ಓದುಗರ ಪತ್ರ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ರಾಜ್ಯ ಸರಕಾರದ ಪಾಲುದಾರಿಕೆಯಲ್ಲಿ ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡು ಹವಾಮಾನ ವೈಪರೀತ್ಯಗಳಿಂದ ಬೆಳೆಗಳು ಹಾನಿಗೊಳಗಾಗಿ ನಷ್ಟ ಅನುಭವಿಸಿದಾಗ ರೈತರಿಗೆ ಸ್ವಲ್ಪ ಮಟ್ಟಿನಲ್ಲಿ ಸಂಕಷ್ಟ ಪರಿಹಾರಗೊಂಡು ಜೀವನಕ್ಕೆ ಒಂದಷ್ಟು ವರದಾನವಾಗುತ್ತಿತ್ತು. ಈ ಯೋಜನೆಯಿಂದ ಕರಾವಳಿಯ ಅಡಿಕೆ ಮತ್ತು ಕರಿಮೆಣಸು ಬೆಳೆಯುವ ರೈತರಿಗೆ ತುಂಬಾ ಅನುಕೂಲವಾಗುತ್ತಿತ್ತು.
ಈ ಯೋಜನೆಯ ಒಟ್ಟು ಪ್ರೀಮಿಯಂ ಮೊತ್ತದ ಶೇ 10% ರಷ್ಟು ಪಾಲು ರೈತ ಪಾವತಿ ಮಾಡುತ್ತಿದ್ದು, ಉಳಿದಂತೆ ಶೇ 90% ರಷ್ಟು ಪಾಲನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಯೋಗದಲ್ಲಿ ಭರಿಸಿಕೊಂಡು ರೈತರ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೆರವಾಗುತ್ತಿರುವುದು ರೈತರಿಗೆ ಖುಷಿಯನ್ನು ತರುತ್ತಿತ್ತು.
ಇತ್ತೀಚಿನ ಕೆಲವು ವರ್ಷಗಳಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಯಲ್ಲಿ ಮಳೆಯ ಪ್ರಮಾಣದಲ್ಲಿ ವ್ಯತ್ಯಯ ಕಂಡು ಬಂದಿರುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿ ನಷ್ಟಕ್ಕೆ ಒಳಗಾದ ರೈತರಿಗೆ ಈ ಯೋಜನೆ ಯಿಂದ ಅತ್ಯಧಿಕವಾಗಿ ಬೆಳೆ ವಿಮೆ ಪರಿಹಾರ ಸಿಗುತ್ತಿತ್ತು.
2023-24 ನೇ ಸಾಲಿನಲ್ಲಿ ಮುಂಗಾರು ಕೈ ಕೊಟ್ಟಿದ್ದು ಮಳೆಯ ಪ್ರಮಾಣ ತೀರಾ ಕಡಿಮೆ ಯಾಗಿದ್ದು ಮಳೆಗಾಲ ಪ್ರಾರಂಭವೇ ಆಗದೇ ಇರುವುದರಿಂದ ನೀರಿನ ಸಮಸ್ಯೆಗಳಿಂದ ಜೆಲ್ಲೆಯ ಬಹುತೇಕ ಅಡಿಕೆ ಮತ್ತು ಕರಿಮೆಣಸು ಬೆಳೆಗರಾರು ಒಂದೊಂದು ಸಂಕಷ್ಟದಲ್ಲಿ ಸಿಲುಕಿ ಅಡಿಕೆ ಮರ ನಾಶವಾಗಿದ್ದಲ್ಲದೇ ಹಸಿ ಅಡಿಕೆ ಉದುರುತ್ತಿದ್ದು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನ್ವಯ ಪ್ರಯೋಜನ ಪಡೆಯಲು ರೈತರು ಪ್ರತಿ ಸಹಕಾರಿ ಸಂಘಗಳಲ್ಲಿ ವಿಚಾರಿಸಿಕೊಂಡು ಪರದಾಡುತ್ತಿದ್ದಾರೆ.
ಪ್ರತಿ ವರ್ಷವೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ರೈತರಿಂದ ಪ್ರೀಮಿಯಂ ತುಂಬಲು ಮೇ ತಿಂಗಳು ಪ್ರಾರಂಭ ಮಾಡಿ ಜೂನ್ ಅಂತ್ಯಕ್ಕೆ ಅವಧಿಯಾಗಿರುತ್ತದೆ. ಇದರಂತೆ ರೈತರು ಪ್ರೀಮಿಯಂ ಮೊತ್ತವನ್ನು ಸಂಬಂಧ ಪಟ್ಟ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ತುಂಬಿಸಿಕೊಂಡು ಆಯಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ಸಂಬಂಧ ಪಟ್ಟ ಬೆಳೆ ವಿಮೆ ಏಜನ್ಸಿಗೆ ಸಲ್ಲಿಕೆಯಾಗುವುದು ವಾಡಿಕೆಯಾಗಿದೆ.
ಆದರೆ 2023-24ನೇ ಸಾಲಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಈ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿ ಬಗ್ಗೆ ಯಾವುದೇ ರೀತಿಯ ತೀರ್ಮಾನ ಅಥವಾ ಸುತ್ತೋಲೆ ಹೊರಡಿಸಿಲ್ಲ. ಇಷ್ಟರವರೆಗೆ ಸಹಕಾರ ಸಂಘಗಳಿಗೆ ತೋಟಗಾರಿಕೆ ಇಲಾಖೆ ಅಥವಾ ಸಹಕಾರ ಇಲಾಖೆ ಯಿಂದ ಮಾಹಿತಿ ಬಂದಿರುವುದಿಲ್ಲ.
ಪ್ರಾಥಮಿಕ ಸಹಕಾರ ಸಂಘಗಳು ರೈತರಿಗೆ ಯಾವುದೇ ರೀತಿಯ ಉತ್ತರ ಕೊಡಲಾರದಸ್ಥಿತಿಯಲ್ಲಿವೆ. ರಾಜ್ಯ ಸರಕಾರದ ಈ ಕ್ರಮಕ್ಕೆ ರೈತರಿಗೆ ತುಂಬಾ ಬೇಸರವಾಗಿದೆ.
ಆದುದರಿಂದ 2023-24ನೇ ಸಾಲಿಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆ ಯೋಜನೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ತೋಟಗಾರಿಕೆ ಸಚಿವರಿಗೆ ಒತ್ತಾಯಿಸಲಾಗಿದೆ.
-ಪ್ರಭಾಕರ ಪ್ರಭು
ಅಧ್ಯಕ್ಷರು, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ. ನಿ.
ಬಂಟ್ವಾಳ, ದ. ಕ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ