ನಾವೂ ಚಂದಿರನ ಮೇಲೆ ನೌಕೆ ಇಳಿಸಬಲ್ಲೆವು, ಚಂದ್ರನ ಮೇಲೆ ಪ್ರಯೋಗಗಳನ್ನು ಮಾಡಬಲ್ಲೆವು ಎಂಬ ಸಂದೇಶ ’ಚಂದ್ರಯಾನ-3’ರ ಮೂಲಕ ಇಡೀ ವಿಶ್ವಕ್ಕೆ ರವಾನೆಯಾಗಿದೆ. ರೂ 600 ಕೋಟಿ ವೆಚ್ಚದ ಚಂದ್ರಾಯಾನದಲ್ಲಿ 1724 ಕೆಜಿ ಭಾರದ ವಿಕ್ರಂ ಲ್ಯಾಂಡರ್ ಇದೀಗ 41 ದಿನಗಳ 3.84 ಲಕ್ಷ ಕಿಮೀ ಪ್ರಯಾಣ ಮುಗಿಸಿ ಇದೀಗ ಯಶಸ್ವಿಯಾಗಿ ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ದ್ರುವದಲ್ಲಿ ನಮ್ಮ ಭಾರತದ ಹೆಮ್ಮೆಯ ಇಸ್ರೋ ವಿಜ್ಞಾನಿಗಳು ನೌಕೆಯನ್ನು ಇಳಿಸುವ ಮೂಲಕ ನೂರನಲ್ವತ್ತು ಕೋಟಿ ಭಾರತೀಯರ ಶುಭ ಹಾರೈಕೆ ಹಾಗೂ ಪ್ರಾರ್ಥನೆ ಸಾರ್ಥಕ್ಯಗೊಂಡಿದೆ.
ಇದುವರೆಗೆ ಯಾವುದ ದೇಶ ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿದಿಲ್ಲ. ಅಲ್ಲಿ ಇಳಿಯುವ ರಷ್ಯಾದ ಪ್ರಯತ್ನ ಇತ್ತೀಚೆಗ ವಿಫಲವಾಗಿದೆ. ಚಂದ್ರಯಾನ-3 ಮೂಲಕ ಕಂಡುಕೊಳ್ಳಬಹುದಾದ ಯಾವುದೇ ಅಮೂಲ್ಯ ಮಾಹಿತಿಯು ಭಾರತಕ್ಕೆ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಈ ಕ್ಶೇತ್ರದ ಸಂಶೋಧನೆಗಳಿಗೆ ನೆರವಾಗಬಲ್ಲುದು.
ಸವಾಲುಗಳ ದೀರ್ಘ ಪಯಣ
ಜುಲೈ 14 ರಂದು ಚಂದ್ರನ ಕಡೆಗಿನ ತನ್ನ 3.84 ಲಕ್ಷ ಕಿಮೀ ಪಯಣವನ್ನು ಅರಂಭಿಸಿತ್ತು. 41 ದಿನಗಳ ಸುಧೀರ್ಘ ಪಯಣದ ಹಲವು ಸವಾಲಗಳನ್ನು ಚಾಕಚಕ್ಯತೆಯಂದ ನಿಭಾಯಿಸಿ ಇಂದು ಯಶಸ್ವಿಯಾಗಿ ಚಂದ್ರನ ಮೇಲ್ಮೈ ತಲುಪಿ ತನ್ನಲ್ಲಿನ ಕ್ಯಾಮೆರಾಗಳಿಂದ ರೋವರ್ ಹಾಗೂ ಪ್ರಗ್ಯಾನ್ ರೋವರ್ ತನ್ನಲ್ಲಿನ ಕ್ಯಾಮೆರಾಗಳಿಂದ ಲ್ಯಾಂಡರ್ ಚಿತ್ರಗಳನ್ನು ತೆಗೆಯುವ ಮೂಲಕ ಮೊದಲ ಸೆಲ್ಫಿಗಳನ್ನು ಭಾರತದ ನೆಲಕ್ಕೆ ಕಳಿಸುವುದು ಅತ್ಯಂತ ರೋಮಾಂಚಕ ಕ್ಷಣ. ತದನಂತರ ಯೋಜನೆಯ ನೈಜ ಉದ್ಧೇಶ ಹಾಗೂ ವಿಜ್ಞಾನ ಕಾರ್ಯರೂಪಕ್ಕೆ ಬರುತ್ತದೆ.
ನಮ್ಮ ಉದ್ದೇಶ
ಚಂದ್ರನ ಮೇಲೆ ನೌಕೆ ಇಳಿಸುವ ಸಾಮರ್ಥ್ಯ ಭಾರತಕ್ಕೂ ಸಿದ್ಧಿಸಿದೆ ಎಂದು ನಿರೂಪಿಸುವುದು
ಶಾಶ್ವತವಾಗಿ ನೆರಳಿನಿಂದ ಆವೃತವಾಗಿರುವ ಚಂದ್ರನ ದಕ್ಷಿಣ ದ್ರುವದಲ್ಲಿ ನೀರಿನ ಶೋಧಕಾರ್ಯ
ಚಂದ್ರನ ಮಣ್ಣಿನಲ್ಲಿರುವ ಖನಿಜ ಹಾಗೂ ರಾಸಾಯನಿಕಗಳ ಬಗ್ಗ ಸಂಶೋಧನೆ
ಜೀವಿಗಳಿಗ ವಾಸಿಸುವ ವಾತಾವರಣ ಚಂದ್ರನಲ್ಲಿದೆಯೇ ಎಂದು ತಿಳಿದುಕೊಳ್ಳುವುದು
ಭವಿಷ್ಯದಲ್ಲಿ ಚಂದ್ರನನ್ನು ನೆಲೆಯಾಗಿಸಿ ಅನ್ಯಗ್ರಹಗಳಿಗೆ ಯಾನ ಕೈಗೊಳ್ಳಲು ಸಹಕಾರಿಯೇ ಎಂದು ಅನ್ವೇಷಿಸುವುದು.
ನಾಲ್ಕನೇ ದೇಶ ಭಾರತ
ಕೇವಲ ಅಮೇರಿಕಾ, ಚೀನಾ ಹಾಗೂ ರಷ್ಯಾ ಮಾತ್ರ ಈವರೆಗೆ ಚಂದ್ರನ ಮೇಲೆ ತಮ್ಮ ನೌಕೆಯನ್ನು ಸುರಕ್ಷಿತವಾಗಿ ಇಳಿಸಿದೆ. ಈ ಸಾಧಕರ ಪಟ್ಟಿಯಲ್ಲಿ ಈಗ ಭಾರತ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ನೌಕೆ ಇಳಿಸಲು ಈ ವರೆಗೆ 44 ಪ್ರಯತ್ನಗಳಾಗಿ 20 ಮಾತ್ರ ಯಶಸ್ವಿಯಾಗಿದೆ. ಆದರೆ ನಿರಂತರ ನೆರಳಿನ ಪ್ರದೇಶವಾದ ಚಂದ್ರನ ದಕ್ಷಿಣ ದ್ರುವದಲ್ಲಿ ನೌಕೆಯನ್ನು ಇಳಿಸಿದ ಚೊಚ್ಚಲ ದೇಶ ಭಾರತ ಎಂಬ ಹೆಗ್ಗಳಿಕೆ ಭಾಜನವಾಗಿದೆ.
ಬಹು ಅವಕಾಶಗಳ ಅನಾವರಣ
ತಂತ್ರಜ್ಞಾನಗಳ ಅನೂಹ್ಯ ಮುನ್ನಡೆಯೊಂದಿಗೆ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಆರ್ಥಿಕತೆ ಎನ್ನುವುದು ಕಲ್ಪನೆಗೂ ನಿಲುಕದಷ್ಟು ಪ್ರಾಮಖ್ಯತೆಯನ್ನು ಪಡೆದುಕೊಳ್ಳಲಿದೆ. ಜಾಗತಿಕವಾಗಿ ಈ ಕ್ಷೇತ್ರಕ್ಕೆ 2023 ರ ದ್ವಿತೀಯಾರ್ಧದಲ್ಲಿ 54,600 ಕೋಟಿ ಡಾಲರ್ ಹರಿದುಬಂದಿದೆ ಎಂದರೆ ಈ ಕ್ಷೇತ್ರದ ಭವಿಷ್ಯದ ಆರ್ಥಿಕತೆ ಅರ್ಥವಾಗುತ್ತದೆ. ಭಾರತದಲ್ಲಿ ಹೂಡಿಕೆಯು 2025 ರ ವೇಳೆಗೆ 1300 ಕೋಟಿ ಡಾಲರ್ ಗೆ ಏರುವ ನಿರೀಕ್ಷೆ ಇದೆ ಎಂದರೆ ಅಚ್ಚರಿಯಾಗಬಹುದು.
ಚಂದ್ರನಿಂದ ಕಳಿಸಲ್ಪಡುವ ವಿವರಗಳು ಭಾರತದ ಆಸ್ತಿಯಾಗಲಿದೆ. ಅಲ್ಲಿ ನಡೆಸುವ ಸಂಶೋಧನಾ ವರದಿ, ಮಣ್ಣಿನ ಮಾದರಿ, ವಿಡಿಯೋ ಮುಂತಾದವು ನಮ್ಮ ಆಸ್ತಿಯಾಗಲಿದೆ. ಇದೆಲ್ಲವೂ ಸೌರಮಂಡಲದ ಸೃಷ್ಟಿಯ ಬಗ್ಗೆ ತಿಳಿದುಕೊಳ್ಳಲು ಆಧಾರವಾಗಲಿದೆ. ಮಾಲಿನ್ಯಮಕ್ತ ವಿದ್ಯುತ್ ಉತ್ಪಾದಿಸಲು ಸಹಕಾರಿಯಾದ ಹೀಲಿಯಂ-3 ಚಂದ್ರನ ಮೇಲೆ ಅಪಾರವಾಗಿ ಲಭ್ಯವಿದೆ. ಭಾರತವು ಚಂದ್ರನ ವಿಶೇಷ ಪ್ರದೇಶವನ್ನು ಅಧ್ಯಯನ ಮಾಡಲಿದೆ. ಈ ಮಾಹಿತಿಗಳು ವೈಜ್ಞಾನಿಕ ಕ್ಷೇತ್ರ ಹಾಗ ಮನರಂಜನಾ ಕ್ಷೇತ್ರದಲ್ಲಿಯೂ ಬಳಕೆಯಾಗಲಿದೆ. 2021 ರಲ್ಲಿ ನಾಸಾ ಕೈಗೊಂಡ ಯೋಜನೆಯಿಂದ ಸುಮಾರು 2.2 ಬಿಲಿಯನ್ ಡಾಲರ್ ಸಂಪಾದನೆ ಮಾಡುವುದರೊಂದಿಗೆ 37000 ಉದ್ಯೋಗಗಳನ್ನು ಸೃಷ್ಠಿಸಿತು ಎನ್ನುವುದು ಗಮನಾರ್ಹ ಸಂಗತಿ.
ಹರ್ಷ ತಂದ ಚಂದ್ರನ ಸ್ಪರ್ಷ
ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕಿಳಿಸುವ ಮಹತ್ವದ ಕಾರ್ಯವನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ನಿರ್ವಹಿಸಿ ಜಗತ್ತಿನ ಕೋಟ್ಯಾಂತರ ಮಂದಿಯ ನಿರೀಕ್ಷೆಯನ್ನು ಸಾಕಾರಗೊಳಿಸಿದ್ದಾರೆ, ಜ್ಞಾನದಾಹಿಗಳ ಮನದಲ್ಲಿ ಸಂಚಲನ ಮೂಡಿಸಿದ್ದಾರೆ.
ನಿಗೂಢವಾಗಿರುವ ಚಂದಿರನ ದಕ್ಷಿಣ ದ್ರುವದಲ್ಲಿ ತನ್ನ ನೌಕೆಯನ್ನು ಇಳಿಸಿದ ಮೊಟ್ಟಮೊದಲ ರಾಷ್ಟ್ರ ಎನಿಸಿಕೊಂಡಿದೆ ಭಾರತ. ಇಸ್ರೋ ಮುಂದೆ ಬೇರೆ ದೇಶಗಳು ನಾನಾ ಉದ್ಧೇಶಗಳಿಗೆ ತಮ್ಮ ನೌಕೆಯನ್ನು ಉಡಾಯಸಲು ಸಾಲುಗಟ್ಟಿ ನಿಲ್ಲಲಿವೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಕೈಗೊಂಡ ಇಸ್ರೋ ಮಾದರಿ ಬೇರೆ ದೇಶಗಳ ಬಾಹ್ಯಾಕಾಶ ಸಂಸ್ಥೆಗಳಗೆ ಮಾದರಿ ಹಾಗೂ ಸ್ಪೂರ್ತಿಯಾಗಲಿರುವುದು ಹೆಮ್ಮೆಯ ಸಂಗತಿ.
ಡಾ. ಎ. ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರು
ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ), ಉಜಿರೆ
9448154001
ajkshetty@sdmcujire.in
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ