ಶ್ರೀರಾಮಾಯನಮ:
"ಅವಸರವೇ ಅಪಘಾತಕ್ಕೆ ಕಾರಣ" ಇದು ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ನಾವು ಕಾಣುವ ಎಚ್ಚರಿಕೆಯ ಸಂದೇಶ.ರಾಮಾಯಣದಲ್ಲಿ ಇದು ಅಂದೇ ಸಂಭವಿಸಿತ್ತು.
.'ಇರುಳು ಬೆಳಗಾಗಬೇಕಾದರೆ' ಎನ್ನುವ ರೀತಿಯಲ್ಲಿ ದಶರಥನು ರಾಮನಿಗೆ ಯುವರಾಜ ಪಟ್ಟಾಭಿಷೇಕಕ್ಕೆ ನಿರ್ಣಯಿಸಿದನು.
.'ಇದು ದಾಸಿಯ ಮಾತು' ಎಂದು ವಿವೇಚಿಸದೆ ಇನ್ನೊಬ್ಬರಲ್ಲೂ ಕೇಳದೆ ಕೈಕೇಯಿಯು ತನ್ನ ಕಾರ್ಯ ಸಿದ್ಧಿಗಾಗಿ ಎಲ್ಲಾ ಬಗೆಯ ಚಳವಳಿಗಳನ್ನು ಹೂಡಿದಳು.ಪರಿಣಾಮ?
ತತ್ಕಾಲಕ್ಕೆ ಘೋರವಾದ ಪರಿಣಾಮವುಂಟಾಯಿತು.
ರಾಮನಿಗೆ ಒಂದೇ ಕಾಲಕ್ಕೆ ಸುಮಂತ್ರನ ಮೂಲಕ ಎರಡು ಆದೇಶಾತ್ಮಕ ಕರೆಗಳು.ಮೊದಲನೆಯದು ಗುರು ವಸಿಷ್ಠರಿಂದ-ಆದಷ್ಟು ಬೇಗನೆ ಸೀತೆಯೊಡನೆ ಪಟ್ಟಾಭಿಷೇಕದ ಪೂರ್ವ ಕಾರ್ಯಕ್ರಮಗಳಿಗೆ ಸಿದ್ಧನಾಗು ಎಂದು.
ಎರಡನೆಯದು ಅತಿ ಶೀಘ್ರದಲ್ಲಿ ರಾಜಭವನಕ್ಕೆ ಬರಲು ದಶರಥ ಹಾಗೂ ಕೈಕೇಯಿಯಿಂದ ಕರೆ.
ರಾಮ ಪಿತೃವಾಕ್ಯ ಪರಿಪಾಲನೆ ಮಾಡಿದ.ಒಂದೊಮ್ಮೆ ಗುರುವಿಗೆ ಮೊದಲ ಮನ್ನಣೆ ಎಂದು ರಾಮ ಮುಂದುವರಿಯುತ್ತಿದ್ದರೆ? ಹಾಗೆ ಮಾಡಲಿಲ್ಲ; ಯಾಕೆಂದರೆ ಅವನು ರಾಮ!
ಈಗಾಗಲೇ ಮಂಗಳ ಸ್ನಾನವನ್ನು ಮುಗಿಸಿದ್ದ ರಾಮನು ದಶರಥನಿದ್ದಲ್ಲಿಗೆ ಸುಮಂತ್ರ ಲಕ್ಷ್ಮಣರೊಂದಿಗೆ ತೆರಳಿದನು.ದಾರಿಯುದ್ದಕ್ಕೂ ನೆರೆದ ಜನರಿಂದ ಮಂಗಳಕರವಾದ ಶುಭಾಶಯಗಳ ಘೋಷಣೆಗಳ ಸುರಿಮಳೆ!.
ರಾಜಭವನದೊಳಗೆ ಚಿಂತೆಯೇ ಮೂರ್ತಿವೆತ್ತು ಕುಳಿತಂತಿರುವ ತಂದೆಯನ್ನು ರಾಮನು ಕಂಡನು.ಹಾವನ್ನು ತುಳಿದು ಭಯಪಟ್ಟವನ ಸ್ಥಿತಿ ರಾಮನದಾಯಿತು.ಪಾದಕ್ಕೆ ನಮಸ್ಕರಿಸಿದಾಗ ಬಾಚಿ ತಬ್ಬುವ ತಂದೆ ಇಂದು ಅದೇನೂ ಮಾಡದೆ ಮೌನವಾಗಿ ಕಣ್ಣೀರಿಳಿಸುವುದನ್ನು ಕಂಡನು.ಕೊನೆಗೆ ಅನಿವಾರ್ಯವಾಗಿ ತನ್ನಿಂದೇನಾದರೂ ತಪ್ಪಾಗಿ ರಬಹುದು ಎಂದು ಭಾವಿಸುತ್ತಾ ಕೈಕೇಯಿಯಲ್ಲಿ ಕಾರಣ ಕೇಳಿದನು.
ಜಾಣೆ ಕೈಕೇಯಿಯು ರಾಮನಿಂದಲೂ 'ತಂದೆ ಹೇಳಿದ ಯಾವುದೇ ಕಾರ್ಯವನ್ನು ಜೀವತೆತ್ತಾದರೂ ಮಾಡುವೆನೆಂಬ' ಎಂಬ ಮಾತನ್ನು ಮೊದಲು ಪಡೆದು ಆ ಮೇಲೆ ಹೇಳಿದಳು-
. ರಾಜನು ನನಗಿತ್ತ ಎರಡು ವರಗಳಲ್ಲಿ ಮೊದಲನೆಯದಾಗಿ ಭರತನಿಗೆ ಪಟ್ಟಾಭಿಷೇಕ
. ಎರಡನೆಯದಾಗಿ ನೀನು ದಂಡಕಾರಣ್ಯಕ್ಕೆ ಈಗಲೇ ಹೋಗಬೇಕು.
ಇವುಗಳನ್ನು ನೀನು ನಡೆಸಿ ಕೊಡಬೇಕು ಎಂದು ಹೇಳಿದಳು.
ಇದರಿಂದ ಒಂದಿಷ್ಟೂ ಗಲಿಬಿಲಿಗೊಳ್ಳದ ರಾಮನು ಹಾಗೆಯೇ ಆಗಲಿ ಎಂದು ಒಪ್ಪಿ ತಾಯಿಯ ಅನುಮತಿಗಾಗಿ ಅವಳಿದ್ದಲ್ಲಿಗೆ ತೆರಳಿದನು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ