ಉಜಿರೆ: ಎಸ್‍ಡಿಎಂ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ/ ಎನ್.ಜಿ.ಪಟವರ್ಧನ್ ಬರೆದ ‘ಆಟ’ ಕಾದಂಬರಿಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಬಿ.ಎ ಬಿಡುಗಡೆಗೊಳಿಸಿದರು.
ಕೃತಿಯ ಬಿಡುಗಡೆಯ ನಂತರ ಮಾತನಾಡಿದ ಡಾ.ಕುಮಾರ ಹೆಗ್ಡೆ ಬಿ.ಎ ಕೃತಿಯ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು. ಎನ್.ಜಿ.ಪಟವರ್ಧನ್ ಅವರು ಕಾಲೇಜಿನಲ್ಲಿ ವೃತ್ತಿನಿರತರಾಗಿದ್ದಾಗ ಪರಿಪೂರ್ಣತೆಯೊಂದಿಗೆ ಕಾರ್ಯನಿರ್ವಹಿಸಿದ್ದರು ಎಂದು ನೆನಪಿಸಿಕೊಂಡರು.
‘ಆಟ’ ಕಾದಂಬರಿ ಶೀರ್ಷಿಕೆಯು ಸೂಚಿಸುವಂತೆ ಕೇವಲ ಕ್ರಿಕೆಟ್‍ಗೆ ಮಾತ್ರ ಸಂಬಂಧಿಸಿದ್ದಲ್ಲ. ಇದೊಂದು ಪ್ರೇಮ ಕಥನದ ಅಭಿವ್ಯಕ್ತಿಯೂ ಹೌದು ಎಂದರು. ಕನ್ನಡ ನಾಡು, ನುಡಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಪಟವರ್ಧನ್ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಶಿಕ್ಷಕ ವೃತ್ತಿ ಮತ್ತು ಬದುಕಿನಲ್ಲಿನ ಅನುಭವಗಳನ್ನು ಕ್ರಿಕೆಟ್‍ಗೆ ಹೋಲಿಸಿಕೊಂಡು ಬರೆದ ಕೃತಿ ಇದಾಗಿದೆ ಎಂದು ‘ಆಟ’ ಕಾದಂಬರಿಯ ಲೇಖಕ ಪ್ರೊ. ಎನ್ ಜಿ ಪಟವರ್ಧನ್ ಅಭಿಪ್ರಾಯಪಟ್ಟರು. ಬಾಲ್ಯದಿಂದ ಹಿಡಿದು ಶಿಕ್ಷಕ ವೃತ್ತಿಯಲ್ಲಿ ಇರುವವರೆಗೆ ಕ್ರಿಕೆಟ್ ಆಟವನ್ನು ಆಸಕ್ತಿಯಿಂದ ಆಡುತ್ತಿದ್ದೆ. ಆ ಸಂದರ್ಭಗಳಲ್ಲಿ ಆಗಿರುವ ಅನುಭವಗಳು ಮತ್ತು ಕ್ರೀಡೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಒಳಗೊಂಡ ಕೃತಿ ಇದಾಗಿದೆ ಎಂದರು. ಮನುಷ್ಯನ ಜೀವನದ ತೊಳಲಾಟಗಳನ್ನು ಈ ಕೃತಿಯು ಕಾಣಿಸಿದೆ ಎಂದು ಹೇಳಿದರು.
“ಆಟ ಕಾದಂಬರಿ ನನ್ನ 35ನೇ ಕೃತಿ. ವಿವಿಧ ಕ್ಷೇತ್ರಗಳ ಬಗ್ಗೆ ಪುಸ್ತಕಗಳನ್ನು ಬರೆದಿರುವೆ. ಆದರೆ ಕ್ರಿಕೆಟ್ ಆಟದ ಕುರಿತು ಬರೆಯಬೇಕು ಅನ್ನಿಸಿತು. ಸಂಗೀತಕ್ಕೆ ಸಂಬಂಧಿಸಿದ ‘ರಾಷ್ಟ್ರಲೀಲೆ’ ಕೃತಿಯಿಂದ ಪ್ರೇರಣೆ ಪಡೆದು ‘ಆಟ’ ಕಾದಂಬರಿಯನ್ನು ಬರೆದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ, ಎಸ್‍ಡಿಎಂ ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಎನ್. ಜಿ. ಪಟವರ್ಧನ್‍ರ ಕುಟುಂಬಸ್ಥರು ಉಪಸ್ಥಿತರಿದ್ದರು. ಕಿಶೋರ್ ಪಟವರ್ಧನ್ ಪ್ರಾಸ್ತಾವಿಕ ನುಡಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಶ್ರೀನಾಥ ಎ. ಪಿ ನಿರೂಪಿಸಿ, ಡಾ. ದಿವಾ ಕೊಕ್ಕಡ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ