ನಮ್ಮ ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂರು ವರುಷಗಳಿಗೊಮ್ಮೆ ಬರುವ ಅಧಿಕಮಾಸದ ಬಗ್ಗೆ ಚಿಕ್ಕ ವಿವೇಚನೆ ಇಲ್ಲಿದೆ.
ಸಂವತ್ಸರಕ್ಕೆ ದ್ವಾದಶ ಮಾಸಗಳಿರುತ್ತವೆ. ಆದರೆ ಮೂರು ವರ್ಷಕ್ಕೊಮ್ಮೆ ತ್ರಯೋದಶ ಮಾಸ ಬರುತ್ತದೆ. ಸೂರ್ಯ-ಚಂದ್ರರ ಗತಿಗಳಿಂದಾಗಿ ಪ್ರತಿ ವರ್ಷ ಹತ್ತುದಿನ ಅಂತರ ಬೀಳುತ್ತದೆ. ಅದನ್ನು ಮೂರು ವರ್ಷಕ್ಕೆ ಹೆಚ್ಚಿಗೆ ಹಿಡಿದು ಕಾಲಗಣನೆ ಮಾಡಲಾಗುತ್ತದೆ. ಅದುವೇ ಅಧಿಕ (ತ್ರಯೋದಶ) ಮಾಸ. ಇದು ಪುರುಷೋತ್ತಮನ ಎಲ್ಲ ಪುಣ್ಯ ಕಾರ್ಯಕ್ಕೂ ಉತ್ತಮ ಫಲ ದೊರೆಯುವುದರಿಂದ ಇದು ಪುಣ್ಯಮಾಸ ಎಂಬುದು ಸನಾತನಿಗಳ ನಂಬಿಕೆಯಾಗಿದೆ.
ಈ ಮಾಸದಲ್ಲಿ ಸೂರ್ಯ ಸಂಕ್ರಾಂತಿಯಾಗದ ಕಾರಣ ಮಂಗಲ ಕಾರ್ಯಗಳು ನಡೆಯುವುದಿಲ್ಲ. ಆದ್ದರಿಂದ ಇದು ಮಲಮಾಸ ಎಂದೂ ಕರೆಸಿಕೊಂಡಿದೆ. ಈ ಮಾಸದ ಕುರಿತು ಪುರಾಣ, ಉಪನಿಷತ್ತುಗಳಲ್ಲಿ ಉಲ್ಲೇಖವಾಗಿದೆ. ಸಾಕ್ಷಾತ್ ಮಹಾವಿಷ್ಣುವೇ ಇದನ್ನು ನಾರದರಿಗೆ ತಿಳಿಸಿದ್ದಾನೆ.
ಅಲ್ಲಿ ನಾರದ ಮುನಿಗಳು ಮೃತ್ಯುಲೋಕದಲ್ಲಿ ಸಂಚರಿಸಿದರು. ಅಲ್ಲಿನ ಜನ ಏನೆಲ್ಲ ಸೌಕರ್ಯವಿದ್ದರೂ, ಸುಖ-ಸಂಪತ್ತಿದ್ದರೂ ಒಂದಿಲ್ಲೊಂದು ತೊಂದರೆಯಿಂದ ದುಃಖತಪ್ತರಾಗಿದ್ದನ್ನು ನೋಡಿ ನಾರದರಿಗೆ ಖೇದವೆನಿಸಿತು. ಇದಕ್ಕೆ ಪರಿಹಾರ ತಿಳಿಯಲು ಅವರು ವೈಕುಂಠಕ್ಕೆ ತೆರಳುತ್ತಾರೆ.
ಅಲ್ಲಿ ಶ್ರೀಮಹಾವಿಷ್ಣುವು ಪುರುಷೋತ್ತಮನ ಧ್ಯಾನದಲ್ಲಿರುತ್ತಾನೆ. ಆಗ ನಾರದರು ಕೇಳುತ್ತಾರೆ ‘ದೇವಾಧಿದೇವ ನೀನು, ನೀನೇಕೆ ಮುರಳಿ ಲೋಲನನ್ನು ಧ್ಯಾನಿಸುತ್ತಿರುವೆ?’ ಎಂದು. ವಿಷ್ಣುವು ಹೇಳುತ್ತಾನೆ. ‘ನಾರದರೇ, ಇನ್ನೇನು ಅಧಿಕಮಾಸ ಆರಂಭವಾಗುತ್ತದೆ. ಮಾಸನಿಯಾಮಕ ಪುರುಷೋತ್ತಮನಾಗಿರುತ್ತಾನೆ. ಆತನನ್ನು ಧ್ಯಾನಿಸಿದರೆ ಸರ್ವರಿಗೂ ಸುಖ- ಸಂಪತ್ತು, ನೆಮ್ಮದಿ ಲಭಿಸುತ್ತದೆ. ಅದಕ್ಕೆ ಈ ಧ್ಯಾನ’ ಎನ್ನುತ್ತಾನೆ.
ಎಲ್ಲ ಮಾಸದಲ್ಲೂ ಶುಭ ಕಾರ್ಯಗಳು ನಡೆಯುತ್ತವೆ. ಅವುಗಳಿಗೆ ತನ್ನದೇ ಆದ ಮಹತ್ವದೊರೆತಿದೆ. ಆದರೆ ತನಗೆ ಅವಮಾನವಾಗುತ್ತಿದೆ ಎಂದು ಮಲಮಾಸ ನೊಂದುಕೊಂಡು ಮಹಾವಿಷ್ಣುವಿನಲ್ಲಿಗೆ ಬಂದು ತನ್ನ ದುಃಖ ಹೇಳಿಕೊಳ್ಳುತ್ತದೆ. ಆಗ ಶ್ರೀಮನ್ನಾರಾಯಣ ಮಲಮಾಸಕ್ಕೆ ಗೋ-ಲೋಕದ ದರ್ಶನ ಮಾಡಿಸುತ್ತಾನೆ. ಅಲ್ಲಿ ರತ್ನ ಖಚಿತವಾದ ಸಿಂಹಾಸನದ ಮೇಲೆ ಪುರುಷೋತ್ತಮ ವಿರಾಜಮಾನನಾಗಿದ್ದಾನೆ. ಅವನಿಗೆ ಶರಣಾದ ಮಲಮಾಸವು ತನಗಾದ ಅಪಮಾನದ ಬಗ್ಗೆ ತಿಳಿಸುತ್ತದೆ. ದಯಾಮಯನಾದ ಗೋವಿಂದ ‘ಹೇ ಮಲಮಾಸವೇ ಚಿಂತಿಸದಿರು, ಇನ್ನು ಮುಂದೆ ನೀನು ಮಾಸಗಳಲ್ಲಿಯೇ ಶ್ರೇಷ್ಠನೆನಿಸಿಕೊಳ್ಳುವೆ. ಜನರೆಲ್ಲ ಈ ಮಾಸದಲ್ಲಿ ದಾನ, ಧರ್ಮ, ಪುಣ್ಯಕಾರ್ಯ ಮಾಡುತ್ತಾರೆ. ಇದರಿಂದ ಅವರಿಗೆ ಅಧಿಕಪಟ್ಟು ಫಲಪ್ರಾಪ್ತವಾಗುತ್ತದೆ. ಅಲ್ಲದೇ ನೀನು ಪುಣ್ಯಮಾಸವಾಗಿ ಪರಿವರ್ತಿತವಾಗುವೆ’ ಎಂದು ಅಭಯ ನೀಡುತ್ತಾನೆ.
ಮಹತ್ವ: ಅಧಿಕ ಮಾಸದ ಮಹತ್ವ ತಿಳಿಸುವ ಅನೇಕ ಕಥೆ-ಉಪಕಥೆಗಳು ಇವೆ. ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿ ಶ್ರೀಕೃಷ್ಣನಿಗೆ ತಮ್ಮ ಕಷ್ಟಕ್ಕೆ ಪರಿಹಾರ ಸೂಚಿಸು ಎಂದು ಬೇಡುತ್ತಾಳೆ. ಅದಕ್ಕೆ ಶ್ರೀಕೃಷ್ಣ ‘ಇದೆಲ್ಲ ಪೂರ್ವಜನ್ಮದ ಕರ್ಮಫಲ; ಭೋಗಿಸಲೇಬೇಕು; ನಾನೇನೂ ಮಾಡಲಾಗದು. ನಿನ್ನ ಪತಿಗಳ ಜೂಜಾಡುವ ಬುದ್ಧಿಯಿಂದ ರಾಜ್ಯ ಹೊರಟುಹೋಗಿದೆ’ ಎಂದನು. ಖಿನ್ನಳಾದ ದ್ರೌಪದಿ ಪೂರ್ವಜನ್ಮದಲ್ಲಿ ನಾನೇನು ಅಪರಾಧ ಮಾಡಿದೆ ಅದನ್ನೂ ತಿಳಿಸು ಎಂದಾಗ, ಶ್ರೀಕೃಷ್ಣ ‘ಕಳೆದ ಜನ್ಮದಲ್ಲಿ ನೀನು ಮೇಧಾವಿಯೆಂಬ ಬ್ರಾಹ್ಮಣನ ಪುತ್ರಿ ಮೇಧಾವತಿ ಆಗಿದ್ದೆ. ಬಾಲ್ಯದಲ್ಲಿ ತಾಯಿ ತೀರಿಕೊಂಡಳು. ತಂದೆಯೇ ಅವಳನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿದ. ಅವಳ ಮದುವೆಗೂ ಮೊದಲೇ ಆತನೂ ಸತ್ತುಹೋದ. ಮೇಧಾವತಿ ಶಂಕರನ ತಪಸ್ಸು ಮಾಡುತ್ತಿದ್ದಳು. ದೂರ್ವಾಸ ಮುನಿಗಳು ಬಂದು ಯಾರ ತಪಸ್ಸು ಮಾಡುತ್ತಿರುವೆ ಎಂದು ಕೇಳಿದಾಗ ‘ಶಂಕರನ ತಪಸ್ಸು’ ಎಂದುತ್ತರಿಸುತ್ತಾಳೆ. ಮುನಿಗಳು ‘ಈಗ ಅಧಿಕ ಮಾಸವಾಗಿದೆ ಆದ್ದರಿಂಧ ಪುರುಷೋತ್ತಮನ ಪೂಜೆ ಮಾಡು ಇಷ್ಟಾರ್ಥ ಸಿದ್ಧಿಯಾಗುತ್ತದೆ’ ಎನ್ನುತ್ತಾರೆ. ಅವಳು ಹಿಡಿದ ವ್ರತ ಬಿಡದೇ ಶಂಕರನ ಆರಾಧನಯನ್ನೇ ಮಾಡುತ್ತಾಳೆ. ದೂರ್ವಾಸ ಮುನಿಗಳು ಉದಾಸೀನರಾಗಿ ಹೊರಟುಹೋಗುತ್ತಾರೆ. ಋಷಿಗಳ ಮನಸ್ಸು ನೋಯಿಸಿದ್ದಕ್ಕಾಗಿ ಮರುಜನ್ಮದಲ್ಲಿ ಮೇಧಾವತಿಯೇ ದ್ರೌಪದಿಯಾಗಿ ಜನಿಸಿ ಕಷ್ಟಪಡಬೇಕಾಗಿದೆ’. ಆದದ್ದು ಆಗಿ ಹೋಯಿತು ಈ ಜನ್ಮದಲ್ಲಿ ಅಧಿಕಮಾಸದ ವ್ರತಾಚರಣೆ ಮಾಡುವಂತೆ ಹೇಳುತ್ತಾನೆ.
ಅದರಂತೆ ದ್ರೌಪದಿಯು ಅಧಿಕಮಾಸದಲ್ಲಿ ಪುಣ್ಯಕಾರ್ಯ ಮಾಡಿದ್ದರಿಂದ ಪಾಂಡವರಿಗೆ ಅವರ ರಾಜ್ಯ ದೊರಕುತ್ತದೆ. ಇಂದ್ರ ಲೋಕದ ಆಪ್ಸರೆಯೊಬ್ಬಳು ಒಮ್ಮೆ ದೂರ್ವಾಸ ಮುನಿಯ ಕೊರಳಿಗೆ ಮಾಲೆ ಹಾಕಿ ತಪ್ಪು ಮಾಡುತ್ತಾಳಂತೆ ಆಗ ಅವರು ಕೋಪದಿಂದ ಅವಳಿಗೆ ಪಿಶಾಪಿಯಾಗೆಂದು ಶಾಪ ಕೊಡುತ್ತಾರೆ. ಪಿಶಾಚಿಯಾಗಿ ಎಷ್ಟೋ ವರುಷ ಕಳೆದಿದ್ದಳು ಆ ಆಪ್ಸರೆ. ಕೊನೆಗೆ ಕುಮಾರಿ ಕ್ಷೇತ್ರದ ತಪಸ್ವಿನಿಯೊಬ್ಬಳು ಅವಳಿಗೆ ಅಧಿಕಮಾಸದ ಪುಣ್ಯವನ್ನು ಧಾರೆಯೆರೆದಾಗ ಪಿಶಾಚಿಯ ಶಾಪ ವಿಮೋಚನೆಯಾಗುತ್ತದಂತೆ.
ಪೈಠನ ನಗರದಲ್ಲಿದ್ದ ಧರ್ಮಶರ್ಮ ಎಂಬ ಬ್ರಾಹ್ಮಣನು ಅಧಿಕಮಾಸದಲ್ಲಿ ಮಾಡಿದ ಪುಣ್ಯಫಲವನ್ನು ಒಂದು ಭೂತಕ್ಕೆ ಕೊಟ್ಟು ಅದರ ಉದ್ಧಾರ ಮಾಡಿದನಂತೆ, ಕದರ್ಯ ಎಂಬ ಗೃಹಸ್ಥ ಬೇರೆಯವರ ತೋಟದ ಹಣ್ಣುಗಳನ್ನು ಕದ್ದು ತಿಂದದ್ದಕ್ಕೆ ಮುಂದಿನ ಜನ್ಮದಲ್ಲಿ ಕೋತಿಯಾಗಿ ಜನಿಸುತ್ತಾನಂತೆ. ಮೃಗತೀರ್ಥವೆಂಬ ಕೆರೆ ದಂಡೆಯ ಮೇಲಿರುವ ಮರದಲ್ಲಿ ಆ ಕೋತಿ ಕುಳಿತುಕೊಳ್ಳುತ್ತದೆ. ಒಂದು ದಿನ ಗಿಡದಿಂದ ಗಿಡಕ್ಕೆ ಜಿಗಿಯುವಾಗ ಆಯ ತಪ್ಪಿ ಕೆರೆಯಲ್ಲಿ ಬೀಳುತ್ತದೆ ಕೋತಿ. ಆಗ ಅಧಿಕಮಾಸವಾಗಿದ್ದರಿಂದ ಸಹಜವಾಗಿ ಸ್ನಾನವಾಯಿತು. ಆ ಪುಣ್ಯದಿಂದಾಗಿ ಅದಕ್ಕೆ ಸ್ವರ್ಗ ಪ್ರಾಪ್ತಿಯಾಯಿತಂತೆ.
ಆವಂತಿಪುರದಲ್ಲಿ ಅಕ್ಕ-ತಂಗಿಯರಿಬ್ಬರು ಇರುತ್ತಾರೆ. ಅಕ್ಕ ಶ್ರೀಮಂತಳಾಗಿದ್ದು ಅಧಿಕಮಾಸದ ಆಚರಣೆಯ ಬಗ್ಗೆ ತಂಗಿಗೆ ತಪ್ಪಾಗಿ ಮಾರ್ಗದರ್ಶನ ಮಾಡುತ್ತಾಳೆ. ಆಗ ಬಡವಳಾದ ತಂಗಿ ತನಗೆ ತಿಳಿದಂತೆ ಪುಣ್ಯಕಾರ್ಯ ಮಾಡುತ್ತಾಳೆ. ಅವಳ ನಿಷ್ಠೆಗೆ ಮೆಚ್ಚಿದ ಶ್ರೀಕೃಷ್ಣ ಅವಳಿಗೆ ಕಲ್ಯಾಣ ಮಾಡುತ್ತಾನೆ. ಹೀಗೆ ಅನೇಕ ಕಥಗಳು ಅಧಿಕಮಾಸದ ಮಹತ್ವ ಸಾರುತ್ತವೆ ಎಂಬುದನ್ನು ಬೇರೆ ಬೇರೆ ಪುರಾಣಗಳಲ್ಲಿ ತಿಳಿಸಲಾಗಿದೆ.
ಫಲವೇನು?: ಅಧಿಕಮಾಸದಲ್ಲಿ ಮಾಡಿದ ಒಳ್ಳೆಯ ಕಾರ್ಯಕ್ಕೆಲ್ಲ ಉತ್ತಮ ಫಲವೇ ಸಿಗುತ್ತದೆಂದು ಹೇಳಲಾಗುವುದು. ಈ ಮಾಸದಲ್ಲಿ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು, ಪ್ರಜಾಪತಿ ಹಾಗೂ ಅವರ ಅಂತರ್ಗತ ಭಾರತೀರಮಣ (8+11+12+1+1=33) ಸೇರಿದಂತೆ ಶ್ರೀಹರಿಯ ಮೂವತ್ಮೂರು ರೂಪಕಗಳ ಪ್ರತೀಕವಾಗಿ ವಿಪ್ರರಿಗೆ 33 ಅಪೂಪ ಅಥವಾ ಸಿಹಿ ಪದಾರ್ಥಗಳನ್ನು ದಾನಮಾಡಬೇಕು ಎಂದು ಹೇಳಲಾಗುತ್ತದೆ.
ಪುರುಷೋತ್ತಮನ ಪ್ರೀತಿ ಸಂಪಾದನೆಗೆ ನಿತ್ಯವೂ ದಾನ ಮಾಡುವವರಿದ್ದಾರೆ. ತಿಳಿದೋ ತಿಳಿಯದೆಯೋ ಮಾಡಿದ ಉತ್ತಮ ಕಾರ್ಯಕ್ಕೆ ಉತ್ತಮ ಫಲ ನೀಡುವದಾಗಿ ಶ್ರೀಕೃಷ್ಣನೇ ಮಲಮಾಸಕ್ಕೆ ವರವಿತ್ತಿದ್ದಾನೆ. ಸುವಾಸಿನಿಯರು ದಿನವೂ ತಾಂಬೂಲ ದಾನ ಮಾಡಿದರೆ ಸೌಭಾಗ್ಯವತಿಯರಾಗುವರು. ಒಂದು ತಿಂಗಳವರೆಗೆ ತುಪ್ಪದ ದೀಪ ಹಚ್ಚಿ ದೀಪದಾನ ಮಾಡಿದಲ್ಲಿ ಸಂಪತ್ತು ಲಭಿಸುತ್ತದೆ. ಗಂಗಾಸ್ನಾನ, ಮೌನಭೋಜನದಿಂದ ಪಾಪ ಪರಿಹಾರವಾಗುವುದಂತೆ.
ಅದೇನೂ ಮಾಡಿದಿದ್ದರೂ ಪರಧನ-ಪರಸ್ತಿçಗೆ ಆಸೆ ಪಡದೇ ಕರ್ತವ್ಯನಿಷ್ಠರಾಗಿದ್ದರೆ, ಯಾರಿಗೂ ಕೇಡನ್ನು ಬಯಸದೇ ಒಳ್ಳೆಯ ಕಾರ್ಯಮಾಡಿದರೆ ಶ್ರೀಕೃಷ್ಣಪರಮಾತ್ಮನ ಪ್ರೀತಿಗೆ ಪಾತ್ರರಾಗುವುದರಲ್ಲಿ ಸಂಶಯವಿಲ್ಲ ಎಂಬುದು ಸದ್ಭಾವಿಗಳ ಅಭಿಪ್ರಾಯ.
( ವಿವಿಧ ಮೂಲಗಳಿಂದ)
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ