ಎಲ್ಲಿ ಮಾನವ ಶಕ್ತಿಗೆ ಪೂರ್ಣವಿರಾಮವಾಗುತ್ತೋ, ಅಲ್ಲಿಂದಲೇ ಪ್ರಾರಂಭ ಭಗವಂತನ ಅದ್ಭುತ ಶಕ್ತಿಯ ಪ್ರದರ್ಶನ. ತಾನು ಎಲ್ಲವನ್ನೂ ಮೀರಿದವನು ಎಂದು ತೋರಿಸಲು ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದ.
ಬಾಲ್ಯದಲ್ಲೂ ತಾಯಿಯಾದ ಯಶೋದೆಗೆ ತನ್ನ ಅದ್ಭುತರೂಪದ ಪರಿಚಯ ಮಾಡಿದ. ಬಾಯಲ್ಲೇ ಬ್ರಹ್ಮಾಂಡವನ್ನು ತೋರಿ ತಾಯಿಯನ್ನು ಸಂತೋಷ ಮತ್ತು ಆಶ್ಚರ್ಯ ಚಕಿತಳನ್ನಾಗಿ ಮಾಡಿದ. ಕಣ್ಣುಕಾಣದ ಕುರುಡನಾದ ಧೃತರಾಷ್ಟ್ರನಿಗೂ ತನ್ನ ವಿಶ್ವರೂಪವನ್ನು ತೋರಿ ಅವನನ್ನು ಅನುಗ್ರಹಿಸಿದ ಶ್ರೀಕೃಷ್ಣ. ಭಗವಂತ ಯಾರಿಗೆ ಯಾವಾಗ ಹೇಗೆ ಒಲಿಯು ವನೋ ಹೇಳಲು ಆಗದು. ಅದೇ ಅವನ ಲೀಲೆಕೂಡ ಆಗಿದೆ.
ಕುರುಕ್ಷೇತ್ರ ರಣಾಂಗಣದಲ್ಲಿ ಅರ್ಜುನನಿಗೆ ಕೃಷ್ಣನು ಉಪದೇಶ ಮಾಡಿದ. ಅವನ ಕರ್ತವ್ಯ ವನ್ನು ತಿಳಿಸಿದ. ಅದು ಇಂದಿಗೂ, ಎಂದಿಗೂ ಎಲ್ಲ ಜೀವಿಗಳಿಗೂ ಸಾಧನೆಗೆ ಮಾರ್ಗದರ್ಶನವಾಗಿದೆ. ಶ್ರೀಕೃಷ್ಣನು ಉದ್ಭವನಿಗೆ ಮಾಡಿದ ಉಪದೇಶವೂ ಅದ್ಭುತವಾಗಿದೆ. ಜೀವನು ಸಂಸಾರದಿಂದ ಮುಕ್ತನಾಗುವ ವಿಧಾನವನ್ನು ಉದ್ಧವನಿಗೆ ಬೋಧಿಸಿದನು.
ಸಾಮಾನ್ಯರಲ್ಲಿ ಸಾಮಾನ್ಯವಾಗಿ ಜನಿಸಿ, ಅಸಾಮಾನ್ಯ ಕಾರ್ಯಗಳನ್ನು ಮಾಡಿ ತನ್ನ ದೇವತಾ ಶಕ್ತಿಯ ಪರಿಚಯ ಮಾಡಿಸಿದ ಶ್ರೀಕೃಷ್ಣನು. ಇದನ್ನು ಅರಿತವರು ಸಾಧನೆಮಾಡಿ ಉದ್ಧಾರ ಹೊಂದಿದರು. ಅರಿಯದವರು ಮತ್ತೆ ಸಂಸಾರದ ಬಂಧನದಲ್ಲಿ ಸಿಲುಕಿ ನರಳಿದರು. ಮಾನವನಾಗಿ ಮಾಡಬೇಕಾದ ಕಾರ್ಯಗಳನ್ನು ಕೃಷ್ಣ ಮಾಡಿ ತೋರಿಸಿದ. ಎಲ್ಲ ರೀತಿಯ ಕಾರ್ಯಗಳಲ್ಲೂ ತನ್ನ ಉತ್ಕೃಷ್ಟತೆಯಿಂದ ಇತರರಿಗೆ ಮಾರ್ಗದರ್ಶಕನಾದ. ಶ್ರೀಕೃಷ್ಣನ ಅವತಾರವಾಗದೇ ಇದ್ದಿದ್ದರೆ, ನಾವು ಭಗವಂತನನ್ನು ಇಷ್ಟು ಗಾಢವಾಗಿ ಅರಿಯಲು ಸಾಧ್ಯವಾಗುತ್ತಿರಲಿಲ್ಲ. ಶ್ರೀಕೃಷ್ಣನು ಈ ದೇಶದಲ್ಲೇ ಅವತಾರ ಮಾಡಿರುವುದು ನಮಗೆಲ್ಲಾ ಹೆಮ್ಮೆಯ ಅಭಿಮಾನದ ಸಂಗತಿಯಾಗಿದೆ.
ಶ್ರೀಕೃಷ್ಣನ ಅವತಾರ ಕಾಲದಲ್ಲೇ ಬಾಳಿ ಬದುಕಿದವರು ನಿಜಕ್ಕೂ ಧನ್ಯರು, ಅವನನ್ನು ಅರಿತು ಸಂತಸಪಟ್ಟವರು ಪುಣ್ಯಶಾಲಿಗಳು. ಅಂಥವರು ಬಾಳಿದ ನಾಡಿನಲ್ಲಿ ನಾವೂ ಹುಟ್ಟಿ ಬಂದಿರುವುದೂ ಒಂದು ಪುಣ್ಯ ವಿಶೇಷ ಅಥವಾ ಯೋಗಾಯೋಗವೆಂದೇ ಹೇಳಬಹುದು. ನಾವೂ ಸದಾಚಾರದಿಂದ ಬಾಳಿ ಮುಕ್ತಿಯ ಪಥದಲ್ಲಿ ನಡೆದರೆ ನಮ್ಮ ಬಾಳು ಧನ್ಯ. ಶ್ರೀಕೃಷ್ಣನ ಚರಿತ್ರೆಯನ್ನು ಕೇಳಿದ್ದಕ್ಕೂ ಸಾರ್ಥಕವೆನಿಸುತ್ತದೆ.
ದಾಸರ ಪದಗಳು- ಹೀಗೆ ಹಲವು ಕೃತಿಗಳು ಅವನ ಬಾಲ್ಯವನ್ನು ಹೃದಯಂಗಮವಾಗಿ ಚಿತ್ರಿಸಿವೆ. ಮಾನುಷಸಂಬಂಧಗಳ ಎಲ್ಲ ಕೊಂಡಿಗಳಿಗೂ ಒದಗುವಂಥವನು ಕೃಷ್ಣ. ಅವನ ಈ ಸಂಬಂಧ ಸೂತ್ರವನ್ನು ಕುಮಾರವ್ಯಾಸನ ಪದ್ಯ 'ವೇದಪುರುಷನ ಸುತನ ಸುತನ...' ತುಂಬ ಧ್ವನಿ ಪೂರ್ಣವಾಗಿ ಎತ್ತಿಹಿಡಿದಿದೆ. ಲೌಕಿಕ ಸಂಬಂಧಗಳ ಜೊತೆಯಿದ್ದೂ ಆ ಎಲ್ಲ ಸಂಬಂಧ ಗಳನ್ನು ಮೀರಿದ ತತ್ತ್ವವೇ ಶ್ರೀ ಕೃಷ್ಣತತ್ತ್ವ ಎಂಬುದು ಆ ಪದ್ಯದ ತಾತ್ಪರ್ಯದಂತಿದೆ. ಮಗು ವಾಗಿ, ಸ್ನೇಹಿತನಾಗಿ, ಪ್ರೇಮಿಯಾಗಿ, ಸಹೋದರ ನಾಗಿ, ಶಿಷ್ಯನಾಗಿ, ಗುರುವಾಗಿ- ಕೊನೆಗೆ ನಮ್ಮೆಲ್ಲರ ಜೀವನರಥದ ಸಾರಥಿಯಾಗಿರುವವನೇ ಅವನು. ಅವನನ್ನು ಒಲಿಸಿಕೊಳ್ಳುವುದು ಕೂಡ ಸುಲಭ: `ಎಲೆ, ಹೂವು, ಹಣ್ಣು, ಕೊನೆಗೆ ನೀರು - ಹೀಗೆ ಯಾವುದ ನ್ನಾದರೂ ಸರಿಯೇ. ಒಳ್ಳೆಯ ಹೃದಯದಿಂದ ಅವನಿಗೆ ಅರ್ಪಿಸಿದರೆ, ಅವನು ಒದಗಬಲ್ಲ' ಎಂದು ಅವನೇ ಘೋಷಿಸಿದ್ದಾನೆ. ಅವನನ್ನು ಸಂಭ್ರಮದಿಂದ ಸ್ಮರಿಸಿಕೊಳ್ಳುವ, ಆರಾಧಿಸುವ ಪರ್ವವೇ `ಗೋಕುಲಾಷ್ಟಮೀ'.
ಕೃಷ್ಣ ಕಡು ಚೆಲುವ, ಆತ ಸಿರಿವಂತ, ಬಿಜ್ಜಳ, ಬಿಜ್ಜೆವಳ, ಬಯಸಿದೆಲ್ಲ ಕೈತುದಿಯಲ್ಲಿದ್ದರೂ ಮತ್ತನಾಗಲಿಲ್ಲ. ಎಲ್ಲರಂತೆ ಸಹಜವಾಗಿ, ತೆರೆದ ಪುಸ್ತಕವಾಗಿ ತುಂಬಿದ ಕೌಟುಂಬಿಕ ಜೀವನ ನಡೆಸಿದ. ಅಪ್ಪ, ಗಂಡ, ತಮ್ಮ, ಬಂಧು ಸ್ನೇಹಿತ ಎಲ್ಲವೂ ಆಗಿ ತನ್ನ ಕರ್ತವ್ಯವನ್ನು ಚೆನ್ನಾಗಿ ನೆರವೇರಿಸಿದ. ಪಾಂಡವರ ರಾಜಸೂಯ ಮಹಾ ಯಾಗದಲ್ಲಿ ಬಂದ ಅತಿಥಿಗಳ ಕಾಲು ತೊಳೆದು ಸತ್ಕರಿಸಿದ. ಪಾಂಡವರು ಕಾಡಾಡಿಗಳಾದಾಗ ಭೇಟಿಯಾಗಿ ಧೈರ್ಯ ತುಂಬಿದ. ಮುಂದೆ ಅವರಿಗಾ ಗಿಯೆ ರಾಜದೂತನಾದ. ಸಂಧಾನಕ್ಕೆ ಬಂದಾಗ ವಿದುರನ ಮನೆಯಲ್ಲಿ ಗಂಜಿ ಕುಡಿದ. ಬಾಲ್ಯಮಿತ್ರ ಕುಚೇಲನ ಬಡತನ ನೀಗಿದ. ಸಾಮಾನ್ಯರೊಡನೆ ಸಾಮಾನ್ಯವಾಗಿ ಬೆರೆತ. ನಲಿದ. ಸಿರಿತನಕ್ಕೆ ಸರಳತೆಯ ಒಡವೆ ತೊಡಿಸಿ ತನ್ನ ಸೂಜಿಗಲ್ಲಿನ ವ್ಯಕ್ತಿತ್ವದ ಗುಟ್ಟು ಬಿಟ್ಟುಕೊಟ್ಟ. ಗಮನಿಸಿ ನೋಡಿ, ಸಾವಿರಾರು ಕೋಟಿ ರು. ವ್ಯವಹಾರ ನಡೆಸುವ ಬೃಹತ್ ಕಂಪನಿಗಳನ್ನು ಕಟ್ಟಿದ ಯಶಸ್ವಿ ನಾಯಕರು ಯಾವತ್ತೂ ತಲೆಗೆ ಕೈ ಕೊಟ್ಟು ಕುಳಿತು ಕೊಳ್ಳುವುದಿಲ್ಲ. ಒತ್ತಡಕ್ಕೆ ಸಿಲುಕಿ ಕೊಂಡರೆ ಎಲ್ಲ ಕೆಲಸಗಳೂ ಹಾಳಾಗುತ್ತವೆ ಎಂಬುದು ಅವರಿಗೆ ತಿಳಿದಿದೆ. ಹಾಗೆಯೇ, ಮಹಾಭಾರತದಲ್ಲಿ ಕೃಷ್ಣನನ್ನು ಬೃಹತ್ ಪಾತ್ರ ನಿಭಾಯಿಸಿದವರು ಯಾರೂ ಇಲ್ಲ. ಅವನಷ್ಟು ಕೆಲಸ ಮಾಡಿದವರೂ ಬೇರೆಯಿಲ್ಲ. ಅದೇ ವೇಳೆ, ಅವನಷ್ಟು ಆಟ ಆಡಿದವರು, ಅವನಷ್ಟು ಖುಷಿಯಾಗಿದ್ದವರೂ ಇಲ್ಲ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ