಿಕವಾಗಿ ಅಸ್ತಿತ್ವದಲ್ಲಿರುವ ಕನ್ನಡ-ತೆಲುಗು, ಕನ್ನಡ-ತಮಿಳು ಭಾಷಾಮಿಶ್ರಣದ ಪ್ರಯೋಗಗಳು ಹಲವು ಅಂಶಗಳನ್ನು ತೆರೆದಿಡುತ್ತಿದ್ದು ಈ ಕನ್ನಡದ ಸೂಕ್ಷ್ಮ ಅಧ್ಯಯನ ನಡೆಯಲಿ” ಎಂದು ಖ್ಯಾತ ಲೇಖಕ, ಅನುವಾದಕ ಕೋಲಾರದ ಸ.ರಘುನಾಥ ಅವರು ಕರೆನೀಡಿದರು.
ಅವರು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗವು ಆಯೋಜಿಸಿದ್ದ ‘ಮೊರಸುನಾಡು ಮತ್ತು ದ್ರಾವಿಡ ಭಾಷೆಗಳ ಆಂತರಿಕ ಸಂಬಂಧ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಅವರು ಮೊರಸುನಾಡು ಕನ್ನಡದ ಅನನ್ಯವಾದ ಹಲವು ಮಾದರಿಗಳನ್ನು ಪರಿಚಯಿಸುತ್ತಾ “ಈ ಬಹುಭಾಷಿಕ ಪ್ರದೇಶದಲ್ಲಿ ಸಾಂಸ್ಕೃತಿಕವಾಗಿಯಾಗಲೀ, ಭಾಷಿಕವಾಗಿಯಾಗಲೀ ದಬ್ಬಾಳಿಕೆ ಇರದೆ ಸಾಮರಸ್ಯದ ಬದುಕು ಇದೆ. ಇಲ್ಲಿ ಹಲವು ಕ್ರಿಯಾಶೀಲ ಕಾರ್ಯಗಳಿಗೆ ನೆಲೆ ಇದೆ” ಎಂದು ಅಭಿಪ್ರಾಯಪಟ್ಟರು.
ಸಾಮಾನ್ಯ ವ್ಯಕ್ತಿಯಾದ ತಮ್ಮ ಕೃತಿಗಳನ್ನು ಮೊತ್ತಮೊದಲ ಬಾರಿಗೆ ದ್ರಾವಿಡ ವಿಶ್ವವಿದ್ಯಾಲಯವು ಗುರುತಿಸಿ ಪ್ರೋತ್ಸಾಹಿಸಿದುದನ್ನೂ ಸಾಂದರ್ಭಿಕವಾಗಿ ಅವರು ನೆನಪಿಸಿಕೊಂಡರು.
“ದ್ರಾವಿಡ ವಿಶ್ವವಿದ್ಯಾಲಯವು ವಿವಿಧ ಭಾಷೆಗಳಿಗೆ ಸಂಬಂಧಿಸಿದ ಸಂಶೋಧನೆಗಳಿಗೆ, ಪ್ರಕಟಣೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಇಂತಹ ಉಪನ್ಯಾಸಗಳು ಮುಂದಿನ ಅಧ್ಯಯನಗಳಿಗೆ ಸ್ಪೂರ್ತಿ” ಎಂದು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎ.ಕೆ. ವೇಣುಗೋಪಾಲ ರೆಡ್ಡಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಭಾಷಾ ನಿಕಾಯದ ಡೀನ್ ಆದ ಡಾ.ಬಿ.ಎಸ್.ಶಿವಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಮೊರಸುನಾಡು ಕನ್ನಡವು ಬಹು ವಿಶಿಷ್ಟವಾದ ಗುಣಲಕ್ಷಣಗಳನ್ನು ಹೊಂದಿದ್ದು ಈ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನಗಳು ನಡೆಯಲು ಸ. ರಘುನಾಥ ಅವರ ಉಪನ್ಯಾಸ ಹಾಗೂ ಈ ಸಂಬಂಧವಾದ ಅವರ ಕೃತಿ ಸಹಾಯಕ” ಎಂದು ನುಡಿದರು.
ವಿಭಾಗದ ಮುಖ್ಯಸ್ಥರಾದ ಪ್ರೊ.ಜಯಲಲಿತ ಅವರು ಈ ಕಾರ್ಯಕ್ರಮದ ಆಯೋಜಕರಾಗಿದ್ದು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ “ಈ ಉಪನ್ಯಾಸ ಕಾರ್ಯಕ್ರಮವು ವಿವಿದೆಡೆಗಳ ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಬರುವಂತೆ ಮಾಡಿದ್ದು, ಹೊಸ ಹೊಸ ವಿಚಾರಗಳಿಗೆ ಮುಖಾಮುಖಿಯಾಗುವಂತೆ ಮಾಡಿದೆ, ಆನ್ ಲೈನ್ ಮೂಲಕವೂ ಇದನ್ನು ದಾಖಲಿಸಿಡುವ ಯೋಜನೆ ರೂಪಿಸಲಾಗಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಎಸ್.ದುರ್ಗಾಪ್ರವೀಣ್, ಎಂ.ಎ., ಪಿಎಚ್.ಡಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಜೆ.ಎಸ್. ವ್ಯಾಸರಾವ್ ಅವರು ಪ್ರಾರ್ಥಿಸಿದರು, ಡಿ.ಇಮಾಮ್ ಬಾಷಾ ಅತಿಥಿಗಳನ್ನು ಪರಿಚಯಿಸಿದರು. ಎಂ. ಅಭಿಷೇಕ್ ಕಾರ್ಯಕ್ರಮವನ್ನು ನಿರೂಪಿಸಿ, ಜಿ.ಎ. ಈಶ್ವರಮ್ಮ ಧನ್ಯವಾದ ಸಮರ್ಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ