ಅಂಬಿಕಾ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಪುತ್ತೂರು: ದೇಶಭಕ್ತಿ ಸಹಿತವಾದ ಸಂಸ್ಕಾರ ಸಮಾಜದಲ್ಲಿ ಮೌಲ್ಯಗಳನ್ನು ಪಡೆದುಕೊಳ್ಳುತ್ತದೆ. ನಾವು ಯಾವುದೇ ಪದವಿ, ಅಂತಸ್ತು ಹೊಂದಿದ್ದರೂ ರಾಷ್ಟ್ರಭಕ್ತಿ ಹಾಗೂ ಸಂಸ್ಕಾರಗಳನ್ನು ಒಡಮೂಡಿಸಿಕೊಳ್ಳದಿದ್ದರೆ ಅಂತಹ ವ್ಯಕ್ತಿತ್ವಗಳು ಶೋಭಿಸುವುದಿಲ್ಲ. ಭಾರತೀಯತೆಯನ್ನು ಪಸರಿಸುವ ಕೇಂದ್ರಗಳಾಗಿ ನಮ್ಮನ್ನು ನಾವು ಮಾರ್ಪಾಟುಗೊಳಿಸಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ, ಹಿರಿಯರಿಂದ ದೊರಕುವ ಮಾರ್ಗದರ್ಶನ ವಿದ್ಯಾರ್ಥಿಗಳನ್ನು ಗಟ್ಟಿಗೊಳಿಸುತ್ತದೆ. ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನ ತಪ್ಪನ್ನು ಗುರುತಿಸಿ ಹೇಳುವುದರಿಂದ ಆ ವಿದ್ಯಾರ್ಥಿಗೆ ಆ ಹೊತ್ತಿಗೆ ಅವಮಾನ ಅನಿಸಿದರೂ ಅದು ಮುಂದಿನ ಬದುಕಿಗೆ ಪ್ರೇರಣೆಯನ್ನೊದಗಿಸುತ್ತದೆ. ಮನೆಯಲ್ಲಿ ಹೆತ್ತವರಿಗೆ ಅಂಕೆಗೆ ಸಿಗದ ಎಷ್ಟೋ ಮಂದಿ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿನ ಹಿರಿಯರಿಂದಾಗಿ ಬದಲಾದ ಉದಾಹರಣೆಗಳಿವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಸಿಲೆಬಸ್ ಆಧಾರಿತ ಶಿಕ್ಷಣ ಕೇವಲ ವಿಷಯಗಳನ್ನಷ್ಟೇ ತಿಳಿಸಿಕೊಟ್ಟರೆ ಸಂಸ್ಥೆಯಲ್ಲಿನ ವಿವಿಧ ಆಚರಣೆಗಳು, ಹಿರಿಯರ ಆಚಾರ ವಿಚಾರ ನಡವಳಿಕೆಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ವ್ಯಕ್ತಿತ್ವವೊಂದು ರೂಪುಗೊಳ್ಳುವುದು ಸಂಸ್ಥೆಯಲ್ಲಿ ದೊರಕುವ ಸಂಸ್ಕಾರದಿಂದ ಮಾತ್ರ. ನಮ್ಮ ನಡವಳಿಕೆಗಳು ನಾವು ಕಲಿತ ಶಿಕ್ಷಣ ಸಂಸ್ಥೆಯನ್ನು ಜನ ಗುರುತಿಸುವಂತಹ ರೀತಿಯಲ್ಲಿ ಪ್ರತಿಫಲನಗೊಳ್ಳುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.
ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಅಂತಿಮ ವರ್ಷದ ವಿದ್ಯಾರ್ಥಿಗಳಾದ ನಯನಾ, ಅನಘ, ಶ್ರಾವ್ಯ, ಮೇಘಾ ಡಿ, ನಿರೀಕ್ಷಾ, ವರೇಣ್ಯ ಹಾಗೂ ಶೇಖರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಕುಂಕುಮ, ಅರಸಿನ, ಶೃಂಗೇರಿ ಶ್ರೀ ಶಾರದಾ ದೇವಿಯ ಬೆಳ್ಳಿ ಪದಕಗಳನ್ನಿತ್ತು ಸ್ಮರಣಿಕೆ ಸಹಿತವಾಗಿ ಬೀಳ್ಕೊಡಲಾಯಿತು.
ವಿದ್ಯಾರ್ಥಿನಿಯರಾದ ಅಂಕಿತಾ, ಪಂಚಮಿ ಬಾಕಿಲಪದವು ಪ್ರಾರ್ಥಿಸಿದರು. ವಿದ್ಯಾರ್ಥಿ ಅನ್ಮಯ್ ಭಟ್ ಸ್ವಾಗತಿಸಿ, ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ ವಂದಿಸಿದರು. ಕನ್ನಡ ಉಪನ್ಯಾಸಕ ಗಿರೀಶ ಭಟ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ