ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಒರಿಯಂಟೇಶನ್ ಕಾರ್ಯಕ್ರಮ
ಮಂಗಳೂರು: ದೈಹಿಕ ಆರೋಗ್ಯದಷ್ಟೇ ಮಾನಸಿಕ ಸ್ಥಿರತೆಯೂ ಮುಖ್ಯ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಧನಾತ್ಮಕ ಚಿಂತನೆ, ಪರೀಕ್ಷೆಯ ಭಯವನ್ನು ಎದುರಿಸುವುದು, ಸಮಯ-ಒತ್ತಡ ನಿರ್ವಹಣೆಗಳಿಗೆ ಆಪ್ತ ಸಮಾಲೋಚನೆ ಸಹಾಯ ಮಾಡಬಲ್ಲುದು, ಎಂದು ಆಪ್ತಸಮಾಲೋಚಕಿ ಮಮತಾ ಆಚಾರ್ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಾಲೇಜಿನ 2023-24 ನೇ ಬ್ಯಾಚ್‌ನ ಪದವಿ ವಿದ್ಯಾರ್ಥಿಗಳಿಗಾಗಿ, ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಕ್ರಮ (ಒರಿಯಂಟೇಶನ್)ದಲ್ಲಿ ಮಾತನಾಡಿದ ಅವರು, ಸರಿಯಾದ ಉಸಿರಾಟದ ಅಭ್ಯಾಸ ಮೆದುಳನ್ನು ಹೇಗೆ ಕ್ರಿಯಾಶೀಲವಾಗಿಡುತ್ತದೆ, ಸಿಟ್ಟನ್ನು ನಿವಾರಿಸಿಕೊಳ್ಳುವುದು ಹೇಗೆ ಮೊದಲಾದವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ಎನ್‌ಇಪಿ ನೋಡಲ್ ಆಫೀಸರ್ ಡಾ. ಸಿದ್ಧರಾಜು ಎನ್ ಅವರು ನೂತನ ರಾಷ್ಷ್ರೀಯ ಶಿಕ್ಷಣ ಪದ್ಧತಿ- 2020 ಕುರಿತು ಮಾಹಿತಿ ನೀಡಿದರು. ಎನ್‌ಇಪಿ ಪಠ್ಯಕ್ರಮ, ಕ್ರೆಡಿಟ್ ವಿಧಾನ, ಮೌಲ್ಯಮಾಪನ, ಅಂಕ ವಿಂಗಡಣೆ, ವಿದ್ಯಾರ್ಥಿಗಳ ಕೌಶಲ್ಯ ವರ್ಧನೆ ಮತ್ತು ಸಾಮರ್ಥ್ಯ ವರ್ಧನೆಗಿರುವ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸರಳವಾಗಿ ವಿವರಿಸಿದರು.
ಇದೇ ವೇಳೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಇರುವ ಗ್ರಂಥಾಲಯ, ಎನ್.ಸಿ.ಸಿ, ಎನ್.ಎಸ್.ಎಸ್, ರೆಡ್ ಕ್ರಾಸ್ ಮೊದಲಾದ 20 ಕ್ಕೂ ಹೆಚ್ಚಿನ ಸಂಘಗಳು, ಕ್ರೀಡೆ, ಯೋಗ ವಿಜ್ಞಾನ ವಿಭಾಗಗಳು, ಜೊತೆಗೆ ಇನ್ನಿತರ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. ಪ್ರಾಂಶುಪಾಲೆ ಡಾ.ಅನಸೂಯ ರೈ, 150 ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಕಾಲೇಜಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಶುಭಕೋರಿದರು.
ಬಳಿಕ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಆಯಾ ಕಾರ್ಯಕ್ರಮಗಳ ಸ್ವರೂಪ, ಆಯ್ಕೆಯ ಅವಕಾಶ, ಭಾಷಾ ವಿಷಯಗಳು ಮೊದಲಾದವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.
ವಿವಿಧ ವಿಭಾಗಗಳ ಮುಖ್ಯಸ್ಥರು, ಎನ್.ಸಿ.ಸಿ ಅಧಿಕಾರಿಗಳು, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು, ಗ್ರಂಥಪಾಲಕರು ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ