ಜಾತಃ ಕಂಸ ವಧಾರ್ಥಾಯ ಭೂ ಭಾರ ಹರಣಾಯ ಚ ಎಂದು ಹೇಳಿದಂತೆ ಶ್ರೀಕೃಷ್ಣನ ಅವತಾರವಾಗಿದೆ. ಕಂಸನೇ ಮೊದಲಾದ ದೈತ್ಯರ ಸಂಹಾರಕ್ಕೋಸ್ಕರ, ಸಜ್ಜನರ ರಕ್ಷಣೆಗಾಗಿ, ಧರ್ಮದ ಉಳಿವಿಗಾಗಿ ಈ ಭುವಿಯಲ್ಲಿ ವಸುದೇವ, ದೇವಕಿಯರ ಮೂಲಕ ಜನ್ಮ ತಳೆದಿದ್ದಾನೆ.
ಶ್ರೀಕೃಷ್ಣನವ್ಯಕ್ತಿ ಚಿತ್ರಣವನ್ನು ಆಧುನಿಕ ಚಿಂತಕರು ತಮ್ಮ ದೃಷ್ಟಿಕೋನದಲ್ಲಿ (ಮೂಗಿನ ನೇರಕ್ಕೆ) ವಿಭಿನ್ನವಾಗಿ ಬಿಂಬಿಸುತ್ತಿದ್ದಾರೆ. ವ್ಯಕ್ತಿತ್ವದ ಬಗ್ಗೆ ಶಂಕೆಯೊಂದಿಗೆ ತಪ್ಪು ಚಿತ್ರಣವನ್ನು ನೀಡಲಾಗುತ್ತಿದೆ. ಆದರೆ ಶ್ರೀಕೃಷ್ಣದೇವರು ಮಾಡಿದ ಪ್ರತಿಯೊಂದು ಕಾರ್ಯಗಳಲ್ಲೂ ಸಹಿತ ಪ್ರಾಮಾ ಣಿಕತೆ, ನಿಷ್ಕಪಟತನ, ಕಾರ್ಯ ಶ್ರದ್ಧೆ, ಪರಿಶುದ್ಧತೆ ಕಂಡು ಬರುತ್ತಿದೆ.
ಶ್ರೀಕೃಷ್ಣ ದೇವರ ಮೇಲೆ ಜಾರ (ಸ್ತ್ರೀ ಲಂಪಟ) ಎನ್ನುವ ಆರೋಪ ಹೊರಿಸಲಾಗಿದೆ. ಆದರೆ ಶಾಸ್ತ್ರದ ಪ್ರಕಾರ ಒಂದಂತೂ ಸತ್ಯ, ಗೋಪಿಕೆಯರ ಜತೆ ಆಟವಾಡುತ್ತಿದ್ದ ಶ್ರೀಕೃಷ್ಣನಿಗೆ ಅಗ 6 ವರ್ಷ. ಬಾಲ್ಯದ ಈ ಹರಯದಲ್ಲಿ ಯಾರಿಗೂ ಸಹಿತ ಕೆಟ್ಟ ಭಾವನೆ ಮೂಡವುದು ಸಾಧ್ಯವಿಲ್ಲ. ಹೀಗಾಗಿ ಆ ವಯಸ್ಸಿಗೆ ಗೋಪಿಕೆಯರ ಜತೆಗಿನ ಶ್ರೀಕೃಷ್ಣನ ಆಟದ ಹಿಂದೆ ಕಾಮದ ಲೇಪನವಿಲ್ಲ. ಗೋಪಿಕೆಯರನ್ನು ಅನುಗ್ರಹಿಸುವ ಪ್ರೀತಿ, ನಿಷ್ಕಲ್ಮಶ ಭಾವವಷ್ಟೇ ಇದೆ.
ಶ್ರೀಕೃಷ್ಣ ಕಪಟತನ ತೋರಿದ್ದಾನೆ, ಪಾಂಡವ ಪಕ್ಷಪಾತಿ, ಕೌರವರ ಸೋಲಿಗೆ ಶ್ರೀಕೃಷ್ಣನ ಕುಟಿಲ ನೀತಿಯೇ ಕಾರಣ ವೆಂಬ ಆರೋಪವಿದೆ. ಆದರೆ ಒಂದು ಮಾತಂತೂ ಸತ್ಯ. ನಿಕೃತ್ಯಾ ನಿಕೃತಿಂ ಹನ್ಯಾತ್.. ಅರ್ಥಾತ್ ಯಾರು ವಾಮ ಮಾರ್ಗದಿಂದ ಮತ್ತೊಬ್ಬರನ್ನು ಸೋಲಿಸುತ್ತಾರೋ ಅವ ರನ್ನು ವಾಮ ಮಾರ್ಗದಿಂದಲೇ ಸೋಲಿಸಬೇಕೆನ್ನುವ ನೀತಿ ಯಿದೆ. ಪಾಂಡವರನ್ನು ವಾಮ ಮಾರ್ಗದಿಂದಲೇ ಜೂಜಿನ ಮೂಲಕ ಸೋಲಿಸಿ ಕಾಡಿಗೆ ಅಟ್ಟಿದ ಕೌರವರನ್ನು ಕುಟಿಲ ನೀತಿಯಿಂದಲೇ ಶ್ರೀಕೃಷ್ಣ ಸೋಲಿಸಿದ್ದಾರೆ.
ಶ್ರೀಕೃಷ್ಣ ದೇವರ ಮೂಲ ಉದ್ದೇಶ ಯಥೋ ಧರ್ಮಃ ತತೋ ಜಯಃ ಎಂಬುದಾಗಿದೆ. ಎಲ್ಲಿ ಧರ್ಮ ಇದೆಯೋ ಅಲ್ಲಿ ಜಯ ಸಿಗಬೇಕು. ಧರ್ಮದ ಪ್ರತೀಕವಾದ ಪಾಂಡವರ ಜಯ ಪ್ರಾಪ್ತಿಗಾಗಿ ಶ್ರೀಕೃಷ್ಣ ಕೆಲವು ಉಪಾಯಗಳನ್ನು ಮಾಡಿದ್ದಾನೆ. ಶ್ರೀಕೃಷ್ಣನ ಯಾವುದೇ ಶಂಕೆಗೆ ಆಸ್ಪದವಿಲ್ಲದ ವ್ಯಕ್ತಿತ್ವ, ನೀತಿಗಳನ್ನು ನಾವು ಬದುಕಿನಲ್ಲಿ ಅಳವಡಿಸಿ ಕೊಂಡರೆ ಸಾಧನೆ, ಸಾರ್ಥಕ್ಯ ಸಾಧ್ಯ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ