ಗಮನ ಸೆಳೆದ ಕಸದಿಂದ ರಸ- ಕೃತಕ ಹೂಗಳ ಪ್ರದರ್ಶನ

Upayuktha
0

ಮಂಗಳೂರು: ಸಂಚಲನ ದಕ್ಷಿಣ ಕನ್ನಡ, ಮಂಗಳೂರು ಮತ್ತು ಡೀಡ್ಸ್, ಮಂಗಳೂರು ಸಹಭಾಗಿತ್ವದಲ್ಲಿ ರೋಹಿಣಿ ರಾಘವ ಆಚಾರ್, ಪುತ್ತೂರು ಇವರಿಂದ 'ಕಸದಿಂದ ರಸ- ಕೃತಕ ಹೂಗಳ ಪ್ರದರ್ಶನ'ವನ್ನು ಬಲ್ಮಠದ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಶ್ರೀ ವಿದ್ಯಾನಿಲಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.  


ಪ್ರದರ್ಶನ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯ್ಕ, “ಪ್ರಕೃತಿಯಲ್ಲಿ ಯಾವುದೂ ಕಸ ಎನ್ನುವುದು ಇಲ್ಲ. ಆದರೆ ಅಸಮರ್ಪಕ ಕ್ರಮದಿಂದಾಗಿ ತ್ಯಾಜ್ಯ ನಿರ್ವಹಣೆ ಇಂದು ದೊಡ್ಡ ಸಮಸ್ಯೆಯಾಗಿದೆ. ಘನತ್ಯಾಜ್ಯಗಳನ್ನು ಸುಡುವುದು ಮತ್ತು ಹೂಳುವುದು ಎರಡೂ ಅವೈಜ್ಞಾನಿಕವಾಗಿದ್ದು ಇದರಿಂದ ನೆಲ, ಜಲ ಮತ್ತು ವಾಯು ಮಾಲಿನ್ಯವಾಗುತ್ತಿವೆ. ಇದು ಕ್ಯಾನ್ಸರ್‍‌ನಂತಹ ಮಾರಕ ರೋಗಗಳಿಗೆ ದಾರಿಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಬಳಸಿ ಎಸೆಯುವ ವಸ್ತುಗಳನ್ನು ಬಳಸಿ ಅದ್ಭುತವಾದ ಕಲಾಕೃತಿಗಳನ್ನು ಸೃಷ್ಟಿಸಿ ಜನಜಾಗೃತಿಯನ್ನು ಮೂಡಿಸುತ್ತಿರುವುದು ಒಂದು ಅನುಪಮವಾದ ಸೇವೆ,” ಎಂದರು.     

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ವನಿತಾ ದೇವಾಡಿಗ, ಇಂದಿನ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸುವಂತದ್ದು ತುಂಬಾ ಮಹತ್ವವಾಗಿದ್ದು, 'ಕಸದಿಂದ ರಸ' ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು ಅವರಲ್ಲಿ ಸ್ಫೂರ್ತಿ ತುಂಬುವಂತಿದೆ ಎಂದರು.  

 

ವನ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಮತ್ತು ಪರಿಸರವಾದಿ ಜೀತ್ ಮಿಲನ್ ರೋಶ್, ಮುಖ್ಯ ಅತಿಥಿ ನೆಲೆಯಲ್ಲಿ ಮಾತಾನಾಡಿ ಪ್ರಕೃತಿಯಲ್ಲಿ ತ್ಯಾಜ್ಯ ಉತ್ಪಾದನೆ ಮಾಡುವ ಏಕೈಕ ಪ್ರಭೇದ ಅಂದರೆ ಮಾನವ. ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದೂ ಕೂಡ ನಮ್ಮ ಜವಾಬ್ದಾರಿ ಎಂದರು. 

 

ಸಿಡಬ್ಲೂಸಿ ನಿರ್ದೇಶಕ ರೆನ್ನಿ ಡಿಸೋಜಾ ತರಗತಿಯಲ್ಲಿ ಪಡೆಯುವ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು. 

 

ವಾತ್ಸಲ್ಯ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ಸ್ವಾಗತಿಸಿದರು. ಪ್ರೇಮಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಆಶಾಲತಾ ವಂದನಾರ್ಪಣೆ ಸಲ್ಲಿಸಿದರು. ಡೀಡ್ಸ್ ಮಂಗಳೂರು ನಿರ್ದೇಶಕ ಮರ್ಲಿನ್ ಮಾರ್ಟಿಸ್, ಸಂಚಲನ ಪದಾಧಿಕಾರಿಗಳು, ಸದಸ್ಯರು, ಛಾಯಾಗ್ರಾಹಕ ವಸಂತ ಬಡಿಗೇರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೋಹಿಣಿ ರಾಘವ ಅವರನ್ನು ಅವರ ಸಾಧನೆ, ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. 

 

ಬಳಸಿದ ಕಾಗದ, ವೃತ್ತಪತ್ರಿಕೆ, ಫೇಸ್ ಮಾಸ್ಕ್, ಪ್ಲಾಸ್ಟಿಕ್ ಕೈಚೀಲ, ಐಸ್ಕ್ರೀಂ ಕಪ್, ಥರ್ಮೋಕೋಲ್, ಟಿಶ್ಯೂ ಪೇಪರ್, ಖಾಲಿ ಪೆಟ್ಟಿಗೆಗಳು, ರಟ್ಟು ಹೀಗೆ ಕಸ ಎಂದು ಎಸೆಯುವ ವಸ್ತುಗಳಿಂದ ನೂರಕ್ಕೂ ವಿವಿಧ ಬಗೆಯ ಹೂಗಳ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದು ಆಸಕ್ತರನ್ನು ಮನಸೂರೆಗೊಳಿಸುತ್ತಿವೆ.  ಪ್ರದರ್ಶನವು ಜೂನ್ 30, 2030ರ ತನಕ ಇರುತ್ತದೆ.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top