ಬಂಟರ ಮಹಿಳಾ ಘಟಕದ ವತಿಯಿಂದ ಆಟಿಡೊಂಜಿ ದಿನ
ಮೂಡುಬಿದಿರೆ: ಮಾನವ ಬದುಕಿನುದ್ದಕ್ಕೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.
ಮೂಡುಬಿದಿರೆಯ ಬಂಟರ ಸಂಘದ ಮಹಿಳಾ ಘಟಕದ ವತಿಯಿಂದ ಭಾನುವಾರ ಪಟ್ಟಣದ ಸ್ಕೌಟ್ಸ್‍ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಜಾತಿ ಸೇರಿದರೆ ಸಮಾಜ. ಮನುಷ್ಯ ದಾನಧರ್ಮದ ಮೂಲಕ ಸ್ವಸ್ಥ ಸಮಾಜ ನಿರ್ಮಿಸುವ ಪರಿಕಲ್ಪನೆ ಹೊಂದಿರಬೇಕು. ಬಡವ- ಶ್ರೀಮಂತ ಎನ್ನುವಅಂತರ ಕಡಿಮೆಗೊಳಿಸುವುದರತ್ತ ಪ್ರತಿಯೊಬ್ಬರೂ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.
ಇಂದು ಯುವ ಪೀಳಿಗೆ ಮೊಬೈಲ್ ಗೆ ಜೋತು ಬಿದ್ದು ಸಮಾಜಮುಖಿ ಜೀವನದಿಂದ ಪ್ರತ್ಯೇಕವಾಗಿದ್ದಾರೆ ಕೂಡು ಕಟುಂಬದ ಮೂಲಕ ಸಂಸ್ಕಾರ ಪರಿಚಯಿಸಬೇಕಾಗಿದೆ. ಆಗ ಮಾತ್ರ ವ್ಯಕ್ತಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಆಳ್ವಾಸ್ ಪದವಿ ಪೂರ್ವಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಉಪನ್ಯಾಸ ನೀಡಿ, ಬದಲಾದ ಕಾಲಘಟ್ಟದಲ್ಲಿ ಆಟಿಡೊಂಜಿ ದಿನ ಅನೇಕ ಬಗೆಯಲ್ಲಿ ರೂಪಾಂತರಗೊಂಡಿದೆ. ಈ ಹಿಂದೆ ಆಷಾಡ ಮಾಸದಲ್ಲಿ ತುಳುವರು ಅನುಸರಿಸುತ್ತಿದ್ದ ಸಂಪ್ರದಾಯ ಹಾಗೂ ಆಚರಣೆಯನ್ನು ಯುವ ಪೀಳಿಗೆಗೆ ನೆನಪಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಮೂಡುಬಿದಿರೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್ . ಹೆಗ್ಡೆ, ಮಂಗಳೂರಿನ ಬಂಟರ ಮಾತೃ ಸಂಘದ ಕಾರ್ಯಾಕಾರಿ ಸದಸ್ಯೆ ಸಬಿತಾ ಶೆಟ್ಟಿ , ಮೂಡುಬಿದಿರೆ ಬಂಟರ ಸಂಘದ ಗೌರವ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಎಂ. ಪುರುಷೋತ್ತಮ ಶೆಟ್ಟಿ, ಮೂಡುಬಿದಿರೆಯ ಯುವ ಬಂಟರ ಸಂಘದ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಇದ್ದರು.
ಪ್ರಾಪ್ತಿ ಆರ್ ಶೆಟ್ಟಿ ಪ್ರಾರ್ಥಿಸಿ, ಪ್ರಫುಲ್ಲಾ ಶೆಟ್ಟಿ ಸ್ವಾಗತಿಸಿದರು. ರಂಜಿತಾ ಶೆಟ್ಟಿ, ಶಿವ ಪ್ರಸಾದ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು, ಅನಿತಾ ಶೆಟ್ಟಿ, ಪದ್ಮಾವತಿ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ತುಳುನಾಡಿನ ‘ಚೆನ್ನ ಮಣೆ’ ಜಾನಪದ ಆಟದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದಲ್ಲಿ ಜಾನಪದ ಹಾಡುಗಳು ಮತ್ತು ನೃತ್ಯಗಳು ಆಕರ್ಷಣೆಯಾಗಿದ್ದವು. ತುಳುನಾಡಿನ ವಿವಿಧ ನಮೂನೆ ಖಾದ್ಯಗಳು ಗಮನ ಸೆಳೆಯಿತು.
ಸಾಧಕರಿಗೆ ಸನ್ಮಾನ
ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ನಳಿನಾಕ್ಷಿ, ಪಾಡ್ಡನದಲ್ಲಿ ಸಾಧನೆಗಾಗಿ ಕುಸುಮಾ, ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುನಂದಾ ಶೆಟ್ಟಿ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಮೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಂಟರ ಸಮುದಾಯ ಅಶಕ್ತರಿಗೆ ಸಹಾಯಧನ ನೀಡಲಾಯಿತು. ಘಟಕದ ಸದಸ್ಯರ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ