ಸರಸರನೆ ಮರವೇರಿ ಹಲಸಿನ ಹಣ್ಣು ಕೊಯ್ದರು ಪೇಜಾವರ ಶ್ರೀಗಳು...!

Upayuktha
0

ಧ್ಯಾನ, ಯೋಗ, ಅಧ್ಯಾತ್ಮ ಸಾಧನೆಯ ಜತೆಗೆ ಲೌಕಿಕದಲ್ಲೂ ಎಣೆಯಿಲ್ಲದ ಕೌಶಲ್ಯ


(ಶ್ರೀ ಗೋಪಾಲದಾಸರ ಕ್ಷಮೆಯಾಚಿಸಿ)

ಮರವಾ.. ನೇರಿದ ಶ್ರೀಯತಿರಾಯ.. 

ಪೇಜಾವರ ಗುರುರಾಯ...|

ಹಲಸಿನ ಮರವನು ಸರಸರನೇರಿ 

ಪಕ್ವ ಫಲವನು  ತ್ವರಿತದಿ ಕೀಳಿ 

ಸವಿಸವಿ ಹಲಸನು ಗೋವಿಗೆ ನೀಡಿ 

ಗೋಪಾಲಕೃಷ್ಣನ ಪಾದ ಸೇವಿಸಲು 

ಮರವಾ...||


ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ಉಡುಪಿ ಸಮೀಪದ ಶ್ರೀಮಠದ ಗೋಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲೇ ಇದ್ದ ಹಲಸಿನ ಮರದಲ್ಲಿ ಪಕ್ವ ಭರಿತ ಹಲಸಿನ ಫಲಗಳು ಇರುವುದನ್ನು ಕಂಡವರೇ, ಶಲ್ಯವನ್ನು ತಲೆಗೆ ಸುತ್ತಿಕೊಂಡು ಕೈಯಲ್ಲೊಂದು ಕತ್ತಿ ಹಿಡ್ಕೊಂಡು ಮೂವತ್ತು ಅಡಿಯಷ್ಟು ಎತ್ತರವಿರುವ ಮರವನ್ನು ನಿರಾಯಾಸದಿಂದ ಏರಿ, ಎಂಟು ಹತ್ತು  ಹಣ್ಣುಗಳನ್ನು ಕಿತ್ತು, ಎರಡೋ ಮೂರನ್ನು ತಮ್ಮ ಸಹಾಯಕರಿಗೆ ಹಂಚಿ ಮತ್ತುಳಿದವನ್ನು ಹಸುಗಳಿಗೆ ಹಂಚಿ, ಗೋವುಗಳ ಸಂತಸದಲ್ಲಿ ತಾವೂ ಸಂತಸಪಟ್ಟು ಮಂದಸ್ಮಿತರಾದ ಕ್ಷಣ ಅಲ್ಲಿದ್ದು ಕಂಡವರಿಗೆಲ್ಲ ಒಂದು ಅಪೂರ್ವವೆನಿಸಿತು. 

ಆಶ್ರಮಪೂರ್ವದಲ್ಲಿ ತಾವು ಕಲಿತ ಮೇಟಿವಿದ್ಯೆಗಳನ್ನು ಗೋವಿನ ಸೇವೆಗೆ ಯಥಾಸಾಧ್ಯ ಬಳಸುವ ಶ್ರೀಗಳ ಪರಿಯೇ ಅನನ್ಯ.

ಈಗಾಗಲೇ ಕೃಷ್ಣನ ಉಡುಪಿಯಿಂದ ರಾಮನ ಅಯೋಧ್ಯೆಯ ತನಕ ನಿರಂತರ ಸಂಚರಿಸುತ್ತಾ  ವಿವಿಧ ಜವಾಬ್ದಾರಿಗಳ ಮೂಲಕ ಶ್ರೀಹರಿಯ ಪಾದಸೇವನೆ ಗೈಯುತ್ತಿರುವುದನ್ನು ಕಾಣುತ್ತಲೇ ಇದ್ದೇವೆ. ಅದಲ್ಲದೇ ನಿರಂತರ 30 ವರ್ಷಗಳ ಕಾಲ  ಸುಮಾರು 30 ಸಾವಿರಕ್ಕೂ ಅಧಿಕ ಕಿ ಮೀ ದೂರವನ್ನು ಪಾದಯಾತ್ರೆಯ ಮೂಲಕವೇ ಸಂಚರಿಸಿ ದೇಶದ ನೂರಾರು ತೀರ್ಥಕ್ಷೇತ್ರಗಳನ್ನು ಪೂಜ್ಯರು ಸಂದರ್ಶಿಸಿರುವುದೂ  ಉಲ್ಲೇಖನೀಯ. ಇದೀಗ ಹಣ್ಣಿನ ಮರಕ್ಕೆ ಪಾದ ಬೆಳೆಸಿಯೂ ಹರಿಪಾದ ಸೇವಿಸಬಹುದೆಂಬ  ಅಪರೂಪದ ಸಂದೇಶವನ್ನೂ ಶ್ರೀಗಳು ನೀಡಿರುವುದು ಒಂದು ವಿಸ್ಮಯವೇ ಸರಿ. ಶ್ರೀಗಳ ಪವಿತ್ರ ಪಾದಗಳಿಗೊಂದು ಉದ್ದಂಡ ನಮಸ್ಕಾರ.

 - ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top