|| ಪ್ರಜಾಪತ್ಯಂತರ್ಗತ ಶ್ರೀ ಅಘಾರ್ದನಾಯ ನಮಃ||
'ಕೃಷ್ಣಂ ವಂದೇ ಜಗದ್ಗುರುಂ' - ಹೀಗೆ ಆ ವಿಷ್ಣುವಿನ ದಶಾವತರಗಳ ಪೈಕಿ ಯಾವ ಅವತಾರದ ಬಗ್ಗೆಯೂ ಹೇಳಿಲ್ಲ. ಅಷ್ಟೇ ಏಕೆ, ಯಾವ ಪರಮಾತ್ಮನ ವಿವರಣೆಯನ್ನು ಸ್ವತಃ ಕೃಷ್ಣಾವತಾರದಲ್ಲಿ ಹೇಳಿದಂತೆ ಹೇಳಿಲ್ಲ. ಕೃಷ್ಣನ ಜೀವನ ಗಾಥೆಯಲ್ಲೇ ಎಲ್ಲ ಕಾಲಕ್ಕೂ ಸಲ್ಲುವ ಹಲವು ಪಾಠಗಳು ನಮಗಿವೆ. ಅದನ್ನು ಅನುಸರಿಸಲೇ ಬೇಕು ಎಂದು ಆ ಭಗವಂತ ಹೇಳದಿರಬಹುದು.ಆದರೆ, ತಾನೇ ಆ ರೀತಿ ಜೀವಿಸಿ, ವರ್ತಿಸಿ ಆದರ್ಶನಾಗಿದ್ದಾನೆ. ಆಧುನಿಕ ಕಾಲಘಟ್ಟಕ್ಕೆ ಹೋಲಿಸಿ ಹೇಳುವುದಾದರೆ ಕೃಷ್ಣನಂಥ ಬೆಸ್ಟ್ ಮ್ಯಾನೇಜ್‌ಮೆಂಟ್ ಗುರು ಯಾರೂ ಸಿಗಲಿಕ್ಕಿಲ್ಲ. ಭಗವದ್ಗೀತೆ ಎಂಬ ಅದ್ಭುತ ಗ್ರಂಥದಲ್ಲಿ ಆತ ನೀಡಿರುವ ಸಂದೇಶವೇ ಭೂಮಿ ತೂಕದ್ದು. ಆತನಿಂದ ಏನೆಲ್ಲ ಪಾಠಗಳನ್ನು ನಾವು ಕಲಿಯಬಹುದು ಎಂಬುದರ ಹತ್ತು ಅಂಶವನ್ನು ಇಲ್ಲಿ ಹೇಳಲಾಗಿದೆ.ಬದುಕಿನ ಸಕಲ ಸಾರವನ್ನು ನಮ್ಮೆದುರು ತೆರೆದಿಟ್ಟಿರುವ ಜಗನ್ನಿಯಾಮಕನ ಸಂದೇಶದಲ್ಲಿ ಹತ್ತನ್ನೇ ಆರಿಸಿಕೊಳ್ಳುವುದು ಸವಾಲು. ಆದರೆ ಇದು ತುಟಿಗೆ ಜೇನು ಸವರುವಂಥ ಪ್ರಯತ್ನ. ಇವುಗಳ ರುಚಿ ಹಿಡಿದು ಕೃಷ್ಣನ ಜೀವನಗಾಥೆ ತಿಳಿಯುವಂತಾದರೆ, ಭಗವದ್ಗೀತೆ ಓದುವ- ಅರ್ಥೈಸುವ ಪ್ರಯತ್ನ ಆದರೆ ಅದು ಸಾರ್ಥಕ್ಯ. ಕೃಷ್ಣನಿಂದ ಬಂದ ಮುಖ್ಯ ಹತ್ತು ಪಾಠಗಳು ಇಲ್ಲಿವೆ.
ಎಷ್ಟು ಮಂದಿ ರಕ್ಕಸರು ಕೊಲ್ಲಲು ಬಂದರು: ಆ ಕೃಷ್ಣನ ಮೇಲೆ ನಡೆದಷ್ಟು ಹತ್ಯಾ ಪ್ರಯತ್ನಗಳು ಬೇರೆ ಯಾರ ಮೇಲೂ ನಡೆದಿರಲಿಕ್ಕಿಲ್ಲ. ಅದೆಷ್ಟು ರಕ್ಕಸರು, ರಾಕ್ಷಸಿ ಪೂತನಿ ಸೇರಿದಂತೆ ಆತನನ್ನು ಕೊಲ್ಲಲು ನಾನಾ ಬಗೆಯ ಯತ್ನ ನಡೆಸಿದರು. ಅವೆಲ್ಲದರಿಂದ ಪಾರಾದ ಕೃಷ್ಣ, ಜೀವ ಬೆದರಿಕೆ ಬಂದರೂ ಘನ ಉದ್ದೇಶ ಬಿಡಬಾರದು ಎಂಬುದನ್ನು ಬಾಲ್ಯದಲ್ಲೇ ತೋರಿಸಿಕೊಟ್ಟ.
ಗೋವರ್ಧನ ಗಿರಿಧಾರಿ : ಕೇವಲ ತನ್ನ ರಕ್ಷಣೆಯಷ್ಟೇ ಅಲ್ಲ, ತನ್ನ ಸುತ್ತಲಿನವರ ರಕ್ಷಣೆ ಕೂಡ ಆದ್ಯ ಕರ್ತವ್ಯ ಎಂಬುದನ್ನು ನೆನಪಿಸುವ ಕಾರಣಕ್ಕೆ ಗೋವರ್ಧನ ಗಿರಿಯನ್ನು ಕಿರು ಬೆರಳಿನಿಂದ ಎತ್ತಿ ಹಿಡಿದು ಜನರನ್ನು ರಕ್ಷಿಸಿದ.
ಪ್ರಾಣಿಗಳ ಬಗ್ಗೆ ಕರುಣೆ : ಕಾಳಿಂಗ ಮರ್ದನದ ಪ್ರಹಸನದಲ್ಲಿ ಆ ಹಾವನ್ನು ಕೊಲ್ಲುವುದು ಕೂಡ ಆ ಕೃಷ್ಣನಿಗೆ ಸವಾಲಿನ ವಿಚಾರ ಏನಾಗಿರಲಿಲ್ಲ. ಆದರೆ ಆ ನಾಗ ಕುಟುಂಬಕ್ಕೆ ಬದುಕಿಕೊಳ್ಳಲು ಅವಕಾಶ ನೀಡಿದ. ಆ ಮೂಲಕ ಪ್ರಾಣಿಗಳ ಬಗ್ಗೆ ದಯೆ ಇರಲಿ ಎಂಬ ಸಂದೇಶ ನೀಡಿದ.
ಗಂಧ ನೀಡಿದಾಕೆಗೆ ಶಾಶ್ವತ ಯೌವನ ಕೊಟ್ಟ; ತನಗೆ ಹಚ್ಚಿಕೊಳ್ಳಲು ಗಂಧ ನೀಡಿದಾಕೆಗೆ ಶಾಶ್ವತವಾದ ಯೌವನವನ್ನು ವರವಾಗಿ ನೀಡಿದ ಕೃಷ್ಣ, ನಮಗೆ ಪ್ರೀತಿಯಿಂದ ಯಾರಾದರೂ ಏನಾದರೂ ನೀಡಿದರೆ ಅದನ್ನು ಪಡೆಯಬೇಕು ಎನ್ನುವ, ಜತೆಗೆ ಬದಲಿಯಾಗಿ ಘನವಾದದ್ದನ್ನೇ ನೀಡಬೇಕು ಎಂಬ ಪಾಠ ಹೇಳಿದ್ದಾನೆ.
ಗುರುಭಕ್ತಿ ತೋರಿಸಿಕೊಟ್ಟ- ಜಗದ್ಗುರು: ವಿದ್ಯೆ ಕಲಿಸಿದ ಸಾಂದೀಪಿನಿ ಮುನಿಗಳ ಪುತ್ರ ಶೋಕವನ್ನು ನಿವಾರಿಸಿ, ವಿದ್ಯೆ ಕಲಿಸಿದ ಗುರುಗಳಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟು ಜಗದ್ಗುರುವಾದ.
ದುಷ್ಟರ ಬಗ್ಗೆ ಕರುಣೆ ಕೂಡದು: ಸಂಬಂಧಿಯೇ ಆದರೂ ದುಷ್ಟರಿಗೆ ಯಾವುದೇ ರಿಯಾಯಿತಿ ತೋರಬಾರದು ಎಂಬ ವಿಚಾರದಲ್ಲಿ ಕಂಸ ಹಾಗೂ ಶಿಶುಪಾಲ ವಧೆಯನ್ನು ಸಂದೇಶವಾಗಿ ನೀಡಿದ್ದಾನೆ.
ಗೆಳೆಯರ ಮನಸ್ಸು ತಿಳಿಯಬೇಕು: ಬೇಡಲು ಬಂದ ಗೆಳೆಯ ಸುಧಾಮನ ಮನಸ್ಸನ್ನು ಆತ ಬಾಯಿಬಿಟ್ಟು ಹೇಳದಿದ್ದರೂ ತಿಳಿದು, ಸಕಲ ಐಶ್ವರ್ಯಗಳನ್ನು ನೀಡಿದ ಕೃಷ್ಣ, ಗೆಳೆಯರ ಮನಸ್ಸನ್ನು ಅರಿಯುವ ಬಗೆಯನ್ನು ತಿಳಿಸಿಕೊಟ್ಟಿದ್ದಾನೆ. ಅರ್ಜುನನನ್ನು ಮಿತ್ರ ಎನ್ನುತ್ತಿದ್ದ ಕೃಷ್ಣ, ಆ ಸ್ನೇಹಕ್ಕಾಗಿ ಮಾಡಿದ ಸಹಾಯ ಕೂಡ ಅತಿ ದೊಡ್ಡ ಪಾಠ.
ಅಣ್ಣನ ಕರ್ತವ್ಯಕ್ಕೆ ಉದಾಹರಣೆ: ದ್ರೌಪದಿಯ ಕಷ್ಟದಲ್ಲಿ ವಸ್ತ್ರ ದಯ ಪಾಲಿಸಿದ, ಅಕ್ಷಯ ಪಾತ್ರೆ ನೀಡಿದ ಆ ಕೃಷ್ಣ ಹೆಣ್ಣುಮಕ್ಕಳ ಕಷ್ಟಕ್ಕೆ ಸ್ಪಂದಿಸಬೇಕಾದ ಅಣ್ಣನ ಕರ್ತವ್ಯಕ್ಕೊಂದು ಉದಾಹರಣೆಯಾದ.
ಯುದ್ಧ ಎಂಬುದು ಕೊನೆ ಆಯ್ಕೆ: ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಲು ತನ್ನಿಂದಾದ ಎಲ್ಲ ಪ್ರಯತ್ನವನ್ನೂ ಮಾಡಿದ ಕೃಷ್ಣ, ಯುದ್ಧ ಎಂಬುದು ದುಷ್ಟ ಜನರ ಅಂತ್ಯಕ್ಕಿರುವ ಕೊನೆ ಆಯ್ಕೆ ಎಂಬುದನ್ನು ತೋರಿಸಿಕೊಟ್ಟ.
ಅನ್ಯಾಯ ಎದುರಿಸದವರ ಮನೆಯ ಆತಿಥ್ಯಬೇಡ: ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದ ಕೃಷ್ಣ ಎಂಥ ಸಿರಿವಂತರು ಆಹ್ವಾನಿಸಿದರೂ ಕಡೆಗೆ ವಿದುರನ ಮನೆಗೆ ಹೋದ. ಆ ಮೂಲಕ ಒಂದು ಹೊತ್ತಿನ ಗಂಜಿಯಾದರೂ ಸರಿ, ಅದು ಸಜ್ಜನರ ಮನೆಯಲ್ಲಿ ತೆಗೆದುಕೊಳ್ಳಬೇಕು. ತಪ್ಪನ್ನು- ಅನ್ಯಾಯವನ್ನು ಎದುರಿಸದವರು ಶ್ರೀಮಂತರೇ ಆದರೂ ಅಂಥವರ ಮನೆಯ ಆತಿಥ್ಯ ಕೂಡದು ಎಂಬ ದೊಡ್ಡ ಸಂದೇಶವನ್ನೇ ನೀಡಿದ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ