ಹೆಣ್ಣು ಕುಲದ ಕಣ್ಣೀರನ್ನೇ ಒರೆಸಿತು ಶ್ರೀಕೃಷ್ಣಾವತಾರ. ಕೃಷ್ಣನು ಮೊದಲು ಕಣ್ಣೀರು ಒರೆಸಿದ್ದು ಬಂಧನದಲ್ಲಿದ್ದ ತನ್ನ ತಾಯಿಯ. ಸದಾಚಾರದ ಯಾವ ಹೆಣ್ಣನ್ನೂ ಕೃಷ್ಣ ರಕ್ಷಿಸದೇ ಬಿಡಲಿಲ್ಲ. `ಹೆಣ್ಣು ಸಮಾಜದ ಕಣ್ಣು' ಆ ಕಣ್ಣಲ್ಲಿ ನೀರು ತುಂಬಿದರೆ, ಸಮಾಜವು ಸರಿಯಾಗಿ ಗೋಚರಿಸದು. ಆ ಕಣ್ಣೀರನ್ನು ಎಲ್ಲರೂ ಒರೆಸಲೇಬೇಕು. ಇದನ್ನು ಕೃಷ್ಣ ತಾನು ಮಾಡಿ ತೋರಿಸಿದ.
ಕುಂತಿಯ ಆಶಯದಂತೆ ಶ್ರೀ ಕೃಷ್ಣನು ಪಾಂಡವರಿಗೆ ರಕ್ಷಕನಾದ. ಅವರಿಗೆ ಕಷ್ಟಬಂದಾಗಲೆಲ್ಲ ಈತ ಸಹಾಯ ಮಾಡಿದನು. "ಯಾವಾಗಲೂ ನಮಗೆ ಕೃಷ್ಣ ಕಷ್ಟಗಳೇ ಬರಲಿ. ಆಗ ನೀನು ಓಡಿ ಒಂದು ರಕ್ಷಿಸುವೆ. ನಿನ್ನ ದರ್ಶನ ಭಾಗ್ಯ ನಮಗೆ ಲಭಿಸುವುದು. ಇದನ್ನು ಅನುಗ್ರಹಿಸು'' ಎಂದು ಕುಂತಿಯು ಕೃಷ್ಣನಲ್ಲಿ ಬೇಡಿಕೊಳ್ಳುತ್ತಾಳೆ. ಕುಂತಿಯ ಈ ಮಾತನ್ನು ಕೃಷ್ಣನು ನಡೆಸಿ ತೋರಿಸಿದನು.
ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಕೃಷ್ಣನು ಅವಳನ್ನು ರಕ್ಷಿಸಿದ. ಅವಳ ಕಣ್ಣೀರು ಒರೆಸಿದ. ಅವಳಿಗೆ ಅಕ್ಷಯ ವಸ್ತ್ರ ನೀಡಿದ. ವನವಾಸದಲ್ಲಿದ್ದಾಗ ದುರ್ಯೋ ಧನನ ಮಾತಿನಂತೆ ದುವಾಸರು ಪರೀಕ್ಷಿಸಲು ಬಂದಾಗಲೂ ಕೃಷ್ಣನು ದ್ರೌಪದಿಯ ಸಹಾಯಕ್ಕೆ ಬಂದನು. ದ್ರೌಪದಿಯ ಕಣ್ಣೀರನ್ನು ಶಾಶ್ವತವಾಗಿ ತೊಡೆದು ಹಾಕಲು ಕೃಷ್ಣನ ಸಾರಥ್ಯದಲ್ಲಿ ಕುರುಕ್ಷೇತ್ರದಲ್ಲಿ ಘನ ಯುದ್ಧವೇ ನಡೆಯಿತು. ಕೌರವರ ನಾಶವಾಯಿತು. ದ್ರೌಪದಿಗೆ ಶ್ರೀಕೃಷ್ಣನ ಕಾರ್ಯದಿಂದ ಸಂತೋಷವೂ ಆಯಿತು.
ಕೃಷ್ಣನ ತಂಗಿ ಸುಭದ್ರ. ಅವಳ ಇಚ್ಛೆಯಂತೆ ಅರ್ಜುನನೊಡನೆ ಮದುವೆಯನ್ನು ಕೃಷ್ಣ ಮಾಡಿಸಿದನು. ತಂಗಿಯ ಕಣ್ಣೀರನ್ನು ಒರೆಸಿದ. ಶ್ರೀಕೃಷ್ಣನನ್ನು ಬಯಸಿದ ರುಕ್ಮಿಣಿಗೂ ಶ್ರೀಕೃಷ್ಣ ಮೋಸಮಾಡಲಿಲ್ಲ. ಅವಳ ಇಚ್ಛೆಯಂತೆ ಮದುವೆಯೂ ಆದ. ನರಕಾಸುರನ ಬಂಧನದಲ್ಲಿದ್ದ ಹದಿನಾರು ಸಾವಿರ ನೂರು ಕನ್ಯೆಯರ ಕಣ್ಣೀರನ್ನು ಶ್ರೀಕೃಷ್ಣ ಒರೆಸಿದನು. ಅವರ ಇಚ್ಛೆಯಂತೆ ಅವರೆಲ್ಲರನ್ನೂ ಶ್ರೀಕೃಷ್ಣ ಮದುವೆ ಯಾದನು. ಉತ್ತರೆಯ ಕಣ್ಣೀರನ್ನೂ ಶ್ರೀಕೃಷ್ಣ ಒರೆಸಿದ. ಅವಳಿಗೆ ಸತ್ತು ಹುಟ್ಟಿದ ಮಗುವನ್ನು ಶ್ರೀಕೃಷ್ಣನು ಬದುಕಿಸಿ ಕೊಟ್ಟನು.
ಹಡೆದ ತಾಯಿ ದೇವಕಿಗೆ ಸಂತಸವನ್ನು ಶ್ರೀಕೃಷ್ಣ ಕೊಟ್ಟನು. ಸಾಕಿದ ತಾಯಿ ಯಶೋದೆಗೂ ಸಂತಸವನ್ನು ತಂದ ಬಾಲ ಮುಕುಂದ. ಈ ಪ್ರಕಾರ ಶ್ರೀಕೃಷ್ಣ ಹೆಣ್ಣಿನ ಶೋಷಣೆಯನ್ನು ತಡೆದ. ಅವಳಿಗೆ ಸಹಾಯ ಮಾಡಿದ. ಸ್ತ್ರೀ ರಕ್ಷಣೆಯೂ ಧರ್ಮ ಕಾರ್ಯ ಎಂಬುದನ್ನು ಶ್ರೀಕೃಷ್ಣನು ಹೇಳಿದನು. ಅದೇ ರೀತಿ ತಾನು ಮಾಡಿ ತೋರಿಸಿದನು. ಇದೇ ಧರ್ಮವನ್ನು ನಾವೂ ಪಾಲಿಸಬೇಕು ಅಲ್ಲವೇ?
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ