ಅಕ್ಷರ ಆರಾಧನೆ-18: ಶ್ರೀಕೃಷ್ಣನಿಂದ ಉದ್ಧವನಿಗೆ ಉಪದೇಶ

Upayuktha
0

 || ವೃಷಾಕಪ್ಯಂತರ್ಗತ ಶ್ರೀ ಮಧುರಿಪವೇ ನಮಃ ||


ಗವಂತನ ಮಹಾನಿರ್ವಾಣ ಸಮಯದಲ್ಲಿ ಆಪ್ತಗೆಳೆಯ ಹಾಗೂ ಹತ್ತಿರದ ಬಂಧುವಾದ ಉದ್ಧವನು ಮಾತ್ರ ಜೊತೆಯಲ್ಲಿದ್ದ. ಶ್ರೀಕೃಷ್ಣನನ್ನು ಭಗವಂತ ಎಂದು ಅರಿತು ಕೊಂಡ ಜ್ಞಾನಿ ಆತ. ಯಾದವ ಕುಲದ ನಾಶದ ಬಗ್ಗೆ ತಿಳಿದು ಅವನಿಗೆ ದುಃಖವಾಗಿತ್ತು. ನೀನು ಯಾದವರನ್ನು ವಿನಾಶದಿಂದ ಏಕೆ ರಕ್ಷಿಸುವುದಿಲ್ಲೆಂದು ಉದ್ಧವ ಕೇಳಿದ.  ಯಾದವರು ಅಧಿಕಾರ. ಶೌರ್ಯ ಮತ್ತು ಅಹಂಕಾರದಿಂದ ಮತ್ತರಾಗಿದ್ದಾರೆ. ಹೀಗಾಗಿ ನಾನು ಇಹಲೋಕ ತ್ಯಾಗ ಮಾಡುವ ಮೊದಲು ಯದು ವಂಶವನ್ನು ನಾಶಮಾಡುವುದು ಅಗತ್ಯವಾಗಿದೆ ಎಂದು ಕೃಷ್ಣ ಹೇಳಿದ. 

ಉದ್ಧವನು ಕೃಷ್ಣನಿಗೆ ತನ್ನ ಅನೇಕ ಸಂದೇಹಗಳ ಬಗ್ಗೆ ಕೇಳುತ್ತಾನೆ. ಕೃಷ್ಣನು ಅವನಿಗೆ ವಿವರವಾಗಿ ಹೇಳಿ ಅವನ ಸಂದೇಹಗಳನ್ನು ನಿವಾರಿಸುತ್ತಾನೆ. 

ಉದ್ಧವ: ಸರ್ವ ಸಂಗ ತ್ಯಾಗವೇ ಸನ್ಯಾಸ. ಅದನ್ನು ಸಾಧಿಸುವ ಬಗ್ಗೆ ತಿಳಿಸು. 

ಕೃಷ್ಣ: ಗುರುವಿಲ್ಲದ ವಿದ್ಯೆ ಅನರ್ಥಕರ, ಗುರುವಿನಿಂದಲೇ ಜ್ಞಾನವನ್ನು ಸಂಪಾದಿಸಬೇಕು. ಕರ್ಮವನ್ನು ಫಲಾಪೇಕ್ಷೆಯಿಲ್ಲದೇ ಮಾಡಬೇಕು ನನಗೆ ಬಂಧವೂ ಇಲ್ಲ ಮೋಕ್ಷವೂ ಇಲ್ಲ. 

ನನ್ನ ಪ್ರತಿಮೆ ಪೂಜೆ, ನನ್ನ ಭಕ್ತರ ದರ್ಶನ ಸೇವೆ ಸ್ತುತಿ ಗಾನ ಸರ್ವ ಸಮರ್ಪಣೆ ನನಗೇ ಮಾಡಬೇಕು. ನನ್ನಲ್ಲಿ ಮಾಡುವ ಭಕ್ತಿಯೇ ದುಃಖಕ್ಕೆ ಪರಿಹಾರವು. ಭಗವಂತನ ವಿಷಯದ ಬಗ್ಗೆ ಅಜ್ಞಾನ ಇರುವವರೆಗೂ ಸಂಸಾರ ಬಂಧನ ಇರುತ್ತದೆ. ಸದಾ ನನ್ನನ್ನೇ ಸ್ಮರಿಸುವದರಿಂದ ಮನಸ್ಸು ನನ್ನಲ್ಲೇ ಆಸಕ್ತವಾಗುತ್ತದೆ. ನಾನು ಸಕಲ ಪ್ರಾಣಿಗಳಲ್ಲಿ ಅಂತರ್ಯಾಮಿಯಾಗಿದ್ದೇನೆ. ಸೃಷ್ಟ್ಯಾದಿಗಳನ್ನು ಮಾಡತಕ್ಕವ ನಾನೇ. ನನ್ನನ್ನೇ ಸರ್ವಶಬ್ದ ವಾಚ್ಯವೆಂದು ಧ್ಯಾನಿಸು. ನನ್ನ ಮುಖ, ತೋಳೂ, ತೊಡೆ ಮತ್ತು ಪಾದಗಳಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರಗಳೆಂಬ ನಾಲ್ಕು ವರ್ಣಗಳ ಸೃಷ್ಟಿಯಾಯಿತು. ಅಜ್ಞಾನಾಭಿವೃದ್ಧಿಯೇ ನರಕ: ದೊರೆತದ್ದರಲ್ಲಿ ತೃಪ್ತಿಯಿಲ್ಲದವನೇ ದರಿದ್ರನು. ಎಲ್ಲ ಶಾಸ್ತ್ರಗಳ ತಾತ್ಪರ್ಯ: ಹರಿಗೆ ಪ್ರಿಯವಾದುದೇ ಧರ್ಮ. ಮತ್ತು ಅವನಿಗೆ ಅಪ್ರಿಯವಾದುದೇ ಅಧರ್ಮ. ಶರೀರ ವಿನಾಶಿ ಎಂದು ತಿಳಿದು ಅಭಿಮಾನವನ್ನು ಬಿಟ್ಟು ಅಪರೋಕ್ಷ ಜ್ಞಾನವನ್ನು ಹೊಂದಬೇಕು. ಮಾಡಿದ ಸತ್ಕರ್ಮ ನನಗೇ ಅರ್ಪಿಸಿದರೇ ಪುಣ್ಯ ಲಭಿಸುತ್ತದೆ. ವೇದವು ನನಗೆ ಪ್ರಿಯವಾದ ಗೂಢಾರ್ಥವನ್ನು ಹೇಳುತ್ತದೆ. ವೇದಾರ್ಥ ತಿಳಿಯುವುದು ಅವಶ್ಯ. ಜೀವನು ಮೂರು ಕಾಲಗಳಲ್ಲಿ ಇರುವುದರಿಂದ ನಿತ್ಯನಾಗಿದ್ದಾನೆ. ಜೀವನಿಗೆ ದೇಹ ಯೋಗವೇ ಜನನ. ದೇಹ ವಿಯೋಗವೇ ಮರಣ. ದೇಹಧಾರಿಯಾಗಿ ಜೀವನೂ ಪರಮಾತ್ಮನೂ ಭಿನ್ನರೆಂದು ತಿಳಿದವನೇ ಮೋಕ್ಷಾದಿ ಪುರುಷಾರ್ಥ ಹೊಂದುವ. ಸೃಷ್ಟ್ಯಾದಿಗಳಲ್ಲಿ ನಾನು ಸ್ವತಂತ್ರ. ಸರ್ವ ಜಡ ಚೇತನರೂ ನನ್ನ ಆಧೀನರು. 

ಉದ್ಧವ: ಅಚ್ಯುತನೇ! ಮನಸ್ಸನ್ನು ಗೆಲ್ಲುವುದು ಕಷ್ಟ. ನಿನ್ನನ್ನು ಹೊಂದಲು ಸುಲಭವಾದ ಸಾಧನೆ ತಿಳಿಸು. 

ಶ್ರೀಕೃಷ್ಣ: ಉದ್ಧವಾ! ನಿನ್ನ ಪ್ರಶ್ನೆ ಯೋಗ್ಯವಾಗಿದೆ. ನನ್ನ ಸುಲಭವಾಗಿ ಹೊಂದಲು ಭಾಗವತ ಧರ್ಮಗಳನ್ನು ಅನುಷ್ಠಾನ ಮಾಡಬೇಕು. ಎಲ್ಲ ವಿಹಿತ ಕರ್ಮಗಳನ್ನೂ ನನ್ನ ಪ್ರೀತ್ಯರ್ಥವಾಗಿ ಮಾಡುವುದನ್ನು ಮೊದಲು ಅಭ್ಯಾಸಮಾಡಬೇಕು. ದೇಹವು ಹರಿಯ ಮಂದಿರವೆಂದು ತಿಳಿಯಬೇಕು. 

ನಿಷ್ಕಾಮಕರ್ಮಕ್ಕೆ ಮೋಕ್ಷವೇ ಫಲ. ಬ್ರಹ್ಮ ಪ್ರತಿಪಾದಕ ಶಾಸ್ತ್ರವನ್ನು ಯಾರು ನನ್ನ ಭಕ್ತರಿಗೆ ಉಪದೇಶ ಮಾಡುವರೋ ಅವರು ನನ್ನನ್ನೇ ಹೊಂದುವರು. ಆದರೆ ಇದನ್ನು ನಾಸ್ತಿಕರಿಗೆ, ಡಾಂಭಿಕರಿಗೆ ಹೇಳಬಾರದು. ಹೇರಳವಾದ ಹಣ ಸಿಗುವುದೆಂದು ಎಲ್ಲೆಂದರಲ್ಲಿ ನನ್ನ ಕಥಾಶ್ರವಣ ಮಾಡಿಸಬಾರದು. ಸಜ್ಜನರು ಮಾತ್ರ ಕೇಳಲು ಅರ್ಹರು. 

ಶುಕರು: ಕೃಷ್ಣ ಉದ್ಧವನಿಗೆ ``ನಿನ್ನ ಸಂದೇಹಗಳೆಲ್ಲ ನಿವಾರಣೆ ಅಯಿತಲ್ಲವೇ?'' ಎಂದು ಕೇಳಿದಾಗ ಉದ್ಧವನು ಆನಂದ ಬಾಷ್ಪಗಳನ್ನು ಸುರಿಸುತ್ತಾ ಕೃಷ್ಣನ ಪಾದಗಳಿಗೆ ಹಣೆಯನ್ನು ಚಾಚಿ ಸಾಷ್ಟಾಂಗ ನಮಸ್ಕಾರವನ್ನು ಮಾಡಿದನು. ಉದ್ಧವನು ಕೃಷ್ಣನ ಪಾದುಕೆಗಳನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡು ಬದರಿಗೆ ಹೊರಟು ಹೋದನು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top