ಎಲೆಚುಕ್ಕೆ ರೋಗದ ನಿರ್ಣಯ ಮತ್ತು ನಿರ್ವಹಣೆ ಕುರಿತ ವಿಚಾರ ಮಂಥನದಲ್ಲಿ ಅಗಲಿ ನಾಗೇಶ್ವರರಾವ್ ಒತ್ತಾಯ
ಶಿವಮೊಗ್ಗ: ನಗರದಲ್ಲಿ ಬುಧವಾರ (ಆ.16) ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಅಡಿಕೆಯ ಎಲೆ ಚುಕ್ಕೆ ರೋಗದ ರೋಗನಿರ್ಣಯ ಮತ್ತು ನಿರ್ವಹಣೆಯ ಮೇಲೆ ಒಂದು ದಿನದ ವಿಚಾರ ಮಂಥನ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಪರವಾಗಿ ಭಾಗವಹಿಸಿ ಮಾತನಾಡಿದ ಅಗಲಿ ನಾಗೇಶ್ವರರಾವ್, "ಮ್ಯಾಮ್‌ಕೋಸ್, ಕ್ಯಾಮ್ಕೋ ಸಂಸ್ಥೆಗಳು ಅಡಿಕೆ ಬೆಳೆಗಾರರಿಂದ ಪ್ರತಿ ಆವಕ ಅಡಿಕೆ ಮೂಟಗೆ ಐದು ರೂಪಾಯಿಯಂತೆ ಪಡೆದಾದರೂ ಅಡಿಕೆ ರೋಗಗಳ ತ್ವರಿತ ಸಂಶೋಧನೆಗೆ ಒತ್ತು ನೀಡುತ್ತ ಶೀಘ್ರ ಮತ್ತು ಸಮಗ್ರ ಸಂಶೋಧನೆಗೆ ಮನಸ್ಸು ಮಾಡಲಿ. ಅಡಿಕೆ ರೋಗಗಳ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರುತ್ತಿದೆ, ಅನುದಾನ ಬರವಸೆ ಕೇವಲ ಸುಳ್ಳು ಆಶ್ವಾಸನೆ ಆಗುತ್ತಿದೆ. ಸಂಶೋಧನಾ ಕೇಂದ್ರಗಳು ಹಣದ ಕೊರತೆಯಿಂದ ಸಂಶೋಧನೆ ಮಂದಗತಿ ಪಡೆದಿದೆ. ಮಲೆನಾಡಿನ ಅಡಿಕೆ ತೋಟಗಳು ಹಳದಿ ರೋಗ, ಎಲೆ ಚುಕ್ಕಿ ರೋಗಗಳಿಂದ ಬಳಲುತ್ತಿವೆ. ರೈತರು ಆತಂಕದಲ್ಲಿದ್ದಾರೆ. ಮ್ಯಾಮ್‌ಕೋಸ್, ಕ್ಯಾಮ್ಕೋ ಸಂಸ್ಥೆಗಳಂತಹ ಸಹಕಾರಿ ಸಂಸ್ಥೆಗಳು ಬೇಕಾದ ಸಂಪನ್ಮೂಲಗಳಗಳೊಂದಿಗೆ ರೈತರ ನೆರವಿಗೆ ಧಾವಿಸಲಿ" ಎಂದು ಒತ್ತಾಯಿಸಿದರು.
ಈ ಒತ್ತಾಯಕ್ಕೆ, ಭಾಗವಹಿಸಿದ್ದ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದು, ಮ್ಯಾಮ್‌ಕೋಸ್ ಸಂಸ್ಥೆಯ ನಿರ್ದೇಶಕರು ಈ ಒತ್ತಾಯವನ್ನು "ಪರಿಶೀಲನೆ ಮಾಡಲಾಗುವುದು" ಎಂಬ ಉತ್ತರ ನೀಡಿರುತ್ತಾರೆ.
"2022ರಲ್ಲಿ ಎರಡು ಬಾರಿ ಮಲೆನಾಡಿನ ಅಡಿಕೆ ಜಿಲ್ಲೆಗಳಿಗೆ ಭೇಟಿ ಮಾಡಿದ ಡಾ.ಹೊಮಿ ಚೆರಿಯನ್ ನೇತ್ರತ್ವದ ಕೇಂದ್ರ ತಜ್ಞರ ಸಮಿತಿ ನೀಡಿದ ವರದಿ ಯಾಕೆ ಬಹಿರಂಗಗೊಳಿಸುತ್ತಿಲ್ಲ? ಅದರಲ್ಲಿ ಶಿಫಾರಸ್ಸು ಮಾಡಿದ ವಿಚಾರಗಳ ಅನುಷ್ಟಾನವೂ ಆಗಿಲ್ಲ ಏಕೆ?. ಎಲೆ ಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದ್ದರೂ... ಕಳೆದ ವರ್ಷದ ನವಂಬರ್ ತಿಂಗಳಿನ ರೋಗ ಬಾದಿತ ತೋಟದ ರೋಗ ವ್ಯಾಪ್ತಿ ವಿಸ್ತೀರ್ಣ ಮತ್ತು ನಷ್ಟದ ಅಂಕಿಅಂಶಗಳನ್ನೇ ಇಂದಿಗೂ ಹಿಡಿದುಕೊಂಡು ತೋಟಗಾರಿಕೆ ಇಲಾಖೆಗಳು ಸರಕಾರಕ್ಕೆ ಕೊಡುತ್ತಿವೆ. ಎಲೆ ಚುಕ್ಕಿ ರೋಗದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕೊರೋನಾ ರೋಗಕ್ಕೆ ಕೈಗೊಂಡ ಕ್ರಮಗಳಂತೆ ಕ್ರಮ ಕೈಗೊಳ್ಳಬೆಕು. ಅಂಕಿ ಅಂಶಗಳ ಮಾಹಿತಿಗಳನ್ನು ಸರಿಯಾದ ಕ್ರಮದಲ್ಲಿ, ಪ್ರತೀ ತೋಟಕ್ಕೂ ಭೇಟಿ ನೀಡಿ, ವೈಜ್ಞಾನಿಕ ಸರ್ವೆ ಮಾಡಿ ಸರಕಾರಕ್ಕೆ ವರದಿ ಕೊಡಬೇಕು" ಎಂದು ಸಭೆಯಲ್ಲಿದ್ದ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆಯ ಅರವಿಂದ ಸಿಗದಾಳ್, ಮೇಲುಕೊಪ್ಪ ವ್ಯಕ್ತ ಪಡಿಸಿದ್ದು, ಪ್ರತಿಕ್ರಿಯೆಯಾಗಿ, ಅಂಕಿ ಅಂಶಗಳಲ್ಲಿ ಸಣ್ಣ ಪುಟ್ಟ ದೋಷಗಳಿದ್ದು, 15-30ದಿನಗಳಲ್ಲಿ ಕರಾರುವಕ್ ವೈಜ್ಞಾನಿಕ ಸರ್ವೆ ಮಾಡಿ ವರದಿ ಸಲ್ಲಿಸುವಂತೆ ಪ್ರತೀ ಜಿಲ್ಲೆಯ DDH ರವರುಗಳಿಗೆ ತೋಟಗಾರಿಕೆ ಇಲಾಖೆ ಸೂಚಿಸಿದ ಬೆಳವಣಿಗೆ ಆಗಿದೆ.
ಇದಕ್ಕೆ ಮೊದಲು ಕಾರ್ಯಕ್ರಮವನ್ನು ವಿಶ್ವವಿದ್ಯಾಲದ ಉಪ ಕುಲಪತಿಗಳಾದ ಡಾ.R C ಜಗದೀಶ್ ಉದ್ಘಾಟಿಸಿದರು.
ಬೆಳಗ್ಗೆ 10.30 ರಿಂದ ಸಂಜೆ 6.00 ಗಂಟೆಯವರೆಗೆ ನೆಡೆದ ಕಾರ್ಯಕ್ರಮದಲ್ಲಿ ಹಿರಿಯ ಕೃಷಿ ತಜ್ಞರುಗಳಾದ
ಡಾ.ಹೋಮಿ ಚರಿಯನ್, ಡಾ.ಹೆಬ್ಬಾರ್ ಕೆ.ಬಿ., ಡಾ.B M ದುಷ್ಯಂತಕುಮಾರ್, ಡಾ.ಕದರೇಗೌಡ, ಡಾ.R ಗಣೇಶ್ ನಾಯಕ್, ಡಾ.ವಿನಾಯಕ ಹೆಗಡೆ, ಡಾ.K P ಚಂದ್ರನ್, ಡಾ.ರವಿ ಭಟ್, ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪದಾದಿಕಾರಿಗಳಾದ ಅಗಲಿ ನಾಗೇಶ್ವರ ರಾವ್, ಅರವಿಂದ ಸಿಗದಾಳ್, ಸತೀಶ್ ಜೈನ್, ವಿವಿಧ ಭಾಗಗಳ ಅನೇಕ ಅಡಿಕೆ ಬೆಳೆಗಾರರು, ವಿಶ್ವವಿದ್ಯಾಲಯದ ನಿರ್ದೇಶಕರುಗಳು ಮತ್ತು ಆಡಳಿತ ವರ್ಗ, ಎಲೆ ಚುಕ್ಕಿ ಬಾದಿತ ಏಳು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದ.ಕನ್ನಡ, ಉ.ಕನ್ನಡ, ಹಾಸನ, ಕೊಡಗು, ಉಡುಪಿಯ ಜಿಲ್ಲಾ ತೋಟಗಾರಿಕಾ ನಿರ್ದೇಶಕರುಗಳು (DDH) ಮತ್ತು ಅಧಿಕಾರಿಗಳು, ಮ್ಯಾಮ್‌ಕೋಸ್, ತುಮ್‌ಕೋಸ್, ಕ್ಯಾಮ್ಕೋ ಅಧ್ಯಕ್ಷರು/ಉಪಾಧ್ಯಕ್ಷರುಗಳು, ಶೃಂಗೇರಿ, ತೀರ್ಥಹಳ್ಳಿ ಅಡಿಕೆ ಸಂಶೋಧನಾ ಕೇಂದ್ರಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಭಾಗವಹಿಸಿದ್ದರು.
***
ಅಧಿವೇಶನದಲ್ಲಿ ಅಡಿಕೆ ಎಲೆ ಚುಕ್ಕಿ ರೋಗದ ಇದುವರೆಗಿನ ಸಂಶೋಧನೆ ಪಲಿತಾಂಶದ ಮಾಹಿತಿ ಬಗ್ಗೆ, ಜಿಲ್ಲಾವಾರು ಅಡಿಕೆ ಎಲೆ ಚುಕ್ಕಿ ರೋಗ ಹರಡಿರುವ ಪ್ರದೇಶದ ವಿಸ್ತೀರ್ಣ ಮತ್ತು ನಷ್ಟದ ವಿವರಗಳು, ಎಲೆ ಚುಕ್ಕಿ ರೋಗಕ್ಕೆ ಬೇರೆ ಬೇರೆ ನಿರ್ವಹಣಾ ಕ್ರಮಗಳ ಬಗ್ಗೆ, ಔಷಧಿಗಳ ಪ್ರಯೋಗಗಳ ಬಗ್ಗೆ, ಅಡಿಕೆ ಎಲೆ ಚುಕ್ಕಿ ರೋಗದ ನಿಯಂತ್ರಣಕ್ಕೆ ಜಿಲ್ಲಾವಾರು ಮತ್ತು ತಾಲೂಕುವಾರು ಕೈಗೊಂಡ ಜಾಗೃತಿ ಮತ್ತು ಕ್ರಮಗಳ ಬಗ್ಗೆ DDHರವರಿಂದ ವಿವರಣೆಗಳು.
ಎಲ್ಲವನ್ನು PPT ಮೂಲಕ ಅಂಕಿ ಸಂಖ್ಯೆಗಳ ಮತ್ತು ಫೋಟೋಗಳ ವಿವರಣೆಗಳೊಂದಿಗೆ ಪ್ರಸ್ತುತಪಡಿಸಲಾಯ್ತು.
ಗೊಬ್ಬರಗಳ ಬಳಕೆ, ಸುಣ್ಣ ಬಳಕೆ, ಬೋರ್ಡೊದ್ರಾವಣ, ನ್ಯುಟ್ರಿಯಂಟ್ಸ್, ಮಣ್ಣಿನ ಸೂಕ್ಷ್ಮ ಜೀವಿಗಳು, ಡ್ರೋಣ ಬಳಕೆ, ಎಲೆ ಚುಕ್ಕಿ ಫಂಗಸ್‌ಗಳು, ಅವುಗಳ ನಿಯಂತ್ರಣಕ್ಕೆ ಈಗಿರುವ ಫಂಗಿಸೈಡ್‌ಗಳ ಬಳಕೆಯ ಬಗ್ಗೆ ವಿಸ್ತ್ರುತವಾಗಿ ಪ್ರಸ್ತುತ ಪಡಿಸಲಾಯಿತು.
ವರದಿ: ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ