ಅಕ್ಷರ ಆರಾಧನೆ- 33: ಕೃಷ್ಣಾರ್ಪಣ ಮತ್ತದರ ಮಹತ್ತ್ವ

Upayuktha
0

 || ವಷಟ್ಕಾಂತರ್ಗತ ಶ್ರೀ ಶ್ರೀಪತಯೇ ನಮಃ ||



ಮ್ಮಲ್ಲೊಂದು ಕ್ರಮವಿದೆ, ಯಾವುದೇ ಪೂಜೆಯ ಕೊನೆಗೆ ಅಥವಾ ಯಾವುದೇ ಸೇವೆ ಯಾ ವಸ್ತು ದೇವರಿಗೆ ಅರ್ಪಿಸುವಾಗ "ಕೃಷ್ಣಾರ್ಪಣಮಸ್ತು" ಎಂದು ಹೇಳಿ ತುಳಸಿ ನೀರು ಬಿಟ್ಟು ಸೇವೆ ಯಾ ವಸ್ತುವನ್ನು ದೇವರಿಗೆ ಅರ್ಪಿಸಿ ತುಳಸಿಯನ್ನು ಮಾತ್ರ ಸ್ವೀಕರಿಸುತ್ತೇವೆ. ಯಾಕೆ ಶ್ರೀಕೃಷ್ಣಾರ್ಪಣಮಸ್ತು" ಯಾಕಿಲ್ಲ ರಾಮಾರ್ಪಣಮಸ್ತು, ವೆಂಕಟರಮಣಾರ್ಪಣಮಸ್ತು, ಮತ್ಸ್ಯಾರ್ಪಣಮಸ್ತು, ಕೂರ್ಮಾರ್ಪಣಮಸ್ತು, ವರಾಹಾರ್ಪಣಮಸ್ತು, ನರಸಿಂಹಾರ್ಪಣಮಸ್ತು, ವಾಮನಾರ್ಪಣಮಸ್ತು, ಭಾರ್ಗವಾರ್ಪಣಮಸ್ತು, ಬುದ್ಧಾರ್ಪಣಮಸ್ತು, ಕಲ್ಯಾರ್ಪಣಮಸ್ತು ಅಥವಾ ಯಾವುದೇ ದೇವರ ಹೆಸರಿನಲ್ಲಿ ಅರ್ಪಣಮಸ್ತು?

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹತ್ವವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ  ದೇವರು ಸಾಮಾನ್ಯ ಜನರಿಗೆ ಶ್ರೀ ಕೃಷ್ಣನಷ್ಟು ಹತ್ತಿರವಾಗಿರಲಿಲ್ಲ. ಶ್ರೀ ಕೃಷ್ಣನು ಅತೀ ಸಾಮಾನ್ಯರಲ್ಲಿ ಸಾಮಾನ್ಯರ ಕೈಗೆ ನಿಲುಕುತ್ತಿದ್ದನು. ಅದಕ್ಕಾಗಿಯೇ ಶ್ರೀ ಕೃಷ್ಣನನ್ನು " ಗೋವಿಂದ" ಎಂದು ಕರೆಯುವುದು. ಗೋವಿಂದ ಎಂದರೆ ಗೋಪಾಲಕನಲ್ಲ. "ಗೋ" ಎಂದರೆ ಇಂದ್ರಿಯ , (ಮಾತು)"ವಿಂದ" ಎಂದರೆ ನಿಲುಕು ಅಥವಾ ಸಿಗು ಎಂಬರ್ಥ. ಯಃ ಗಾಃ (ಇಂದ್ರಿಯಾಣಾಂ) ವಿಂದತಿ ಸಃ ಗೋವಿಂದಃ, ಅವನೇ ಶ್ರೀ ಕೃಷ್ಣ.

ಶ್ರೀ ಕೃಷ್ಣಾವತಾರವು ಒಂದು ಸಂಪೂರ್ಣ ಅವತಾರ. (ಆದಿ ಹಾಗೂ ಅಂತ್ಯವನ್ನು ತೋರಿದ ಎಂಬರ್ಥದೊಳು ಮಾತ್ರ) ಈ ಅವತಾರದಲ್ಲಿ ದಶಾವತಾರದ ಒಂಬತ್ತು ಅವತಾರಗಳಲ್ಲಿ ಭಗವಂತನು ತೋರಿಸಿದ ಲೀಲೆಗಳೆಲ್ಲವೂ ಇವೆ. ಹಾಗಾಗಿ ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಿದರೆ ಉಳಿದೆಲ್ಲಾ ದೇವರಿಗೂ (ಅವತಾರಗಳಿಗೂ) ಅರ್ಪಿಸಿದಂತೆ. ಹಾಗಾಗಿಯೇ "ಶ್ರೀ ಕೃಷ್ಣಾರ್ಪಣಮಸ್ತು".

ನಮ್ಮಲ್ಲಿ ಕೆಲವರಿಗೊಂದು ಅಭ್ಯಾಸವಿದೆ, ಮನುಷ್ಯ ಸಹಜವಾದ ಅಭ್ಯಾಸ ಇದು ನಾನು, ದೇವರಿಗೆ ಅರ್ಪಿಸಿದ್ದು , ಇದು ನನ್ನದು, ನಾನು ಅತೀ ದೊಡ್ಡ ಕಾಣಿಕೆ ಯಾ ಸೇವೆ ಮಾಡಿದ್ದೇನೆ. ನನಗೆ ಅಗ್ರ ಪ್ರಸಾದ ಸಿಗಬೇಕು, ಹೆಸರನ್ನು ಬೋರ್ಡ್ ಮೇಲೆ ಬರೆಯದಿದ್ದರೆ ಕೋಪ .... ಇತ್ಯಾದಿ. ಇದೆಲ್ಲವೂ ನಮ್ಮ ಅಹಂ ತೋರಿಸುತ್ತದೆ. ಒಮ್ಮೆ ದೇವರಿಗೆ ಕೃಷ್ಣಾರ್ಪಣ ಆಯಿತೋ ಆ ವಸ್ತು ಯಾ ಸೇವೆ ಯಾ ಪೂಜೆ ದೇವರಿಗೆ ಸೇರಿದ್ದು. ನಮಗೆ ಅದರ ಮೇಲೆ ಯಾವುದೇ ಹಕ್ಕಿಲ್ಲ. ಕೃಷ್ಣಾರ್ಪಣೆಯ ತುಳಸಿಯೊಂದೇ ನಮ್ಮ ಭಾಗಕ್ಕೆ. ಅಹಂಕಾರವನ್ನು ತ್ಯಜಿಸಿ ಕೃಷ್ಣಾರ್ಪಣ ಮಾಡಿದರಂತೂ ಅಮಿತ ಪುಣ್ಯ ಫಲ. 

ಬ್ರಹ್ಮಾಂಡಪುರಾಣದ ವೆಂಕಟೇಶ ಮಹಾತ್ಮೆಯಲ್ಲಿ ಈ ರೀತಿ ತಿಳಿಸುತ್ತಾರೆ: 'ಕೃತೇ ಶ್ವೇತಂ ಹರಿಂ ವಿಂದ್ಯಾತ್ ತ್ರೇತಾಯಾಂ ರಕ್ತವರ್ಣಕಂ ದ್ವಾಪರೇ ಪೀತವರ್ಣಂ ತು ಕೃಷ್ಣವರ್ಣಂ ಕಲೌ ಯುಗೇ' 

ಎಲ್ಲಾ ಜೀವರ ಹೃದ್ಗುಹಾವಾಸಿಯಾದ ಭಗವಂತ ಒಬ್ಬನೇ ಆದರೂ, ಯುಗಾನುಸಾರ ತನ್ನ ಬಣ್ಣವನ್ನು ಬದಲಿಸುತ್ತಾನೆ. ಕೃತಯುಗದಲ್ಲಿ ಬಿಳಿ, ತ್ರೇತೆಯಲ್ಲಿ ಕೆಂಪು, ದ್ವಾಪರದಲ್ಲಿ ಹಳದಿ ಹಾಗು ಕಲಿಯುಗದಲ್ಲಿ ಕೃಷ್ಣ ಬಣ್ಣದಿಂದ ಕೂಡಿ ಎಲ್ಲರ ಬಿಂಬನಾಗಿದ್ದಾನೆ  ಆದ್ದರಿಂದಲೇ ಕೃಷ್ಣಾರ್ಪಣವೆನ್ನುವುದು ಅತ್ಯಂತ ಸಮಂಜಸವಾದದ್ದು ಅದಕ್ಕೆ ಏನೋ ವ್ಯಾಸರಾಯರು ಮೂರು ಬಾರಿ ಕೃಷ್ಣನನ್ನು ಕರೆದದ್ದು. ಒಂದು ಬಿಂಬನನ್ನು, ಮತ್ತೊಂದು ಅವತಾರ ರೂಪವನ್ನು ಮಗದೊಂದು ಮೂಲರೂಪವನ್ನು  'ಕೃಷ್ಣ ಕೃಷ್ಣ ಕೃಷ್ಣ' ಎಂದು ಮೂರು ಬಾರಿ ನೆನೆಯಿರೋ ಸಂತುಷ್ಟನಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವನು. ಸ್ವತಃ ಶ್ರೀಕೃಷ್ಣನೇ ಗೀತೆಯಲ್ಲಿ ತಿಳಿಸಿದ್ದಾನೆ ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್। ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್।। ಏನೇ ಮಾಡು ಅದನ್ನು ನನಗರ್ಪಿಸು ಎಂದು ನೇರವಾಗಿ ತನಗರ್ಪಿಸುವಂತೆ ತಿಳಿಸಿಲ್ಲವೇ? ಅಂದ ಹಾಗೆ ಶ್ರೀ ಕೃಷ್ಣಾರ್ಪಣಮಸ್ತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top