ಆಹಾರವೇ ಔಷಧಿ, ಅಡುಗೆ ಮನೆಯೇ ಔಷಧಾಲಯ

Upayuktha
0


ಭಾರತೀಯ ಸಂಸ್ಕೃತಿಯಲ್ಲಿ ಅಡುಗೆ ಮನೆಗೆ ವಿಶಿಷ್ಟವಾದ ಸ್ಥಾನ. ಶಡ್ರಸಗಳಾದ ಕ್ಷಾರ, ಲವಣ, ಕಟು, ತಿಕ್ತ, ಮಧುರ, ಆಮ್ಲ ಗಳಿಂದ ಕೂಡಿದ ಭೋಜನ, ಲಂಘನ , ಒಪ್ಪತ್ತು ಊಟ, ಏಕಾದಶಿಯಂತಹ ಆಚರಣೆಗಳು ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ಅಡುಗೆ ಮನೆಯ ಒಗ್ಗರಣೆ ಡಬ್ಬಿಯು ಆರೋಗ್ಯದ ಅರಮನೆಯ ಆಡುಂಬೊಲವಾಗಿದೆ.


ಸಾಸಿವೆ.... ಸಾಸಿವೆ ನಮ್ಮ ಒಗ್ಗರಣೆಯ ಪ್ರಮುಖ ವಸ್ತು. ಸಾಸಿವೆ ಇಲ್ಲದ ಒಗ್ಗರಣೆಯನ್ನು ಊಹಿಸಲು ಅಸಾಧ್ಯ. ಆದ್ದರಿಂದಲೇ ಗೌತಮ ಬುದ್ಧನು ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ್ದು. ಸಾಸಿವೆಯು ತೀಕ್ಷ್ಣಗುಣವನ್ನು ಹೊಂದಿದ್ದು ಎಣ್ಣೆಯನ್ನು ಕಾಯಿಸಿ ಸಾಸಿವೆಯನ್ನು ಹಾಕಿದಾಗ ಅದು ಚಟಪಟನೆ ಸಿಡಿಯುತ್ತದೆ. ಹೀಗೆ ಸಿಡಿದಾಗ ಅದರಲ್ಲಿರುವ ತಿಕ್ತ ಗುಣವು ಎಣ್ಣೆಯಲ್ಲಿ ಬಿಡುಗಡೆಯಾಗುತ್ತದೆ. ಈ ರೀತಿ ಸಾಸಿವೆಯು ದೇಹದಲ್ಲಿ ಉಷ್ಣಗುಣವನ್ನು ಹೆಚ್ಚಿಸಿ ದೇಹದ ಶಾಖವನ್ನು ಸಮತೋಲನಗೊಳಿಸುತ್ತದೆ. ಕಡು ಚಳಿಗಾಲವನ್ನು ಹೊಂದಿರುವ ಉತ್ತರ ಭಾರತದ ಹಿಮಾಲಯ ಪ್ರದೇಶಗಳಲ್ಲಿ ಸಾಸಿವೆಯ ಎಣ್ಣೆಯನ್ನೇ ಅಡುಗೆಗೆ ಬಳಸುತ್ತಾರೆ. ಬಿಸಿಲು ಪ್ರದೇಶವಾದ ದಕ್ಷಿಣದ ರಾಜ್ಯಗಳಲ್ಲಿ ಉಪ್ಪಿನಕಾಯಿ, ಮತ್ತಿತರ ಖಾದ್ಯ ಪದಾರ್ಥಗಳು ಕೆಡದೆ ಇರಲು ಅನುವಾಗುವಂತೆ ಸಾಸಿವೆ ಎಣ್ಣೆಯ ಬಳಕೆ ಮಾಡುತ್ತಾರೆ.


ಜೀರಿಗೆ... ಜೀರಿಗೆ ತಂಪು ಗುಣವನ್ನು ಹೊಂದಿದ್ದು ಸಾಸಿವೆಯ ಸಂಗಾತಿಯಾಗಿದೆ. ಜೀರಿಗೆಯು ಅಡುಗೆಯ ಸ್ವಾದವನ್ನು ಹೆಚ್ಚಿಸುವುದಲ್ಲದೆ ಉತ್ತಮ ಪಾಚಕವೂ ಹೌದು. ತರಕಾರಿ ಪಲ್ಯಗಳು, ಕಾಳುಗಳು, ಸಲಾಡ್ಗಳು, ಮಜ್ಜಿಗೆ ಹೀಗೆ ಎಲ್ಲದರಲ್ಲಿಯೂ ಜೀರಿಗೆ ಇರಲೇಬೇಕು. ಬಾಯಿ ಒಡೆದು ಹುಣ್ಣಾಗಿದ್ದರೆ ಒಂದು ಚಮಚ ಜೀರಿಗೆಯನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಅಗಿದು ಆ ರಸವನ್ನು ಬಾಯಿಯ ಎಲ್ಲೆಡೆ ಸವರಿಕೊಂಡರೆ ಬಾಯಿಹುಣ್ಣು ವಾಸಿಯಾಗುತ್ತದೆ. ಮಜ್ಜಿಗೆಯಲ್ಲಿಯೂ ಜೀರಿಗೆ  ಕಡ್ಡಾಯವಾಗಿ ಬೇಕೇ ಬೇಕು. ಹೊಟ್ಟೆ ಉಬ್ಬರವಾಗಿ ಭಾರವಾಗಿದ್ದರೆ ಜೀರಿಗೆ ಸೋಡಾ ಅವಶ್ಯವಾಗಿ ಕುಡಿದು ಆರಾಮದಾಯಕ ಅನುಭವ ಪಡೆಯಬಹುದು.

ಕರಿಮೆಣಸು..... ಕಪ್ಪು ಕಾಳುಮೆಣಸು ತನ್ನ ವಿಶಿಷ್ಟ ಘಾಟು ರುಚಿಯಿಂದಾಗಿ ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಕಾಳು ಮೆಣಸಿನ ಈ ರುಚಿಯನ್ನು ಹುಡುಕಿಕೊಂಡೇ ವಿದೇಶಿಯರು ಭಾರತಕ್ಕೆ ವಲಸೆ ಬಂದದ್ದು, ನಮ್ಮನ್ನು ಆಳಿದ್ದು. ಮೆಣಸಿನ ಸಾರು ಬಾಣಂತಿಯರಿಗೆ ಹೇಳಿ ಮಾಡಿಸಿದ ಅಡುಗೆಯಾದರೆ ನೆಗಡಿ, ಕೆಮ್ಮು ಮುಂತಾದ ಶೀತ ಜನ್ಯ ಕಾಯಿಲೆಗಳಿಗೆ ಮೆಣಸಿನ ಕಡುಬು ಮೊದಲ ಮನೆ ಮದ್ದು. ವೀಳ್ಯದೆಲೆಯ ತೋಟಗಳಲ್ಲಿ ಜೊತೆಗೆ ಹಬ್ಬಿಸಿ ಬೆಳೆಸುವ ಮೆಣಸಿನ ಬಳ್ಳಿಯು ಕೂಡ ಲಾಭದಾಯಕ ಬೆಳೆಯಾಗಿದೆ.

ಅರಿಶಿಣ.... ಆರಿಶಿಣದ ಬೇರಿನ ಹುಡಿಯನ್ನು ಅರಿಶಿನ ಪುಡಿ ಎಂದು ಕರೆಯುತ್ತಾರೆ. ಆರಿಶಿಣ ಅತ್ಯಂತ ಪ್ರಮುಖ ಆರೋಗ್ಯದ ಅಸ್ತ್ರವಾಗಿದ್ದು ಹಿಂದಿನ ಕಾಲದಲ್ಲಿ ಗಾಯಗಳಿಗೆ ಅರಿಶಿನವನ್ನು ಲೇಪಿಸುತ್ತಿದ್ದರು. ಅರಿಶಿಣದಲ್ಲಿ ರೋಗ ನಿರೋಧಕ ಶಕ್ತಿಯಿದ್ದು ಗಾಯಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಕೆಮ್ಮು ನೆಗಡಿ ಅಂತಹ ಸಣ್ಣ ಪುಟ್ಟ ಖಾಯಿಲೆಗಳಿಗೆ ಕೆಂಡದ ಮೇಲೆ ಅರಿಶಿನ ಪುಡಿಯನ್ನು ಹಾಕಿ ಅರಿಶಿಣದ ಹೊಗೆ ತೆಗೆದುಕೊಳ್ಳುವುದರ ಮೂಲಕ ರೋಗ ನಿವಾರಣೆ ಸಾಧ್ಯ. ಇತ್ತೀಚೆಗಿನ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಅರಿಶಿಣದಲ್ಲಿರುವ ಕರ್ಕ್ಯೂಮಿನ್ ಎಂಬ ಪದಾರ್ಥವು ಕ್ಯಾನ್ಸರ್ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಸತತವಾಗಿ ಅಡುಗೆಯಲ್ಲಿ ಅರಿಶಿನ ಬಳಸುವುದರಿಂದ ಆರೋಗ್ಯವು ಸ್ಥಿರವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಅರಿಶಿಣ ರೋಮ ನಿವಾರಕವೂ ಹೌದು ಸೌಂದರ್ಯವರ್ಧಕವೂ ಹೌದು. ಕೆನ್ನೆಗೆ ಅರಿಶಿನ ತೊಡೆದ ಭಾರತೀಯ ನಾರಿಯ ಸೌಂದರ್ಯಕ್ಕೆ ಸಾಟಿ ಇನ್ನಾರು ಇಲ್ಲ. ಮಂಗಳ ದ್ರವ್ಯಗಳಲ್ಲಿಯೂ ಅರಿಶಿನ ಪ್ರಮುಖ ಸ್ಥಾನ ಪಡೆದಿದೆ.


ಕರಿಬೇವು.... ಕರಿಬೇವಿಲ್ಲದ ಒಗ್ಗರಣೆಯನ್ನು ಊಹಿಸುವುದು ಅಸಾಧ್ಯ. ಕರಿಬೇವು ಕ್ಯಾಲ್ಸಿಯಂನ ಆಗರವಾಗಿದ್ದು ಎಣ್ಣೆಯ ಒಗ್ಗರಣೆಯಲ್ಲಿ ಕರಿಬೇವನ್ನು ಹಾಕಿದಾಗ ಚಟಪಟ ಎನ್ನುತ್ತಾ ಎಣ್ಣೆಯಲ್ಲಿ ಬಾಡುವ ಕರಿಬೇವಿನ ಕಂಪು ಘ್ರಾಣೇಂದ್ರಿಯವನ್ನು ಅರಳಿಸುತ್ತದೆ.  ತಲೆ ಕೂದಲು ಅತಿ ಹೆಚ್ಚು ಉದುರುತ್ತಿದ್ದರೆ, ತೂಕ ಹೆಚ್ಚಾಗುತ್ತಿದ್ದರೆ, ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತಿದ್ದರೆ ಕರಿಬೇವು ಸೇವಿಸಲೇಬೇಕು. ಕರಿಬೇವು ಅಪಾರ ಖನಿಜಗಳ ಆಗರವಾಗಿದ್ದು  ಕರಿಬೇವಿನ ಎಲೆಗಳನ್ನು ಒಣಗಿಸಿ ಹುರಿದು ಜೀರಿಗೆ ಬೆಳ್ಳುಳ್ಳಿ ಉಪ್ಪು ಖಾರಪುಡಿ ಒಣ ಮೆಣಸು ಹಾಕಿ ಪುಡಿ ಮಾಡಿ ಬಿಸಿಯಾದ ಅನ್ನ ತುಪ್ಪದೊಂದಿಗೆ ಸೇವಿಸಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದು ಸರ್ವಜ್ಞ ಎಂಬಂತ ಪರಿಸ್ಥಿತಿ.


ಉಪ್ಪು .... ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆಯೇ ಹೇಳುವಂತೆ ಉಪ್ಪು ನಮ್ಮ ಆಹಾರಕ್ಕೆ ರುಚಿಯನ್ನು ನೀಡುವುದಲ್ಲದೆ ದೇಹಕ್ಕೆ ಬೇಕಾದ ಅತ್ಯವಶ್ಯಕ ಅಂಶಗಳನ್ನು ಒದಗಿಸಿಕೊಡುತ್ತದೆ. ತುಸು ಹೆಚ್ಚು ಕಡಿಮೆಯಾದರೆ ಅಡುಗೆಯ ಸ್ವಾದವನ್ನು ಕೆಡಿಸುವ ಉಪ್ಪನ್ನು ಹದವರಿತು ಬಳಸಬೇಕು. ಸೋಡಿಯಂ ಮತ್ತು ಕ್ಲೋರಿನ್ ಗಳ ಮಿಶ್ರಣದಿಂದ ತಯಾರಾಗುವ ಉಪ್ಪು ಜೀವನಕ್ಕೆ ಅತ್ಯಂತ ಅವಶ್ಯಕವಾದ ಅಡುಗೆ ಪದಾರ್ಥ. ಅಡುಗೆಯಲ್ಲಿ ಉಪ್ಪಿರುವುದು ಗೊತ್ತಾಗದೆ ಹೋದರು ಇಲ್ಲದೆ ಹೋದರೆ ಅದರ ಅರಿವು ಬಲು ವೇಗ ಆಗುತ್ತದೆ. ಕೈ ಕಾಲುಗಳು ಬಾವು ಬಂದಾಗ, ನೋವಾದಾಗ ಉಪ್ಪಿನ ಕಾವು ಕೊಡುವುದು ಅತ್ಯಂತ ಸಾಮಾನ್ಯ ಸಂಗತಿ. ಉಪ್ಪಿನಲ್ಲಿ ಅಯೋಡಿನ್ ಅಂಶ ಇರದೆ ಹೋದರೆ ಗಳಗಂಡ ಇಲ್ಲವೇ ಥೈರಾಯ್ಡ್ ರೋಗಕ್ಕೆ ತುತ್ತಾಗಲುಬಹುದು.  ಅಧಿಕ ರಕ್ತದೊತ್ತಡ ಹೊಂದಿರುವವರು ಉಪ್ಪಿನ ಸೇವನೆ ಕಡಿಮೆ ಮಾಡಬೇಕು. ಉಪ್ಪಿನ ಅಂಶವು ನಮ್ಮ ದೇಹದಲ್ಲಿ ಸ್ವೇ ದದ ರೂಪದಲ್ಲಿಯೂ ಹೊರಗೆ ಹೋಗುವುದರಿಂದ, ವಾಂತಿ ಮತ್ತು ಬೇಧಿಯಾದಂತಹ ಪ್ರಸಂಗಗಳಲ್ಲಿ ದೇಹವು ನಿರ್ಜಲೀಕರಣದಿಂದ ಬಳಲುವಾಗ ತುರ್ತಾಗಿ ಉಪ್ಪು ಮತ್ತು ಸಕ್ಕರೆಯ ಮಿಶ್ರಣವನ್ನು ನೀರಿನಲ್ಲಿ ಹಾಕಿ ಕಲಸಿ ಕುಡಿಸುತ್ತಾರೆ. ಹೀಗೆ ಉಪ್ಪು ಜೀವದಾಯಕವಾಗಿಯೂ ಕಾರ್ಯ ನಿರ್ವಹಿಸುತ್ತದೆ.

ಕೊತ್ತಂಬರಿ ಬೀಜ..... ಧನಿಯ ಪುಡಿ, ಕೊತ್ತಂಬರಿ ಬೀಜದ ಪುಡಿ ಎಂದು ಕರೆಯಲ್ಪಡುವ ಮಸಾಲೆ ಪದಾರ್ಥವು ಅಡುಗೆಯ ಸ್ವಾಧವನ್ನು ಹೆಚ್ಚಿಸುತ್ತದೆ. ಅಡುಗೆಗೆಂದೆ ತಯಾರಿಸುವ ಮಸಾಲೆ ಪದಾರ್ಥಗಳಲ್ಲಿ ಕೊತ್ತಂಬರಿ ಬೀಜಕ್ಕೆ ಅಗ್ರಸ್ಥಾನ. ಹೊಟ್ಟೆ ಉಬ್ಬರವಾದರೆ ಕೊತ್ತಂಬರಿ ಬೀಜದ ಕಷಾಯ ರಾಮಬಾಣ. ಕೊತ್ತಂಬರಿ ಬೀಜ ಜೀರಿಗೆಯ ಮಿಶ್ರಣದ ಕಷಾಯ ಅತ್ಯಂತ ಆರೋಗ್ಯಕರವಾಗಿದ್ದು ಚಹಾ, ಕಾಫಿ ಸೇವನೆ ಮಾಡದ ಜನರಿಗೆ ಅನುಕೂಲಕರವಾದ ಪೇಯ. ದೇಹಕ್ಕೆ ತಂಪು ಗುಣವನ್ನು ನೀಡುವ ಅಡುಗೆಗೆ ವಿಶಿಷ್ಟ ಸ್ವಾದವನ್ನು ಕೊಡುವ ಹುರಿದರೆ ಘಮ್ಮೆಂಬ ಪರಿಮಳ ಮನೆಎಲ್ಲಾ ಹರಡುವ ಬಹುಮುಖ್ಯ ಮಸಾಲೆ ಪದಾರ್ಥ ಕೊತ್ತಂಬರಿ ಬೀಜದ ಪುಡಿ ಅಡುಗೆಗೆ ಬೇಕೇ ಬೇಕು.


ಅಜವಾನ ಇಲ್ಲವೇ ಓಂ ಕಾಳು ಎಂದು ಕರೆಯಲ್ಪಡುವ ಪದಾರ್ಥ ಜೀರ್ಣಕಾರಿಯಾಗಿಯೂ, ಶುಂಠಿ 
ಉಷ್ಣತೆಯನ್ನು ಹೆಚ್ಚಿಸುವ ಜೊತೆ ಜೊತೆಗೆ ಪಾಚಕ ಶಕ್ತಿಯನ್ನು ಹೆಚ್ಚಿಸುವ, ಬೆಲ್ಲವು ಅಪಾರ ಖನಿಜಾಂಶಗಳನ್ನು ಹೊಂದಿದ್ದು ಅಡುಗೆಯ ಸ್ವಾದವನ್ನು ಹೆಚ್ಚಿಸುವುದಲ್ಲದೆ ಹಲವಾರು ಸಿಹಿ ಖಾತೆಗಳಿಗೆ ಒದಗಿ ಬರುವುದರಿಂದ ಆರೋಗ್ಯಕ್ಕೆ ಪುಷ್ಟಿದಾಯಕವೂ ಹೌದು. ಅಡುಗೆಯಲ್ಲಿ ಉಪಯೋಗಿಸುವ ಅತಿ ದೊಡ್ಡ ಜೆಡ್ಡಿನ ಪದಾರ್ಥ ಅಡುಗೆಯ ಸ್ವಾದವನ್ನು ಹೆಚ್ಚಿಸುತ್ತದೆ, ಊಟದ ತೀಕ್ಷ್ಣತೆಯನ್ನು ಕಡಿಮೆಗೊಳಿಸುವ, ಅತ್ಯುತ್ಕೃಷ್ಟ ಪದಾರ್ಥ. ದೇಹದ ಹಲವಾರು ನೋವುಗಳನ್ನು ನಿವಾರಿಸುವ ಶಕ್ತಿ ತುಪ್ಪಕ್ಕೆ ಇದೆ. ಮೆಂತೆ ಕಾಳು ಕೂಡ ಒಳ್ಳೆಯ ಆರೋಗ್ಯಕರ ವಸ್ತುವಾಗಿದ್ದು ಅಜೀರ್ಣ, ಹುಳಿತೇಗಿನಂತಹ ಸಮಸ್ಯೆಗಳಿಗೆ ಒಳ್ಳೆಯ ಮನೆಮದ್ದು. ನೆನೆ ಹಾಕಿ ಮೊಳಕೆ ಬರಿಸಿದ ಮೆಂತ್ಯ ಕಾಳು ಮಧುಮೇಹಕ್ಕೆ ಉತ್ತಮ ಮನೆಮದ್ದಾಗಿದ್ದು, ಬೊಜ್ಜು ಕರಗಿಸಲು ಕೂಡ ಸಹಾಯಕಾರಿ.


ಹೀಗೆ ನಮ್ಮ ಅಡುಗೆ ಮನೆಯಲ್ಲಿರುವ ಹತ್ತು ಹಲವು ಪದಾರ್ಥಗಳ ಸಂದರ್ಭೋಚಿತ ಬಳಕೆ ಉತ್ತಮ ಆರೋಗ್ಯವನ್ನು ತಂದು ಕೊಡುವುದಲ್ಲದೆ ನಮ್ಮನ್ನು ಅನಾರೋಗ್ಯಕ್ಕೆ ಈಡು ಮಾಡುವುದರಿಂದ ತಪ್ಪಿಸುತ್ತದೆ. ಆದ್ದರಿಂದಲೇ ಪ್ರಾಚೀನ ಕಾಲದಿಂದಲೂ ನಮ್ಮ ಆಹಾರ ಪದಾರ್ಥಗಳು ಔಷಧಿಯಂತೆಯೂ ಅಡುಗೆ ಮನೆಯೇ ಔಷಧಾಲಯದಂತೆಯೂ ಅಮ್ಮನೇ ಮೊತ್ತ ಮೊದಲ ವೈದ್ಯಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top