ಜೂ.14ರ ವರೆಗೆ ನಡೆಯಲಿರುವ ಪ್ರದರ್ಶನ: ಪಿ.ಎನ್. ಆಚಾರ್ಯ ಭಾಗಿ
ವಿದ್ಯಾಗಿರಿ: ವಿವಿಧ ಆಕಾರ-ಬಣ್ಣಗಳಿಂದ ವಿಭಿನ್ನವಾಗಿ ರೂಪಿಸಿದ ಸ್ವಾಗತ ಕಮಾನು, ಒಳಗೆ ಕಾಲಿಟ್ಟಂತೆಯೇ ಕಣ್ಮನ ಸೆಳೆಯುವ ಕಲಾಕೃತಿಗಳು. ಮಣ್ಣಿನಿಂದ ತಯಾರಾದ ಶಿಲ್ಪ, ಬಣ್ಣದ ಚಿತ್ರ, ತಂತ್ರಜ್ಞಾನದಲ್ಲಿ ರೂಪುಗೊಂಡ ಕಲೆಗಳು, ಕರಾವಳಿಯ ನೈಸರ್ಗಿಕ ವಸ್ತುಗಳಿಂದಲೇ ತಯಾರಾದ ಯಕ್ಷ ವೇಷಧಾರಿ, ಜಾಹೀರಾತು ಚಿತ್ರಣ, ಲೋಹದ ಹುಡುಗಿ...
ಆಳ್ವಾಸ್ ಕಾಲೇಜಿನ ಬಿ.ವಿ.ಎ.ವಿಭಾಗವು ಜೂ.12ರಿಂದ 14ರ ವರೆಗೆ ಹಮ್ಮಿಕೊಂಡ ‘ಆರ್ಟ್ ಎಕ್ಸ್‍ಪೊ 2023’ ಚಿತ್ರಕಲಾ ಪ್ರದರ್ಶನದಲ್ಲಿ ಈ ಮನ ಮೋಹಕ ಚಿತ್ರಣ ಸೋಮವಾರ ಕಂಡುಬಂತು.
ಇಲ್ಲಿ ವಿದ್ಯಾರ್ಥಿಗಳು ರಚಿಸಿದ ವಿವಿಧ ನಮೂನೆ ಕಲಾಕೃತಿಗಳು ಗಮನಸೆಳೆದವು. ಒಣಹಣ್ಣು ಪ್ರಚಾರ, ಸಿನಿಮಾ ಪ್ರಚಾರ ಕಲೆ, ಫೊಟೊಶಾಪ್, ಇಲಸ್ಟ್ರೇಟರ್ ಬಳಸಿ ಮಾಡಿದ ಕೃತಿಗಳು, ತೈಲವರ್ಣ, ಪೆನ್ಸಿಲ್ ಆರ್ಟ್, ಸ್ಕ್ರಿಬ್ಲಿಂಗ್, ರೇಖಾಚಿತ್ರ, ಲೋಹದ ರಚನೆ ಸೇರಿದಂತೆ ಒಂದಕ್ಕಿಂತ ಒಂದು ಅಂದವಾಗಿ ಕಂಗೊಳಿಸುತ್ತಿದ್ದವು.
ಕಾರ್ಯಕ್ರಮದ ತೀರ್ಪುಗಾರರಾದ ಖ್ಯಾತ ಕಲಾವಿದ ಪಿ. ಎನ್. ಆಚಾರ್ಯ ಮಾತನಾಡಿ, ‘ಯಾವ ಚಿತ್ರಕ್ಕೆ ತನ್ನನ್ನು ನೋಡವ ಹಾಗೇ ವೀಕ್ಷಕನನ್ನು ತಡೆದು ನಿಲ್ಲಿಸುವ ಗುಣವಿದೆಯೋ ಅದು ಬಹಳ ಶ್ರೇಷ್ಠವಾಗುತ್ತದೆ. ಸಾಮಾನ್ಯವಾಗಿ ಕಲೆಯಲ್ಲಿ ನಾಲ್ಕು ವರ್ಗೀಕರಣವಿದೆ. ಪ್ರತಿ ವರ್ಗಕ್ಕೂ ಅದರದ್ದೆ ಆದ ಜ್ಞಾನ ಶ್ಲೋಕವಿದೆ. ಅದನ್ನೂ ಅರಿತು ಚಿತ್ರ ಬರೆಯಿರಿ’ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪ್ರದರ್ಶನಕ್ಕೆ ಪ್ರೋತ್ಸಾಹ ಧನ ಹಾಗೂ ಅತ್ಯುತ್ತಮ ಹತ್ತು ಕಲಾಕೃತಿಗಳಿಗೆ ಪ್ರತಿಷ್ಠಾನದ ವತಿಯಿಂದ ಬಹುಮಾನ ನೀಡುವುದಾಗಿ ಘೋಷಿಸಿದರು.
ಚಿತ್ರಕಲಾವಿದ ಪುರುಷೋತ್ತಮ ಅಡ್ವೆ, ಆಳ್ವಾಸ್ ಕಾಲೇಜಿನ ಪ್ರಾಶುಂಪಾಲ ಡಾ. ಕುರಿಯನ್, ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಬಿ.ವಿ.ಎ ವಿಭಾಗದ ಪ್ರಾಧ್ಯಾಪಕ ಪರಮೇಶ್ವರ ಎನ್.ಪಿ. ಮತ್ತು ಪ್ರಾಧ್ಯಾಪಕ ಶರತ್ ಕುಮಾರ್ ಶೆಟ್ಟಿ ಇದ್ದರು. ನಯನಾ ಆರ್ ಆಚಾರ್ಯ ನಿರೂಪಿಸಿ, ಶ್ವೇತಾ ಸ್ವಾಗತಿಸಿ, ಮೆಲ್ರೊಯಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ