ಸವಿರುಚಿ: "ನಾನೂ ಮಾಡಿದೆ, ಝೀರೋ ರೈಸ್ ಹಕಾ ದೋಸೆ"

Upayuktha
0

ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ನನ್ನ ನೆರೆಮನೆಯ ಗೀತಾ ಶಿವಪ್ರಕಾಶರ ಮಾತು ಮೇಲಿನದು.


ಅವರ ತೋಟದಲ್ಲಿ ಮಳೆಗಾಲದಲ್ಲಿ ಇನಿತೂ ನೀರೆಳೆಯದ ಹಲಸಿನ ಮರವಿದೆ. ಅದರ ಸೊಳೆ ಅರೆದು ದೋಸೆ ಪ್ರಯೋಗ ನಡೆಸಿದರು. ಹುರ್‍ರೇ!


ಅಕ್ಕಿಯನ್ನೇ ಸೇರಿಸದ ದೋಸೆ ಚೆನ್ನಾಗಿ ಎದ್ದು ಬಂತು. ತೆಳ್ಳಗೆ, ಗರಿಗರಿಯೂ ಇತ್ತು!


"ಬಿಸಿಬಿಸಿ ತಿನ್ನಲು ಈ ಅಕ್ಕಿರಹಿತ ಹಲಸಿನ ಕಾಯಿ (ಹಕಾ) ದೋಸೆ ಉತ್ತಮ. ಮಾಡಿ ಸ್ವಲ್ಪ ಹೊತ್ತಿನ ಮೇಲೆ ತಿನ್ನುವುದಾದರೆ ಗರಿಗರಿತನ ಬರಲು ಒಂದಷ್ಟು ಅಕ್ಕಿ ಸೇರಿಸಿದರೆ ಲಾಯಕು” ಎನ್ನುತ್ತಾರೆ ಗೀತಾ.


ಹಲವು ಅನುಭವಿಗಳಿಂದ ಹರಿದುಬಂದ ಹಕಾ ದೋಸೆ ಬಗೆಗಿನ ಅನುಭವ ಸಾರ ಕೆಳಗಿನಂತಿದೆ. 


ಎಲ್ಲ ಗೃಹ ವಿಜ್ಞಾನಿಗಳಿಗೂ ನಮೋ.


• ಹಲಸಿನಕಾಯಿ ಸೊಳೆ ಮಾತ್ರ ಹಾಕಿ ದೋಸೆ ಮಾಡಬೇಕಾದರೆ, ಆಯ್ದ ಮರದ್ದು ಮಾತ್ರ ಸಾಧ್ಯ.ಸ್ವಲ್ಪ ಅಕ್ಕಿ ಸೇರಿಸಿ ಮಾಡುವುದಾದರೆ ಯಾವ ಹಲಸು ಆದರೂ ಓಕೆ.


• ಎಲ್ಲ ಹಲಸಿನಕಾಯಿಂದಲೂ ದೋಸೆ ಮಾಡಬಹುದು.ಆದರೆ ಹಿಟ್ಟು ತಯಾರಿಸಿ ಬಹಳ ಹೊತ್ತು ಕಳೆದರೆ ದೋಸೆ ಏಳುವುದಿಲ್ಲ. ಸ್ವಲ್ಪ ಅಕ್ಕಿ ಸೇರಿಸಿ ಹಿಟ್ಟು ಮಾಡಿದರೆ ರಾತ್ರಿ ಮಾಡಿದ ಹಿಟ್ಟಿನಿಂದ ಬೆಳಗಿನ ಉಪಾಹಾರಕ್ಕೆ ಗರಿಗರಿ ದೋಸೆ ಮಾಡಬಹುದು.


• ದೋಸೆ ಗರಿಗರಿಯಾಗಲು ಕೆಲವರು ಸ್ವಲ್ಪ ರವೆ/ ಅಕ್ಕಿ ಸೇರಿಸಿಕೊಳ್ಳುತ್ತಾರೆ. ಬರೀ ಸೊಳೆಯಿಂದ ಮಾಡಿದ ದೋಸೆ ತುಂಬ ಮೃದು ಆಗಿರುತ್ತದೆ.


• ಕೇವಲ ಹಲಸಿನ ಸೊಳೆ ಮಾತ್ರ ರುಬ್ಬಿ ಅಕ್ಕಿ ಸೇರಿಸದೆ ಮಾಡಿದ ದೋಸೆ ಗರಿಗರಿಯಾಗಿ ಬಂದು, ಸಲೀಸಾಗಿ ಕಾವಲಿಯಿಂದ ಎಬ್ಬಿಸುವಂತಿದ್ದರೆ ಅಂತಹ ಹಲಸನ್ನು  ದೋಸೆ ಹಲಸು ಎಂದು ಪರಿಗಣಿಸಬಹುದು.


ಹಲಸಿನ ಸೀಸನ್ ಮುಗಿಯುತ್ತಾ ಬಂತು. ಮುಂದಿನ ವರ್ಷವಾದರೂ ಮನೆಮನೆಗಳಲ್ಲಿ ಆಗಲಿ ಹಕಾ ದೋಸೆ ಪ್ರಯೋಗ. ನಿಮ್ಮನೆ ಹಲಸಿನ ಮರಗಳ ಮಾರ್ಕ್ ಲಿಸ್ಟ್ ತಯಾರು ಮಾಡಿ ಬರೆದೇ ಇಟ್ಟುಬಿಡಿ.


-ಶ್ರೀ ಪಡ್ರೆ

ಅಡಿಕೆ ಪತ್ರಿಕೆ ಸಂಪಾದಕರು


**********

ಹಲಸಿನ ಸೊಳೆ + ಬೀಜದ ಸುಕ್ಕೆ



ಹಲಸಿನ ಬೀಜವನ್ನು ತುಂಡರಿಸಿ ಮಣ್ಣಿನ ಮಡಿಕೆಯಲ್ಲಿ ಹಾಕಿ. ನೀರು ಹಾಕಿ ಬೇಯಿಸಿ‌ ಬೆಂದ ಮೇಲೆ ಹಚ್ಚಿದ ಹಲಸಿನ ಸೊಳೆ, ಅರಿಶಿಣ ಹುಡಿ, ಮೆಣಸಿನ ಹುಡಿ, (ನಾನು ಸಾಂಬಾರ್ ಪುಡಿ ಹಾಕಿದೆ) ಉಪ್ಪು ಹಾಕಿ ಬೇಯಿಸಿ.


ತೆಂಗಿನ ಎಣ್ಣೆ + ಸಾಸಿವೆ + ಉದ್ದಿನ ಬೇಳೆ + ಜೀರಿಗೆ+ ಬೇವಿನಸೊಪ್ಪುಗಳ ಒಗ್ಗರಣೆ ಹಾಕಿ. ಕೊನೆಗೆ ತೆಂಗಿನ ತುರಿ ಹಾಕಿ ಇಳಿಸಿ.


-ವೆಂಕಟ್ರಮಣ ಪುಣಚ,

ಅನುಷಾ ಹೋಮ್ ಪ್ರಾಡಕ್ಟ್ಸ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top