ಕಾಲೇಜಿನಲ್ಲಿ ಸ್ನೇಹಿತರು ಅವಮಾನ ಮಾಡಿದರೆಂದು ಆತ್ಮಹತ್ಯೆ ಮಾಡಿಕೊಂಡ ಯುವಕ, ಅಪ್ಪ ಅಮ್ಮ ಮೊಬೈಲ್ ನೋಡುವುದು ಬಿಟ್ಟು ಓದಲು ಹೇಳಿದ್ದಕ್ಕೆ ಅವಮಾನಗೊಂಡು ಆತ್ಮಹತ್ಯೆಗೆಳಸಿದ ಹುಡುಗಿ, ಪ್ರೀತಿಸಿದ ಹುಡುಗ ಇಲ್ಲದೆ ಹುಡುಗಿ ಅವಮಾನಿಸಿ ಕೈ ಕೊಟ್ಟರೆಂದು ಹರಿವಯಸ್ಕರು, ಪರೀಕ್ಷೆಯಲ್ಲಿ ಫೇಲಾದರೆ ಅವಮಾನವಾದೀತೆಂದು ಭಯಗೊಳ್ಳುವ ಮಕ್ಕಳು, ಉದ್ಯೋಗದಲ್ಲಿ ತಾವು ಸಫಲರಾಗದಿದ್ದರೆ ಸಹೋದ್ಯೋಗಿಗಳ ಮುಂದೆ ಅವಮಾನವಾಗುವುದೆಂದು ಭಾವಿಸಿ ಅನಾಹುತಕ್ಕೆಳಸುವ ಸಾಮಾನ್ಯ ಜನರು ಇಲ್ಲವೇ ಅತಿಯಾದ ಅವಮಾನದಿಂದ ಬೇಸತ್ತು ಪ್ರತಿಕಾರಕ್ಕೆಳಸುವುದು.... ಹೀಗೆ ಹತ್ತು ಹಲವು ಅವಮಾನಗಳ ಮತ್ತು ಅದರಿಂದಾಗುವ ನೋವಿನ ಪ್ರತಿಕ್ರಿಯೆಗಳನ್ನು ನಾವು ಕಾಣುತ್ತಿದ್ದೇವೆ.
ಆದರೆ ಕೊಂಚ ಯೋಚಿಸಿ. ಈ ಭೂಮಿಗೆ ಬರುವಾಗ ನಾವು ಏನನ್ನೂ ತಂದಿಲ್ಲ ಹೋಗುವಾಗ ಯಾವುದನ್ನೂ ಒಯ್ಯುವುದಿಲ್ಲ ಅಂದಾಗ ಇಷ್ಟೊಂದು ನೋವು, ನಿರಾಸೆ, ಅಪಮಾನ, ದ್ವೇಷ, ಅಸೂಯೆಗಳು ಬೇಕೆ?? ಕುದಿಯುವ ನೀರಿನಲ್ಲಿ ಮುಖವನ್ನು ನೋಡಿಕೊಳ್ಳಲು ಮಾಡುವ ಪ್ರಯತ್ನದಂತೆ ಅತಿಯಾದ ನಿರಾಶೆಯಿಂದ, ಅವಮಾನದಿಂದ ಆತ್ಮಹತ್ಯೆಯಂತಹ ಅವಘಡಕ್ಕೆ ಮನುಷ್ಯ ಎಳಸುವುದು ಎಷ್ಟರಮಟ್ಟಿಗೆ ಸರಿ. ಅವಮಾನ ನಮ್ಮ ಕೈಯಲ್ಲಿಲ್ಲ ನಿಜ, ಆದರೆ ಅವಮಾನ ನಮ್ಮ ಚಿತ್ತ ಶಾಂತಿಯನ್ನು ಕಲಕದಿರುವಂತೆ ನಾವು ನಮ್ಮ ಮನಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಶಾಂತಿ, ಸಮಾಧಾನ, ಸಹನೆ ಮತ್ತು ಸ್ಥಿತ ಪ್ರಜ್ಞತೆಯನ್ನು ನಾವು ಹೊಂದಿದ್ದರೆ ಜಗಳಕ್ಕೆ ದಾರಿಯನ್ನು ಮುಚ್ಚಿದಂತೆ. ಆದರೂ ಕೂಡ ಬೇಕೆಂದೇ ಅವಮಾನಿಸುವ ಜನರು ಇದ್ದೇ ಇರುತ್ತಾರೆ. ಚಿಕ್ಕ ಮಕ್ಕಳಂತೆ ಹಠ ಮಾಡುವ, ಕಾಲ್ಕೆರೆದು ಜಗಳ ಮಾಡುವ ಧೋರಣೆಯ, ಬೇಕೆಂದೇ ಕೆಣಕಿ ನೋಯಿಸುವ ಜನರು ಇದ್ದೇ ಇರುತ್ತಾರೆ. ಹಾಗೆ ಅವಮಾನಗೊಂಡು ನಿರಾಶರಾಗುವ ಜನರಿಗೆ, ನಿರಾಶೆಗೊಳಗಾಗಿ ನೊಂದು ಬೆಂದು ಬಳಲಿ ಬೆಂಡಾಗುವ ಜನರಿಗೆ ಕೆಲವು ಸಲಹೆಗಳು.
ಪ್ರಶಾಂತ ಮನಸ್ಥಿತಿಯನ್ನು ಪ್ರಯತ್ನ ಪೂರ್ವಕವಾಗಿ ಬೆಳೆಸಿಕೊಳ್ಳಿ.... ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಅದೆಷ್ಟೇ ಚಂಡುಗಳನ್ನು, ಕಲ್ಲುಗಳನ್ನು ಎಸೆದರು ಯಾವುದಕ್ಕೂ ಪ್ರತಿಕ್ರಿಯೆ ನೀಡದ ಗೋಡೆ ನಿಶ್ಚಲತೆಗೆ ಒಂದು ಉದಾಹರಣೆ. ನಮಗೆ ಸರಿ ಎನಿಸದ ವಿಷಯಗಳ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡುವ ಬದಲು ಸುಮ್ಮನಿದ್ದು ಬಿಟ್ಟರೆ ಸಾಕು. ಮನಸ್ಸಿನ ತಳಮಳ ಬಹಳಷ್ಟು ಕಡಿಮೆಯಾಗುತ್ತದೆ ಹಾಗೆಂದು ಸುಮ್ಮನಿರುವ ಪ್ರಕ್ರಿಯೆ ಸುಲಭ ಸಾಧ್ಯವಲ್ಲ. ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳಬೇಕಾದ, ರೂಢಿಸಿಕೊಂಡ ಮೇಲೆ ಜೀವನದುದ್ದಕ್ಕೂ ಪಾಲಿಸಲೇಬೇಕಾದ ಕ್ರಿಯೆ.
ಈ ಸಮಯದಲ್ಲಿ ನಾವು ಮಾಡಬಹುದಾದ ಮತ್ತೊಂದು ಮುಖ್ಯ ಕೆಲಸವೆಂದರೆ ನಮ್ಮ ವೈಯಕ್ತಿಕ ಪ್ರಗತಿಯತ್ತ ಚಿತ್ತಹರಿಸುವುದು. ನಾವು ಮಾಡುವ ಪ್ರತಿಯೊಂದು ಕೆಲಸಗಳ ಹಿಂದಿನ ಉದ್ದೇಶ,ಗುರಿ, ಪ್ರಯತ್ನ, ಸಾಫಲ್ಯ ಮತ್ತು ಫಲಾಫಲಗಳ ಕುರಿತು ಧೇನಿಸುವುದು. ಈ ಹಿಂದಿನ ದಿನಗಳಿಗಿಂತ ವಿಭಿನ್ನವಾದ ವಿನೂತನವಾದ ಜ್ಞಾನ, ಕ್ರಿಯಾಶೀಲತೆ ಹೆಚ್ಚಿರುವ ನಮ್ಮನ್ನು ನಾವು ವೈಯಕ್ತಿಕವಾಗಿ ಒರೆ ಹಚ್ಚಬೇಕು.
ಅವಮಾನದ ನೋವನ್ನು ಸಹಿಸುವ ಮತ್ತೊಂದು ವಿಧವೆಂದರೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಅರಿವನ್ನು ಹೊಂದಿರುವುದು. ಒಂದು ಬಾರಿ ಶ್ರೀ ಕೃಷ್ಣನನ್ನು ಮನುಷ್ಯ ಸುಖದಲ್ಲಿದ್ದಾಗ ಮತ್ತು ಕಷ್ಟದಲ್ಲಿದ್ದಾಗ, ಜೀವನದ ವಿವಿಧ ಹಂತಗಳಲ್ಲಿ ಆತನಿಗೆ ಸಮಾಧಾನ ಕೊಡುವ ಒಂದು ಸಂಗತಿಯನ್ನು ತಿಳಿಸಿ ಕೊಡು ಎಂದಾಗ ಶ್ರೀ ಕೃಷ್ಣನು ನಸುನಕ್ಕು ಹೇಳಿದ "ಈ ಕ್ಷಣ ಶಾಶ್ವತವಲ್ಲ, ಈ ಗಳಿಗೆ ಕಳೆದು ಹೋಗಬಹುದು" ಎಂದು. ನಿಜ!! ಸುಖದಲ್ಲಿದ್ದಾಗ ಈ ಕ್ಷಣ ಶಾಶ್ವತವಲ್ಲ ಮತ್ತೆ ದುಃಖ ಬರಬಹುದು, ಕಷ್ಟದಲ್ಲಿದ್ದಾಗ ಈ ಕಷ್ಟಕ್ಕೂ ಒಂದು ಅಂತ್ಯವಿದೆ ಮತ್ತೆ ಸುಖದ ದಿನಗಳು ಕಾಯುತ್ತಿರಬಹುದು ಎಂಬ ಈ ವಾಕ್ಯ 'ಬದಲಾವಣೆ ಜಗದ ನಿಯಮ' ಎಂಬ ಜಗತ್ತಿನ ಸಾರ್ವಕಾಲಿಕ ಸತ್ಯವನ್ನು ಸಾರಿ ಹೇಳುತ್ತದೆ. ಆದ್ದರಿಂದ ಅವಮಾನಗಳೆಂಬ ಬಂಡೆಗಲ್ಲುಗಳು ಎದೆಗಪ್ಪಳಿಸಿದಾಗ ಸ್ಥಿತ ಪ್ರಜ್ಞನಾಗಿರಬೇಕು. ಅವಮಾನದ ಬಿಸಿ ನಮ್ಮ ತಲೆಯನ್ನು ತಾಕಲು ಬಿಡಬಾರದು.
ಮೂರನೇಯದಾಗಿ....ಅವಮಾನಗಳು ನಿಂದನೆಗಳನ್ನು ಪ್ರೋತ್ಸಾಹದ ಉತ್ತೇಜನ ನುಡಿಗಳಾಗಿ ಭಾವಿಸಬೇಕು ದಾಸರು ಹೇಳಿದ "ನಿಂದಕರಿರಬೇಕು ನೋಡಯ್ಯ ಜಗದಲಿ" ಮತ್ತು ಶರಣರು ಹೇಳಿದ "ನಿಂದಕರೆನ್ನ ಆತ್ಮ ಬಂಧುಗಳು" ಎಂಬ ಭಾವದಲ್ಲಿ ನೋಡಿದಾಗ ನಮಗೆ ನಮ್ಮನ್ನು ನಿಂದಿಸುವವರು ಅವಮಾನಿಸಲು ಹೇಳುತ್ತಿಲ್ಲ ಬದಲಾಗಿ ತಿದ್ದಿಕೊಳ್ಳಲು ಹೇಳುತ್ತಿದ್ದಾರೆ ಎಂಬ ಭಾವ ಸ್ಪುರಿಸುತ್ತದೆ ಮತ್ತು ಆ ಭಾವ ನಮ್ಮನ್ನು ನಾವು ತಿದ್ದಿಕೊಳ್ಳಲು ಅವಕಾಶವೀಯುತ್ತದೆ.
ನಾಲ್ಕನೆಯದಾಗಿ ವಿಪರೀತ ಅವಹೇಳನ ಮಾಡುವ, ಅದರಿಂದಲೆ ಸಮಾಧಾನ ಮತ್ತು ತೃಪ್ತಿಯನ್ನು ಪಡೆಯುವ ವಿಕೃತ ಮನಸ್ಥಿತಿಯ ಜನರು ಕೂಡ ಈ ಜಗತ್ತಿನಲ್ಲಿ ಇದ್ದಾರೆ. ಅಂತಹವರ ಮಾತುಗಳು ನಮ್ಮ ತಲೆಯ ಮೇಲಿನಿಂದ ಹಾದು ಹೋಗಬೇಕೇ ಹೊರತು ಮನಸ್ಸನ್ನು ನಾಟಬಾರದು. ಅಂತಹ ಮಾತುಗಳಿಗೆ ಉಪೇಕ್ಷೆಯೇ ಉತ್ತರವಾಗಬೇಕು. ಅವಮಾನಿಸುವವರು ಎಸೆಯುವ ಪ್ರತಿಯೊಂದು ಕಲ್ಲುಗಳನ್ನು ಆರಿಸುತ್ತಾ ಕುಳಿತರೆ ನಮ್ಮ ದಾರಿ ಮುಂದೆ ಸಾಗುವುದಿಲ್ಲ ಎಂಬ ಸತ್ಯದ ಅರಿವು ನಮಗಿರಬೇಕು.
ಕೊನೆಯದಾಗಿ ನಮಗೆ ಆಗುವ ಅವಮಾನಗಳನ್ನು ನಾವು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು. ಅವಮಾನಗಳು ನಮ್ಮನ್ನು ಬೆಳೆಸಬೇಕು. ಇಂದು ನಮ್ಮನ್ನು ಹೀಯಾಳಿಸಿ ನೋಡಿದವರು ಮುಂದೊಂದು ದಿನ ನಮ್ಮ ಗುಣಗಾನ ಮಾಡಬೇಕು ಆ ರೀತಿಯಾಗಿ ಬೆಳೆಯಬೇಕು. ಇಂಗ್ಲಿಷ್ ನಲ್ಲಿ ಗಾದೆಯೊಂದಿದೆ.... "ವರ್ಕ್ ಅಂಟಿಲ್ ಯುವರ್ ಸೈನ್ ಬಿಕಮ್ಸ್ ಯುವರ್ ಸಿಗ್ನೇಚರ್" ಎಂದು. ನಮ್ಮ ಸಹಿ ನಮ್ಮ ಹಸ್ತಾಕ್ಷರವಾಗುವವರೆಗೆ ನಾವು ನಮ್ಮ ಪ್ರಯತ್ನವನ್ನು ಮಾಡುತ್ತಲೆ ಇರಬೇಕು, ಆದರೆ ಈ ಬೆಳೆಯುವಿಕೆ ಯಾವುದೇ ರೀತಿಯ ರಾಜಿಯಲ್ಲಿ, ಹೊಂದಾಣಿಕೆಯಲ್ಲಿ ಪರ್ಯವಸಾನವಾಗದೆ ನಿರಂತರವಾದ ಶ್ರದ್ಧೆ, ಪ್ರಯತ್ನ, ಕಠಿಣ ಪರಿಶ್ರಮದ ಹಾದಿಯಲ್ಲಿ ಸಾಗಬೇಕು. ಒಂದೊಮ್ಮೆ ನಮ್ಮ ಕಾರ್ಯಸಿದ್ಧಿಸಿ ನಾವು ಯಶಸ್ಸಿನ ತುತ್ತ ತುದಿಯಲ್ಲಿದ್ದಾಗಲೂ ತುಂಬಿದ ತೆನೆ ಬಾಗುವಂತೆ ವಿನಯ ಸಜ್ಜನಿಕೆಗಳು ನಮ್ಮಲ್ಲಿ ಮನೆ ಮಾಡಿರಬೇಕು ಎಂಬುದು ನಮ್ಮಲ್ಲಿ ಮನೆ ಮಾಡಿರಬೇಕು.
ಎಲ್ಲರೂ ಜೀವನದ ನಾಲ್ಕು ದಿನದ ಈ ಪಯಣದಲ್ಲಿ ಯಶಸ್ಸಿನ ಹಾದಿಯಲ್ಲಿ ತಾವೂ ನಡೆಯಲಿ ಇತರರನ್ನೂ ಕರೆದುಕೊಂಡು ಸಾಗಲಿ ಎಂಬ ಉನ್ನತ ಆಶಯದೊಂದಿಗೆ
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ