ನುಡಿನಮನ: ಜೀವಕಾರುಣ್ಯ, ಬದ್ಧತೆಗೆ ಮತ್ತೊಂದು ಹೆಸರು ಊಮ್ಮನ್ ಚಾಂಡಿ

Upayuktha
0

ನನ್ನ ರಾಜಕೀಯ ಜೀವನ ಯಾತ್ರೆಯ ಮಾರ್ಗದರ್ಶಕರಾಗಿದ್ದವರು. ನನ್ನನ್ನು ಅಪಾರವಾಗಿ ಅಕರ್ಷಿಸುವಂತೆ ಮಾಡಿದ್ದು ಅವರ ನಿಷ್ಕಳಂಕ ವ್ಯಕ್ತಿತ್ವ, ಆ ಮುಗ್ದ ನಗು, ಜತೆಗೆ ನಿಂತವರ ಕುರಿತ ಕಾಳಜಿ ಹಾಗೂ ಪ್ರತಿಬದ್ಧತೆ. ಕಳೆದ 20 ವರ್ಷಗಳ ಅವರ ಜೊತೆಗಿನ ಒಡನಾಟದಲ್ಲಿ ನಾನು ಕಲಿತುಕೊಂಡಿದ್ದು ಅಪಾರ.

ಅವರು ಕೇರಳದ ಮುಖ್ಯಮಂತ್ರಿಯಾಗಿದ್ದಾಗ ನಾನು ಮಂಜೇಶ್ವರ ಬ್ಲಾಕ್ ಪಂಚಾಯತು ಉಪಾಧ್ಯಕ್ಷನಾಗಿದ್ದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೇಶ್ವರ ಕ್ಷೇತ್ರದ ನೂರಾರು ಜನ ರೋಗಿಗಳಿಗೆ ಕೋಟ್ಯಾಂತರ ರೂ. ಧನ ಸಹಾಯ ದೊರಕಿಸಿಕೊಡಲು ನನಗೆ ಸಾಧ್ಯವಾದುದನ್ನು ಮರೆಯಲಸಾಧ್ಯ. ನನ್ನ ಎಲ್ಲಾ ಅರ್ಜಿಗಳನ್ನು ಖುದ್ದಾಗಿ ಪರಿಶೀಲಿಸಿ, ಗರಿಷ್ಠ ಚಿಕಿತ್ಸಾ ಸಹಾಯ ದೊರಕಿಸಿದ ಜೀವಕಾರುಣ್ಯ ಜೀವಿಯಾಗಿದ್ದರು. ನಾನು ಜಿ.ಪಂ. ಚುನಾವಣೆಗೆ ನಿಂತ ಸಂದರ್ಭದಲ್ಲಿ ಪ್ರತಿ ಥಿನವೂ ಕರೆಮಾಡಿ ನನ್ನನ್ನು ಎಚ್ಚರಿಸುತ್ತಿದ್ದರು. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ತಲಪಾಡಿ ಗಡಿ ಪ್ರದೇಶದಲ್ಲಿ ಸಿಲುಕಿದ ಕೇರಳೀಯರಿಗೆ ಅಪಾರ ನೆರವಾದವರು ಊಮ್ಮನ್ ಚಾಂಡಿ. ಆ ಸಂದರ್ಭದಲ್ಲಿ ಗಡಿಭಾಗದಲ್ಲಿ ಸಮಸ್ಯೆ ಅನುಭವಿಸುತ್ತಿದ್ದ ಪ್ರಯಾಣಿಕರ ಪರವಾಗಿ ಮಧ್ಯರಾತ್ರಿ ಕೂಡಾ ನನಗೆ ಕರೆ ಮಾಡುತ್ತಿದ್ದ ಆ ಮನುಷ್ಯನ ಕಾರ್ಯತತ್ಪರತೆ, ಕಾಳಜಿ, ನನ್ನನ್ನು ದಿಗಿಲುಗೊಳಿಸಿತ್ತು. 


ಊಮ್ಮನ್ ಚಾಂಡಿ ಯಾವತ್ತೂ ಕೋಪೋದ್ರಿಕ್ತರಾಗಿದ್ದನ್ನು ನಾನು ಕಂಡಿದ್ದಿಲ್ಲ. ನಾನು ನನ್ನ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಈ ಹಂತಕ್ಕೆ ತಲುಪಿದ್ದು ಊಮ್ಮನ್ ಚಾಂಡಿಯವರ ಆ ಪ್ರೋತ್ಸಾಹದಿಂದಲೇ ಎಂಬುದನ್ನು ಯಾವತ್ತೂ ಎದೆತಟ್ಟಿ ಹೇಳಬಲ್ಲೆ. 


ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಧ್ಯಯನ ವರದಿ ರೂಪಿಸಲು ಪ್ರಭಾಕರ ಆಯೋಗವನ್ನು ರೂಪಿಸಿ, ಆ ವರದಿಯಾಧಾರದಲ್ಲಿ ಕಾಸರಗೋಡು ಡೆವಲಪ್ ಮೆಂಟ್ ಪ್ಯಾಕೇಜನ್ನು ಪ್ರಾರಂಭಿಸಿದ್ದು, ಜಿಲ್ಲೆಯ ಎಂಡೋಸಲ್ಫಾನ್ ಬಾಧಿತರಿಗೆ ಜೀವನಾಧಾರವನ್ನು ಒದಗಿಸಿಕೊಟ್ಟಿದ್ದು, ಮಂಜೇಶ್ವರ ತಾಲೂಕು ಘೋಷಣೆ ಮಾಡಿದ್ದು- ಹೀಗೆ ನಮ್ಮ ಜಿಲ್ಲೆಯ ಜನತೆಯ ಉಸಿರಿಗೆ ಉಸಿರಾಗಿದ್ದ ಊಮ್ಮನ್ ಚಾಂಡಿ ಯಾವತ್ತೂ ಅವಿಸ್ಮರಣೀಯರಾಗಿಯೇ ನಮ್ಮ ಮನಪಟಲದಲ್ಲಿ ಉಳಿಯುತ್ತಾರೆ.


ಅಗಲಿದ ಅವರನ್ನು ಕೊನೆಯ ಬಾರಿ ಅವರನ್ನು ಕಾಣಬೇಕೆಂಬ ನನ್ನ ಅದಮ್ಯ ಬಯಕೆ ಈಡೇರಿದೆ. ಕೇರಳ ನಾಡು ಓರ್ವ ಅಪರೂಪ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡಿದೆ. ಪಾಠ ಪುಸ್ತಕದಂತಿದ್ದ ಅವರ ಬದುಕು ಯಾವತ್ತೂ ಕೂಡ ರಾಜಕಾರಣಿಗಳಿಗೆ ಮಾರ್ಗದರ್ಶಿಯಾಗಲಿದೆ. ಸದಾ ನಗು ನಗುತ್ತಲೇ ಇದ್ದ ಊಮ್ಮನ್ ಚಾಂಡಿ ಅದೆಷ್ಟೋ ನೋವು ಅನುಭವಿಸಿದವರು. ಆ ನೋವುಗಳನ್ನು ನುಂಗಿ ಅದೆಷ್ಟೋ ನೊಂದ ಜೀವಗಳಿಗೆ ಸಾಂತ್ವನ ಸ್ಪರ್ಶವಾಗಿದ್ದವರು. 

ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. 

-ಹರ್ಷಾದ್ ವರ್ಕಾಡಿ, ಮಂಜೇಶ್ವರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top