ಇದು ಯಾವ ಪಂಥ..? ಎಡ-ಬಲದ ನಡುವಲ್ಲೊಂದು ಹಂತ

Upayuktha
0


ಭೂತ ಕಾಲದಲ್ಲಿ ಹಲವಾರು ಮತ ಪಂಥಗಳು ಆಗಿ ಹೋಗಿವೆ. ಅದರಲ್ಲಿ ಕೆಲವು ಅಳಿದಿವೆ, ಕೆಲವು ಉಳಿದಿವೆ, ಮತ್ತೆ ಕೆಲವು ಬೆಳೆದಿವೆ. ಅಂತೆಯೇ ವರ್ತಮಾನ ಕಾಲದಲ್ಲಿ ಹೊಸತೆರಡು ಪಂಥಗಳು ಉಗಮವಾಗಿವೆ. ಬಹುಷ ಇದು ಸದಾಕಾಲ ಸ್ಥಾಯಿಯಾಗಿ ಇರುವಂಥವೇ ಎಂದೂ ಅನಿಸುತ್ತದೆ. ಅವು ಯಾವುದೆಂದರೆ ಎಡಪಂಥ ಮತ್ತು ಬಲಪಂಥ ಎನ್ನುವಂಥದ್ದು. ಇಂದು ಮಾನವರಲ್ಲಿ ಈ ಎರಡು ಪಂಥಗಳದ್ದೇ ಕಾರುಬಾರ. ಈ ಎರಡು ಪಂಥಕ್ಕೂ ಅಂಟಿಕೊಂಡಿರದ ಕೆಲವರು ಇರಬಹುದು. ಇವರು ಯಾವುದೇ ಪಂಥದಿಂದ ಗುರುತಿಸಲ್ಪಡದಿದ್ದರೂ ಸೂಕ್ಷ್ಮವಾಗಿ ಎಡವೋ ಬಲವೋ ಯಾವುದೋ ಒಂದು ಪಂಥಕ್ಕೆ ವಾಲಿಕೊಂಡಿರುವವರೇ ಆಗಿರುತ್ತಾರೆ. ಏನೇ ಇರಲಿ ಈ ಪಂಥಗಳ ಅವಾಂತರವನ್ನೊಂದಿಷ್ಟು ನೋಡೋಣ. 


ಮೊದಲಿಗೆ ಎಡ ಎಂದರೇನು ಬಲ ಎಂದರೇನು ನೋಡೋಣ. ಸಾಮಾನ್ಯವಾಗಿ ಒಂದು ವಿಚಾರಕ್ಕಾಗಲಿ, ವಿಷಯಕ್ಕಾಗಲಿ ಪರವಾಗಿ ಮಾತಾಡುವವರು ಬಲಪಂಥೀಯರಾದರೆ, ವಿರೋಧವಾಗಿ ಮಾತಾಡುವವರು ಎಡಪಂಥೀಯರು. ಹೀಗೆಂದು ಶಾಸನವೇನೂ ಇಲ್ಲ. ಅವರವರ ದೃಷ್ಟಿಕೋನದಲ್ಲಿ ನೋಡಿದಾಗ ಇವರು ಅದಲು ಬದಲಾಗಲೂ ಬಹುದು. ಉದಾಹರಣೆಗೆ ದುರ್ಯೋಧನನಿಗೆ ಶಕುನಿ, ದುಶ್ಯಾಸನ, ಕರ್ಣರೆಲ್ಲ ಬಲಪಂಥೀಯರಾದರೆ ಶ್ರೀಕೃಷ್ಣ, ಧರ್ಮರಾಯ, ಭೀಮಾರ್ಜುನರೆಲ್ಲ ಎಡ ಪಂಥೀಯರು. ಅದೇ ವೇಳೆ ಧರ್ಮರಾಯನಿಗೆ ಅವನ ಬಳಗ ಅಥವಾ ಅವನಿಗೆ ಪೂರಕರಾಗಿರುವವರೆಲ್ಲ ಬಲಪಂಥೀಯರಾದರೆ ವಿರೋಧಿಸುವ ದುರ್ಯೋಧನ,ದುಶ್ಯಾಸನರೆಲ್ಲ ಎಡಪಂಥೀಯರು. ಅಂದರೆ ಏಕಕಾಲದಲ್ಲಿ ಎರಡು ಪಂಥಗಳೂ ಅವರವರ ದೃಷ್ಟಿಕೋನಕ್ಕನುಗುಣವಾಗಿ ಅದಲು ಬದಲಾದದ್ದು ಸತ್ಯವೇ ಆಗಿದೆ. ಹಾಗಾದರೆ ಬಲಪಂಥೀಯರು ಯಾರು ಎಡಪಂಥೀಯರು ಯಾರೆಂಬ ಗೊಂದಲ ಸಹಜವಷ್ಟೆ. ಈ ಗೊಂದಲ ಇಂದು ನಿನ್ನೆಯದಲ್ಲ ಅನಾದಿ ಕಾಲದಿಂದಲೂ ಈ ಎಡ ಬಲದ ಜತೆಜತೆಯಾಗಿಯೇ ಚರಿತ್ರೆ ನಿರ್ಮಾಣವಾಗಿದೆ. ಇಂದು ನಾವು ಇದನ್ನು ರಾಜಕೀಯದಲ್ಲಿ ಹೆಚ್ಚು ಕಾಣುತ್ತೇವೆ. ಯಾವ ಪಕ್ಷದವರು ಆಡಳಿತ ನಡೆಸುತ್ತಾರೋ ಅವರಿಗೆ ಪರವಾಗಿರುವವರು ಬಲವಾದರೆ ಇತರರು ಎಡವಾಗುತ್ತಾರೆ. ಇದೊಂದು ರೀತಿಯಾದರೆ ಕೆಲವರು ಸರಕಾರ ಯಾವುದೇ ಇರಲಿ ತಮ್ಮನ್ನು ತಾವು ಎಡಪಂಥವೋ ಬಲಪಂಥವೋ ಎಂದು ಗುರುತಿಸಿಕೊಂಡಿರುತ್ತಾರೆ. ಇವರು ಸರ್ವದಾ ಹಾಗೆಯೇ ಇರಲು ಬಯಸುವವರು. 


ಇವತ್ತು ಏನಾಗಿದೆ ಎಂದರೆ ಯಾರು ಹಿಂದುತ್ವ, ಬ್ರಾಹ್ಮಣ್ಯ, ದೇಶವೆಂದು ಮಾತನಾಡುತ್ತಾರೊ ಅವರು ಬಲಪಂಥೀಯರಾದರೆ ಇದಕ್ಕೆಲ್ಲ ನಕಾರಾತ್ಮಕವಾಗಿ ಮಾತಾಡಬೇಕಾದವರು, ಮಾತಾಡಬೇಕೆಂದೆನಿಸುವವರು ಎಡಪಂಥೀಯರಾಗಿದ್ದಾರೆ. ಯಾವುದೇ ವಾಸ್ತವದ ವಿಷಯಗಳಲ್ಲಿ ಸರಿ ತಪ್ಪು ಕಂಡು ಹುಡುಕಿ ಮಾನವನ ಒಳಿತಿಗೋ, ದೇಶದ ಏಳಿಗೆಗೋ ಯಾರಾದರು ತಮ್ಮ ಅಭಿಪ್ರಾಯ ಹೇಳಿದರೆ ಮೊದಲಾಗಿ ನೋಡುವುದು ಹೇಳಿದಾತ ಎಡನೋ ಬಲನೋ ಎಂದು. ಯಾಕೆಂದರೆ ಈ ಎಡ ಬಲರಿಗೊಂದಿಷ್ಟು ಅಭಿಮಾನಿಗಳಿರುತ್ತಾರೆ. ಅವರು ಗೊಂದಲಕ್ಕೋ, ವಿರೋಧಕ್ಕೋ, ಸಂಘರ್ಷಕ್ಕೋ ಕಾಯುತ್ತಲೇ ಇರುತ್ತಾರೆ. ಅವಕಾಶ ಸಿಕ್ಕಲ್ಲಿ ಅಥವಾ ಸೃಷ್ಟಿಸಿಕೊಂಡು ದಾಳಿ ಮಾಡಲು ಕಾದುಕೊಂಡಿರುತ್ತಾರೆ. ಉದಾಹರಣೆಗೆ ಗಾಂಧಿ ಹತ್ಯೆಯಲ್ಲಿ ನಾತೂರಾಮ ಗೋಡ್ಸೆ ಅಪರಾಧಿ ಎಂದು ಜಗತ್ತಿಗೇ ಗೊತ್ತಿದ್ದ ವಿಷಯ. ಅದೇವೇಳೆ ಆತನೊಬ್ಬ ಅಪ್ರತಿಮ ದೇಶಭಕ್ತವೆಂಬುದೂ ಅಷ್ಟೇ ಸತ್ಯ. ಆದರೆ ಆತ ಆರಿಸಿಕೊಂಡ ದಾರಿ ಮಾತ್ರ ಆತನನ್ನು ದೇಶದ್ರೋಹಿಯನ್ನಾಗಿ ಮಾಡಿದ್ದೂ ಸತ್ಯವೇ. ಅಂದರೆ ಆತನಲ್ಲಿ ಎಡಬಲ ಎಂಬ ಎರಡು ಭಾವಗಳು ಆವಿರ್ಭವಿಸಿದ್ದು ವಿಶೇಷವೇ ಸರಿ. ಅದೇವೇಳೆಯಲ್ಲಿ ಇನ್ನೊಬ್ಬ ಅಪ್ರತಿಮ ದೇಶಭಕ್ತ ವೀರ ಸಾವರ್ಕರ್ ಗಾಂಧಿ ಹತ್ಯೆಯಲ್ಲಿ ನಿರಪರಾಧಿ ಎಂದು ಸಾಬೀತಾದರೂ ಎಡಚರೆಂದೆನಿಸುವವರು ಆಗಾಗ್ಗೆ ಸಾವರ್ಕರ್ ಗಾಂಧಿ ಕೊಲೆಯಲ್ಲಿ ಶಾಮೀಲಾಗಿದ್ದರೆಂದು ಹೇಳುತ್ತಲೇ ಇರುತ್ತಾರೆ. ಇದು ಸಲ್ಲದು ಎಂದು ಎಡಚರಿಗೂ ಗೊತ್ತಿದೆ. ಆದರೆ ಯಾವೊಂದು ವಿಷಯಗಳಲ್ಲೂ ಪ್ರಚಾರ ಸಿಗದಾದಾಗ ಇಂಥದ್ದು ಬೇಕಾಗುತ್ತದೆ. ಅದೇ ರೀತಿ ಬಲಪಂಥೀಯರೆನಿಸಿಕೊಂಡವರು ಕೂಡ ದೇಶದ ಅಭಿವೃದ್ಧಿಯ ಬಗ್ಗೆ, ದೇಶದ ಸಮಸ್ಯೆಗೆ ಯಾವ ರೀತಿಯಲ್ಲು ಸ್ಪಂದಿಸದೆ ವ್ಯರ್ಥವಾಗಿ ಆಗಿ ಹೋದಂಥ ಘಟನೆಗಳನ್ನು ಚರ್ವಿತ ಚರ್ವಣ ಮಾಡುವುದೂ ಇದೆ. ಉದಾಹರಣೆಗೆ ಗಾಂಧಿ ಪಾಕಿಸ್ತಾನವನ್ನು ಸೃಷ್ಟಿಸಿದರು, ನೆಹರು ಸ್ತ್ರೀ ಲೋಲನಾಗಿದ್ದರು, ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ತಂದರು.. ಇತ್ಯಾದಿ. ಇಲ್ಲಿ ಸತ್ಯಾಸತ್ಯತೆ ತಿಳಿದುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದೆಲ್ಲ ಹಿಂದೆ ಆಗಿ ಹೋದಂಥ ವಿಚಾರಗಳು ಅದನ್ನು ಇಂದು ಸರಿಪಡಿಸಲಾಗದು. ಮಾಧ್ಯಮಗಳು ಹಲವಾರಿವೆ. ಜನರು ಬುದ್ಧಿವಂತರಿದ್ದಾರೆ. ಯಾರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ತಿಳಿದುಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದರೆ ಅದರಿಂದ ಗೊಂದಲಗಳೋ, ದೊಂಬಿಗಳೋ, ಗಲಾಟೆಗಳೋ ಸೃಷ್ಟಿಯಾಗುವುದಾದರೆ ಈ ಎಡ ಬಲಗಳು ದೇಶಕ್ಕೆ ಏನನ್ನೂ ಕೊಡಲಾರವು. ಬದಲಾಗಿ ಆಗುವಂಥ ದೇಶಾಭಿವೃದ್ಧಿಗೆ ತೊಡಕುಗಳೇ. ಹಾಗೆಂದು ಸತ್ಯವಾದ ಚರಿತ್ರೆ ತಿಳಿದುಕೊಳ್ಳುವುದು ಪ್ರತಿಯೊಬ್ಬನ ಹಕ್ಕು. ನಮ್ಮಲ್ಲಿ ಸಿಗುವ ಚರಿತ್ರೆ ಕಾಲಕಾಲಕ್ಕೆ ತಿರುಚಲ್ಪಟ್ಟಿದೆ ಎಂದೂ ಗೊತ್ತಿದೆ. ಆದರೆ ಇಂದು ಅಂಕಿ ಅಂಶ ಸಹಿತ ಸತ್ಯವಾದಂಥ ಚರಿತ್ರೆಗಳೂ ಲಭ್ಯವಿದೆ. ಅದನ್ನೆಲ್ಲ ಅಭ್ಯಾಸ ಮಾಡಿ ಮುಂದೆ ಇದರಿಂದ ನಾವು ಪಾಠ ಕಲಿಯುವುದಾದರೆ ಎಡ ಬಲವೆಂಬ ಭಾವರಹಿತವಾಗಿ ನೋಡಬೇಕಾಗುತ್ತದೆ. ಚರಿತ್ರೆಯಿಂದ ಪಾಠ ಕಲಿಯಬೇಕೇ ಹೊರತು ದ್ವೇಷ ಬೆಳೆಯಬಾರದು. 


ಹಾಗಾದರೆ ಎಡಬಲವೆಂಬುದು ವ್ಯರ್ಥವೇ ಎಂದಾಗ ಖಂಡಿತ ವ್ಯರ್ಥವಲ್ಲ. ಒಂದು ವಿಷಯಕ್ಕೆ ವಿಚಾರಕ್ಕೆ ಎಲ್ಲ ದೃಷ್ಟಿಕೋನಗಳೂ ಅಗತ್ಯವೇ. ನ್ಯಾಯಾಲಯದಲ್ಲಿ ವಾದ ಮಾಡಿ ಸತ್ಯ ಹೊರಬರುವಂತಿರಬೇಕು ಈ ಎಡಬಲಗಳು. ಅಂತೆಯೇ ವಾಸ್ತವಕ್ಕೆ ವಿರೋಧವನ್ನು ಈ ಪಂಥಗಳು ತಂದೊಡ್ಡಬಾರದು. ಸತ್ಯವನ್ನು ಒಪ್ಪಿಕೊಳ್ಳುವ ಗುಣದಂತೆ ತಪ್ಪನ್ನು ಎತ್ತಿ ಹಿಡಿದು ಸರಿ ದಾರಿಗೆ ಬರುವಲ್ಲಿವರೆಗೆ ಹೋರಾಟವನ್ನು ಮಾಡುವ ಮನೋಭಾವವೂ ಬೇಕು. ದೇಶ ರಾಜ್ಯಗಳ ವಿಚಾರ ಒಂದಾದರೆ, ನಮ್ಮದೇ ಊರಲ್ಲಿರಬಹುದು, ಬೀದಿಯಲ್ಲಿರಬಹುದು, ನಮ್ಮ ನಮ್ಮ ಮನೆಗಳಲ್ಲಿ ಕೂಡ ಈ ಎಡ ಬಲದ ಅವಾಂತರಗಳು ಆಗುತ್ತವೆ. ವ್ಯವಹಾರದಲ್ಲಿ ಯಜಮಾನನಿಗೆ ವಿರೋಧವೊ ಪರವೋ ಆದಂಥ ಎರಡು ಪಂಗಡಗಳು ಉಂಟಾಗಿ ಮನಸ್ತಾಪಗಳಿಂದ ಮನೆತನಗಳೇ ನಾಶವಾದಂಥ ಪ್ರಸಂಗಗಳೂ ಸಾಕಷ್ಟಿವೆ. ಎಡಬಲ ವಿಚಾರಗಳು ಎಲ್ಲರ ಮನದಲ್ಲೂ ಇರಬೇಕೇ ಹೊರತು ಅದು ಒಬ್ಬೊಬ್ಬರ ಸೊತ್ತೂ ಅಲ್ಲ ಅಥವಾ ತಾನು ಇಂಥ ಪಂಥದವನೆಂದು ಗುರುತಿಸಿಕೊಳ್ಳುವುದೂ ಆರೋಗ್ಯದ ಲಕ್ಷಣವಲ್ಲ. ಯಾವುದೇ ಪಂಥಗಳು ಸಮಾಜದ ಕೆಡುಕನ್ನು ತೊಲಗಿಸುವಲ್ಲಿ ತೊಡಗಿದರೆ ಬಲವನ್ನೂ ಒಪ್ಪಿಕೊಂಡಂತೆ ಎಡವನ್ನೂ ಒಪ್ಪಿಕೊಳ್ಳಬಹುದು. ಅದರ ಹೊರತು ತಾನು ಯಾವ ಪಂಥದವನೊ ಆ ಪಂಥದವರು ಏನನ್ನು ಮಾಡಿದರೂ ಬೆಂಬಲಿಸುವುದೆಂದಾದರೆ ಅಂಥ ಪಂಥಗಳು ದೇಶಕ್ಕೆ ಮಾರಕಗಳೇ ಹೊರತು ಪೂರಕವಂತೂ ಖಂಡಿತವಲ್ಲ. 


ರಾಜಕೀಯದಲ್ಲಿ ಅದರಲ್ಲೂ ಪ್ರಜಾಪ್ರಭುತ್ವದಲ್ಲಿ ಹೇಗೆ ಆಳುವ ಪಕ್ಷವೊಂದಿದೆಯೋ ಅಂತೆಯೇ ವಿರೋಧ ಪಕ್ಷವೂ ಇರುತ್ತದೆ. ಇಲ್ಲಿ ವಿರೋಧವೆಂದರೆ ಆಳುವ ಪಕ್ಷ ಮಾಡುವ ಎಲ್ಲವನ್ನೂ ವಿರೋಧಿಸುವುದೆಂದಲ್ಲ. ಯಾವುದು ದೇಶಕ್ಕೆ ಉನ್ನತಿಯನ್ನು ಒಳೆಯದನ್ನು ಮಾಡುತ್ತದೊ ಅದಕ್ಕೆ ಪಕ್ಷ ವಿರೋಧವಾದರೂ ಬೆಂಬಲವನ್ನೇ ಸೂಚಿಸಬೇಕು. ಅಂತೆಯೇ ದೇಶಕ್ಕೆ ಮಾರಕವಾಗುವ ಯಾವುದೇ ನಡೆಯನ್ನು ವಿರೋಧಿಸಲೇ ಬೇಕು. ಅದಕ್ಕೆಂದೇ ವಿರೋಧ ಪಕ್ಷಗಳು ಸದಾ ಜಾಗೃತವಾಗಿರಬೇಕಾಗುತ್ತದೆ. ಅದರಂತೆಯೇ ನಮ್ಮ ಎಡ ಬಲಪಂಥಗಳು ಜಾಗೃತವಾಗಿರಬೇಕೇ ಹೊರತು ತನ್ನನ್ನು ತಾನು ಗುರುತಿಸಿಕೊಳ್ಳಲೆಂದು ಈ ಪಂಥಗಳನ್ನು ಆಹ್ವಾನಿಸಿಕೊಳ್ಳಬಾರದು. ಎಡವೋ ಬಲವೋ ಪಂಥಗಳು ಇರಲಿ ಎಷ್ಟಾದರೂ. ಆದರೆ ಸರ್ವರ ಏಳಿಗೆಯ ಸವಾಲು ಬಂದಾಗ ಪಂಥಾಹ್ವಾನ ಮಾಡಿ ಗೆಲ್ಲುವ ಪಂಥ ನಮ್ಮದಾಗಲಿ... 

**********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top