ವೃತ್ತಿಯೊಂದಿಗೆ ಸಮಾಜಕ್ಕೆ ಸಹಕರಿಸುವ ಸಾಧ್ಯತೆ ಪತ್ರಿಕೋದ್ಯಮದಲ್ಲಿದೆ : ಜಿತೇಂದ್ರ ಕುಂದೇಶ್ವರ

Upayuktha
0

          ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳ ‘ಅಭಿನವ’ ಪತ್ರಿಕೆ ಲೋಕಾರ್ಪಣೆ


ಪುತ್ತೂರು:
ಪತ್ರಕರ್ತರು ತಮ್ಮ ಬದುಕನ್ನು ಸಾಗಿಸುವುದಕ್ಕೆ ವೃತ್ತಿಯನ್ನಾಗಿ ಪತ್ರಿಕೋದ್ಯಮವನ್ನು ಆರಿಸಿಕೊಳ್ಳುವುದು ಹೌದಾದರೂ ಆ ವೃತ್ತಿಯಲ್ಲಿ ನಿರತರಾಗುತ್ತಾ ಸಮಾಜಕ್ಕೆ ಸ್ಪಂದಿಸುವ ಅವಕಾಶಗಳನ್ನು ತಮ್ಮದಾಗಿಸುತ್ತಾ ಸಾಗುತ್ತಾರೆ. ಇದರಿಂದಾಗಿ ಸಮಾಜದ ಆಗುಹೋಗುಗಳಲ್ಲಿ ಪತ್ರಕರ್ತರು ಭಾಗೀದಾರರಾಗಿ ಮುನ್ನಡೆಯುತ್ತಾರೆ. ಅವೆಷ್ಟೋ ಜನರಿಗೆ ಪತ್ರಕರ್ತರ ಲೇಖನಿಗಳು ಬದುಕನ್ನು ಕಲ್ಪಿಸಿಕೊಡುತ್ತವೆ ಎಂದು ಮಂಗಳೂರಿನ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಪಿಸಲಾರಂಭಿಸಿದ ‘ಅಭಿನವ’ ಎಂಬ ಪ್ರಾಯೋಗಿಕ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಸೋಮವಾರ ಮಾತನಾಡಿದರು.

ಪತ್ರಕರ್ತನಾದವನು ಅನೇಕ ಸಂದರ್ಭಗಳಲ್ಲಿ ತಾನು ಬಡತನದಲ್ಲಿದ್ದರೂ, ತನ್ನ ಮನೆ ಕುಸಿಯುವ ಸ್ಥಿತಿಯಲ್ಲಿದ್ದರೂ ಸಮಾಜದ ಮತ್ಯಾರದೋ ಬವಣೆಗಳಿಗೆ ಸ್ಪಂದಿಸುತ್ತಾನೆ. ಇನ್ಯಾರಿಗೋ ಸರಕಾರದಿಂದಲೋ ಸಮಾಜ ಸೇವಕರಿಂದಲೋ ಸಹಾಯವಾಗುವಂತೆ ಲೇಖನ ರೂಪಿಸುತ್ತಾನೆ. ಹೀಗೆ ತನ್ನ ನೋವನ್ನು ಬದಿಗಿಟ್ಟು ಸಮಾಜದ ನೋವಿಗೆ ಸ್ಪಂದಿಸುವ ಗುಣ ವೃತ್ತಿಸಹಜವಾಗಿ ಪತ್ರಕರ್ತನೊಡನೆ ಬೆಳೆದುಬರುತ್ತದೆ. ತಾನು ಬರೆದ ಬರವಣಿಗೆಯೊಂದರಿಂದ ತಾಯಿಯಿಂದ ದೂರವಾದ ಮಕ್ಕಳು ಮತ್ತೆ ತಾಯಿಯ ಮಡಿಲು ಸೇರಿದಾಗ ಪತ್ರಕರ್ತನಲ್ಲಿ ಒಡಮೂಡುವ ಭಾವತೀವ್ರತೆಗೆ ಸಮನಾದ ಮತ್ತೊಂದು ಸಂಗತಿಯಿಲ್ಲ ಎಂದು ಅನುಭವಜನ್ಯ ಘಟನೆಯನ್ನು ವಿವರಿಸಿದರು.

ಸಮಾಜದಲ್ಲಿನ ದುಷ್ಕೃತ್ಯಗಳನ್ನು ಬಯಲಿಗೆಳೆದಾಗ ಸಹಜವಾಗಿಯೇ ಪತ್ರಕರ್ತನಿಗೆ ಬೆದರಿಕೆ ಕರೆಗಳು ಬರಲಾರಂಭಿಸುತ್ತವೆ. ತಮಗೆ ಅನುಕೂಲಕರನಾಗಿ ವ್ಯವಹರಿಸಿಲ್ಲ ಎಂದು ಅನೇಕರು ಪತ್ರಕರ್ತನೆಡೆಗೆ ಕಿಡಿಕಾರುತ್ತಾರೆ. ಇದೆಲ್ಲ ವೃತ್ತಿಯಲ್ಲಿ ಸಹಜ ಎಂದರಲ್ಲದೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವ್ಯಕ್ತಿಯ ಮಾತುಗಳಲ್ಲಿ ಸುದ್ದಿಮೌಲ್ಯಗಳಿರುವ ಅಂಶಗಳನ್ನು ಸರಿಯಾಗಿ ಗುರುತಿಸಿ ಬರೆಯಬೇಕು. ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರಸ್ತಾವನೆಗೈದ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಪತ್ರಿಕೋದ್ಯಮ ವಿದ್ಯ್ರ್ಲಾಗಳು ಬೆಳೆಯಲು ಕೇವಲ ಪಾಠ ಪ್ರವಚನಗಳು ಸಾಲದು. ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುವ ವೇದಿಕೆಗಳನ್ನು ಸಿದ್ಧಪಡಿಸಬೇಕಾದ್ದು ಅನಿವಾರ್ಯ. ಆ ನೆಲೆಯಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಅಡಿಯಿಟ್ಟಿದೆ. ನೂತನ ಶಿಕ್ಷಣ ನೀತಿ ಪದವಿ ಹಂತದಲ್ಲಿ ಪ್ರಾಯೋಗಿಕ ಪತ್ರಿಕೋದ್ಯಮಕ್ಕೆ ಅನುಕೂಲವಾಗುವಂತಹ ಪಠ್ಯಕ್ರಮವನ್ನು ರೂಪಿಸಿಕೊಟ್ಟಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸುದ್ದಿಮನೆ ಹಾಗೂ ತರಗತಿಗಳ ನಡುವಣ ಅಂತರ ಕಡಿಮೆಯಾಗಿ ಉದ್ಯೋಗ ಸುಲಭಸಾಧ್ಯವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಬರವಣಿಗೆ ಎಂಬುದು ಅತ್ಯುತ್ಕೃಷ್ಟ ಹವ್ಯಾಸ. ಒಮ್ಮೆ ಬರವಣಿಗೆಗೆ ತಮ್ಮನ್ನು ತಾವು ಒಪ್ಪಿಸಿಕೊಂಡರೆ ಆ ಹವ್ಯಾಸದಿಂದ ಹೊರಬರುವುದು ಕಷ್ಟ. ವಿಷಯವೊಂದನ್ನು ವಿಮರ್ಶಾತ್ಮಕ ದೃಷ್ಟಿಕೋನದಿಂದ ಕಂಡು ಹೊಸ ಹೊಸ ಸಂಗತಿಗಳನ್ನು ಸಮಾಜದೆದುರು ತೆರೆದಿಡುವ ಅವಕಾಶ ಪತ್ರಕರ್ತರಿಗಿದೆ. ಸತ್ಯವನ್ನು ಸಮಾಜದೆದುರು ನಿರ್ಭೀತವಾಗಿ ಹೇಳುವ ಪತ್ರಕರ್ತ ತನ್ನ ಸಾವಿನ ನಂತರವೂ ಜನಮಾನಸದಲ್ಲಿ ಸ್ಥಾನ ಗಳಿಸುತ್ತಾನೆ ಎಂದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ಪ್ರಾರ್ಥಿಸಿದರು. ಅಂಬಿಕಾ ಮಹಾವಿದ್ಯಾಲಯದ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಸ್ವಾಗತಿಸಿದರು. ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಜಯಶ್ರೀ ವಂದಿಸಿ ಮೇಘಾ ಡಿ ಕಿರಿಮಂಜೇಶ್ವರ ಕಾರ್ಯಕ್ರಮ ನಿರ್ವಹಿಸಿದರು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top