ಜನತೆಗೆ ಮಂಕುಬೂದಿ ಎರಚಿ ಸುಲಿಗೆ ಮಾಡುತ್ತಿರುವ ವಚನಭ್ರಷ್ಟ 420 ಸರಕಾರ: ಬಿಜೆಪಿ ವಾಗ್ದಾಳಿ

Upayuktha
0

ಮಂಗಳೂರು: ಸುಳ್ಳು ಆಶ್ವಾಸನೆಗಳ ಮೂಲಕ ಜನರಿಗೆ ಐದು ಉಚಿತ ಗ್ಯಾರಂಟಿಗಳು ಚುನಾವಣೆ ಗೆದ್ದ 24 ಗಂಟೆಗಳ ಒಳಗೆ ಖಚಿತ, ನಿಶ್ಚಿತ, ಖಂಡಿತ ಎಂದು ಭರವಸೆ ನೀಡಿ, ನಂತರ ಮೊದಲನೆಯ ಕ್ಯಾಬಿನೆಟ್ ಸಭೆಯ ಬಳಿಕ ನೀಡುವುದಾಗಿ ತಿಳಿಸಿ ಈಗ ಸರಿಸುಮಾರು ಒಂದು ತಿಂಗಳ ನಂತರವೂ ಗ್ಯಾರಂಟಿಗಳ ಅನುಷ್ಟಾನಕ್ಕೆ ಮೀನಾಮೇಷ ಎಣಿಸುತ್ತಿರುವುದು ಜನತೆಗೆ ಮಂಕುಬೂದಿ ಎರಚಿರುವುದಕ್ಕೆ ಸಾಕ್ಷಿ. ಇದು  ಸಿದ್ದರಾಮಯ್ಯ ಸರಕಾರ ಪಕ್ಕಾ 420 ಸರಕಾರ ಎನ್ನುವುದನ್ನು ಸಿದ್ದಪಡಿಸಿದೆ ಎಂದು ಬಿಜೆಪಿ ಹೇಳಿದೆ.


ಬಿಜೆಪಿ ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್‌ ಕಾರ್ಣಿಕ್ ಅವರು ಇಂದು (ಗುರುವಾರ ಸಂಜೆ) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಡಿನ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾದ ಪಕ್ಷದ ಯೋಜನೆಗಳನ್ನು ತಮ್ಮ ಪ್ರಣಾಳಿಕೆಯ ಮೂಲಕ ಜನರ ಮುಂದಿಟ್ಟು ಮತಯಾಚನೆ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಆಶ್ವಾಸನೆಗಳ ಪ್ರಾಮಾಣಿಕ ಅನುಷ್ಟಾನದ ಮೂಲಕ ಆಡಳಿತ ನಡೆಸುವುದು ಚುನಾಯಿತ ಪಕ್ಷದ ಪ್ರಾಥಮಿಕ ಕರ್ತವ್ಯ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆರಂಭದಲ್ಲೇ ಎಡವಿದೆ ಎಂದು ಟೀಕಿಸಿದರು.


ನಂಗೂ ಫ್ರೀ ನಿಂಗೂ ಫ್ರೀ ಎಂದವರಿಂದ ದರ ಏರಿಕೆಯ ಬರೆ:

'ಹಿಂದಿನ ಸರಕಾರವನ್ನು 40% ಕಮಿಷನ್ ಸರಕಾರ ಎಂದು ಟೀಕಿಸುವ ಸಂದರ್ಭದಲ್ಲಿ ನಡೆದ ಚರ್ಚೆಗಳಲ್ಲಿ ಅಧಿಕಾರಕ್ಕೆ ಬಂದ ನಂತರ ನೀವು ಘೋಷಿಸಿದಂತೆ ಜನರಿಗೆ ನೀಡುವ ಐದು ಗ್ಯಾರಂಟಿ ಯೋಜನಗಳಿಗೆ ಆರ್ಥಿಕ ಸಂಪನ್ಮೂಲವನ್ನು ಎಲ್ಲಿಂದ ಪೂರೈಸುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ “40% ಕಮಿಷನ್ ಉಳಿಸಿದರೆ ಸಾಕು, ಬೇರೆ ಯಾವುದೇ ಸಂಪನ್ಮೂಲಗಳ ಅವಶ್ಯಕತೆ ಇರುವುದಿಲ್ಲ” ಎಂದು ಹೇಳಿದ ನೀವು ಇಂದು ವಿದ್ಯುತ್ ದರ, ಬಸ್ ಪ್ರಯಾಣದ ದರಗಳನ್ನು ಏರಿಸಿರುವುದು ನಾಚಿಕೆಗೇಡು ಮತ್ತು ಸರ್ವಥಾ ಖಂಡನೀಯ. ಒಬ್ಬರ ಕಿಸೆಯಿಂದ ತೆಗೆದು ಇನ್ನೊಬ್ಬರಿಗೆ ಹಂಚಿ ನಾನು ಮಾಡಿದೆ, ನಾನು ಮಾಡಿದೆ ಎನ್ನುವ ನಿಮ್ಮ ಡೋಂಗಿ ಲೋಹಿಯಾವಾದಿ ಧೋರಣೆ ಸನ್ಮಾನ್ಯ ರಾಮ್ ಮನೋಹರ ಲೋಹಿಯಾ ಅವರಿಗೆ ಮಾಡಿದ ಅವಮಾನ' ಎಂದು ಕ್ಯಾಪ್ಟನ್ ಕಾರ್ಣಿಕ್ ವಾಗ್ದಾಳಿ ನಡೆಸಿದರು.


ಷರತ್ತಿಲ್ಲದೆ ಗ್ಯಾರಂಟಿ ಈಡೇರಿಸಿ:

ಭಾಜಪಾ ಸರಕಾರದ ಮೇಲೆ 40% ಆಪಾದನೆ ಮಾಡಿದ ತಾವು ಎಲ್ಲಾ ಟೆಂಡರ್ ಗಳಲ್ಲಿ 40% ಕಡಿತ ಮಾಡಿ ಆ ಹಣವನ್ನು ನೀವು ನೀಡಿದ ಉಚಿತ ಗ್ಯಾರಂಟಿಗಳ ಯೋಜನೆಗಳಿಗೆ ಹೊಂದಾಣಿಕೆ ಮಾಡುವ ಬದಲು ಜನಸಾಮಾನ್ಯರ ಮೇಲೆ ದರ ಏರಿಕೆಯ ಬರೆ ನೀಡುವುದರ ಮೂಲಕ ಯಾವ ಪುರುಷಾರ್ಥದ ಸಾಧನೆ ಮಾಡಿದ್ದೀರಿ? ಇನ್ನಾದರೂ ಎಚ್ಚೆತ್ತುಕೊಂಡು ನಿಮ್ಮ ಬೆಲೆ ಏರಿಕೆಯ ಪಾಪದ ಕೂಸನ್ನು ಬಿಜೆಪಿಯ ಮೇಲೆ ಹೊರಿಸದೆ ನಾಡಿನ ಜನತೆಯ ಮುಂದೆ ನಿಮ್ಮ ಆರ್ಥಿಕ ಅಸಹಾಯಕತೆಯ ಸತ್ಯವನ್ನು ಒಪ್ಪಿಕೊಂಡು ನೀವು ಚುನಾವಣೆಯ ಸಂದರ್ಭದಲ್ಲಿ ಹೇಳಿದಂತೆ ಎಲ್ಲಾ 5 ಗ್ಯಾರಂಟಿಗಳನ್ನು ನಾಡಿನ ಎಲ್ಲರಿಗೂ ಷರತ್ತು ರಹಿತವಾಗಿ ನೀಡಿ ಎಂದು ಕ್ಯಾಪ್ಟನ್ ಕಾರ್ಣಿಕ್ ಆಗ್ರಹಿಸಿದರು.


5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದು, 13 ಬಾರಿ ಬಜೆಟ್ ಮಂಡನೆ ಮಾಡಿದ ನೀವು ಪೂರ್ವಾಪರ ಆಲೋಚನೆ ಮಾಡದೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆ.ಜಿ. ಉಚಿತ ಅಕ್ಕಿಭಾಗ್ಯ ಘೋಷಿಸಿ ಈಗ ನಿಮ್ಮ ಅಸಾಮರ್ಥ್ಯಕ್ಕಾಗಿ ಕೇಂದ್ರ ಸರಕಾರವನ್ನು ದೂಷಿಸುವುದು ‘ಕೋತಿ ತಾನು ತಿಂದು ಮೇಕೆಯ ಮೂತಿಗೆ ಒರಸಿದಂತಾಗಿದೆ’. ನಿಮಗೆ ಪ್ರಾಮಾಣಿಕವಾಗಿ ನಾಡಿನ ಜನತೆಗೆ 10 ಕೆ.ಜಿ. ಅಕ್ಕಿ ನೀಡುವ ಆಲೋಚನೆಯಿದ್ದರೆ ಕೇಂದ್ರ ಸರಕಾರವನ್ನು ದೂಷಿಸದೇ ಮಾರುಕಟ್ಟೆಯಿಂದ ಖರೀದಿಸಿ ಕೇಂದ್ರ ಸರಕಾರ ನೀಡುವ 5 ಕೆ.ಜಿ. ಅಕ್ಕಿಯ ಜೊತೆಗೆ ನಿಮ್ಮ 10 ಕೆ.ಜಿ. ಅಕ್ಕಿ ನೀಡಲು ಕ್ರಮಕೈಗೊಳ್ಳಿ.


ಮಹಿಳೆಯರಿಗೆ ‘ಸ್ತ್ರೀಶಕ್ತಿ’ ಯೋಜನೆಯನ್ವಯ ಎಲ್ಲಾ ಸರಕಾರಿ ಬಸ್ಸುಗಳಲ್ಲಿ, ಹೊರರಾಜ್ಯಗಳೂ ಸೇರಿದಂತೆ, ಉಚಿತ ಪ್ರಯಾಣದ ಭರವಸೆ ನೀಡಿ, ಇಂದು ಅನೇಕ ಷರತ್ತುಗಳನ್ನು ಅನ್ವಯಿಸುತ್ತಿರುವುದರಿಂದ ನಾಡಿನ ಮಹಿಳೆಯರಿಗೆ ಅನ್ಯಾಯವೆಸಗಿರುತ್ತೀರಿ. ಅದಲ್ಲದೇ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಈ ಹಿಂದೆಯೇ ಉಚಿತ ಬಸ್ಸು ವ್ಯವಸ್ಥೆ ಇದ್ದುದರಿಂದ ನಿಮ್ಮ ಈ ಷರತ್ತುಬದ್ಧ ಉಚಿತ ಪ್ರಯಾಣದ ಸೌಲಭ್ಯ ನೀವು ನೀಡಿದ ಅಶ್ವಾಸನೆಗೆ ವಿರುದ್ಧವಾಗಿ ಮಹಿಳೆಯರಿಗೆ ಮಾಡಿದ ಮೋಸವಾಗಿದೆ.


ನಾಡಿನ ಎಲ್ಲಾ ಜನತೆಗೆ ‘ಗೃಹಜ್ಯೋತಿ’ಯನ್ವಯ 200 ಯುನಿಟ್ ಉಚಿತ ವಿದ್ಯುತ್ ಎನ್ನುವ ಆಶ್ವಾಸನೆ ಶುದ್ಧ ಮೋಸವಾಗಿದ್ದು, ಅನೇಕ ಷರತ್ತುಗಳೊಂದಿಗೆ, ಈ ಹಿಂದೆ ವಾರ್ಷಿಕ ಸರಾಸರಿ 200 ಯುನಿಟ್ ಗಿಂತ ಕಡಿಮೆ ಉಪಯೋಗಿಸುವವರಿಗೆ ಮಾತ್ರ ಅನ್ವಯಿಸುತ್ತಿದ್ದು, ಮತ್ತೆ ನಿಮ್ಮ ಸುಳ್ಳು ಅಶ್ವಾಸನೆಗಳ ಮೂಲಕ ನಾಡಿನ ಜನತೆಗೆ ಮೋಸ ಮಾಡಿರುತ್ತೀರಿ. ಅಲ್ಲದೇ ಈಗಾಗಲೇ ಅನೇಕ ಸಮುದಾಯಗಳಿಗೆ ಹಿಂದಿನ ಸರಕಾರ 75 ಯುನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು, ಕೇವಲ ಚುನಾವಣೆಯ ಸಂದರ್ಭದಲ್ಲಿ ಪೊಳ್ಳು ಘೋಷಣೆಗಳ ಮೂಲಕ ಸುಳ್ಳು ಭರವಸೆ ನೀಡಿ ಜನರನ್ನು ವಂಚಿಸಿರುತ್ತೀರಿ ಮತ್ತು ತಮ್ಮ ಈ ಅಪ್ರಾಯೋಗಿಕ ದುಂದುವೆಚ್ಚವನ್ನು ನಿಭಾಯಿಸಲು ವಿದ್ಯುತ್ ದರವನ್ನು ಏರಿಸುವುದರ ಮೂಲಕ ಬೆಲೆ ಏರಿಕೆಯ ಬರೆಯನ್ನು ಹಾಕಿ ಈಗ ನೀವು ಏರಿಸಿದ ವಿದ್ಯುತ್ ದರಕ್ಕ್ಕಾಗಿ ಹಿಂದಿನ ಸರಕಾರದ ಮೇಲೆ ಗೂಬೆ ಕೂರಿಸುವುದು ನಿಮ್ಮ ಅಪ್ರಾಮಾಣಿಕತೆಗೆ ಸಾಕ್ಷಿ. ಸರಕಾರ ನಿಮ್ಮದು, ನೀವೇ ಮುಖ್ಯಮಂತ್ರಿ, ನಾಡಿನ ಜನತೆಯ ಹಿತ ಬಯಸುವ ಸಾಮರ್ಥ್ಯವಿದ್ದರೆ ನೀವೇ ಏರಿಸಿದ ವಿದ್ಯುತ್ ದರವನ್ನು ಜೂನ್ 12ರ ಹಿಂದಿನ ದರಕ್ಕೆ ಇಳಿಸಿ ಮತ್ತು ಹಿಂದಿನ ಸರಕಾರವನ್ನು ದೂಷಿಸುವುದನ್ನು ನಿಲ್ಲಿಸಿ ಎಂದು ಕಾರ್ಣಿಕ್ ಒತ್ತಾಯಿಸಿದರು.


ವಚನ ಭ್ರಷ್ಟರಾಗಬೇಡಿ:

ರಾಜ್ಯದ ಎಲ್ಲಾ ನಿರುದ್ಯೋಗಿ ಪದವೀಧರರಿಗೆ ಮತ್ತು ಡಿಪ್ಲೋಮಾ ಹೊಂದಿದವರಿಗೆ ತಲಾ ರೂ. 3,000/- ಮತ್ತು ರೂ. 1,500/- ನಿರುದ್ಯೋಗ ಭತ್ಯೆ ಘೋಷಿಸಿದ ನೀವು ಇಂದು ಕೇವಲ ಈ ಶೈಕ್ಷಣಿಕ ವರ್ಷದಿಂದ ಅನ್ವಯಿಸುವಂತೆ ಷರತ್ತು ವಿಧಿಸಿರುವುದು ನಿರುದ್ಯೋಗಿಗಳಿಗೆ ಮಾಡಿದ ವಂಚನೆ ಮತ್ತು ನಿಮ್ಮ ವಚನಭ್ರಷ್ಟತೆಗೆ ಕೈಗನ್ನಡಿ ಎಂದು ಕಾರ್ಣಿಕ್ ನುಡಿದರು.


ಕುಟುಂಬದಲ್ಲಿ ಕಲಹ ತಂದ 'ಗೃಹಲಕ್ಷ್ಮೀ':

ಇನ್ನು ಕುಟುಂಬದ ಯಜಮಾನಿಗೆ ಘೋಷಿಸಿದ ರೂ. 2,000/- ಗೃಹಲಕ್ಷ್ಮೀ ಯೋಜನೆ ಕುಟುಂಬ ಕಲಹಕ್ಕೆ ನಾಂದಿ ಹಾಡಿದ್ದಲ್ಲದೇ ನೀವು ಅನ್ವಯಿಸಿದ ಷರತ್ತುಗಳು ಹಾಸ್ಯಾಸ್ಪದವಾಗಿದ್ದು ನಿಮ್ಮ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ನಾಡಿನ ಗೃಹಿಣಿಯರು ಸಂದೇಹಿಸುವಂತೆ ಮಾಡಿದೆ. ಈ ರೀತಿ ಅಧಿಕಾರ ವಹಿಸಿ ತಿಂಗಳಾದರೂ ‘ಅಧಿಕಾರ ವಹಿಸಿದ 24 ಗಂಟೆಗಳೊಳಗಾಗಿ ಅನುಷ್ಠಾನಗೊಳಿಸುವ 5 ಗ್ಯಾರಂಟಿಗಳ ಅಶ್ವಾಸನೆ’ ಅನುಷ್ಠಾನಗೊಳ್ಳದಿರುವುದು ನಾಡಿನ ಜನತೆಗೆ ತಾವು ಮಾಡಿದ ವಂಚನೆ. ನಾಡಿನ ಜನತೆ ನಿಮ್ಮ ಸರಕಾರವನ್ನು ‘ವಚನಭ್ರಷ್ಟ 420 ಸರಕಾರ’ ಎಂದು ಕರೆದರೆ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.


ಬಿಬಿಎಂಪಿ ಆಡಳಿತದಲ್ಲಿ ಸುರ್ಜೇವಾಲಾ ಹಸ್ತಕ್ಷೇಪ:

ಕಾಂಗ್ರೆಸ್ ಪಕ್ಷದ ಪ್ರಭಾರಿ ಸುರ್ಜೇವಾಲಾರವರು ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿರುವ ಸಭೆಯಲ್ಲಿ ಆನಗತ್ಯ ಹಸ್ತಕ್ಷೇಪ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತದೆ. ಇದು ಕಾಂಗ್ರೇಸ್‍ನ ಮುಂದುವರಿದ ಸರ್ವಾಧಿಕಾರಿ ಧೋರಣೆ ಮತ್ತು ಆ ಪಕ್ಷ ಸಾಂವಿಧಾನಿಕ ಸಂಸ್ಥೆಗಳಿಗೆ ಮಾಡುತ್ತಿರುವ ಅಪಚಾರಕ್ಕೆ ಸಾಕ್ಷಿಯಾಗಿದೆ. ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರದ, ಬೆಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಪಡದ, ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸದ, ಆದರೆ ಬೆಂಗಳೂರು ಮಹಾನಗರದ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಮಹತ್ವವಾದರೂ ಏನು? ಇದೊಂದು ಅನಧಿಕೃತ ಸಭೆ ಎಂದು ಮುಖ್ಯಮಂತ್ರಿಗಳು ನೀಡಿದ ಬೇಜವಾಬ್ದಾರಿಯ ಹೇಳಿಕೆ ಕೇವಲ ತಿಪ್ಪೆಸಾರಿಸುವ ಪ್ರಯತ್ನ.


ಪಕ್ಷದ ನಾಯಕರೊಬ್ಬರ ಅನಧಿಕೃತ ಹಸ್ತಕ್ಷೇಪ ಅನೇಕ ಸಂದೇಹಗಳನ್ನು ಹುಟ್ಟುಹಾಕಿದ್ದು ಭಾರತೀಯ ಜನತಾ ಪಾರ್ಟಿ ಕಾಂಗ್ರೇಸ್‍ನ ನಾಯಕರಾದ ಸನ್ಮಾನ್ಯ ಸುರ್ಜೇವಾಲರವರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪಮಾಡುವುದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಕ್ಯಾಪ್ಟನ್ ಕಾರ್ಣಿಕ್ ತಿಳಿಸಿದರು.



ಸಚಿವ ಎಂ.ಬಿ. ಪಾಟೀಲರ ಹೇಳಿಕೆ ಕಾಂಗ್ರೆಸ್‍ನ ಎಡಬಿಡಂಗಿತನಕ್ಕೆ ಸಾಕ್ಷಿ: 

ಕಳೆದ ಮೂರ್ನಾಲ್ಕು ದಶಕಗಳಿಂದ ಕೇಂದ್ರದಲ್ಲಿ ಕಾಂಗ್ರೇಸ್ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲೂ ತಮ್ಮ ಕೈಗಾರಿಕಾ ಚಟುವಟಿಕೆಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಅದಾನಿ ಮತ್ತು ರಿಲಾಯನ್ಸ್

ಸಂಸ್ಥೆಗಳನ್ನು, ಕಾಂಗ್ರೇಸ್ ನಾಯಕರಾದ ರಾಹುಲ್ ಗಾಂಧಿಯವರು ದೇಶ ವಿದೇಶಗಳಲ್ಲಿ ದೂಷಿಸುತ್ತಿದ್ದರೂ, ಕರ್ನಾಟಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರಕಾರದ ಬೃಹತ್ ಕೈಗಾರಿಕಾ ಸಚಿವರಾದ  ಎಂ.ಬಿ. ಪಾಟೀಲರು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆಗಾಗಿ ಆಹ್ವಾನಿಸಿರುವುದನ್ನು ಭಾರತೀಯ ಜನತಾ ಪಾರ್ಟಿ ಸ್ವಾಗತಿಸಿದರೂ ಈ ಹೇಳಿಕೆ ಕಾಂಗ್ರೆಸ್‌ನ ದ್ವಿಮುಖ ನೀತಿಯ ಎಡಬಿಡಂಗಿತನಕ್ಕೆ ಸಾಕ್ಷಿಯಾಗಿದೆ. ಬೃಹತ್ ಕೈಗಾರಿಕಾ ಸಚಿವರಾದ ಸನ್ಮಾನ್ಯ ಎಂ.ಬಿ. ಪಾಟೀಲರು ಕರ್ನಾಟಕದಲ್ಲಿ ಹೂಡಿಕೆಗಾಗಿ ಅದಾನಿ ಮತ್ತು ಅಂಬಾನಿಯವರನ್ನು ಸ್ವಾಗತಿಸಿದ ನಂತರವಾದರೂ ಸನ್ಮಾನ್ಯ ರಾಹುಲ್ ಗಾಂಧಿಯವರು ವಿನಾ ಕಾರಣ ಈ ಎರಡು ಸಂಸ್ಥೆಗಳ ಮೇಲೆ ಗೂಬೆಕೂರಿಸುವುದನ್ನು ನಿಲ್ಲಿಸಲಿ.

- ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ರಾಜ್ಯ ವಕ್ತಾರರು


ಸುದ್ದಿಗೋಷ್ಠಿಯಲ್ಲಿ  ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಜಿಲ್ಲಾ ವಕ್ತಾರರಾದ ಜಗದೀಶ್ ಶೇಣವ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕಸ್ತೂರಿ ಪಂಜ, ರಾಮಚಂದ್ರ ಮಿಜಾರು ಉಪಸ್ಥಿತರಿದ್ದರು.

Post a Comment

0 Comments
Post a Comment (0)
To Top