ಭಾರತೀಯ ಪರಂಪರೆಯಲ್ಲಿ ಬರುವ ಪ್ರತಿಯೊಂದು ಹಬ್ಬವು ತನ್ನದೇ ಆದ ವೈಶಿಷ್ಟ್ಯತೆ ಮತ್ತು ಮಹತ್ವವನ್ನು ಪಡೆದಿದೆ. ಅಂತಹ ಹಬ್ಬಗಳ ಸಾಲುಗಳಲ್ಲಿ ಶ್ರಾವಣ ಮಾಸದಲ್ಲಿ ಆಚರಿಸುವ ಮೊದಲನೆಯ ಹಬ್ಬ ನಾಗರ ಪಂಚಮಿ. ಈ ದಿನ ಹಲವು ರೀತಿಯಲ್ಲಿ ನಾಗರಾಜನ ಆರಾಧನೆ ನಡೆಯುವುದು. ಇದು ಹಿರಿಯರಿಂದ ನಡೆದುಕೊಂಡು ಬಂದ ಸಂಸ್ಕೃತಿಯ ಪರಿಶುದ್ಧ ಪದ್ಧತಿಯು ಹೌದು. ನಮ್ಮದು ಪರಶುರಾಮ ಸೃಷ್ಟಿಯ ತುಳುನಾಡು ಸದಾ ದೈವ- ದೇವರ ಭಕ್ತಿಪೂರ್ವ ಆಚರಣೆಯ ನೆಲೆಬೀಡು ಆಗಿರುವ ಈ ನೆಲದ ಮಣ್ಣಿನಲ್ಲಿ ನಾಗರ ಪಂಚಮಿ ಹಬ್ಬವು ಬಹಳ ಭಯ ಭಕ್ತಿಯಿಂದ ಆಚರಣೆ ಮಾಡುವರು. ಆದರೆ ಇಂದಿನ ಕಾಲದ ಆಚರಣೆಗಳು ಪದ್ಧತಿಗಳು ಇಂದು ಕೇವಲ ತೋರಿಕೆಗೆ ಆಡಂಬರವಾಗಿ ಹೋಗಿದೆ. ನಮ್ಮ ಪೂರ್ವಜರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದ ಪದ್ಧತಿಯು ಸಂಸ್ಕೃತಿ ಬದ್ದ ಆಚರಣೆ ಮಾತ್ರವಲ್ಲದೇ ಪ್ರಕೃತಿ ಮತ್ತು ಅಲ್ಲಿ ಬದುಕುವ ಜೀವ ಸಂಕುಲಗಳಿಗೂ ಆಸರೆಯಾಗುತಿತ್ತು.
ಹಚ್ಚ ಹಸಿರ ಔಷಧಿ ಗುಣಗಳು ತುಂಬಿದ ಸಸಿಗಳು, ದೈವಿಕ ಮರಗಳು ಬೆಳೆದು ನಿಂತ ಸುಂದರವಾದ ಬನ. ಕರಿಕಲ್ಲಿನ ಕಟ್ಟೆಯಲ್ಲಿ ನೆಲೆ ನಿಂತ ನಾಗರಾಜನಿಗೆ ಕುಟುಂಬದ ಹಿರಿಯರು ಅಥವಾ ಊರಿನ ಹಿರಿಯರಿಂದ ಅಭಿಷೇಕ ಸಂಸ್ಕೃತಿಬದ್ದ ಆಚರಣೆಯು ನಡೆಯುತ್ತಿದೆ. ನಂಬಿಕೆಯ ಹೆಸರಲ್ಲಿ ಸದಾ ಹಸಿರ ವನಗಳು ಅಲ್ಲಲ್ಲಿ ಬೆಳೆದು ನಿಂತಿದ್ದರಿಂದ ಕಾಲ ಕಾಲಕ್ಕೆ ಮಳೆಯಾಗುತ್ತಿತ್ತು, ಮತ್ತು ತಂಪಾದ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ ಈಗ ಆಧುನಿಕತೆಯು ಹಬ್ಬಗಳ ಆಚರಣೆಗಳ ಮೇಲೂ ಪರಿಣಾಮ ಬೀರಿದೆ. ಹೊಸತನವನ್ನು ಕಾಣುವ ಮಾನವನ ಬಯಕೆಗಳಿಗೆ ಸುಂದರವಾದ ವನಗಳು ಬಲಿಯಾಗಿ ಹೋಗಿ ಕಾಕ್ರಿಂಟ್ಗಳ ನಾಗನ ಕಟ್ಟೆಗಳು ನಿರ್ಮಾಣವಾಗಿದೆ. ಸದಾ ಹಸಿರ ತಂಪಿಗೆ ಬರುತ್ತಿದ್ದ ಹಕ್ಕಿಗಳು ಸಿಮೆಂಟ್ ನ ಬಿಸಿಗೆ ಅತ್ತ ಕಡೇ ಸುಳಿಯದ ಪರಿಸ್ಥಿತಿ ಉಂಟಾಗಿದೆ. ಹೀಗೆ ನಾಗನನ್ನು ಆರಾಧಿಸುವ ಕಟ್ಟೆಗಳಲ್ಲೂ ಆಧುನಿಕತೆ ಮಾರ್ಪಟ್ಟಿದೆ.
ಹಬ್ಬಗಳು ದಿನೇ ದಿನೇ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಹಬ್ಬದ ವಾಸ್ತವತೆಯು ದಿನೇ ದಿನೇ ಕಳೆದು ಹೋಗುತ್ತಿದೆ. ಎಲ್ಲದರಲ್ಲಿಯೂ ಆಧುನಿಕತೆಯು ಆಕ್ರಮಿಸಿಕೊಳ್ಳುತ್ತಿದೆ. ನಾಗದೇವರ ಆರಾಧನೆಯು ನಾಗ ವನದಲ್ಲಿ ಆರಾಧಿಸಲ್ಪಟ್ಟರೆ ಅದು ಸಂಸ್ಕೃತಿಯನ್ನು ಆರಾಧಿಸಿದಂತೆಯೇ ಸರಿ. ಪೂರ್ವಜರ ಆಚರಣೆಯನ್ನು ಅನುಸರಿಸುತ್ತ ಹೋದರೆ ಸಂಸ್ಕೃತಿ ಅಳಿಯದು.
ವಿಜಯಲಕ್ಷ್ಮೀ ಬಿ. ಕೆಯ್ಯೂರು
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ