ಪ್ರಸ್ತುತ: ವಿಶ್ವದ ದೊಡ್ಡಣ್ಣನ ಜೊತೆಗೆ ಪ್ರಧಾನಿ ಮೋದಿ; ಹೆಚ್ಚಿದ ಭಾರತದ ಗೌರವ, ಪ್ರಭಾವ

Upayuktha
0

ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅಮೇರಿಕಕ್ಕೆ ಸ್ಟೇಟ್ ವಿಸಿಟ್‌ನಲ್ಲಿ ತೆರಳಿದ್ದಾರೆ. ಸ್ಟೇಟ್ ವಿಸಿಟ್ ಅಂದರೆ ಒಂದು ದೇಶದ ಮುಖ್ಯಸ್ಥರು ಮತ್ತೊಂದು ದೇಶದ ಮುಖ್ಯಸ್ಥರ ಭೇಟಿಗೆ ಆ ದೇಶದ ಮುಖ್ಯಸ್ಥರ ಅಧಿಕೃತ ಆಹ್ವಾನದ ಮೇರೆಗೆ ತೆರಳುವುದು. ಇದು ಒಂದು ದೇಶದ ಮುಖ್ಯಸ್ಥರಿಗೆ ಮತ್ತೊಂದು ದೇಶದಿಂದ ಭೇಟಿಗೆ ಸಿಗಬಹುದಾದ ಅತ್ಯುನ್ನತ ಗೌರವ ಕೂಡ ಹೌದು ಮತ್ತು ಈ ವಿಶೇಷ ಭೇಟಿಯಿಂದ ಎರಡು ದೇಶಗಳ ನಡುವಿನ ಉನ್ನತ ಮಟ್ಟದ ಸಂಬಂಧದ ಬಗ್ಗೆ ಇಡೀ ವಿಶ್ವಕ್ಕೆ ಮತ್ತೆ ಪರಿಚಯಿಸುವ ಉದ್ದೇಶವೂ ಹೌದು. ಹಾಗೆ ನಮ್ಮ ಹೆಮ್ಮೆಯ ಪ್ರಧಾನಿ ಆ ಭೇಟಿಯ ಪ್ರಯುಕ್ತ ಅಮೇರಿಕಕ್ಕೆ ತೆರಳಿದ್ದಾರೆ.


ಬಹುಶಃ ಸ್ವಾತಂತ್ರ್ಯ ನಂತರದ ಭಾರತದ ಪ್ರಧಾನಿಯೋರ್ವರಿಗೆ ಈ ತರಹದ ಗೌರವ ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೇರಿಕಾದಿಂದ ಸಿಕ್ಕಿದ್ದು ಎಂದರೆ ತಪ್ಪಾಗಲಾರದು. ಏಕೆಂದರೆ ಅಮೇರಿಕಾದ ಸಂಸತನಲ್ಲಿ ಬೇರೆ ದೇಶದ ಪ್ರಧಾನಿ ಒಬ್ಬರಿಗೆ ಎರಡೆರಡು ಬಾರಿ ಸಂಸತ್ ಸದಸ್ಯರ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿರುವುದು‌. ಮೋದಿ ಅಮೇರಿಕಾಕ್ಕೆ ತಲುಪಿದಾಗಿನಿಂದ ಈ ಕ್ಷಣದವರೆಗೂ ಅವರಿಗೆ ಅಲ್ಲಿ ಸಿಕ್ಕುತ್ತಿರುವ ಗೌರವ ನೋಡುತ್ತಿದ್ದರೆ ಅದು ಪ್ರತಿಯೊಬ್ಬ ಭಾರತೀಯನಿಗೂ ಸಿಕ್ಕಿರುವುದು ಮತ್ತು ನಾವೆಲ್ಲರೂ ಭಾವೋದ್ವೇಗಕ್ಕೆ ಒಳಗಾಗುವ ಕ್ಷಣವೂ ಹೌದು‌. ನಮ್ಮ ದೇಶದ ಬೇರೆ ಪಕ್ಷದ ರಾಜಕಾರಣಿಗಳು ಪ್ರಧಾನಿ ಎನ್ನುವುದನ್ನು ಮರೆತು ಮೋದಿಯ ಬಗ್ಗೆ ಕೀಳು ಅಭಿರುಚಿಯ ಮಾತುಗಳಲ್ಲಿ ವರ್ಣಿಸುವಾಗ, ಅಮೇರಿಕ ಎನ್ನುವ ದೊಡ್ಡಣ್ಣ ಮತ್ತು ಅಲ್ಲಿನ ಸಂಸತ್ ಸದಸ್ಯರು ಮೋದಿಯನ್ನು ಗೌರವಿಸುವ ಪರಿ ನೋಡಿದರೆ ನಮ್ಮದೇ ದೇಶದ ರಾಜಕಾರಣಿಗಳ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ.


ಒಬ್ಬ ವ್ಯಕ್ತಿ ಇಡೀ ಜೀವನವನ್ನೇ ರಾಷ್ಟ್ರಕ್ಕಾಗಿ ಸಮರ್ಪಿಸಿ ಹಗಲಿರುಳು ದುಡಿದು ದೇಶದ ಪ್ರಗತಿಗಾಗಿ ದುಡಿಯುತ್ತಿರುವ ರೀತಿಯನ್ನು ಬೇರೆ ಬೇರೆ ದೇಶಗಳೆ ಪರಿಗಣಿಸುವಾಗ ನಮ್ಮ ದೇಶದಲ್ಲಿ ಅವಹೇಳನ ಮಾಡುವ ರೀತಿ ನೋಡಿದಾಗ ಮೋದಿ ಒಬ್ಬ ವ್ಯಕ್ತಿಯಲ್ಲಿ ಅವರು ಈ ದೇಶದ ಬಹುದೊಡ್ಡ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.


ನಾವು ನೀವೆಲ್ಲರೂ ಕೇಳಿ, ಓದಿ ತಿಳಿದುಕೊಂಡಿದ್ದೇವೆ 1893 ರಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದಲ್ಲಿ ಚಪ್ಪಾಳೆಯ ಸದ್ದು ಸಮುದ್ರದ ಅಲೆಗಳ ಭೋರ್ಗರೆತದ ಸದ್ದಿನಂತಿತ್ತು ಎಂದು. ಆದರೆ ಇಂದು ಅಂತಹ ಮತ್ತೊಂದು ಕ್ಷಣವನ್ನು ಮೋದಿಯವರ ಅಮೇರಿಕ ಸಂಸತ್ತಿನ ಭಾಷಣದಲ್ಲಿ ನೋಡಿ ಕಣ್ತುಂಬಿಕೊಂಡಿದ್ದೇವೆ. ಸರಿ ಸುಮಾರು ಒಂದು ಗಂಟೆಯ ನಿರರ್ಗಳ ಭಾಷಣದಲ್ಲಿ 15 ಭಾರಿ ಚಪ್ಪಾಳೆಗಳ ಮಹಾಮಳೆ ಸುರಿದಿತ್ತು ಮತ್ತು ಪ್ರತಿ ಬಾರಿಯೂ ಎಲ್ಲಾ ಸಂಸದರು ನಿಂತು ಮೋದಿಯವರ ಮಾತಿಗೆ ತಲೆಬಾಗಿದ್ದರು. ಭಾಷಣದ ಪ್ರತಿ ಹಂತದಲ್ಲೂ ಭಾರತದ ಸಂಸ್ಕೃತಿ, ಇತಿಹಾಸ, ಭಾರತ-ಅಮೇರಿಕಾದ ಸಂಬಂಧ ಮತ್ತು ಇಂದಿನ ಭಾರತದ ಪ್ರಗತಿಪರ ಯೋಜನೆಗಳು ಹಾಗೂ ಅದರಿಂದ ಪ್ರಯೋಜನ ಪಡೆದುಕೊಂಡ ಜನರು ಇಂತಹ ಮಾತುಗಳ ಮೂಲಕವೇ ಸಂಸತ್ ಭವನದಲ್ಲಿ ನೆರೆದಿದ್ದ ಎಲ್ಲಾ ನಾಯಕರ ಮನಸ್ಸು ಗೆಲ್ಲುವಲ್ಲಿ ಮೋದಿ ಸಫಲರಾದರು.


ಬಹುಶಃ ನಾವು ನೀವೆಲ್ಲರೂ ನೋಡಿರುವ ಭಾರತದಲ್ಲಿ ಜನಪ್ರಿಯ ತಾರೆಗಳ ಆಟೋಗ್ರಾಫ್ ಪಡೆಯುವುದು ಸಾಮಾನ್ಯ ಆದರೆ ರಾಜಕೀಯ ವ್ಯಕ್ತಿಗಳ‌ ಆಟೋಗ್ರಾಫ್ ಪಡೆಯಬೇಕು ಎಂದರೆ ಆತ ಅಷ್ಟು ಜನಾನುರಾಗಿ ಆಗಿರಬೇಕು. ಮೋದಿಯ ಆಟೋಗ್ರಾಫ್ ನಮ್ಮ ದೇಶದ ಯಾವುದೇ ವ್ಯಕ್ತಿ ಪಡೆಯುವುದರಲ್ಲಿ ವಿಶೇಷ ಸಂಗತಿಯಿಲ್ಲ ಆದರೆ ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೇರಿಕ ಸಂಸತ್ತಿನ ನಾಯಕರು ಮೋದಿ ಭಾಷಣದ ನಂತರ ನಾ ಮುಂದು ತಾ ಮುಂದು ಎಂದು ಮೋದಿಯ ಆಟೋಗ್ರಾಫ್ ಮತ್ತು ಮೋದಿಯ ಜೊತೆ ಫೋಟೋ ತೆಗೆಸಿಕೊಳ್ಳುವುದನ್ನು ನೋಡಿದಾಗ ಕಣ್ಣಂಚಿನಲ್ಲಿ ಒಂದು ಹನಿ ಆನಂದಭಾಷ್ಪ ಪ್ರತಿಯೊಬ್ಬ ದೇಶ ಪ್ರೇಮಿಗು ಬರುವಂತಹದು. ನಮ್ಮ ದೇಶದ ಬಹುದೊಡ್ಡ ನಾಯಕರು ಎನಿಸಿಕೊಂಡ ಕೆಲವರು ವಿದೇಶಿ ನೆಲದಲ್ಲಿ ನಮ್ಮ ದೇಶದ ಬಗೆಗೆ ಕೀಳರಿಮೆಯ ಮಾತುಗಳನ್ನು ಹೇಳಿದ್ದು ಸರಿ ಸುಮಾರು ಎಪ್ಪತ್ತೈದು ವರ್ಷಗಳಿಂದ ಕೇಳಿಸಿಕೊಂಡ ಬರುತ್ತಿರುವ ನಾವು ನೀವುಗಳು ಇಂದು ಮೋದಿಯೆನ್ನುವ ಏಕಮಾತ್ರ ವ್ಯಕ್ತಿಯ ನಡೆ ನುಡಿ ಮತ್ತು ವಿಚಾರಗಳ ಮೂಲಕ ವಿದೇಶಗಳು ಕೂಡ ಭಾರತೀಯ ಸಂಸ್ಕೃತಿಯನ್ನು ಮತ್ತು ಆಚಾರ ವಿಚಾರವನ್ನು ಗೌರವಿಸುವ ಘಳಿಗೆಯನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ.


ಮೋದಿಯನ್ನು ಪ್ರೀತಿಸುವ ವ್ಯಕ್ತಿ ಅವರ ಪಕ್ಷದ ಕಟ್ಟಾಳು ಆಗಬೇಕು ಎಂದಿಲ್ಲ. ಏಕೆಂದರೆ ದೇಶವನ್ನು ಪ್ರೀತಿಸುವವರು ಮೋದಿಯನ್ನು ದ್ವೇಷಿಸಲಾರರು. ಇಂದು ವಿದೇಶಿ ನೆಲದಲ್ಲಿ ಬದುಕುತ್ತಿರುವ ಭಾರತೀಯರ ಬಳಿ ಕೇಳಿದರೆ ತಿಳಿಯುತ್ತದೆ, ಮೋದಿಯ ಪ್ರಭಾವದಿಂದ ಭಾರತ ಮತ್ತು ಭಾರತೀಯರಿಗೆ ಸಿಗುತ್ತಿರುವ ಗೌರವ ಎಷ್ಟರ ಮಟ್ಟಿಗೆ ಕಳೆದ ಒಂಬತ್ತು ವರ್ಷಗಳಲ್ಲಿ ಹೆಚ್ಚಿದೆ ಎಂದು. ಮೋದಿ ಕಳೆದುಕೊಳ್ಳವುದಕ್ಕೆ ಏನೂ ಇಲ್ಲ. ಏಕೆಂದರೆ ಅವರು ದೇಶದಿಂದ ಪಡೆದುಕೊಂಡಿದ್ದಕ್ಕಿಂತ ದೇಶಕ್ಕಾಗಿ ಕೊಟ್ಟಿರುವುದೇ ಹೆಚ್ಚು. ಹಾಗಾಗಿ ಮೋದಿಯನ್ನು ದ್ವೇಷಿಸಿ ಆತನನ್ನು ಅಧಿಕಾರದಿಂದ ದೂರ ಇಡುವ ಯೋಚನೆ ಮಾಡಿದರೆ ಕಳೆದುಕೊಳ್ಳುವುದು ಭಾರತ ಮಾತ್ರವಲ್ಲ ಇಡೀ ಜಗತ್ತು ಒಬ್ಬ ಪ್ರಬುದ್ಧ ವಿಶ್ವ ನಾಯಕನನ್ನು ಮತ್ತು ಭಾರತೀಯ ಪರಂಪರೆಯು ಅದರ ಶಕ್ತಿಯನ್ನು ಕಳೆದುಕೊಳ್ಳಬಹುದು. ಹಾಗಾಗಿ ನಾವು ನೀವೆಲ್ಲರೂ ಪ್ರಜ್ಞಾವಂತ ರಾಗಬೇಕಾದ ಸಮಯವಿದು.

-ಪ್ರದೀಪ ಶೆಟ್ಟಿ ಬೇಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top