ಮಂಗಳೂರು ತಾಲೂಕು ಮಟ್ಟದ “ವಿಶ್ವ ಜನಸಂಖ್ಯಾ ದಿನಾಚರಣೆ-2023”ಯಲ್ಲಿ ಜಿಲ್ಲಾಧಿಕಾರಿ ಅಭಿಮತ
ಮಂಗಳೂರು: ಜನಸಂಖ್ಯೆ ನಿಯಂತ್ರಣ ಒಂದು ಸಹಜ ಪ್ರಕ್ರಿಯೆಯಾಗಿರಬೇಕು. ಮಾನವ ಕುಲದ ಉಳಿವಿಗೆ, ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಅತ್ಯಗತ್ಯ. ನೈಸರ್ಗಿಕ ಸಂಪನ್ಮೂಲಗಳ ಉಳಿಕೆ- ಬಳಕೆಗೆ, ಅದನ್ನು ನಮ್ಮ ಮುಂದಿನ ಜನಾಂಗಕ್ಕೆ ಹಸ್ತಾಂತರಿಸಲು ಇದು ಅನಿವಾರ್ಯ, ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಸ್ನಾತಕೋತ್ತರ ವಿಭಾಗಗಳ ಸಹಯೋಗದೊಂದಿಗೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಂಗಳೂರು ತಾಲೂಕು ಮಟ್ಟದ “ವಿಶ್ವ ಜನಸಂಖ್ಯಾ ದಿನಾಚರಣೆ-2023” ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಂಖ್ಯೆ ನಿಯಂತ್ರಣ ಒಂದು ಸಹಜಪ್ರ ಕ್ರಿಯೆಯಾಗಬೇಕು. ಇಲ್ಲವಾದರೆ ಅದು ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಎಂ ಮಾತನಾಡಿ, ಕುಟುಂಬದ ಆರೋಗ್ಯಕ್ಕೂ ಕುಟುಂಬದ ಆರೋಗ್ಯಕ್ಕೂ ಸಂಬಂಧವಿದೆ ಎಂದು ಅಭಿಪ್ರಾಯಪಟ್ಟರು. ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಮಾತನಾಡಿ, ಎರಡು ಮಕ್ಕಳ ಜನನದ ನಡುವೆ ಆರೋಗ್ಯಕರ ಅಂತರ ಕಾಪಾಡಿಕೊಳ್ಳುವುದು ತಾಯಿಗೂ ಮಗುವಿಗೂ ಒಳ್ಳೆಯದು, ಎಂದರು.
ಕಾರ್ಯಕ್ರಮದ ಭಾಗವಾಗಿ ಮಂಗಳೂರು ತಾಲೂಕು ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಿವಿ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ರಾಮಕೃಷ್ಣ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು ಅತಿಥಿಗಳನ್ನು ಸ್ವಾಗತಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರೊಬೆಷನರಿ ಜಿಲ್ಲಾಧಿಕಾರಿ ಮುಕುಲ್ ಜೈನ್, ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳಾದ ಪ್ರೊ. ಯತೀಶ್ ಕುಮಾರ್, ಡಾ. ಜಯರಾಜ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯವಂತ್ ನಾಯಕ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಅಬೋಬಕ್ಕರ್ ಸಿದ್ಧಿಕ್, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಗಾಯತ್ರಿ ಹಾಗೂ ಡಾ. ಸುರೇಶ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ