ಕರ್ಣ ದುರಂತ ನಾಯಕನಾಗಿದ್ದು ಹೇಗೆ?

Upayuktha
3 minute read
0

  

ರ್ಣ ಮಹಾಭಾರತದ ದುರಂತ ನಾಯಕ, ಶ್ರೇಷ್ಠ ನಾಯಕ ಹಾಗೂ ಗೆಳೆತನಕ್ಕೆ ಮತ್ತೊಂದು ಹೆಸರು ಎಂದು ಕರೆಯಲ್ಪಡುವ ಹಾಗೂ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಒಬ್ಬ ವ್ಯಕ್ತಿ. ಹಾಗಾದರೆ ಕರ್ಣನಿಗೆ ಈ ತರಹೇವಾರಿ ನಾಮವಿಶೇಷಗಳು ಬರಲು ಕಾರಣವಾದರೂ ಏನು ಎಂಬುದನ್ನು ತಿಳಿಯಲು ಹೊರಟರೆ, ಮೊದಲಿಗೆ ಆತನ ಹುಟ್ಟಿನ ಬಗ್ಗೆ ನಾವು ನೀವು ತಿಳಿದುಕೊಳ್ಳಬೇಕು. ಕುಂತಿಗೆ ಸರಿ ಸುಮಾರು ಹದಿನೈದು ವರ್ಷಗಳಾಗಿದ್ದಾಗ ಅವಳಿರುವ ರಾಜ್ಯಕ್ಕೆ ದೂರ್ವಾಸ ಮುನಿಗಳು ಒಂದು ಕಾರ್ಯದ ನಿಮಿತ್ತ ಬಂದಿದ್ದರು. ಕುಂತಿಯ ಸೇವೆಯನ್ನು ನೋಡಿ ಸಂಪ್ರೀತರಾಗಿ ಹೊರಡುವ ವೇಳೆಗೆ ಕುಂತಿಯಲ್ಲಿ ನಿನಗೆ ಬೇಕಾದ ವರವನ್ನು ಕೇಳು ನಾನು ಕರುಣಿಸುತ್ತೇನೆ ಎಂದು ತಿಳಿಸುತ್ತಾರೆ.‌ ಎಳೆಯ ಪ್ರಾಯದ ಕುಂತಿಗೆ ಏನು ಕೇಳಬೇಕು ಎಂದು ತೋಚದಿದ್ದಾಗ ದೂರ್ವಾಸ ಮುನಿಗಳೇ ಸ್ವತಃ ನೀನು ಆರಾಧಿಸುವ ದೇವರ ಅಂಶಗಳನ್ನೊಳಗೊಂಡ ವರಪುತ್ರನನ್ನು ಮಂತ್ರ ಪ್ರಸಾದದ ಮೂಲಕ ಪಡೆಯಬಹುದು ಎಂದು ಆದರ ಮಂತ್ರವನ್ನು ಕುಂತಿಗೆ ಉಪದೇಶಿಸಿ ತೆರಳುತ್ತಾರೆ.


ಕುಂತಿಯು ಒಂದು ದಿನ ಬಹಳ ಕುತೂಹಲದಿಂದ ಈ ಮಂತ್ರದ ನಿಜ ಸ್ವರೂಪವನ್ನು ತಿಳಿಯಲು ಸೂರ್ಯ ದೇವರನ್ನು ನೆನೆದುಕೊಂಡು ಮಂತ್ರ ಪಠಿಸುತ್ತಿದ್ದಾಗ ಸೂರ್ಯ ದೇವ ಪ್ರತ್ಯಕ್ಷನಾಗುತ್ತಾನೆ. ಕುಂತಿಗೆ ಸೂರ್ಯ ದೇವನ ನೋಡಿ ಭಯವಾಗಿ ನಾನು ಈ ಮಂತ್ರದ ಶಕ್ತಿಯನ್ನು ಪರೀಕ್ಷಿಸಲು ಉಚ್ಚರಿಸಿದ್ದೇನೆಯೇ ಹೊರತು ಬೇರೆ ಯಾವ ಅಪೇಕ್ಷೆಯಿಲ್ಲ ಎನ್ನುತ್ತಾಳೆ. ಆಗ ಸೂರ್ಯ ದೇವ, ನಾನು ನಿನಗೆ ಒಬ್ಬ ಪರಾಕ್ರಮಿ ಮಗನೊಬ್ಬನನ್ನು ಕರುಣಿಸುತ್ತೇನೆ ಎಂದು ಹೇಳಿ ಕಣ್ಮರೆಯಾಗುವನು. ಕುಂತಿಯು ನಾಚಿಕೆ ಮತ್ತು ಭಯದಿಂದ ಸಮಾಜದಿಂದ ಈ ವಿಷಯವನ್ನು ಮುಚ್ಚಿಟ್ಟು ಮಗುವಿನ ಜನನದ ನಂತರ ಗಂಗಾ ನದಿಯಲ್ಲಿ ಒಂದು ಬುಟ್ಟಿಯಲ್ಲಿಟ್ಟು ತೇಲಿ ಬಿಡುತ್ತಾಳೆ. ಹೀಗೆ ತೇಲಿಬಿಟ್ಟ ಮಗು ಒಂದು ದಿನ ಧೃತರಾಷ್ಟ್ರನ ಸಾರಥಿಯಾದ ಅತಿರಥನು ಕುದುರೆಗಳಿಗೆ ಗಂಗಾನದಿಯಲ್ಲಿ ನೀರುಣಿಸುವ ವೇಳೆ ಕಣ್ಣಿಗೆ ಬಿದ್ದು ಆತ ಮಗುವನ್ನು ರಕ್ಷಿಸಿ ಮನೆಗೆ ತೆರಳುತ್ತಾನೆ. ಅತಿರಥ ಮತ್ತು ಆತನ ಹೆಂಡತಿ ರಾಧೆಗೆ ಮಕ್ಕಳಿಲ್ಲದ ಕಾರಣ ಈ ಮಗುವನ್ನೇ ದತ್ತು ಮಗನನ್ನಾಗಿ ಸ್ವೀಕರಿಸುತ್ತಾರೆ.


ಈ ಮಗು ಸುಂದರವಾದ ಕಿವಿಗಳನ್ನು ಮತ್ತು ಕರ್ಣಕುಂಡಲಿ ಹೊಂದಿದ್ದರಿಂದ ಕರ್ಣನೆಂದು ನಾಮಕರಣ ಮಾಡಲಾಯಿತು.


ಕರ್ಣನು ಸೂರ್ಯ ದೇವನ ಅಂಶವಾಗಿದ್ದಿದ್ದರಿಂದ ಚಿಕ್ಕಂದಿನಿಂದಲೇ ರಥ ಓಡಿಸುವುದಕ್ಕಿಂತ ಯುದ್ದ ಕಲೆಯ ಬಗ್ಗೆ ಬಹಳ ಆಸಕ್ತಿಯುಳ್ಳವನಾಗಿದ್ದ.  ಹಾಗಾಗಿ ಕರ್ಣನ ಸಾಕುತಂದೆ ಅತಿರಥ ಒಂದು ದಿನ ಕುರುವಂಶದ ರಾಜಕುಮಾರರಿಗೆ ಯುದ್ಧ ಶಸ್ತ್ರಾಸ್ತ್ರ ಕಲೆಯ ವಿದ್ಯೆ ಬೋಧಿಸುವ ಗುರುಗಳಾದ ದ್ರೋಣಾಚಾರ್ಯರ ಬಳಿ ತೆರಳಿ ಕರ್ಣನಿಗೂ ವಿದ್ಯೆ ಕಲಿಸಿಕೊಡುವಂತೆ ವಿನಂತಿಸಿಕೊಂಡರು. ಆದರೆ ದ್ರೋಣಾಚಾರ್ಯರು ಕ್ಷತ್ರಿಯರಿಗೆ ಮಾತ್ರ ಯುದ್ಧ ಶಸ್ತ್ರಾಸ್ತ್ರಗಳ ವಿದ್ಯೆಯನ್ನು ಕಲಿಸಿಕೊಡುವುದಾಗಿ ಪ್ರತಿಜ್ಞೆ ಮಾಡಿದ್ದರಿಂದ ಕರ್ಣನಿಗೆ ವಿದ್ಯೆ ಹೇಳಲು ಒಪ್ಪುವುದಿಲ್ಲ. ದ್ರೋಣರು ನಿರಾಕರಿಸಿದ ನಂತರ ಕರ್ಣನಿಗೆ ಬೇಸರವಾಯಿತು. ಪರಶುರಾಮರು ಬ್ರಾಹ್ಮಣರಿಗೆ ಯುದ್ದಕಲೆಯ ವಿದ್ಯೆಯನ್ನು ಕಲಿಸಿಕೊಡುವುದು ಅರಿತು ಕರ್ಣನು ಬ್ರಾಹ್ಮಣನ ರೂಪದಲ್ಲಿ ಪರಶುರಾಮರ ಬಳಿ ಯುದ್ಧ ಕಲೆಯ ವಿದ್ಯಾರ್ಜನೆಗಾಗಿ ವಿನಂತಿಸಿಕೊಂಡನು. ಕರ್ಣನ ಮನವಿಯನ್ನು ಸ್ವೀಕರಿಸಿದ ಪರಶುರಾಮರು ತನ್ನಂತೆಯೇ ಯುದ್ಧ ಕಲೆಯನ್ನು ಮತ್ತು ಬಿಲ್ವಿದ್ಯೆಯನ್ನು ಕರ್ಣನಿಗೆ ಧಾರೆಯೆರೆದರು. ಹೀಗೆ ವಿದ್ಯಾಭ್ಯಾಸದ ಕೊನೆಯ ಹಂತದಲ್ಲಿ ಒಂದು ದಿನ ಮಧ್ಯಾಹ್ನದ ವೇಳೆ ಪರಶುರಾಮರು ಕರ್ಣನ ತೊಡೆಯ ಮೇಲೆ ಮಲಗಿ ನಿದ್ರಿಸುತ್ತಿದ್ದಾಗ ಎಲ್ಲಿಂದಲೋ ಬಂದ ಒಂದು ದುಂಬಿ ಕರ್ಣನ ತೊಡೆಯನ್ನು ಕೊರೆದು ರಕ್ತ ಹೀರಲಾರಂಭಿಸಿತು. ಆಗ ರಕ್ತ ಸೋರುವಿಕೆ ಆರಂಭವಾಯಿತು. ಆದರೆ ಕರ್ಣನು ಗುರುವಿನ ನಿದ್ರೆಯನ್ನು ಕೆಡಿಸಬಾರದೆಂದು ಹಾಗೆಯೇ ಕುಳಿತ. ಒಂದಿಷ್ಟು ಸಮಯದ ನಂತರ ಗುರು ಪರಶುರಾಮರು ಎಚ್ಚರವಾದಾಗ ತೊಡೆಯ ಸುತ್ತ ರಕ್ತ ನೋಡಿ ನೀನು ನಿಜವಾಗಿಯೂ ಬ್ರಾಹ್ಮಣನಾಗಿದ್ದರೆ ಇಷ್ಟು ಹೊತ್ತು ಈ ನೋವನ್ನು ಸಹಿಸಲಾರೆ; ನೀನು ಕ್ಷತ್ರಿಯನೇ ಇರಬೇಕು. ನೀನು ನನ್ನ ಬಳಿ ಸುಳ್ಳು ಗುರುತನ್ನು ಹೇಳಿ ವಿದ್ಯಾರ್ಜನೆ ಮಾಡಿದ್ದರಿಂದ ಯಾವಾಗ ಅವಶ್ಯವೋ ಆ ಸಮಯದಲ್ಲಿ ನಾನು ಕಲಿಸಿದ ವಿದ್ಯೆ ನಿನಗೆ ಉಪಯೋಗವಾಕ್ಕೆ ಬಾರದೆ ಹೋಗಲಿ ಎಂದು ಶಪಿಸುತ್ತಾರೆ.


ಈ ಘಟನೆಯ ನಂತರ ಪರಶುರಾಮರ ಆಶ್ರಮ ‌ತೊರೆದು ಕರ್ಣ ಸ್ವಲ್ಪ ಸಮಯ ಏಕಾಂಗಿಯಾಗಿ ಅಲೆದಾಡಲು ಆರಂಭಿಸುತ್ತಾನೆ. ಈ ವೇಳೆಯಲ್ಲಿ ಶಬ್ದವೇಧಿ ವಿದ್ಯೆ ಕಲಿಯುವ ಸಾಹಸಕ್ಕೆ ಇಳಿಯುತ್ತಾನೆ. ಹಾಗೆಯೇ ಒಂದು ದಿನ ಕಾಡು ಪ್ರಾಣಿಯೆಂದು ಭಾವಿಸಿ ಬಿಟ್ಟ ಬಾಣ ಒಂದು ಕರುವಿಗೆ ತಾಗಿ ಅದು ಸಾಯಲ್ಪಡುತ್ತದೆ. ಆ ಕರು ಒಬ್ಬ ಬ್ರಾಹ್ಮಣನದ್ದು. ಆತ ನೋವಿನಿಂದ, ನನ್ನ ಕರುವನ್ನು ನೀನು ಸಾಯಿಸಿದರ ಪರಿಣಾಮ ನೀನೂ ಅಸಹಾಯಕನಾಗಿ ಒಂದು ದಿನ ಸಾಯುವೆ ಹಾಗೂ ನಿನ್ನ ಗಮನ ಬೇರೆಡೆಯಿದ್ದಾಗ ಶತ್ರುಗಳ ಕೈಯಿಂದ ನಿನ್ನ ಸಾವು ಸಂಭವಿಸಲಿ ಎಂಬ ಶಾಪವನ್ನು ನೀಡುತ್ತಾನೆ.


ಕರ್ಣನು ಧೀರ ಶೂರ. ಆದರೆ ಅವನಲ್ಲಿ ನಾನೇ ಎಲ್ಲದರಲ್ಲೂ ಶ್ರೇಷ್ಠ ಎನ್ನುವ ಅಹಂಕಾರ ಇದ್ದಿದ್ದರಿಂದ ಆತನಿಗೆ ಸಿಗಬೇಕಾದ ಗೌರವ ಸಿಗುತ್ತಿರಲಿಲ್ಲ.  ಆತ ಚಿಕ್ಕಂದಿನಿಂದ ಅನುಭವಿಸಿದ ಅವಮಾನ ಮತ್ತು ನೋವಿನಿಂದಾಗಿಯೂ ಈ ಪ್ರವೃತ್ತಿ ಬೆಳೆದಿರಲೂಬಹುದು. ಎಲ್ಲರೊಂದಿಗೆ ಸಾಗುವ ಮನೋಭಾವ ಕರ್ಣನಲ್ಲಿ ಸ್ವಲ್ಪ ಕಡಿಮೆಯೇ ಎಂದರೂ ತಪ್ಪಾಗಲಾರದು. ಒಂದು ಸಮಯದಲ್ಲಿ ದುರ್ಯೋಧನ ಮತ್ತು ಅರ್ಜುನನ ನಡುವಿನ ದ್ವಂದ್ವ ಯುದ್ದ ನಡೆದಾಗ ಕರ್ಣ ದುರ್ಯೋಧನ ಸಹಾಯಕ್ಕೆ ನಿಲ್ಲುತ್ತಾನೆ. ಅದರಿಂದ ಸಂಪ್ರೀತನಾದ ದುರ್ಯೋಧನ ಕರ್ಣನಿಗೆ ಅಂಗ ರಾಜ್ಯವನ್ನು ಕೊಟ್ಟು ಅದರ ರಾಜನನ್ನಾಗಿ ಕರ್ಣನನ್ನು ನೇಮಿಸುತ್ತಾನೆ. ಅಲ್ಲಿಯ ತನಕ ಕರ್ಣನಿಗೆ ದಕ್ಕಬೇಕಾದ ಗೌರವ ಸಿಗುತ್ತಿಲ್ಲ ಎಂಬ ಕೊರಗಿದ್ದರಿಂದ ಈ ಮನ್ನಣೆ ಕರ್ಣನ ಸಮರ್ಪಣ ಭಾವವನ್ನು ದುರ್ಯೋಧನನ ಕಡೆಗೆ ಬಾಗುವಂತೆ ಮಾಡಿತು. ಆದರೆ ಇಲ್ಲಿ ದುರ್ಯೋಧನನ ಉದ್ದೇಶ ಅರಿಯುವುದರಲ್ಲಿ ಸೋತನೆಂದರೂ ತಪ್ಪಾಗಲಾರದು. ಏಕೆಂದರೆ ಕರ್ಣ ನಿಂತಿರುವುದು ಅಧರ್ಮದ ಕಡೆಗೆ.‌


ಒಬ್ಬ ವ್ಯಕ್ತಿ ಎಷ್ಟೇ ಪ್ರತಿಭಾವಂತನಾದರೂ ಆತನ ಶ್ರದ್ಧೆ ಮತ್ತು ಸಮರ್ಪಣಾ ಭಾವ ಯಾರ ಕಡೆಗೆ ಮತ್ತು ಯಾವ ಉದ್ದೇಶಕ್ಕಾಗಿ ಎನ್ನುವುದರ ಮೇಲೆ ಇತಿಹಾಸ ಆತನನ್ನು ಧರ್ಮಿಷ್ಟನೋ ಅಧರ್ಮಿಷ್ಟನೋ ಎಂದು ಪರಿಗಣಿಸುತ್ತದೆ. ಇಲ್ಲಿ ಕರ್ಣನಿಗಾದ ಪರಿಸ್ಥಿತಿಯೂ ಅದೇ. ಏನೆಂದರೆ ಆತ ಹುಟ್ಟು ಪರಾಕ್ರಮಿ. ಸ್ವತಃ ಸೂರ್ಯ ದೇವರ ಅಂಶದಿಂದ ಹುಟ್ಟಿರುವ ಶಕ್ತಿಶಾಲಿ, ಕರ್ಣ ಎಷ್ಟು ಪರಾಕ್ರಮಿಯೆಂದರೆ ಒಮ್ಮೆ ಕರ್ಣಾಜುನರ ಯುದ್ಧದ ವೇಳೆ ಕರ್ಣನು ಬಿಟ್ಟ ಬಿಲ್ಲಿನಿಂದ ಕೃಷ್ಣ ಅರ್ಜನರಿದ್ದ ರಥ ಸ್ವಲ್ಪ ಅಲುಗಾಡಿ ಹಿಂದೆ ಸರಿಯಿತು. ಆಗ ಕೃಷ್ಣ ಕರ್ಣನನ್ನು ಪ್ರಶಂಸೆ ಮಾಡುವನು. ಈ ವೇಳೆ ಅರ್ಜುನನು ಕೋಪಗೊಂಡು ನನ್ನ ಬಾಣ ಕರ್ಣನ ರಥವನ್ನು ಅದೆಷ್ಟು ದೂರ ತಳ್ಳಿದರೂ ಪ್ರಶಂಸಿಸಲಿಲ್ಲ, ಆದರೆ ಕರ್ಣನ ಬಾಣ ಸ್ವಲ್ಪವೇ ನಮ್ಮ ರಥವನ್ನು ಸರಿಸಿದರೂ ಇಷ್ಟೊಂದು ಪ್ರಶಂಸೆ ಏಕೆ ಮಾಧವ ಎಂದು ಕೇಳುತ್ತಾನೆ.


ಆಗ ಕೃಷ್ಣ ನಿನ್ನ ರಥದಲ್ಲಿ ಕುಳಿತಿರುವುದು ಈ ಜಗತ್ತಿನ ಸರ್ವಶ್ರೇಷ್ಠ ಶಕ್ತಿ, ಈ ಜಗತ್ತಿನ ಎಲ್ಲ ಒಳ ಹೊರಗುಗಳನ್ನು ಅರಿಯುವವ, ಅಂತಹ ನಾರಾಯಣ ಕುಳಿತಿರುವ ರಥವಿದು. ಹಾಗೆಯೇ ಈ ರಥದ ಧ್ವಜ ಹನುಮಂತ. ಇಂತಹ ರಥವನ್ನೇ ಅಲುಗಾಡಿಸುವ, ಹಿಂದಕ್ಕೆ ಸರಿಸುವ ಬಾಣವನ್ನು ಕರ್ಣನ ಬಿಡುತ್ತಿದ್ದಾನೆಂದರೆ ಆತ ನಿನಗಿಂತಲು ಶ್ರೇಷ್ಠ ಎಂದು ಹೇಳುತ್ತಾನೆ.


ಇದೊಂದು ಸನ್ನಿವೇಶ ಸಾಕು ಕರ್ಣನ ಶಕ್ತಿ ಅರಿಯಲು ಇಷ್ಟು ಪರಾಕ್ರಮಿ, ಧರ್ಮದ ಹಾದಿಯಲ್ಲಿ ನಡೆಯುವವ ಹಾಗೂ ಸ್ನೇಹದಲ್ಲಿ ಅತ್ಯಂತ ಶ್ರದ್ಧೆಯಿರುವ ಕರ್ಣನು ಒಬ್ಬ ಅತ್ಯುತ್ತಮ ರಾಜನಿಗೆ ಇರಬೇಕಾದ ಎಲ್ಲಾ ಸದ್ಗುಣಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡವನು. ಇಂತಹ ಕರ್ಣನಿಗೆ ದುರ್ಯೋಧನ ಅಧರ್ಮಿ ಎಂದು ತಿಳಿದ ಮೇಲೂ ಆತನಿಗೆ ಕೈ ಜೋಡಿಸಿ ಧರ್ಮ ಪ್ರತಿಷ್ಠಾಪನೆಗೆ ನಿಂತವರ ವಿರುದ್ಧ ಕಾರ್ಯ ಕೈಗೊಂಡಿದ್ದರಿಂದ್ದಾಗ ಆತನ ಬದುಕು ದುರಂತದಲ್ಲಿ ಹಾದಿಯಲ್ಲಿ ಕೊನೆಯಾಗುವಂತೆ ಮಾಡುತ್ತದೆ. ಕರ್ಣನ ಬದುಕಿನಿಂದ ನಾವು ಕಲಿಯಬೇಕಾದ ಅಂಶವೆಂದರೆ ನಮ್ಮ‌ ನಿಷ್ಠೆ ಎಂದಿಗೂ ಧರ್ಮದ ಹಾದಿಯಲ್ಲಿ ಇರಬೇಕು ಎನ್ನುವುದು.

 

- ಪ್ರದೀಪ ಶೆಟ್ಟಿ ಬೇಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top