ತನ್ನ ಸುತ್ತಲೂ ಸುಂದರವಾದ ಬಲೆಯನ್ನು ಹೆಣೆಯುತ್ತಾ, ಆ ಬಲೆಯೊಳಗೆ ತಾನೇ ಸಿಲುಕಿ ಅದರಿಂದ ಹೊರ ಬರದೇ ಒದ್ದಾಡುವ, ಪರಿತಪಿಸುವ ಜೇಡರ ಹುಳು ಇಂದಿನ ಹದಿಹರೆಯದ ಮಕ್ಕಳ ಮನಸ್ಸಿಗೆ ಕೈಗನ್ನಡಿ. ಅಬೋಧ ಮನಸ್ಸು, ಹರೆಯದ ವಯಸ್ಸು, ಭಾವನೆಗಳ ತಾಕಲಾಟ, ಪ್ರೀತಿ ಪ್ರೇಮವೆಂಬ ಕಚಗುಳಿ ಆಟ ಮಕ್ಕಳನ್ನು ತನ್ನ ಮುಷ್ಟಿಗೆ ಸಿಲುಕಿಸಿಕೊಂಡು ಒದ್ದಾಡುತ್ತವೆ.
ಹಾಗಾದರೆ ಹರೆಯದಲ್ಲಿ ಪ್ರೀತಿಸುವುದು ತಪ್ಪೇ?? ಖಂಡಿತ ತಪ್ಪಲ್ಲ. ನಿಮ್ಮನ್ನು ಈ ಜಗತ್ತಿಗೆ ತಂದ ತಂದೆ ತಾಯಿಯರನ್ನು ಇನ್ನಿಲ್ಲದಂತೆ ಪ್ರೀತಿಸಿ, ಒಡಹುಟ್ಟಿದವರನ್ನು ಪ್ರೀತಿಸಿ, ಸ್ನೇಹಿತರೊಂದಿಗೆ ಒಡನಾಡಿರಿ, ಗುರುಗಳನ್ನು ಗೌರವಿಸಿ, ನಿಮ್ಮ ಗುರಿಯನ್ನು ಆರಾಧಿಸಿ ಲಕ್ಷ್ಯದೆಡೆಗೆ ಲಕ್ಷವಿಡಿ.
ಆದರೆ ವಿರುದ್ಧ ಲಿಂಗಿಯೊಂದಿಗೆ ಪ್ರೇಮ .... ಬಹಳ ಯೋಚಿಸಬೇಕು.
ಹುಟ್ಟಿದ ಕೂಡಲೇ ಮಗುವನ್ನು ಶಾಲೆ ಕಾಲೇಜುಗಳಿಗೆ ಸೇರಿಸುವುದಿಲ್ಲ. ಎಲ್ಲದಕ್ಕೂ ಒಂದು ಸಮಯದ, ವಯಸ್ಸಿನ ಪರಿಮಿತಿ ಎಂದು ಇರುತ್ತದೆ.
ಹರೆಯದ ಹುಚ್ಚು ಆಕರ್ಷಣೆಗೊಳಗಾದವರು ಇನ್ನಿತರರನ್ನು ನೋಡಿ ಅವರಂತೆ ' ನನಗೂ ಒಬ್ಬ ಗೆಳೆಯ/ಗೆಳತಿ ಬೇಕು' ಎಂದು ಬಯಸುವರು. ನಮ್ಮ ಚಲನಚಿತ್ರಗಳಲ್ಲಿಯೂ ಕೂಡ ಪ್ರೀತಿ ಪ್ರೇಮ ಆಕರ್ಷಣೆಗಳನ್ನೇ ವಿಜೃಂಭಿಸಿ ತೋರಿಸುತ್ತಾರೆ. ಚಲನಚಿತ್ರಗಳ ಅಂತ್ಯದಲ್ಲಿ ಪ್ರೇಮಿಗಳಿಗೆ ಜಯವಾಗಲಿ ಎಂದು ಅವರಿಬ್ಬರ ಮದುವೆಯನ್ನು ಮಾಡಿಸುವ ಮೂಲಕ ಸಿನಿಮಾ ಮುಗಿಯುತ್ತದೆ. ಅದು ಮೂರು ತಾಸುಗಳ ಶೋ ಮಾತ್ರ. ಅಲ್ಲಿರುವವರೆಲ್ಲರೂ ನಿರ್ಮಾಪಕನ ಬಜೆಟ್ನಲ್ಲಿ, ನಿರ್ದೇಶಕನ ಆಣತಿಯಂತೆ ಸಂಭಾವನೆಗಾಗಿ ಆ ಪಾತ್ರಗಳೇ ತಾನಾಗಿ ನಟಿಸುವ ನಟರು ಮಾತ್ರ. ಅದವರ ಕಾಯಕ. ಅದವರ ಹೊಟ್ಟೆಪಾಡು.
ಆದರೆ ನಿಜವಾದ ಜೀವನ ಆರಂಭವಾಗುವುದು ಮದುವೆಯ ನಂತರ. ತಂದೆ ತಾಯಿಯರ ಆಶೀರ್ವಾದ ಬೆಂಬಲಗಳಿಲ್ಲದೆ, ಕೈಯಲ್ಲಿ ಉದ್ಯೋಗವಿಲ್ಲದೆ ಬದುಕು ಕಟ್ಟಿಕೊಳ್ಳಲು ಹೊರಡುವ ಪ್ರೇಮಿಗಳಿಗೆ ಮೊಟ್ಟಮೊದಲು ಎದುರಾಗುವುದು ಊಟ ವಸತಿಯ ಪ್ರಶ್ನೆ. ಆಕಾಶದಲ್ಲಿಯ ತಾರೆಗಳನ್ನೇ ತಂದು ಕೊಡುತ್ತೇನೆಂದು, ನಿನಗಾಗಿ ಪ್ರಾಣವನ್ನೇ ಕೊಡುವೆನೆಂದು ಹೇಳುವ ಸಂಗಾತಿಗಳು ಒಬ್ಬರಿಗೊಬ್ಬರು ಒಂದು ಹೊತ್ತಿನ ಊಟ ಕೊಡಿಸಲು ಸಾಧ್ಯವಾಗದ ಪರಿಸ್ಥಿತಿ. ಯಾರನ್ನೋ ಕಾಡಿ,ಬೇಡಿ ಹೇಗೋ ಒಂದು ಹೊಂಚಿಕೊಂಡು ಜೀವನ ಆರಂಭ ಮಾಡುವುದರಲ್ಲಿ ಪ್ರೀತಿಯ ಅಡುಗೆ ಹಳಸಿ ಹೋಗಿರುತ್ತದೆ. ಬಾಂಧವ್ಯ ನಷ್ಟವಾಗಿರುತ್ತದೆ. ಯಾಕಪ್ಪ ಬೇಕಿತ್ತು ನನಗೆ ಈ ಕಷ್ಟ ಎಂದುಕೊಂಡವರಿಗೆ ಸಂಗಾತಿ ಹೊರೆಯಾಗುತ್ತಾರೆ. ಬಿಟ್ಟು ಹೋಗಲೂ ಆಗದ ಜೊತೆಯಲ್ಲಿರಲೂ ಆಗದ ಸಂದಿಗ್ಧ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಒಬ್ಬರ ಪಾಲಕರು ಕೈ ಹಿಡಿದರೆ ಸಂಗಾತಿಯನ್ನು ಕೈ ಬಿಟ್ಟು ಹೊರಟು ಹೋಗುವ ಬಾಲಿಶ ಸಂಬಂಧ ಅವರದಾಗಿರುತ್ತದೆ.
ಇನ್ನೂ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಯಾರ್ಯಾರಿಗೋ ....ನೋಡೋಣ ಎಸೆಯುವಂತೆ ಒಂದು ಕಲ್ಲನ್ನು ಎಸೆಯೋಣ ಎಂದು ಸ್ನೇಹಿತರಾಗಲು ರಿಕ್ವೆಸ್ಟ್ ಮಾಡಿಕೊಂಡು ಅದನ್ನು ಎದುರಿಗಿರುವವರು ಎಕ್ಸೆಪ್ಟ್ ಮಾಡಿಕೊಂಡರೆ ಮುಗಿದೆ ಹೋಯಿತು....ಹಾಯ್, ಗುಡ್ ಮಾರ್ನಿಂಗ್ ಗಳಿಂದ ಶುರುವಾಗುವ ಸೋ ಕಾಲ್ಡ್ ಸ್ನೇಹ, ಪರಸ್ಪರದ ಬಗ್ಗೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತೇವೆಂಬ ಭಾವದಲ್ಲಿ ತಮ್ಮನ್ನು ತಾವೇ ಸಂಪೂರ್ಣವಾಗಿ ತೆರೆದಿಟ್ಟುಕೊಳ್ಳುತ್ತಾರೆ. ಆಗ ಹುಟ್ಟಿಕೊಳ್ಳುವ ಭಾವನೆಗೆ ಪ್ರೀತಿ ಎಂಬ ನವಿರಾದ ಹೆಸರನ್ನು ಕೊಟ್ಟು ಇನ್ ರಿಲೇಷನ್ಶಿಪ್ ಎಂಬ ಸ್ಟೇಟಸ್ ಹಾಕಿಕೊಂಡು ಓಡಾಡುತ್ತಾರೆ. ದಿನದ ಕೆಲವೇ ನಿಮಿಷಗಳು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ತಮ್ಮ ಎದುರಿಗಿರುವ ಇಲ್ಲವೇ ತಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿ ಕೇವಲ ತನ್ನ ಬೆಸ್ಟ್ ವರ್ಷನ್ ಮಾತ್ರ ತೋರಿಸುತ್ತಾನೆ/ಳೆ ಎಂಬುದನ್ನು ಅರಿಯದೆ, ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿ ಬಿಡುತ್ತೇವೆಂಬ ಹುಮ್ಮಸ್ಸಿನಲ್ಲಿ ಎದುರಿಗಿನವರ ಪೂರ್ವಾಪರಗಳನ್ನು ಸರಿಯಾಗಿ ಅರಿಯದೆ ಮನಸ್ಸನ್ನು ಕೊಟ್ಟುಬಿಡುತ್ತಾರೆ. ಕೇವಲ ಮನಸ್ಸನ್ನು ಕೊಟ್ಟರೆ ಸಾಕಾಗುವುದಿಲ್ಲ ಅವರ ಬಾಲಿಶ ಪ್ರೀತಿಗೆ. ಒಬ್ಬರಿಗೊಬ್ಬರು ಸಂಧಿಸುವ, ಜೊತೆಯಾಗುವ, ಪ್ರೀತಿಸುವ, ದೈಹಿಕವಾಗಿ ಒಂದಾಗುವ ಅವರು ನಂತರದ ಪರಿಣಾಮಗಳಿಗೆ ಸಿದ್ದರಾಗಿರುವುದಿಲ್ಲ. ಕೆಲವೊಮ್ಮೆ ಪ್ರೀತಿಯ ಭರದಲ್ಲಿ!? ತಮ್ಮನ್ನು ತಾವು ಒಪ್ಪಿಸಿಕೊಳ್ಳುವ ಭರದಲ್ಲಿ ತಮ್ಮದೇ ವಿವಿಧ ಭಂಗಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಇದು ಕೂಡ ಭೀಕರ ಪರಿಣಾಮವನ್ನೆ ತರುತ್ತದೆ.ಇನ್ನೂ ಹೇಳಬೇಕೆಂದರೆ ಈ ಎಲ್ಲಾ ಪ್ರಕ್ರಿಯೆಯಲ್ಲಿ ಪೆಟ್ಟು ತಿನ್ನುವುದು ಹೆಣ್ಣೇ ಎಂಬುದು. ಒಂದೊಮ್ಮೆ ವ್ಯತಿರಿಕ್ತವಾಗಿ ಹೆಣ್ಣು ಮಗಳು ಗರ್ಭಿಣಿಯಾದರೆ ಕಳಂಕದ ಭಯದಿಂದ, ಆ ಜವಾಬ್ದಾರಿಯನ್ನು ಹೊರುವ ಧೈರ್ಯವಿಲ್ಲದೆ, ಮನೆಯಲ್ಲಿ ತಂದೆ ತಾಯಿಗಳಿಗೆ ಹೇಳಲಾಗದೆ, ಅಬಾರ್ಷನ್ ಮಾಡಿಸಿಕೊಳ್ಳಲು ಔಷಧಿ, ಗುಳಿಗೆಗಳ ಮೊರೆ ಹೋಗುವ, ಮೀರಿದಾಗ ಯಾವುದೋ ಅನಾಮಿಕ ವೈದ್ಯರ ಬಳಿ ಅಬಾರ್ಷನ್ ಮಾಡಿಸಿಕೊಂಡು ತೊಂದರೆ ಅನುಭವಿಸಿ, ಡಿಪ್ರೆಷನ್ ಗೆ ಜಾರುವ, ತಮ್ಮನ್ನು ತಾವೇ ಹಳಿದುಕೊಳ್ಳುವ ಹರೆಯದ ಮಕ್ಕಳು ಅರಿವಿಗೆ ಬರುವುದರೊಳಗಾಗಿ ಕಾಲ ಮಿಂಚಿ ಹೋಗಿರುತ್ತದೆ. ಆತ್ಮಹತ್ಯೆಯನ್ನೂ ಕೂಡ ಸಾಕಷ್ಟು ಜನ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಜನ ಗಂಡುಗಳು ಇನ್ನೂ ಕೆಲವು ಜನರು ಪ್ರೀತಿ ತರುವ ಜವಾಬ್ದಾರಿಯನ್ನು ಹೊರಲಾರದೆ ಎಷ್ಟೋ ಬಾರಿ ಹೇಳದೆ ಕೇಳದೆ ಪರಸ್ಪರರ ಜೀವನದಿಂದ ಹೊರಟು ಹೋಗುತ್ತಾರೆ ಇಲ್ಲವೇ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಅರಿಯದ ಯಾವುದೋ ಔಷಧಿಗಳನ್ನು ತಂದುಕೊಟ್ಟು ಆಕೆಯ ಜೀವ ಹಾನಿಗೂ ಕಾರಣರಾಗುತ್ತಾರೆ.
*ಹಾಗೆಂದು ಎಲ್ಲಾ ಪ್ರೇಮಿಗಳ ಜೀವನ ಹೀಗೆ ಎಂದು ಹೇಳಲಾಗುವುದಿಲ್ಲ. ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವವರೆಗೂ ತಮ್ಮ ಪ್ರೀತಿಯನ್ನು ಎದೆಯ ಗೂಡಿನಲ್ಲಿ ಬಚ್ಚಿಟ್ಟು ನಂತರ ವ್ಯಕ್ತಪಡಿಸಿ ಇಷ್ಟಪಟ್ಟವರನ್ನು ಮದುವೆಯಾಗಿ ಬಾಳಿ ಬದುಕಿದ ಜನರು ಇದ್ದಾರೆ, ಆದರೆ ಅವರ ಸಂಖ್ಯೆ ಕೇವಲ ಬೆರಳಣಿಕೆಯಷ್ಟು.
ಗಂಡು ಹೆಣ್ಣು ಎಂಬ ಭೇದವಿಲ್ಲದೆ ಎಲ್ಲಾ ಹದಿಹರೆಯದ ತರುಣ ತರುಣಿಯರು ಅರಿಯಬೇಕಾದದ್ದಿಷ್ಟು.
*ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಪರಿಚಯಗಳು ತಾತ್ಕಾಲಿಕ, ಅವುಗಳನ್ನು ಶಾಶ್ವತವಾದ ,ಮಾಯಲಾರದ ಕಲೆಗಳನ್ನಾಗಿಸಿಕೊಳ್ಳಬಾರದು. ಬಟ್ಟೆಯ ಮೇಲಿನ ಕಲೆಗಳು ಮಾಯವಾಗಬಹುದು ಆದರೆ ಚಾರಿತ್ರದ ಮೇಲಿನ, ವ್ಯಕ್ತಿತ್ವದ ಮೇಲಿನ ಕಪ್ಪು ಚುಕ್ಕೆ ಎಂದಿಗೂ ಅಳಿಸದು.
*ಎದುರಿಗಿರುವ ವ್ಯಕ್ತಿಯನ್ನು ಇಂಪ್ರೆಸ್ ಮಾಡಲು ಸದಾ ಪ್ರಯತ್ನಿಸುವ ಜನ ಎಲ್ಲಾ ಕಾಲದಲ್ಲಿಯೂ ಇರುತ್ತಾರೆ. ಅಂತಹವರು ತಮ್ಮ ಒಳ್ಳೆಯ ಗುಣಗಳನ್ನು ಮಾತ್ರ ತೋರಿಸುತ್ತಾ ನಿನಗಾಗಿ ನಾನು ಎಲ್ಲವನ್ನು ಬಿಟ್ಟಿರುವೆ ಎಂಬ ಪ್ರೇಮಿಗಳು ಸದಾ ಎಸೆಯುವ ಟ್ರಂಪ್ ಕಾರ್ಡ್ ನ್ನು ಬಳಸುತ್ತಾರೆ. ಇಷ್ಟಕ್ಕೇ ಪರವಶರಾಗುವ ಸಂಗಾತಿಗಳು ನನಗಾಗಿ ತಮ್ಮೆಲ್ಲ ಹಳೆಯ ದುರಭ್ಯಾಸಗಳನ್ನು ತ್ಯಾಗ ಮಾಡಿರುವ ವ್ಯಕ್ತಿಯನ್ನು ಸಮಾಜದಲ್ಲಿ ಮಂಚೂಣಿಗೆ ತರುವ ಮೂಲಕ ಹೊಸದೊಂದು ಬದುಕನ್ನು ಕಟ್ಟಿಕೊಳ್ಳುವೆ ಎಂಬ ಹುಮ್ಮಸ್ಸಿನಿಂದ ಅವರೊಂದಿಗೆ ಬದುಕನ್ನು ಹಂಚಿಕೊಳ್ಳಲು ಹಾತೊರೆಯುತ್ತಾರೆ. ಆದರೆ ಜೀವನ ಎಂಬುದು ಸ್ಟಾರ್ಟ್ ಹೇಳಿದಾಗ ಆರಂಭವಾಗುವ ಕಟ್ ಹೇಳಿದಾಗ ಪ್ಯಾಕಪ್ ಆಗುವ ಚಲನಚಿತ್ರದ ಶೂಟಿಂಗ್ ಅಲ್ಲ.
*ಇನ್ನಾರೋ ಸ್ನೇಹಿತರು ಪ್ರೇಮದ ಬಲೆಯಲ್ಲಿ ಬಿದ್ದಿದ್ದಾರೆ ಅವರು ಹಾಕುವ ಸ್ಟೇಟಸ್ಗಳು ಅವರ ಒಡನಾಟಗಳು ನಿಮ್ಮಲ್ಲಿಯೂ ಕೂಡ ಆಸೆಯನ್ನು ಹುಟ್ಟಿಸಬಹುದು. ಬಹುತೇಕ ಪ್ರೇಮ ಪ್ರಕರಣಗಳು ಆರಂಭವಾಗುವುದೇ ಇಂತಹ ಬಾಡಿ ಹೋಗುವ ಆಸೆಗಳಿಂದಲೇ.
ಜೀವನ ಎನ್ನುವುದು ಒಂದು ಲಾಂಗ್ ರನ್. ಆರಂಭ ಶೂರತ್ವವನ್ನು ತೋರದೆ ನಿಧಾನವಾಗಿ ಸದೃಢವಾಗಿ ಒಂದೊಂದೇ ಹಂತಗಳನ್ನು ಎಚ್ಚರಿಕೆಯಿಂದ ಓಡಬೇಕು. ಎಲ್ಲರ ಟ್ರ್ಯಾಕ್ ಗಳು ಬೇರೆಯೇ... ನಮ್ಮ ಬದುಕಿನ ಟ್ರಾಕ್ನಲ್ಲಿ ನಾವು ಸರಿಯಾಗಿ ಓಡಿ ಗುರಿ ತಲುಪಬೇಕು.
ಅಂತಿಮವಾಗಿ ತಾರುಣ್ಯದ ಹೊಸ್ತಿಲಲ್ಲಿರುವ ಮಕ್ಕಳಿಗೆ ಹೇಳುವುದು ಇಷ್ಟು. ಬೆಲೆಬಾಳುವ ಮೊಬೈಲ್ ಅನ್ನು ಖರೀದಿಸಿ ಅದು ಬಿದ್ದರೆ ಒಡೆದು ಹೋಗಬಾರದೆಂದು ಅದಕ್ಕೆ ಕವರ್ ಹಾಕುವ ಸ್ಕ್ರೀನ್ ಗಾರ್ಡ್ ಹಾಕಿಸುವ ನಾವುಗಳು ಬೆಲೆಯೇ ಕಟ್ಟಲಾಗದ ಜೀವನಕ್ಕೆ ಸ್ಕ್ರೀನ್ ಗಾರ್ಡಾಗಿ ನಿಂತಿರುವ ಪಾಲಕರನ್ನು ಶಿಕ್ಷಕರನ್ನು ಬಂದು ಬಳಗದವರನ್ನು ತೊರೆಯಬಹುದೇ... ಹಾಗೆ ತೊರೆದು ಹರೆಯದ ಆಕರ್ಷಣೆಗೆ ಒಳಗಾಗಿ ಹೋದರೆ ಬದುಕಿನ ಕನ್ನಡಿ ಒಡೆದು ಚೂರಾಗುವುದಿಲ್ಲವೇ? ಮೊಬೈಲ್ ಒಡೆದು ಹೋದರೆ, ಹಾಳಾಗಿ ಹೋದರೆ ಹೊಸದನ್ನು ಕೊಳ್ಳಬಹುದು.... ಆದರೆ ಬದುಕು??
ಇನ್ನೂ ಒಂದು ಮುಖ್ಯವಾದ ವಿಷಯವೆಂದರೆ ನಮ್ಮ ದೇಹ. ನಮ್ಮ ದೇಹವು ಒಂದು ದೇವಾಲಯವಿದ್ದಂತೆ. ಯಾವ ರೀತಿ ದೇವಾಲಯಕ್ಕೆ ಸ್ನಾನ ಮಾಡಿಯೋ ಇಲ್ಲವೇ ಕೈಕಾಲು ತೊಳೆದು ಪುನೀತ ಭಾವದಿಂದ ಒಳಗೆ ಕಾಲಿಡುತ್ತೇವೆಯೋ ಹಾಗೆಯೇ ನಮ್ಮ ದೇಹದ ದೇವಾಲಯದಲ್ಲಿರುವ ಮನಸ್ಸೆಂಬ ಗರ್ಭಗುಡಿಯನ್ನು ಪವಿತ್ರವಾಗಿ ಇಟ್ಟುಕೊಳ್ಳಬೇಕು. ನಮ್ಮ ದೇಹವು ನಮ್ಮ ಮುಂದಿನ ಪೀಳಿಗೆಯನ್ನು ಈ ಜಗತ್ತಿಗೆ ನೀಡುವ ಅದ್ಭುತ ಅವಕಾಶವನ್ನು ನಮಗೆ ನೀಡಿದೆ ವೈಯಕ್ತಿಕ ಉನ್ನತಿಗೆ ಸಮಾಜದ ಏಳಿಗೆಗೆ ಮನುಕುಲದ ಉದ್ಧಾರಕ್ಕಾಗಿ ನಮ್ಮ ದೇಹವನ್ನು ನಾವು ಅತ್ಯಂತ ಪವಿತ್ರ ಎಂಬಂತೆ ಪೋಷಿಸಬೇಕು. ನಮ್ಮ ದೇಹ ಮನಸ್ಸುಗಳು ನಮ್ಮ ಗಟ್ಟಿ ವ್ಯಕ್ತಿತ್ವದ ಕೈಗನ್ನಡಿಯಾಗಿರಬೇಕು. ನಮ್ಮ ವರ್ತನೆ ಎದುರಿಗಿನ ವ್ಯಕ್ತಿ ನಮ್ಮನ್ನು ನೋಡಿ ಕೈ ಎತ್ತಿ ಮುಗಿಯದಿದ್ದರೂ ಪರವಾಗಿಲ್ಲ ಹಿಂದಿನಿಂದ ಗೇಲಿ ಮಾಡಿ ನಗುವಂತಿರಬಾರದು.
*ಇದು ನನ್ನ ವೈಯಕ್ತಿಕ ಜೀವನ, ನನ್ನ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂಬ ಮಾತು ಸಮಾಜದಲ್ಲಿ ಅಲ್ಲಲ್ಲಿ ಕೇಳಿ ಬರುತ್ತದೆ ನನ್ನ ವೈಯಕ್ತಿಕ ಆಯ್ಕೆ ನನ್ನ ಹಕ್ಕು ಎಂಬ ಅಪರಿಮಿತ ಸ್ವಾತಂತ್ರದ ಕನಸನ್ನು ಬಿತ್ತುವ ಜಾಹೀರಾತುದಾರರು ಸಾಕಷ್ಟು ಇದ್ದಾರೆ, ಆದರೆ ಅವರಿಗೂ ಅರಿವಿದೆ ನಮ್ಮ ಸ್ವಂತದ ಹೆಣವನ್ನು ನಾವೇ ಹೊರಲು ಸಾಧ್ಯವಿಲ್ಲ ಎಂಬುದು. ನಾವು ಬದುಕುತ್ತಿರುವುದು ಸಮಾಜದಲ್ಲಿ. ಮಕ್ಕಳ ತಪ್ಪು ನಡವಳಿಕೆಗಳು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಚಿಕ್ಕಂದಿನಲ್ಲಿಯೇ ತಮ್ಮ ಮಕ್ಕಳ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಆ ಮೂಲಕ ಗೊತ್ತಿಲ್ಲದೆ ಅವರ ಕೃತ್ಯಗಳನ್ನು ಪ್ರೋತ್ಸಾಹಿಸುವ ಮೂಲಕ ಪಾಲಕರು ಇರುವುದು ಹಗಲು ಕಂಡ ಬಾವಿಯಲ್ಲಿ ಇರುಳು ಬಿದ್ದಂತೆ. ನಮ್ಮ ಸ್ವಾತಂತ್ರ್ಯದ ಪರಿಕಲ್ಪನೆ ನಮ್ಮ ವ್ಯಕ್ತಿತ್ವದ ಘನತೆಯನ್ನು ನಮ್ಮ ದೇಹವನ್ನು ಮನಸ್ಸನ್ನು ಕೆಡಿಸಿಕೊಳ್ಳುವುದಲ್ಲ ಎಂಬುದನ್ನು ಪಾಲಕರು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಚಿಕ್ಕಂದಿನಿಂದಲೇ ತಮ್ಮ ಮಕ್ಕಳು ತಮ್ಮ ಮಾತನ್ನು ಕೇಳುವಂತೆ ಬೆಳೆಸಬೇಕು.ಸರಿ ತಪ್ಪುಗಳ ಅರಿವು, ವಿವೇಕವನ್ನು ಮೂಡಿಸಬೇಕು. ಮಕ್ಕಳನ್ನು ಪಾಲಕರು ತಪ್ಪು ಮಾಡಿದಾಗ ದಂಡಿಸದೆ ಬೆಳೆಸಿದರೆ ಮುಂದೆ ದೊಡ್ಡವರಾದ ಮೇಲೆಯೂ ಕೂಡ ತಾವು ಮಾಡಿದ್ದೆ ಸರಿ ಎಂಬ ಭಾವನೆ ಮಕ್ಕಳಲ್ಲಿ ಬರುತ್ತದೆ. ಆಗ ಮಕ್ಕಳು ತಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಸಮರ್ಥನೆಗಳನ್ನು ಕೊಟ್ಟುಕೊಳ್ಳುತ್ತಾ ಹೋಗುತ್ತಾರೆ. ತಮ್ಮದೇ ಸರಿ ಎಂದು ವಾದಿಸಿ ಗೆಲ್ಲುತ್ತಾರೆ.
ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ತರವಾದದ್ದು. ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುತ್ತಾರೆ ಮಕ್ಕಳನ್ನು ಬೆಳೆಸುವಾಗ ಪಾಲಕರು ತಾವು ಕೂಡ ಅಷ್ಟೇ ಜಾಗರೂಕತೆಯಿಂದ ಬೆಳೆಸಬೇಕು. ಪತಿ-ಪತ್ನಿಯರ ನಡುವಿನ ಅಸಮಾಧಾನ ವೈಮನಸ್ಯಗಳು ಮಕ್ಕಳ ಮೇಲೆ ಅತಿ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತವೆ. ಮನೆಯಲ್ಲಿನ ಭಿಗುವಾದ ವಾತಾವರಣ ಮಕ್ಕಳಿಗೆ ಉಸಿರುಗಟ್ಟಿಸಿದಂತೆ ಆದಾಗ ಮಕ್ಕಳು ಮನೆಯ ಹೊರಗೆ ಗೊತ್ತಿಲ್ಲದ ಪರಿಸರದಲ್ಲಿ ಪ್ರೀತಿಯನ್ನು, ಆತ್ಮೀಯತೆಯನ್ನು ಹುಡುಕಲು ಹೊರಡುತ್ತಾರೆ. ಆಸರೆ ತಪ್ಪಿದ ಬಳ್ಳಿಯಂತಹ ಮಕ್ಕಳು ಹಿಡಿದುಕೊಳ್ಳುವುದು ಮರವೇ ಆಗಿರಬೇಕಿಲ್ಲ.
ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಅರಿವನ್ನು ಹೊಂದಿ ಹದಿಹರೆಯದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ, ತಪ್ಪಿದಲ್ಲಿ ತಿದ್ದುವ, ಸೋತಾಗ ಆಸರೆ ನೀಡಿ ಜೀವನ್ಮುಖಿಯಾಗಿಸುವ ಕಾರ್ಯನಿರ್ವಹಿಸೋಣ ಎಂಬ ಆಶಯದೊಂದಿಗೆ
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ