ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಾವಿಷ್ಕಾರದಿಂದ ವೈ-20 ಟಾಕ್ಸ್
ಮಿಜಾರು (ಮೂಡುಬಿದಿರೆ): ‘ಸಾಮಾಜಿಕ ಚಟುವಟಿಕೆಗಳಲ್ಲಿ ಯುವಜನತೆಯ ಸಹಭಾಗಿತ್ವವನ್ನು ಪ್ರಜಾಸತ್ತಾತ್ಮಕಗೊಳಿಸುವುದು ವೈ-20 ಆದ್ಯತೆ’ ಎಂದು ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಮಂತ್ರಾಲಯ ಅಧೀನದ ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಯಶವಂತ ಯಾದವ್ ಹೇಳಿದರು.
ಸಾವಿಷ್ಕಾರ ಸಹಯೋಗದಲ್ಲಿ ಇಲ್ಲಿನ ಶೋಭಾವನದಲ್ಲಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ‘ಭಾರತದಲ್ಲಿ ಸೈಬರ್ ಸುರಕ್ಷತೆ- ಅವಕಾಶಗಳು ಮತ್ತು ಸವಾಲುಗಳು' ವಿಷಯ ಕುರಿತು ಶುಕ್ರವಾರ ನಡೆದ ‘ವೈ-20 ಟಾಕ್ಸ್’ (ವೈ-20 ಮಾತುಕತೆ) ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
‘ಏನನ್ನು ಕಲಿಯಬಾರದು?’ ಎಂಬುದನ್ನು ಕಲಿಯಬೇಕಾದ ಅನಿವಾರ್ಯತೆಯೂ ಇಂದು ಯುವಜನತೆ ಮುಂದಿದೆ’ ಎಂದರು.
‘ಇದು ಆಯುಧ ರಹಿತ ಯುದ್ಧದ ಕಾಲ. ಇಲ್ಲಿ ಮಾಹಿತಿ, ಆವಿಷ್ಕಾರಗಳೇ ಸಾಧನಗಳು. ಅಣು(ನ್ಯೂಕ್ಲಿಯರ್)ವನ್ನು ಒಳಿತಿಗೆ ಅಥವಾ ಬಾಂಬ್‍ಗೆ ಬಳಸಬಹುದು. ಅದೇ ಸ್ಥಾನವನ್ನು ಇಂದು ಅಂತರ್ಜಾಲ ಆವರಿಸಿದೆ. ಸಮಸ್ಯೆಗಳು ಇದ್ದಲ್ಲಿ ಅವಕಾಶಗಳೂ ಇರುತ್ತವೆ’ ಎಂದರು.
‘ಆಲೋಚಿಸುವುದು, ಪ್ರತಿಕ್ರಿಯಿಸುವುದು, ಕಲಿಯುವುದು, ಪ್ರಶ್ನಿಸುವುದು, ಅಗತ್ಯ ಬಿದ್ದಾಗ ಎದ್ದು ನಿಲ್ಲಲು ಬದ್ಧರಾಗಿರಬೇಕು. ಇಂದು ಮಾತನಾಡದಿದ್ದರೆ, ನಾಳೆ ಅವಕಾಶವೇ ಇರುವುದಿಲ್ಲ. ಇಂದು ನುಣುಚಿಕೊಂಡರೆ, ನಾಳೆ ಸಮಸ್ಯೆ ಬಾಚಿಕೊಂಡು ಬರುತ್ತದೆ’ ಎಂದು ಎಚ್ಚರಿಸಿದರು.
‘ಆಳ್ವಾಸ್‍ನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದೇ ಒಂದು ಸೌಭಾಗ್ಯ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.
‘ವೈ-20 ಟಾಕ್ಸ್’ ಉದ್ಘಾಟಿಸಿದ ವೈ-20 ಇಂಡಿಯಾ (ಸಂವಹನ) ಕಾರ್ಯದರ್ಶಿ ಆರ್ಯಾ ಝಾ ಮಾತನಾಡಿ, ‘ಮೊಬೈಲ್ ಮೂಲಕ ತಂತ್ರಜ್ಞಾನ ಬಳಕೆಯೂ ಹೆಚ್ಚಾಗಿದ್ದು, ಸೈಬರ್ ಸುರಕ್ಷತೆಯು ಇಂದಿನ ಸವಾಲಾಗಿದೆ. ಈ ಸವಾಲು ಹಲವರಿಗೆ ಅವಕಾಶಗಳನ್ನೂ ಸೃಷ್ಟಿಸಿವೆ. ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಯುವಜನತೆ ಪಾತ್ರ ಹೆಚ್ಚಬೇಕು’ ಎಂದರು.
‘ವೈ-20 ಮೂಲಕ ದೇಶದ ಮೂಲೆ ಮೂಲೆಯ ಯುವಜನತೆಯನ್ನು ತಲುಪುವುದು ನಮ್ಮ ಗುರಿ. ಇಲ್ಲಿನ ವಿಚಾರವು ವೈ-20ಗೆ ಮೂಲಕ ಜಿ-20ಗೆ ತಲುಪಲಿದೆ’ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೆಕ್ ಆಳ್ವ ಮಾತನಾಡಿ, ‘ಯುವ’ ಎಂಬುದೇ ಒಂದು ‘ಜೀವಕಳೆ’. ಯೌವನವನ್ನು ವಯಸ್ಸಿನಿಂದ ಅಳೆಯಲು ಸಾಧ್ಯವಿಲ್ಲ. ನಾನು 70ರಿಂದ 80 ವರ್ಷದ ಯುವಕ- ಯುವತಿಯರನ್ನು ಹಾಗೂ 20ರಿಂದ 30 ವರ್ಷದ ಆಲಸಿಗಳನ್ನೂ ನೋಡಿದ್ದೇನೆ’ ಎಂದರು.
‘ಕುಟುಂಬ, ಸಮಾಜ, ಸರ್ಕಾರಗಳು ನಮಗೆ ಏನು ಕೊಟ್ಟಿವೆ? ಎಂದು ಪ್ರಶ್ನಿಸುವ ಮೊದಲು ನಾವೇನು ನೀಡಿದ್ದೇವೆ ಎಂದು ಕೇಳಿಕೊಳ್ಳಬೇಕು. ಆಯಾ ಕಾಲಘಟ್ಟದ ಪ್ರವೃತ್ತಿಗಳು ಬದಲಾಗಬಹುದು. ಆದರೆ, ನಮ್ಮ ಸ್ಪಂದನೆ ನಿರಂತರವಾಗಿರಬೇಕು’ ಎಂದರು.
‘ಪ್ರತಿ ಕಾಲೇಜುಗಳಲ್ಲಿಯೂ ಸೈಬರ್ ಸುರಕ್ಷತಾ ಘಟಕ ಸ್ಥಾಪಿಸಬೇಕು ಎಂದರು.
ಸ್ವಾತಂತ್ರ್ಯ ದ ಅಮೃತ ಮಹೋತ್ಸವ, ಜಿ-20 ಹಾಗೂ ವೈ-20 ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಭತ್ತದ ಕಳಶದಲ್ಲಿಟ್ಟ ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ವಿಶೇಷವಾಗಿ ಉದ್ಘಾಟಿಸಲಾಯಿತು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡಿಸ್, ಸಾವಿಷ್ಕಾರದ ವಿಭಾಗೀಯ ಸಂಯೋಜಕ ನಿಶಾನ್ ಆಳ್ವ, ಕಾರ್ಯಕ್ರಮದ ಸಂಯೋಜಕರಾದ ನಿಶ್ಚಿತ್ ಬಂಟ್ವಾಳ್ ಹಾಗೂ ಆಕಾಶ್ ಇದ್ದರು. ಕಾಲೇಜಿನ ಡೀನ್ ಡಾ ದಿವಕರ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಆಯನಾ ನಿರೂಪಿಸಿದರು. ಸಾವಿಷ್ಕಾರ ಸಲಹಾ ಮಂಡಳಿಯ ಡಾ.ಜ್ಞಾನಿ ವಂದಿಸಿದರು.
ಸಂವಾದ:
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್‍ಕುಮಾರ್ ನಾಯ್ಕ ಮಾತನಾಡಿ, ‘ಸೈಬರ್ ಅಪರಾಧಗಳಲ್ಲಿ ಸುಶಿಕ್ಷಿತರೇ ಮೂರ್ಖರಾಗುತ್ತಿರುವುದು ವಿಪರ್ಯಾಸ. ಅಂತರ್ಜಾಲದ ಆಕರ್ಷಣೆಗೆ ವ್ಯಾಮೋಹಿತರಾಗಬೇಡಿ. ಆತ್ಮರತಿ, ಪ್ರಚಾರದ ಗೀಳು ಬೇಡ. ವೈಯಕ್ತಿಕ ಮಾಹಿತಿಗಳು ಗೋಪ್ಯವಾಗಿರಲಿ. ಯಾವುದೇ ಮೋಸಕ್ಕೆ ಒಳಗಾದರೂ, ಅಂಜಿಕೆ ಇಲ್ಲದೇ ದೂರು ನೀಡಿ. ಬ್ಲ್ಯಾಕ್‍ಮೇಲ್‍ಗೆ ಒಳಗಾಗಬೇಡಿ. ಪೊಲೀಸರನ್ನು ಸಂಪರ್ಕಿಸಿ’ ಎಂದರು.
ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಅನಂತಪ್ರಭು ಜಿ ಮಾತನಾಡಿ, ‘ಸೈಬರ್ ಜಗತ್ತಿಗೆ ಗಡಿಗಳಿಲ್ಲ. ಹಾಗಾಗಿ ಸೈಬರ್ ಅಪರಾಧಗಳಿಗೂ ಎಲ್ಲೆ ಇಲ್ಲದಾಗಿದೆ. ನಮ್ಮ ಎಚ್ಚರ ಬಹುಮುಖ್ಯ’ ಎಂದರು.
ಮಾಹಿತಿ ಸುರಕ್ಷತೆಯ ಪರಿಶೋಧಕ ಸಂದೇಶ ಎಚ್.ಎನ್. ಮಾತನಾಡಿ, ‘ಇಲ್ಲಿ ಅಪಾಯ ಹೆಚ್ಚಿರುವ ಕಾರಣ ನಿಮ್ಮ ಅಪ್‍ಡೇಟ್ ಹೆಚ್ಚ ಬೇಕಾಗುತ್ತದೆ’ ಎಂದರು.
ಸೈಬರ್ ಹ್ಯಾಕಿಂಗ್ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ ರಿಇನ್‍ಪೊಸೆಕ್ ತಾಂತ್ರಿಕ ನಿರ್ದೇಶಕ ಸಮರ್ಥ ಭಾಸ್ಕರ ಭಟ್, ‘ಸೈಬರ್ ಅಪರಾಧ ತಡೆಗಟ್ಟಲು ನಿರ್ದಿಷ್ಟ ರಕ್ಷಣೆಗಳಿಲ್ಲ. ಮುಂಜಾಗ್ರತೆಯೇ ಉತ್ತಮ ಪರಿಹಾರ’ ಎಂದರು. ಬೆಂಗಳೂರು ಐಐಎಂ ವಿದ್ಯಾರ್ಥಿ ನವನೀತ್ ಗಣೇಶ್ ಸಂವಾದ ನಡೆಸಿಕೊಟ್ಟರು.
ಸೈಬರ್ ಸುರಕ್ಷತೆ ಇಂದಿನ ಅನಿವಾರ್ಯ:
ಸಮಾರೋಪದಲ್ಲಿ ಮಾತನಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಚಿಕ್ಕಬಳ್ಳಾಪುರ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಶಿವಮೂರ್ತಿ ಮಾತನಾಡಿ, ‘ಸೈಬರ್ ಸುರಕ್ಷತೆಯೇ ಮಾಹಿತಿ ಸುರಕ್ಷತೆ. ಸಂವಹನದ ಸಂದರ್ಭದಲ್ಲಿ ಡೇಟಾ ಎಷ್ಟು ಸುರಕ್ಷವಾಗಿದೆ ಎಂಬುದು ಸವಾಲು. ಇಂದಿನ ಎಲ್ಲ ತಂತ್ರಜ್ಞಾನಗಳಿಗೆ ಸೈಬರ್ ಸುರಕ್ಷತೆ ಅವಶ್ಯ’ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಯಾವುದೇ ಕಾರ್ಯಕ್ಕೆ ಮೊದಲು ಪರೀಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.
‘ಮನುಷ್ಯ ಕಳ್ಳಸಾಗಣೆ ಮತ್ತು ಜೀತವನ್ನು ನಿಷೇಧಿಸಲಾಗಿದ್ದರೂ, ತಂತ್ರಜ್ಞಾನದ ಮೂಲಕ ಅದು ಮತ್ತೆ ಬರುತ್ತಿದೆ. ಮನುಷ್ಯ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಎಲ್ಲರ ಮಾಹಿತಿ ಎಲ್ಲೆಡೆ ಬಹಿರಂಗವಾಗುತ್ತಿದೆ. ನಮ್ಮ ನಿಯಂತ್ರಣವು ಯಾರದೋ ಕೈಗೆ ಹೋಗುತ್ತಿದೆ. ಹೀಗಾಗಿ ಎಚ್ಚರ ಅಗತ್ಯ’ ಎಂದರು. ಸಮಾರೋಪ ಸಮಾರಂಭವನ್ನು ಪ್ರತೀಕ್ಷಾ ಜೈನ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 550ಕ್ಕೂ ಅಧಿಕ ವಿದ್ಯಾಥಿಗಳು ಪಾಲ್ಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ