ನೆನಪುಗಳ ಕ್ಷಣ ಮಧುರವಾಗಿದೆ ಎಂದರೆ ಅ ದಿನಗಳಲ್ಲಿ ನಾವು ಅನುಭವಿಸಿದ, ನಾವು ನೋಡಿದ ವಾಸ್ತವದ ಬದುಕು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಾಗ ಮಾತ್ರ. ಏನೋ ಒಂದು ನೆನಪು ನನ್ನ ಮನಸ್ಸಿನಲ್ಲಿ ಮೂಡಿದಾಗ ನಿಮ್ಮ ಮುಂದೆ ಹಂಚಿಕೂಳ್ಳಬೇಕೆಂಬ ಬಯಕೆ ಅಷ್ಟೆ.
ಒಂದೆ ಕುಟುಂಬ, ಒಂದೇ ಮನೆ ಎಂದರೆ ಎಲ್ಲವೂ ಎಲ್ಲರೂ ನಮ್ಮದೇ ಎಂಬ ಭಾವನೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಅದು ಜೀವ ಇರುವ ವಸ್ತುಗಳೇ ಆಗಿರಲಿ ಜೀವ ಇಲ್ಲದ ವಸ್ತುಗಳೇ ಆಗಿರಲಿ ಎಲ್ಲವೂ ಕೂಡ. ಪ್ರತಿಯೊಂದು ವಸ್ತುಗಳಿಗೆ, ಸಾಮಾಗ್ರಿಗಳಿಗೆ ಮನೆಯಲ್ಲಿ ಆಯ ಜಾಗದಲ್ಲಿ ಸ್ಥಾನಮಾನ ಇತ್ತು.
ಹೀಗಿರುವಾಗ ನನ್ನ ಮನಸ್ಸಿನ ಅಂಗಳದಲ್ಲಿ ಮೂಡಿದ ನೆನಪು ನಾವು ಉಪಯೋಗಿಸುವ "ನಮ್ಮ ಮನೆಯ ಪಾತ್ರೆಗಳು ಅವುಗಳ ಪಾತ್ರ". ಹೌದು ಸ್ನೇಹಿತರೇ ಮನೆಯಲ್ಲಿರುವ ಮನೆಯಲ್ಲಿರುವ ಪ್ರತಿಯೊಂದು ಪಾತ್ರೆಗಳು ಜೀವ ಇಲ್ಲದಿದ್ದರೂ ನಮ್ಮೂಂದಿಗೆ ಸ್ನೇಹ ಜೀವಿ ಎಂಬುದು ಸುಳ್ಳಲ್ಲ.
ಒಂದು ಮನೆಯಲ್ಲಿ ಎಷ್ಟೆ ಜನರಿದ್ದರೂ ಊಟ ಮಾಡುವ ತಟ್ಟೆಗಳು ಅವರವರಿಗೆ ಅವರದ್ದೆ ಎಂಬುದು ಕಡ್ಡಾಯ. ಆಕಾರ, ಅಳತೆಯಲ್ಲಿ ಒಂದೇ ತರ. ನೋಡಿದ ತಕ್ಷಣ ಇದು ಅಪ್ಪನದು, ಅಮ್ಮನದು, ಅಕ್ಕನದು, ಅಣ್ಣನದು, ಎಂಬುದು ನೋಡಿದ ಕ್ಷಣ ಗುರುತ್ತು ಹಿಡಿಯಬಹುದಾಗಿತ್ತು.
ಊಟ ಮಾಡುವ ತಟ್ಟೆಗಳು ಮಾತ್ರವಲ್ಲ ನಾವು ದಿನನಿತ್ಯ ಉಪಯೋಗಿಸುವ ಬಾವಿಯಿಂದ ನೀರು ಎಳೆಯುವ ದೊಡ್ಡ ಬಿಂದಿಗೆ, ಸ್ನಾನಕ್ಕೆ ಬಳಸುವ ಪಾತ್ರೆ, ಲೋಟಗಳು, ನೀರು ಕುಡಿಯುವ ಬಿಂದಿಗೆ, ಅನ್ನದ ಪಾತ್ರೆ, ಎಲ್ಲವೂ ನಮ್ಮ ಮನೆಯ ಸದಸ್ಯರಂತೆ.
ಅವರವರ ತಟ್ಟೆಯಲ್ಲಿ ಊಟ ಬಡಿಸದಿದ್ದರೆ ಸಣ್ಣ ಮಟ್ಟದಲ್ಲಿ ಮುನಿಸು, ಮನಸ್ಥಾಪ ಉಂಟಾಗುತ್ತಿತ್ತು. ಅಂದರೆ ಅಷ್ಟು ಪ್ರೀತಿ ಪಾತ್ರವಾಗಿತ್ತು ಪಾತ್ರೆಗಳು.
ಈಗಿನ ದಿನಗಳಂತೆ ಪೇಟೆಗಳಿಗೆ ಹೋಗಿ ಪಾತ್ರೆಗಳನ್ನು ಖರೀದಿಸುವ ಸ್ಥಿತಿ ಆಗ ಇರಲಿಲ್ಲ.ಆಗ ಮನೆ ಮನೆಗಳಿಗೆ ಪಾತ್ರೆ ಮಾರುವವನು ಬರುವ ಸಮಯ ಇತ್ತು. ಅವನಿಂದ ಹೊಸ ಪಾತ್ರೆಗಳು ಪಡೆಯುವುದು, ಅದನ್ನು ಪಡೆಯುವಾಗ ನಮ್ಮಲ್ಲಿರುವ ಹಳೆಯ ಪಾತ್ರೆಯನ್ನು ನಿಗದಿಪಡಿಸಿದ ಹಣಕ್ಕೆ ಮಾರುವುದು ಇರುತ್ತಿತ್ತು. ಒಂದು ಕಡೆ ಹೊಸ ಪಾತ್ರೆ ಪಡೆಯುವ ಖುಷಿ ಇದ್ದರೆ ಮತ್ತೊಂದು ಕಡೆ ನಮ್ಮ ಮನೆಯ ಸದಸ್ಯರಂತೆ ಇದ್ದ ಹಳೆಯ ಪಾತ್ರೆಗಳನ್ನು ಬೀಳ್ಕೊಡುವ ನೋವು ಇತ್ತು.
ದೊಡ್ಡ ಬಡಿಗೆಯೊಂದಿಗೆ ಅ ಪಾತ್ರೆಯನ್ನು ವಿರೂಪಗೊಳಿಸುವ ಕ್ಷಣ ನಮ್ಮ ಮನಸ್ಸಿಗಾಗುವ ನೋವು ತುಂಬಾ ಅಂದರೆ ತುಂಬಾ. ವಸ್ತುಗಳು ಯಾವುದೇ ಇರಲಿ ನಾವು ಅದರಮೇಲೆ ಇಟ್ಟಿರುವ ಪ್ರೀತಿ ಅದನ್ನು ಬೀಳ್ಕೊಡುವಾಗ ಆಗುವ ನೋವು ಸಹಜ.
ಈ ನೆನಪುಗಳನ್ನು ನಿಮ್ಮೊ೦ದಿಗೆ ಹಂಚಿಕೊಂಡಾಗ ಇಂತಹ ಘಟನೆ ನಿಮಗೂ ಆಗಿದರೆ ಒಂದು ಕ್ಷಣ ನೆನಪಿಸಿಕೊಳ್ಳಿ.
-ರಮೇಶ್ ಪಾಪು, ಬಂಗಾರುಗುಡ್ಡೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ