ಮಂಗಳೂರು ವಿವಿ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಹೈಲ್ಯಾಂಡ್ ಸಹ ಯೋಗದಲ್ಲಿ ರಕ್ತದಾನ ಶಿಬಿರ
ಮಂಗಳೂರು: ರಕ್ತದಾನ ಮತ್ತೊಬ್ಬರ ಜೀವವುಳಿಸುವ ಸಮಾಜಮುಖಿ ಚಿಂತನೆ ಮಾತ್ರವಲ್ಲದೆ, ಇದರಿಂದ ದಾನಿಗೂ ಹಲವು ರೀತಿಯ ಪ್ರಯೋಜನಗಳಿವೆ. ರಕ್ತದಾನ ಮಾಡುವುದರಿಂದ ವ್ಯಕ್ತಿಯ ಕೊಬ್ಬು, ಕೊಲೆಸ್ಟ್ರಾಲ್ ಅಂಶಗಳು ಕಡಿಮೆಯಾಗುತ್ತವೆ, ಹೃದಯ ಸುರಕ್ಷಿತವಾಗುತ್ತದೆ. ಹೊಸಜೀವಕೋಶಗಳು ಉತ್ಪತ್ತಿಯಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಎಂದು ಮಂಗಳೂರಿನ ವೆನ್ ಲಾಕ್ ಜಿಲ್ಲಾಸ್ಪತ್ರೆಯ ರಕ್ತನಿಧಿಯ ಹಿರಿಯ ರೋಗಶಾಸ್ತ್ರಜ್ಞ ಡಾ. ಶರತ್ ಕುಮಾರ್ ರಾವ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರಕಲಾಭವನದಲ್ಲಿ ಲಯನ್ಸ್ ಕ್ಲಬ್ ಹೈಲ್ಯಾಂಡ್, ಕಾಲೇಜಿನ ವಿದ್ಯಾರ್ಥಿಸಂಘ,ಎನ್ ಸಿ ಸಿ (ಭೂದಳ ಮತ್ತು ನೌಕಾದಳ), ಎನ್ಎಸ್ಎಸ್, ಯುವರೆಡ್ ಕ್ರಾಸ್ ಮತ್ತು ವೆನ್ ಲಾಕ್ ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. ಲಯನ್ಸ್ ಕ್ಲಬ್ ಹೈಲ್ಯಾಂಡ್ ನ ಅಧ್ಯಕ್ಷೆ ಲಯನ್ ದೇವಿಕಾ ಸೋಮಶೇಖರ್ ಮಾತನಾಡಿ, ಲಯನ್ ಎನ್ ಜೆ ನಾಗೇಶ್ ಅವರ ನೇತೃತ್ವದಲ್ಲಿ ಈವರೆಗೆ 248 ರಕ್ತದಾನ ಶಿಬಿರಗಳನ್ನು ನಡೆಸಿರುವುದು ಗಮನಾರ್ಹ ಸಾಧನೆ, ಎಂದರು.
ಲಯನ್ ಎನ್ ಜೆ ನಾಗೇಶ್ ಎಂಜೆಎಫ್ ಮಾತನಾಡಿ, ರಕ್ತದಾನ ಮಾನವೀಯತೆಯನ್ನು ತೋರ್ಪಡಿಸುವ ಒಂದು ಅತ್ಯುತ್ತಮ ವಿಧಾನ, ಎಂದರು. ಇದೇ ವೇಳೆ ಅವರು ರಕ್ತದಾನಿಗಳಿಗೆ ಒಂದು ಕಾರ್ಡ್ ಮತ್ತು ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದು ಮುಂದಿನ 6 ತಿಂಗಳುಗಳ ಕಾಲ ತುರ್ತಾಗಿ ಒಂದು ಯುನಿಟ್‌ನಷ್ಟು ರಕ್ತವನ್ನು ಪಡೆಯಲು ನೆರವಾಗುತ್ತದೆ, ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಶಿಬಿರ ಆಯೋಜಿಸಲು ನೆರವಾದ ಎಲ್ಲಾ ಸಂಘ-ಸಂಸ್ಥೆಗಳಿಗೆ ಧನ್ಯವಾದ ಸಮರ್ಪಿಸಿದರು.
ವಿದ್ಯಾರ್ಥಿಸಂಘದ ಉಪನಿರ್ದೇಶಕಿ ಪ್ರೊ. ಲತಾ. ಎ ಪಂಡಿತ್ ಅತಿಥಿಗಳನ್ನು ಸ್ವಾಗತಿಸಿದರೆ, ಎನ್ ಸಿ ಸಿ (ನೌಕಾದಳ) ಅಧಿಕಾರಿಪ್ರೊ. ಯತೀಶ್ ಕುಮಾರ್ ಧನ್ಯವಾದಸಮರ್ಪಿಸಿದರು. ಯುವರೆಡ್ ಕ್ರಾಸ್ ಅಧಿಕಾರಿ ಡಾ. ಭಾರತಿಪಿಲಾರ್ ಕಾರ್ಯಕ್ರಮ ನಿರೂಪಿಸಿದರು. ಎನ್ ಸಿ ಸಿ ಅಧಿಕಾರಿ (ಭೂದಳ) ಡಾ. ಜಯರಾಜ್ ಎನ್, ಎನ್ಎಸ್ಎಸ್ ಅಧಿಕಾರಿಗಳಾದ ಡಾ. ಗಾಯತ್ರಿಎನ್, ಡಾ. ಸುರೇಶ್, ವಿದ್ಯಾರ್ಥಿಸಂಘದ ಪದಾಧಿಕಾರಿಗಳು, ವೆನ್ ಲಾಕ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ 52 ಕ್ಕೂಹೆಚ್ಚು ಮಂದಿ ರಕ್ತದಾನ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ




