ಕನ್ನಡ ಸಾರಸ್ವತ ಲೋಕದ ಬಾನಂಗಳದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಸದಾ ಮಿನುಗುವ ನಕ್ಷತ್ರವಿದ್ದಂತೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರಿತ್ತ ಕೊಡುಗೆ ವಿಶಿಷ್ಟ, ವಿಭಿನ್ನ, ವಿನೂತನ, ವೈವಿಧ್ಯ ಹಾಗೂ ವಿವೇಕಯುಕ್ತ. ಹೀಗಾಗಿಯೇ ಸುಮಾರು ಐವತ್ತು ವರ್ಷಗಳ ಹಿಂದಿನ ಅವರ ಕಥಾ ಸಂಕಲನದಲ್ಲಿನ ಒಂದು ಕಿರುಕತೆ ಅದೇ ಹೆಸರಿನೊಂದಿಗೆ ಸಿನಿಮಾ ಆಗಿ ಅಂದಿನ ಇಂಟಿಮೇಟ್ ಕಾಲದಿಂದ ಹಿಡಿದು ಇಂದಿನ ಇಂಟರ್ನೆಟ್ ಜಮಾನದವರೆಗೂ ಪರಿಣಾಮಕಾರಿಯಾಗಿ ಪ್ರಸ್ತುತವಾಗುವ ಅಂಶಗಳನ್ನು ಹೊಂದಿರುವುದೇ ಪೂಚಂತೆಯವರ ಬರಹಕ್ಕಿರುವ ಗೈರತ್ತು ಗಮ್ಮತ್ತು, ತಾಕತ್ತು, ಹಾಗೂ ಅವರದ್ದೇ ಆದ ಶೈಲಿಯ ಗತ್ತು.
ಹತ್ತೊಂಬತ್ತನೂರ ಎಪ್ಪತ್ಮೂರರಲ್ಲಿ ರಚಿತವಾದ ತೇಜಸ್ವಿಯವರ ಈ ಚಂದದ ಕತೆಗೆ ಶಶಾಂಕ್ ಸೋಗಲ್ ಅಚ್ಚುಕಟ್ಟಾದ ನಿರ್ದೇಶನದ ಪಕ್ಕಾ ಕನ್ನಡ ಸೊಗಡಿನ ಪ್ರತಿಭೆಗಳನ್ನು ಪೋಣಿಸಿ ಒಂದು ಅದ್ಭುತವಾದ ದೃಶ್ಯಕಾವ್ಯದ ಚಿತ್ತಾರವನ್ನೇ ಚಂದನವನದಲ್ಲಿ ಬಿಡಿಸಿದ್ದಾರೆ. ಈ ಸಿನಿಮಾ ನೋಡುತ್ತಿದ್ದರೆ ನೀವು ಸಾಕ್ಷಾತ್ ಅಬಚೂರಿನಲ್ಲೇ ಇದ್ದಂತೆ ಅನಿಸಿ ನಿಮ್ಮ ಬಾಲ್ಯದ ಆಟ, ಕಾಲೇಜು ದಿನಗಳ ತುಂಟಾಟ, ಕ್ರಿಕೆಟ್ ಮೈದಾನದ ಹೋರಾಟ, ಹುಡುಗಿಯರಿರುವ ತರಗತಿಯ ಪರದಾಟ ಎಲ್ಲವನ್ನೂ ಮತ್ತೇ ನೆನಪಿಸಿ ಮೈಮನಗಳು ಪುಳಕಗೊಳ್ಳುವಂತೆ ಮಾಡುತ್ತದೆ. ಜಾತಿ, ಮತ, ಧರ್ಮಗಳಿದಾಚೆಗಿನ ಮನುಷ್ಯ ಧರ್ಮ, ಪ್ರೀತಿ, ಸ್ನೇಹ, ಬಂಧುತ್ವ ಇವುಗಳಿಗಿರುವ ಅಸಾಧಾರಣ ಮೌಲ್ಯಗಳು ಕೇವಲ ಮುಗ್ಧತೆಯ ಮುಸುಕಿನಲ್ಲೇ ಸದ್ದಿಲ್ಲದೇ ಅನಾವರಣಗೊಳ್ಳುತ್ತಾ ಹೋಗುತ್ತವೆ. ಅದರಲ್ಲೂ ಜಾತಿ ಧರ್ಮಗಳ ನಡುವಿನ ಶ್ರೇಷ್ಠತೆಯ ಸಂಘರ್ಷ ತಾರಕಕ್ಕೇರಿರುವ ಇಂದಿನ ಸಂಕಷ್ಟದ ದಿನಗಳಲ್ಲಿ "ಡೇರ್ ಡೆವಿಲ್ ಮುಸ್ತಾಫ"ದಂತಹ ಚಿತ್ರಗಳು ಮಾನವೀಯ ಸೆಲೆಯತ್ತ ಮನುಷ್ಯನನ್ನು ಮುಖ ಮಾಡುವಂತೆ ಪ್ರೇರೇಪಿಸುವಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತವೆ.
ಜಮಾಲ್ ಅಬ್ದುಲ್ ಮುಸ್ತಾಫ ಹುಸೇನ್:
ಕೇವಲ ಹಿಂದೂಗಳೇ ಇರುವ ಅಬಚೂರಿನ ಕಾಲೇಜಿಗೆ ಮೊದಲ ಬಾರಿಗೆ ಒಬ್ಬ ಮುಸ್ಲಿಂ ವಿದ್ಯಾರ್ಥಿ ಪ್ರವೇಶ ಮಾಡುತ್ತಾನೆ. ಆರಂಭದಲ್ಲಿ ಕಾಲೇಜಿನಲ್ಲಿ ಎಲ್ಲರಿಗೂ ಇವನಾರೆಂಬ ಬಗೆಗೆ ಕುತೂಹಲ, ಮುಸ್ಲಿಮರ ಬಗೆಗೆ ಇರಬಹುದಾದ ದಿಗಿಲು, ಆತಂಕ ಹಾಗೂ ಅವರ ವಿಚಿತ್ರ ವೃತ್ತಿಗಳ ಕುರಿತಾದ ಕೌತುಕ ಇವೆಲ್ಲಾ ಸೇರಿ ಮುಸ್ತಾಫನನ್ನು ಯಾವುದೋ ಅನ್ಯ ಲೋಕದ ಗ್ರಹವೆಂಬಂತೆ ಭಾವಿಸಿರುತ್ತಾರೆ. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಮುಸ್ತಾಫ ಘಜಿನಿ ಮಹಮ್ಮದ್‌ನ ಕರಾಳ ಸಂತತಿಯಂತಿರದೇ ನೋಡಲು ಲಕ್ಷಣವಾಗಿರುವ ಮುಗ್ಧ ಯುವಕನಾಗಿರುವುದು ಎಲ್ಲರ ಸಮಾಧಾನಕ್ಕೆ ಕಾರಣವಾಗುತ್ತದೆ. ಅವನನ್ನು ಕಂಡರೆ ಆರಂಭದಿಂದಲೂ ಅವರದ್ದೇ ಆದ ಕಾರಣದಿಂದಾಗಿ ಅಸಹ್ಯಿಸಿಕೊಳ್ಳುತ್ತಲೇ ಇದ್ದ ರಾಮಾನುಜ ಅಯ್ಯಂಗಾರಿ ಹಾಗೂ ಅವನ ಕಾಲೇಜು ಪಟಾಲಂ ಗಳಾದ ಸೀನ, ಶಂಕರ, ಪುಲಿಕೇಶಿ, ಸಂಪತ್ ಮುಂತಾದವರಿಂದ ಮುಸ್ತಾಫನಿಗೆ ಕಾಲೇಜಿನ ಒಳಗೂ ಹೊರಗೂ ಹೆಜ್ಜೆ ಹೆಜ್ಜೆಗೂ ಆಗುವ ತೊಂದರೆ, ಕಿರಿಕ್ಕು, ಅಡಚಣೆಗಳನ್ನು ಮುಸ್ತಾಫ ತನ್ನ ಮುಗ್ಧತೆಯಿಂದಲೇ ಎದುರಿಸಿ ನಿಲ್ಲುತ್ತಾನೆ.
ಈ ಮೊದಲೇ ಕೋಮು ಸಂಘರ್ಷದ ಹಣೆಪಟ್ಟಿ ಕಟ್ಟಿಕೊಂಡಿದ್ದ ಅಬಚೂರು, ಗಣೇಶ ವಿಸರ್ಜನೆ ಸಮಯದಲ್ಲಿ ಆದ ಯಾವುದೋ ಪ್ರಮಾದದಿಂದ ಸ್ಥಿತಿ ಮತ್ತಷ್ಟು ಬಿಗಡಾಯಿಸುವಂತಿರುತ್ತದೆ. ಆದರೆ ಮುಸ್ತಾಫನ ಮಧ್ಯಪ್ರವೇಶದಿಂದ ಅವನು ಬೆಂಕಿ ತಗುಲಿದ್ದ ಹೋರಿಯನ್ನು ಆಸಮಯದಲ್ಲಿ ಪಳಗಿಸಿದ್ದರಿಂದ ಆಗಬಹುದಾಗಿದ್ದ ಈ ಬಾರಿಯೂ ಆಗಬಹುದಾಗಿದ್ದ ಕೋಮು ಘರ್ಷಣೆ ತಪ್ಪಿ ಕಾಲೇಜಿನ ಹಾಗೂ ಊರ ಜನರ ದೃಷ್ಟಿಯಿಂದ ಅವನು ಹೀರೋ ಆಗಿಬಿಡುತ್ತಾನೆ. ಇದು ಅಯ್ಯಂಗಾರಿ ಅಂಡ್ ಪಟಾಲಂ ರ ಅಸೂಯೆಯ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ.
ಒಮ್ಮೆ ಕ್ಲಾಸ್ ಗೆ ಟೊಪ್ಪಿ ಧರಿಸಿಬಂದ ಮುಸ್ತಾಫ ಎಲ್ಲರ ಗಮನ ಸೆಳೆಯುತ್ತಾನೆ. ಆದರೆ ಆ ಟೊಪ್ಪಿ ತೆಗೆಯಬೇಕೆಂಬ ಅಯ್ಯಂಗಾರಿ ಗ್ಯಾಂಗಿನ ಹಾಗೂ ಮೇಷ್ಟ್ರ ಒತ್ತಾಯಕ್ಕೆ ಕೇರ್ ಮಾಡದ ಮುಸ್ತಾಫ ತಾನು ಡೇರ್ ಅಂಡ್ ಡೆವಿಲ್ ಎಂಬುದನ್ನು ಓಪನ್ನಾಗಿ ಹೇಳುತ್ತಾನೆ. ಆ ಸಮಸ್ಯೆಯನ್ನು ಪ್ರಿನ್ಸಿಪಾಲರೇ ನವಿರಾಗಿ ಬಗೆಹರಿಸುತ್ತಾರೆ.
ಈ ನಡುವೆ ಬ್ಯಾಟ್ ಬಾಲ್, ಕ್ರಿಕೆಟ್ ಪಂದ್ಯಗಳಲ್ಲಾದ ಘಟನೆಗಳು, ಕಾಲು ಕೆರೆದುಕೊಂಡು ಮುಸ್ತಾಫನ ಮೇಲೆ ಹಲ್ಲೆ ಮಾಡಿದ ಗ್ಯಾಂಗ್ ಕೊನೆಗೆ ಅವನ ನೆಚ್ಚಿನ ಟೊಪ್ಪಿಯನ್ನು ಕೆಳಕ್ಕೆ ಬೀಳಿಸಿ ಅದನ್ನು ತುಳಿದು ಹಾಕುತ್ತಾರೆ. ಅದರಿಂದ ಮುಸ್ತಾಫನಿಗೆ ತೀವ್ರ ನೋವಾಗಿ ಅದರ ಸೇಡನ್ನು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಜಾದೂಗಾರನಾಗಿ ಅಯ್ಯಂಗಾರಿಯ ಜರ್ಕಿನ್ ನ ಪಾಕೇಟಿನಲ್ಲಿ ಕೋಳಿಮೊಟ್ಟೆ ಹೊಡೆಯುವ ಮೂಲಕ ಮುಸ್ತಾಫ ಸೇಡು ತೀರಿಸಿಕೊಳ್ಳುತ್ತಾನೆ. ಈ ಘಟನೆಯಿಂದಾಗಿ ಅವರಿಬ್ಬರ ನಡುವೆ ವೈಮನಸ್ಯ ಇನ್ನಷ್ಟು ಹೆಚ್ಚಾಗುತ್ತದೆ.
ಈ ಮಧ್ಯೆ ಕಾಲೇಜು ಗೆಳತಿ ರಮಾಮಣಿ ಇವನೊಟ್ಟಿಗೆ ಸಲಿಗೆಯಿಂದ ಇರುವುದೂ ಸಹ ಅಯ್ಯಂಗಾರಿ ಗ್ಯಾಂಗ್‌ನ ಅಸಹನೆ ಹೆಚ್ಚುವಂತೆ ಮಾಡಿ ಮುಸ್ತಾಫನನ್ನು ಕಾಲೇಜು ಬಿಡಿಸುವ ಪ್ಲಾನ್ ಮಾಡಿ ಅದನ್ನು ಅಬಚೂರಿನ ಸುಲ್ತಾನ್‌ಪುರಿಯ ಮುಸ್ಲಿಂ ಯುವಕರ ವಿರುದ್ಧ ಕ್ರಿಕೆಟ್ ಪಂದ್ಯದ ಸೋಲು-ಗೆಲುವಿಗೆ ತಳುಕು ಹಾಕಿ, ಮುಸ್ತಾಫನನ್ನೇ ಟೀಂ ಕ್ಯಾಪ್ಟನ್ ಮಾಡಿ ಮುಸ್ಲಿಂ ತಂಡದ ವಿರುದ್ಧ ಬೇಕಾಗಿಯೇ ಸೋಲುವಂತೆ ಆಡುವ ರಾಮಾನುಜ ಅಯ್ಯಂಗಾರಿಯ ಪ್ಲಾನ್ ಯಶಸ್ವಿಯಾಗುತ್ತದೆಯೇ...!
ಚಿತ್ರದ ಕೊನೆಗೆ ನೀಡಿರುವ ಸಂದೇಶ ಹಾಗೂ ಕ್ಲೈಮ್ಯಾಕ್ಸ್‌ನ ಚಿತ್ರಣ ಪ್ರೇಕ್ಷಕರಲ್ಲಿ ವಿಶೇಷ ಕುತೂಹಲ ಹುಟ್ಟಿಸಿ ಮುಸ್ತಾಫನ ಬಗೆಗೆ ಹಾಗೂ ಸಿನಿಮಾದ ಸದುದ್ದೇಶದ ಬಗೆಗೆ ಭೇಷ್ ಎನ್ನುವಂತೆ ಮಾಡುತ್ತದೆ.
ಸಾಹಸಸಿಂಹ ವಿಷ್ಣುವರ್ಧನ್ ತಮ್ಮ ಮೊದಲ ಚಿತ್ರ ನಾಗರಹಾವಿನ ರಾಮಾಚಾರಿಯಾಗಿ ಆ ಪಾತ್ರವನ್ನು ಹೇಗೆ ಆವಾಹಿಸಿ ಕೊಂಡಿದ್ದರೋ ಅದೇ ರೀತಿಯಲ್ಲಿ ಮುಸ್ತಾಫನ ಪಾತ್ರದಲ್ಲಿ ಶಿಶಿರ್ ಬೈಕಾಡಿ ಹಾಗೂ ರಾಮಾನುಜ ಅಯ್ಯಂಗಾರಿಯ ಪಾತ್ರದಲ್ಲಿ ಆದಿತ್ಯ ಅಶ್ರೀ ಆ ಪಾತ್ರಗಳೇ ಆಗಿ ಹೋಗಿದ್ದಾರೆ. ಕನ್ನಡದ ಅದ್ಭುತ ರಂಗಪ್ರತಿಭೆಗಳ ಸಮ್ಮಿಲನವೇ ಇಲ್ಲಿದೆ. ಅದಕ್ಕೆ ಸಾಥ್ ಕೊಡುವಂತೆ ಮಂಡ್ಯ ರಮೇಶ್, ಉಮೇಶ್, ಪೂರ್ಣಚಂದ್ರ, ಪ್ರೇರಣಾ, ಮೈಸೂರ್ ಆನಂದ್, ವಿಜಯ್ ಶೋಭರಾಜ್ ಮುಂತಾದವರ ಸಹಜಾಭಿನಯವಿದೆ. ನವನೀತ್ ಶ್ಯಾಮ್ ರವರ ಸಹನೀಯ ಹಿನ್ನೆಲೆ ಸಂಗೀತವೂ ಸಿನಿಮಾದ ಪ್ಲಸ್ ಪಾಯಿಂಟು. ಜೊತೆಗೆ ರಾಹುಲ್‌ರ ಛಾಯಾಗ್ರಹಣ ದಲ್ಲಿ ಅಂದಿನ ಅಬಚೂರಿನ ಅಂದವಾದ ಪ್ರಕೃತಿಯನ್ನೇ ಸೆರೆಹಿಡಿದಿದ್ದಾರೆ.
ಕೆಲ ಅನವಶ್ಯಕ ದೃಶ್ಯಗಳನ್ನು ಹಾಗೂ ಡೈಲಾಗುಗಳನ್ನು ಕತ್ತರಿಸಿ ಚಿತ್ರದ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಿ ನವಿರು ಹಾಸ್ಯದ ಜೊತೆಗೆ ಮತ್ತಷ್ಟು ಕಾಮಿಡಿಗೆ ಒತ್ತು ಕೊಟ್ಟಿದ್ದಲ್ಲಿ ಚಿತ್ರ ಕೆಲವೆಡೆ ಬೋರ್ ಎನಿಸದೇ ಇನ್ನಷ್ಟು ಆಕರ್ಷಕವಾಗಿರುತ್ತಿತ್ತು. ಕನ್ನಡದ ಅಪ್ರತಿಮ ಸಾಹಿತಿಯ ಕಿರುಕತೆಗೆ ಸಲ್ಲಬೇಕಾದ ಗೌರವಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ದ್ವೇಷ ಅಳಿಸಿ ಪ್ರೀತಿ ಅರಳಿಸುವ ಪ್ರಯತ್ನವಾಗಿ ಮುಸ್ತಾಫ ಸಿನಿಮಾ ಮೂಡಿ ಬಂದಿದೆ.
- ಹಿರಿಯೂರು ಪ್ರಕಾಶ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ