ಭಾರತೀಯ ಸಂಪ್ರದಾಯಗಳಲ್ಲಿ ಅಗಾಧವಾದ ವಿಚಾರಗಳಿವೆ : ಶ್ರೀಕೃಷ್ಣ ಉಪಾಧ್ಯಾಯ

Upayuktha
0

 ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ರಕ್ಷಾಬಂಧನ ಆಚರಣೆ

ಪುತ್ತೂರು: ಭಾರತೀಯ ಆಚರಣೆ, ಸಂಸ್ಕೃತಿಗಳ ಹಿಂದೆ ಉದಾತ್ತವಾದ ವಿಚಾರಧಾರೆಗಳು ಹುದುಗಿಕೊಂಡಿವೆ. ನಮ್ಮ ಪ್ರತಿಯೊಂದು ಸಂಪ್ರದಾಯದ ಬಗೆಗೂ ಸಹಸ್ರಾರು ಪುಟಗಳಷ್ಟು ಅಧ್ಯಯನ ನಡೆಸಬಹುದಾದ ಅವಕಾಶಗಳಿವೆ. ರಕ್ಷಾ ಬಂಧನ ಆಚರಣೆಯೂ ಇದಕ್ಕೆ ಹೊರತಾಗಿಲ್ಲ. ಭ್ರಾತೃತ್ವದ ಭಾವತೀವ್ರತೆಯನ್ನು ಹೊರಹೊಮ್ಮಿಸುವ ಹಾಗೂ ತಂಗಿಯ ರಕ್ಷಣೆಯ ಹೊಣೆಯನ್ನು ಅಣ್ಣನಾದವನು ತನ್ನದಾಗಿಸುವ ಪವಿತ್ರ ಗುರುತಾಗಿ ರಕ್ಷಾಬಂಧನ ಆಚರಿಸಲ್ಪಡುತ್ತದೆ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಬುಧವಾರ ಆಯೋಜಿಸಲಾದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಒಂದಾಗಿದ್ದ ಭಾರತವನ್ನು ಒಡೆದಾಳುವ ನೀತಿಯ ಮುಖಾಂತರ ತಮ್ಮ ಕಪಿಮುಷ್ಟಿಗೆ ಒಳಪಡಿಸಿದ್ದ ಬ್ರಿಟಿಷರಿಂದಾಗಿ ಮನಸ್ಸು ಮನಸ್ಸುಗಳು ದೂರಾಗುವ ಪರಿಸ್ಥಿತಿ ಭಾರತದಲ್ಲಿ ಬರುವಂತಾಯಿತು. ಇಂತಹ ಸಂದರ್ಭದಲ್ಲಿ ದೇಶವನ್ನು ತಾಯಿ ಎಂಬ ನೆಲೆಯಲ್ಲಿ ಗುರುತಿಸಿ ‘ಭಾರತ ಮಾತೆ’ ಎಂದು ಕರೆಯಲಾಯಿತು. ಇದರಿಂದಾಗಿ ಭ್ರಾತೃತ್ವದ ಭಾವವನ್ನು ದೇಶದ ಒಳಗಡೆ ಹರಿಸುವುದಕ್ಕೆ ಸಾಧ್ಯವಾಯಿತು. ಒಂದೇ ತಾಯಿಯ ಮಕ್ಕಳಲ್ಲದಿದ್ದರೂ ಭ್ರಾತೃತ್ವವನ್ನು ಸಾಧಿಸುವ ಸಾಧ್ಯತೆಯನ್ನು ರಕ್ಷಾಬಂಧನ ಅನಾವರಣಗೊಳಿಸಿದೆ ಎಂದು ನುಡಿದರು.


ಅಣ್ಣ ಅಥವ ತಂಗಿ ಎಂಬ ಶಬ್ದಕ್ಕೆ ಜಗತ್ತೇ ಮನ್ನಣೆ ನೀಡುತ್ತದೆ. ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣವೇ ಇದಕ್ಕೆ ನಿದರ್ಶನವಾಗಿ ನಮ್ಮ ಕಣ್ಣ ಮುಂದೆ ಕಾಣಿಸುತ್ತದೆ. ಹಾಗಾಗಿ ಆ ಶಬ್ದಗಳೊಳಗೆ ಅವಿತಿರುವ ಭಾವಸಾಂದ್ರತೆಯನ್ನು ಗುರುತಿಸಿ ವ್ಯವಹರಿಸಬೇಕು. ತನ್ನ ಅಣ್ಣನಾದ ಭಗವಾನ್ ಶ್ರೀಕೃಷ್ಣನ ಕೈಬೆರಳಿಗಾದ ಗಾಯವನ್ನು ಅಡಗಿಸಲು ತಂಗಿ ದ್ರೌಪದಿಯು ತನ್ನ ಸೀರೆಯ ಸೆರಗನ್ನೇ ಹರಿದು ನೀಡಿದ್ದು ಮುಂದೆ ಅಕ್ಷಯಾಂಬರವಾಗಿ ಆಕೆಯನ್ನು ರಕ್ಷಿಸಿದ್ದನ್ನು ನಾವು ಕಾಣಬಹುದು ಎಂದು ತಿಳಿಸಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 


ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ತರುವಾಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರಸ್ಪರ ರಕ್ಷೆಯನ್ನು ಕಟ್ಟಿ ರಕ್ಷಾಬಂಧನವನ್ನು ಆಚರಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top