ಅಪ್ಪ ಅಂದ್ರೆ ಆಕಾಶ. ಅವನ ತೋಳೇ ಮಕ್ಕಳ ಪ್ರಪಂಚ. ಅವನೊಂದಿಗೆ ಕಳೆದ ಕ್ಷಣಗಳು ಬದುಕಿನುದ್ದಕ್ಕೂ ಎಂದಿಗೂ ಮಾಸದ ಸವಿ ನೆನಪು. ತಾನು ಮುಳ್ಳಿನ ಹಾದಿಯಲ್ಲಿ ಪಯಣಿಸಿ ಸಂಸಾರವನ್ನು ಜೋಪಾನ ಗೆಯ್ಯುವ ಮಹತ್ವಪೂರ್ಣ ವ್ಯಕಿತ್ವ. ತಾನು ಕಾಣದ್ದನ್ನು ತನ್ನ ಕಂದ ಕಾಣಲಿ ಎಂದು ಬದುಕಿನುದ್ದಕ್ಕೂ ಶ್ರಮಿಸುವವ. ಹಗಲಿರುಳೆನ್ನದೆ ಕಷ್ಟಪಟ್ಟು ತನ್ನ ಮಕ್ಕಳ ಕನಸನ್ನು ನನಸಾಗಿಸಲು ಹಪಹಪಿಸುವವನು.
ಹೀಗೆ ತಂದೆಯ ಪ್ರೀತಿಯನ್ನು ಇನ್ನಷ್ಟು ಬರೆಯಬಹುದು. ಅವನನ್ನು ಬೇಕಾದಷ್ಟು ಹೊಗಳಬಹುದು. ಆದರೆ ಅಂತಹ ಯಾವುದೇ ಪ್ರೀತಿ ಸಿಗದವರ ಸಾಲಿನಲ್ಲಿ ನಾನು ಒಬ್ಬಳು. ಶಾಲಾ- ಕಾಲೇಜುಗಳಲ್ಲಿ ಅಪ್ಪನ ಪ್ರೀತಿಯ ಬಗ್ಗೆ ವಿವರಣೆಯನ್ನು ಕೇಳಿ ಕೊಂಡಾಗ ಒಳಗೊಳಗೇ ಯಾತನೆ ಅನುಭವಿಸಿದಾಕೆ. ನನ್ನ ತಾಯಿಯ ಪ್ರೀತಿಯಲ್ಲಿ, ಆಕೆಯ ಬಿಸಿಯಪ್ಪುಗೆಯಲ್ಲಿ ನನ್ನೆಲ್ಲಾ ನೋವುಗಳನ್ನು ಸರಿಸಿ, 'ಅಪ್ಪ' ಎನ್ನುವ ಬಂಧವನ್ನು ಮನಸಾರೆ ದ್ವೇಷಿಸಲು ಆರಂಬಿಸಿದೆ. ನಾನು ನನ್ನ ತಂದೆಯ ಮುಖವನ್ನೇ ನೋಡಿರಲಿಲ್ಲ. ಆದರೂ ಆತನನ್ನು ದ್ವೇಶಿಸುತ್ತಿದ್ದೆ. ಕಾರಣ ಗೊತ್ತಿಲ್ಲ.
ನಾನು ಎಂಟನೇ ತರಗತಿಯಲ್ಲಿ ಒಂದು ದಿನ ಶಾಲೆ ಬಿಟ್ಟು ಮನೆಗೆ ಬಂದಾಗ ಯಾರೋ ಒಬ್ಬರು ಮನೆಯ ಎದುರು ಕುಳಿತುಕೊಂಡದ್ದು ನೋಡಿದೆ. ಆ ವ್ಯಕ್ತಿಯೆಡೆಗೆ ನನಗರಿವಿಲ್ಲದೆ ಯಾವುದೋ ಬಂಧ ಕೈ ಬೀಸಿ ಕರೆದಂತಾಗಿ ಮೂಕವಿಸ್ಮಿತಳಾದೆ, ಇಟ್ಟ ನೋಟ ಬಿಡದೆ. ನಾನು ದ್ವೇಷಿಸುವ ವ್ಯಕ್ತಿ ಇವನು ಎನ್ನುವ ಸತ್ಯಾಂಶ ನನಗೆ ಅರಿವಾಗಲು ಅದೆಷ್ಟೋ ಸಮಯ ಬೇಕಾಯಿತು. ಹೌದು ಆತನೇ ನನ್ನ ತಂದೆ. ಅರ್ಧಗಂಟೆ ಇದ್ದು ಮತ್ತೊಮ್ಮೆ ಮರೆಯಾದ. ಅವನು ಹೊರಟ ಮೇಲೆ ನನ್ನ ಕಳೆದುಹೋಗುವಿಕೆಗೆ ಕಾರಣ ದೊರಕಿತು. ಮತ್ತೆಂದೂ ಆತ ಬರಲೇ ಇಲ್ಲ.
ಈಗ ನನ್ನಲ್ಲಿ ಕಾಡುವ ಪ್ರಶ್ನೆ ಏನೆಂದರೆ, ನಾನು ದ್ವೇಷಿಸುವ ವ್ಯಕ್ತಿ ನನ್ನೆದುರು ಬಂದಾಗ ನನ್ನ ರೋಷ ಎಲ್ಲಿಗೆ ಹೋಗಿತ್ತು? ನನ್ನಲ್ಲಿ ಮನೆಮಾಡಿದ್ದ ಪ್ರಶ್ನೆಗಳನ್ನು ಅಂದೇಕೆ ನಾನು ಕೇಳದೆ ಮೂಕವಿಸ್ಮಿತಳಾಗಿ ಕುಳಿತೆ? ಆತ ಎಂದಿಗೂ ನನಗೆ ಪ್ರೀತಿ ಹಂಚಿದವನಲ್ಲ. ಬದುಕಿನಲ್ಲಿ ಯಾವುದೇ ಸಂದರ್ಭದಲ್ಲೂ ನನ್ನೊಂದಿಗೆ ನಿಲ್ಲದವನು. ಆದರೂ ಅಂದು ನನ್ನಲ್ಲೇಕೆ ಬದಲಾವಣೆ ಆಯಿತು? ಅದಕ್ಕೆಲ್ಲಾ ಉತ್ತರ 'ಅಪ್ಪ' ಎನ್ನುವ ಬಾಂಧವ್ಯ.

-ಸಂಶೀನ ಸೂರ್ಯ,
ಪ್ರಥಮ ಪತ್ರಿಕೋದ್ಯಮ,
ವಿವೇಕಾನಂದ ಕಾಲೇಜು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


