ಅಡಿಕೆ ಪತ್ರಿಕೆ ಲೇಖನದ ಪ್ರೇರಣೆಯಿಂದ ಕಳೆದ ವರ್ಷ ಕೆಲವು ಕುಂಡಗಳಲ್ಲಿ ಮರಕೆಸುವಿನ ಗಿಡಗಳನ್ನು ನೆಟ್ಟಿದ್ದೆ.
ಮನೆಯ ಸಮೀಪವಿರುವ ಎತ್ತರದ ಚಿರ್ಪಿನ ಮರದಲ್ಲಿ ಸಾಕಷ್ಟು ಮರಕೆಸುಗಳಿವೆ. ಅವು ಹೂಬಿಟ್ಟು ಬೀಜಗಳು ಕೆಳಕ್ಕೆ ಬಿದ್ದು ಮಳೆಗಾಲ ಕೆಲವೊಂದು ಮೊಳೆತಿರುತ್ತವೆ. ಅವುಗಳನ್ನು ತೆಗೆದು ಕುಂಡದಲ್ಲಿ ಹಾಕಿದ್ದೆ. ಸುಲಭದಲ್ಲಿ ಸಿಕ್ಕ ಕುಂಬಾದ ಮರದ ಬೊಡ್ಡೆಯನ್ನು ಅಷ್ಟಿಷ್ಟು ಪುಡಿಮಾಡಿ ಈ ಕುಂಡಗಳಿಗೆ ಸೇರಿಸಿದ್ದೆ.
ಮೊದಮೊದಲು ಚೆಂದಕೆ ಕಾಣುತ್ತಿದ್ದ ಈ ಗಿಡಗಳು ಕ್ರಮೇಣ ಒಂದೊಂದಾಗಿ ಮಾಯವಾದವು. ಒಂದೆರಡು ಅಲ್ಪಸ್ವಲ್ಪ ಜೀವ ಉಳಿಸಿಕೊಂಡಿದ್ದವು. ಕುಂಡಗಳನ್ನು ಹಾಗೆಯೇ ಬಿಟ್ಟಿದ್ದೆ. ಉದ್ಯಾನದ ನಡುವೆ ಇದ್ದ ಕಾರಣ ಬೇಸಿಗೆಯಲ್ಲಿ ಅವಕ್ಕೆ ನೀರಿನ ಕೊರತೆಯಾಗಲಿಲ್ಲ.
ಈಗ ಮಳೆಗಾಲ ಸುರುವಾದ ಬಳಿಕ ಕುಂಡಗಳಲ್ಲಿ ಮರಕೆಸು ಒಂದೊಂದಾಗಿ ಮೇಲೇಳತೊಳಗಿದವು. ತಿಳಿ ಹಸುರಿನ ಆಕರ್ಷಕ ಎಲೆಗಳು. ಇಂದು ಮೊದಲ ಕೊಯ್ಲು. ಒಮ್ಮೆ ಪತ್ರೊಡೆ ಮಾಡುವಷ್ಟು ಸಿಕ್ಕಿತು.
ಮತ್ತೆ ಚಿರ್ಪಿನ ಮರದ ಬಳಿ ಹೋದರೆ ಹಿಂದಿನಂತೆ ಮರದಲ್ಲೆಲ್ಲ ಮರಕೆಸುವಿನ ಅಲಂಕಾರ. ಬುಡದಲ್ಲಿ ಕಳಿತ ತರಗೆಲೆಗಳ ನಡುವೆ ಮೂರ್ನಾಲ್ಕು ಎಳೆಯ ಗಿಡಗಳು. ‘ನಮ್ಮ ಗೊಡವೆಗೆ ಬಾರದಿದ್ದರೆ ಸರಿ, ಪ್ರತಿ ವರ್ಷ ಕೆಲವಾರು ಗಿಡಗಳನ್ನು ನಿನಗೆ ಕೊಡುತ್ತಿರುತ್ತೇವೆ. ನೆಟ್ಟು ಬೆಳೆಸು’ ಎಂದು ಮರದ ಮೇಲಿನಿಂದ ಹೇಳಿದಂತಾಯಿತು. ಮರಕೆಸು ಸಂಕುಲವನ್ನು ಜತನದಿಂದ ಪೋಷಿಸುತ್ತಿರುವ ಚಿರ್ಪಿನ ಮರಕ್ಕೆ ಶರಣು.
- ಶಿವರಾಂ ಪೈಲೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ