ವಿದ್ಯಾರ್ಥಿಗಳ ಮನೋಭಾವ ಹಾಗೂ ಶಿಕ್ಷಣದ ವ್ಯವಸ್ಥೆ ಎರಡರ ಸಮತೋಲನ ಅತ್ಯಗತ್ಯ: ಪ್ರೊ. ಶಾಲಿನಿ ಕೆ ಶರ್ಮಾ

Upayuktha
0

ನಿಟ್ಟೆ:  'ಶಿಕ್ಷಣಸಂಸ್ಠೆಗಳಲ್ಲಿ ಆಪ್ತಸಮಾಲೋಚನೆ ಇಂದಿನ ದಿನಗಳಲ್ಲಿ ಅತ್ಯಗತ್ಯ. ವಿದ್ಯಾರ್ಥಿಗಳ ಒಳಿತಿಗಾಗಿ ಶ್ರಮಿಸುವ ಪ್ರತಿಯೋರ್ವ ಶಿಕ್ಷಕನಿಗೂ ಆಪ್ತಸಮಾಲೋಚನೆಯ ಗುಣ, ಸೂಕ್ತ ತಂತ್ರಗಳ ಬಗೆಗೆ ಜ್ಞಾನ ಅತಿಮುಖ್ಯ. ಸೂಕ್ತ ಸಮಯದಲ್ಲಿ ಆಪ್ತಸಮಾಲೋಚಕರ ಸಹಾಯ ಸಿಕ್ಕರೆ ಅದೆಂತಹ ಕ್ಲಿಷ್ಟ ಮಾನಸಿಕ ತೊಂದರೆಯನ್ನೂ ಎದುರಿಸಬಹುದು ಹಾಗೂ ಅವಘಡಗಳನ್ನು ತಪ್ಪಿಸಬಹುದಾಗಿದೆ' ಎಂದು ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಎನ್ಎಂಎಎಂಐಟಿಯ ಅಭ್ಯುದಯ ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಮಾಜಿ ಮುಖ್ಯಸ್ಥೆ ಪ್ರೊ. ಶಾಲಿನಿ ಕೆ ಶರ್ಮಾ ಅಭಿಪ್ರಾಯಪಟ್ಟರು.


ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ಆಗಿರುವ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಅಭ್ಯುದಯ-ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗವು ಸತತ 10 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿರುವ 4 ದಿನಗಳ 'ಹದಿಹರೆಯದವರನ್ನು ಅರ್ಥೈಸಿಕೊಳ್ಳುಲು ಪೂರಕವಾಗುವ, ಆತ್ಮಹತ್ಯೆ ತಡೆಗಟ್ಟುವಲ್ಲಿ ಸಹಾಯಕವಾಗುವ ಮತ್ತು ಚಿಕಿತ್ಸಾತ್ಮಕ ಆಪ್ತಸಮಾಲೋಚನೆಯ ಬಗೆಗೆ ಬೆಳಕುಚೆಲ್ಲುವ' ಕಾರ್ಯಕ್ರಮವನ್ನು ಜು.18 ರಂದು ಅವರು ಉದ್ಘಾಟಿಸಿ ಮಾತನಾಡಿದರು.

 

ಉಡುಪಿಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಸಮಾಲೋಚಕ ಮನೋವೈದ್ಯ ಮತ್ತು ನಿರ್ದೇಶಕ ಡಾ.ಪಿ.ವಿ.ಭಂಡಾರಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸುವುದರೊಂದಿಗೆ ಮನಸ್ಸಿನ ಆರೋಗ್ಯ ಎಂಬುದು ಎಷ್ಟು ಮುಖ್ಯವೆಂಬುದನ್ನು ತಿಳಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ|ನಿರಂಜನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ 'ಈ ಕಾರ್ಯಾಗಾರವು ಎಲ್ಲಾ ಶಿಕ್ಷಕರಿಗೂ ಉಪಯುಕ್ತವಾದ ಮಾಹಿತಿಯನ್ನು ಒದಗಿಸುವುದಲ್ಲದೆ ಹಲವು ಸಮಸ್ಯೆಗಳನ್ನು ಹೇಗೆ ಸಮರ್ಥವಾಗಿ ಎದುರಿಸಬಹುದು ಎಂಬ ಬಗೆಗೆ ಮಾರ್ಗದರ್ಶನ ನೀಡುತ್ತದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಪ್ರತಿಷ್ಠಿತ 12 ಸಂಸ್ಥೆಗಳ ಪ್ರಾಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಕಾರ್ಯಕ್ರಮದ ಸಾರ್ಥಕತೆಯನ್ನು ಎತ್ತಿತೋರಿಸುತ್ತದೆ' ಎಂದರು.

 

ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಹಾಗೂ ಈ ಕಾರ್ಯಾಗಾರದ ಸಂಯೋಜಕ ಭರತ್ ಕುಮಾರ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ಲೇಸ್ಮೆಂಟ್ ವಿಭಾಗದ ಶ್ರೀಮತಿ ಶೋಭಾ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಅನು‌ಷಾ ಗೌರವ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿ ಆಪ್ತಸಮಾಲೋಚಕ ಅಂಕಿತ್ ಕುಮಾರ್ ವಂದಿಸಿದರು. ಇನ್ಫೋರ್ಮೇಶನ್ ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕಿ ಡಾ.ಅಶ್ವಿನಿ ಬಿ ಕಾರ್ಯಕ್ರಮ ನಿರೂಪಿಸಿ.


ಸಂಪನ್ಮೂಲ ವ್ಯಕ್ತಿಯಾಗಿ ಪೊ.ಶಾಲಿನಿ ಶರ್ಮಾ, ಡಾ.ಪಿ.ವಿ ಭಂಡಾರಿಯವರೊಂದಿಗೆ ಮಂಗಳೂರಿನ ಮನಶಾಂತಿ ಸಮಾಲೋಚನಾ ಕೇಂದ್ರದ ನಿರ್ದೇಶಕಿ ಮತ್ತು ಮಾನಸಿಕ ಆರೋಗ್ಯ ತಜ್ಞೆ ಡಾ.ರಮೀಳಾ ಶೇಖರ್ ಅವರು ಈ 4 ದಿನಗಳ ಕಾರ್ಯಕ್ರಮದಲ್ಲಿ ದಿಕ್ಸೂಚಿ ವಿಚಾರ ವಿನಿಮಯ ನಡೆಸಲಿರುವರು. ಈ ಕಾರ್ಯಕ್ರಮವನ್ನು ವಿಫ್ಲಿ ಇಂಡಿಯಾ ಎಲ್ಎಲ್ ಪಿ ಸಂಸ್ಥೆಯ ಪ್ರಾಯೋಜಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದೆ.


4 ದಿನಗಳ ಕಾರ್ಯಾಗಾರದಲ್ಲಿ 1ನೇ ದಿನದಂದು ಆತ್ಮಹತ್ಯೆ ತಡೆಗಟ್ಟುವಿಕೆ; 2 ನೇ ದಿನದಂದು ವೃತ್ತಿಪರ ಕಾಲೇಜುಗಳಲ್ಲಿ ಹದಿಹರೆಯದ ಸಮಸ್ಯೆಗಳು ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ಗುರುತಿಸುವುದು; 3ನೇ ದಿನದಂದು ವಿದ್ಯಾರ್ಥಿಗಳ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಒತ್ತಡವನ್ನು ನಿಭಾಯಿಸುವುದು ಮತ್ತು 4ನೇ ದಿನದಂದು ಮೆದುಳಿನ ಆರೋಗ್ಯ ಮತ್ತು ಸಮಾಲೋಚನೆ ನೈತಿಕತೆ ಮತ್ತು ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವುದರ ಬಗೆಗೆ ಚರ್ಚಿಸಲಾಗುವುದು. ಈ ಕಾರ್ಯಾಗಾರದ ಸಂದರ್ಭದಲ್ಲಿ ನೈಜ ಕೇಸ್ ಸ್ಟಡೀಸ್, ಪ್ರಾತ್ಯಕ್ಷಿಕೆಗಳು, ಕಿರುಚಿತ್ರಗಳು, ಚರ್ಚೆಗಳು, ಪಾತ್ರಾಭಿನಯಗಳು ಮತ್ತು ಅಭ್ಯಾಸ ಅವಧಿಗಳನ್ನು ಬಳಸಿಕೊಳ್ಳಲಾಗುವುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top