ಕೃಷಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ವಿತರಿಸಿ: ಉಡುಪಿ ಜಿಪಂ ಸಿ.ಇ.ಓ ಪ್ರಸನ್ನ ಹೆಚ್

Upayuktha
0

ಉಡುಪಿ: ಜಿಲ್ಲೆಯ ಎಲ್ಲಾ ಬ್ಯಾಂಕುಗಳು ಕೃಷಿಕರಿಗೆ ಕೃಷಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು ವಿತರಿಸುವುದರ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಮತ್ತು ಕೃಷಿ ಸಾಲದ ಪ್ರಗತಿಗೆ ಆದ್ಯತೆ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ತಿಳಿಸಿದರು

ಅವರು ಮಂಗಳವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬ್ಯಾಂಕ್‍ನಲ್ಲಿ ಲಭ್ಯವಿರುವ ಸಾಲದ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೃಷಿಕರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಹಾಗೂ ಈ ಸಾಲ ಕೋರಿ ರೈತರು ಬ್ಯಾಂಕ್‍ಗಳಿಗೆ ಸಲ್ಲಿಸುವ ಸಾಲದ ಅರ್ಜಿಗಳನ್ನು ಬ್ಯಾಂಕ್‍ಗಳು ಪರಿಶೀಲಿಸಿ, ಅವರಿಗೆ ಶೀಘ್ರದಲ್ಲಿ ಸಾಲ ಮಂಜೂರು ಮಾಡುವ ಮೂಲಕ ಜಿಲ್ಲೆಯ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನೆರವು ನೀಡುವಂತೆ ತಿಳಿಸಿದ ಸಿಇಓ, ಕಳೆದ ಸಾಲಿನಲ್ಲಿ ಕೃಷಿ ಮೂಲಭೂತ ಸೌಕರ್ಯಗಳಿಗೆ ನಿಗಧಿಪಡಿಸಿದ್ದ 311.39 ಕೋಟಿ ರೂ. ಆರ್ಥಿಕ ಗುರಿಯಲ್ಲಿ ಅತ್ಯಂತ ಕಡಿಮೆ ಸಾಧನೆ ತೋರಿರುವ ಬ್ಯಾಂಕ್‍ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


ನಬಾರ್ಡ್ ಮೂಲಕ ಕೃಷಿಕರು ಗೋದಾಮುಗಳನ್ನು ನಿರ್ಮಿಸಿಕೊಳ್ಳಲು ಸಾಲ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯುವಂತೆ ನಬಾರ್ಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದರು.


ಪಿಎಂ ಸ್ವನಿಧಿ ಯೋಜನೆಯ ಸಾಲ ವಿತರಣೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಬಾಕಿ ಇರುವ ಇತರೇ ಅರ್ಜಿಗಳನ್ನು ತಕ್ಷಣದಲ್ಲೇ ಸಾಲ ವಿತರಿಸುವಂತೆ ಹಾಗೂ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ  ಜಿಲ್ಲೆಯು  ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದ್ದು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಬಾಕಿ ಇರುವ ಇತರೇ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇ ಮಾಡುವಂತೆ ತಿಳಿಸಿದರು.


ಕೃಷಿ ಹಾಗೂ ತೋಟಗಾರಿಕೆ ಬೆಳೆ ವಿಮೆ ನೊಂದಣಿ ಕುರಿತಂತೆ ರೈತರಿಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ವಿಮೆಗೆ ನೋಂದಣಿ ಮಾಡುವಂತೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಮೀನುಗಾರಿಕಾ ಚಟುವಟಿಕೆಗಳಿಗೆ ಸಾಲ ನೀಡುವಂತೆ ನಿರ್ದೇಶನ ನೀಡಿದರು.


ಕೆನರಾ ಬ್ಯಾಂಕ್ ಪ್ರಾದೇಶಿಕ ಮೆನೇಜರ್ ಶೀಬಾ ಸೆಹಜಾನ್ ಮಾತನಾಡಿ, 2023 ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಕಳೆದ ಸಾಲಿಗಿಂತ 11.08 % ಬೆಳವಣಿಗೆಯಾಗಿದ್ದು, 52,523 ಕೋಟಿ ರೂ. ವ್ಯವಹಾರ ನಡೆದಿದ್ದು, ಸಾಲ ವಿತಣೆಯಲ್ಲಿ 13.78% ಬೆಳವಣಿಗೆಯಾಗಿದ್ದು, 17,265 ಕೋಟಿ ರೂ. ಸಾಲ ವಿತರಿಸಲಾಗಿದೆ. 35,258 ಕೋಟಿ ರೂ. ಠೇವಣಿ ಸಂಗ್ರಹಿಸಿ, 9.81% ಬೆಳವಣಿಗೆಯ ಸಾಧನೆ ಮಾಡಲಾಗಿದೆ ಎಂದರು.


ಪಿಎಂ ಸ್ವನಿಧಿ ಯೋಜನೆಯಲ್ಲಿ 133% ಸಾಧನೆ ಮಾಡಿದ್ದು, 3,049 ಮಂದಿಗೆ ಸಾಲ ವಿತರಣೆಯ ಗುರಿಗೆ 4,046 ಮಂದಿಗೆ ಸಾಲ ವಿತರಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ 267% ಸಾಧನೆ ಮಾಡಿದ್ದು, 180 ಮಂದಿಗೆ ಸಾಲ ವಿತರಣೆಯ ಗುರಿಗೆ 481 ಮಂದಿಗೆ ಸಾಲ ವಿತರಣೆ ಮಾಡಲಾಗಿದೆ. ದುರ್ಬಲ ವಲಯಕ್ಕೆ 1925.52 ಕೋಟಿ ರೂ., 3462 ಕೋಟಿ ರೂ. ಮಹಿಳಾ ಫಲಾನುಭವಿಗಳಿಗೆ, ಮುದ್ರಾ ಯೋಜನೆಯಡಿ 522 ಕೋಟಿ ರೂ. ವಿತರಿಸಲಾಗಿದ್ದು, ಜುಲೈ 2023 ರ ಒಳಗೆ ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳನ್ನು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆಗೆ ಒಳಪಡಿಸುವ ಮೂಲಕ ಅವರ ಕುಟುಂಬಗಳಿಗೆ ಸುರಕ್ಷತೆ ಒದಗಿಸಲು ಎಲ್ಲಾ ಬ್ಯಾಂಕುಗಳು ಆದ್ಯತೆ ನೀಡಬೇಕು ಎಂದರು.


ರಿಸರ್ವ್ ಬ್ಯಾಂಕ್‍ನ ಮುರಳಿ ಮೋಹನ್ ಪಾಟಕ್ ರಿಸರ್ವ್ ಬ್ಯಾಂಕ್‍ನ ಹೊಸ ನಿಯಮಗಳು ಮತ್ತು ಆದೇಶಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ನಬಾರ್ಡ್ ಬ್ಯಾಂಕ್ ಸಂಗೀತಾ ಕಾರ್ಥಾ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‍ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.  ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್ ಪಿ.ಎಂ. ಪಿಂಜಾರ ಸ್ವಾಗತಿಸಿದರು.   

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆ ಅರ್ಜಿಗಳನ್ನು ಮಂಜೂರು ಮಾಡಿದ ಬ್ಯಾಂಕ್‍ಗೆ ಅಭಿನಂದಿಸಲಾಯಿತು. 

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top