ಮಂಗಳೂರು: ಶ್ರೀ ಭಾರತೀ ಸಮೂಹ ಸಂಸ್ಥೆಗಳು ನಂತೂರು, ಹಲಸು ಮೇಳ ಮತ್ತು ಆಹಾರೋತ್ಸವ ಸಮಿತಿ ವತಿಯಿಂದ ಭಾನುವಾರ ನಡೆದ ಹಲಸು ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು. ಬೆಳಗ್ಗೆ 8ರಿಂದ ರಾತ್ರಿ 8ರ ತನಕ ನಡೆದ ಹಲಸು ಹಬ್ಬದಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಹಲಸಿನ ವಿವಿಧ ತಿನಿಸುಗಳನ್ನು ಸವಿದರು.
ದ.ಕ., ಕಾಸರಗೋಡು, ಉಡುಪಿ ಜಿಲ್ಲೆಗಳಲ್ಲಿನ, ಶ್ರೀರಾಮಚಂದ್ರಾಪುರ ಮಠದ ಶಿಷ್ಯಭಕ್ತರು ಸ್ವಯಂಸೇವಕರಾಗಿ ಸೇರಿ ತಿಂಡಿ ತಿನಿಸುಗಳನ್ನು ತಯಾರಿಸಿದ್ದರು. ಮಂಗಳೂರು ಹವ್ಯಕ ಮಂಡಲ, ಉಪ್ಪಿನಂಗಡಿ ಹವ್ಯಕ ಮಂಡಲ, ಮುಳ್ಳೇರಿಯ ಹವ್ಯಕ ಮಂಡಲಗಳ ಹಲವು ಮನೆಗಳಲ್ಲಿ ಕನಿಷ್ಠ 10 ಮಂದಿ, ಗರಿಷ್ಠ 40 ಮಂದಿ ಜತೆ ಸೇರಿ ಹಪ್ಪಳ, ಸೋಂಟೆ, ಚಿಪ್ಸ್, ಉಂಡ್ಳಕಾಳು, ಹಲ್ವ ಇತ್ಯಾದಿ ತಯಾರಿಸಿದ್ದರು.
ಈ ಹಬ್ಬದಲ್ಲಿ ಗ್ರಾಹಕರು ಮಾಡಿದ ವ್ಯವಹಾರದ ಮೊತ್ತವೆಲ್ಲವೂ ಶ್ರೀರಾಮಚಂದ್ರಾಪುರ ಮಠದ ಅಂಗ ಸಂಸ್ಥೆಗಳಾದ ಶ್ರೀ ಭಾರತೀ ಸಮೂಹ ಸಂಸ್ಠೆ ಮತ್ತು ವಿಷ್ಣು ಗುಪ್ತ ವಿಶ್ವವಿದ್ಯಾಪೀಠದ ಪ್ರಗತಿಗಾಗಿ ಸಮರ್ಪಣೆಯಾದವು.
ಬೆಳಗ್ಗೆ ಭಾರೀ ಮಳೆಯಿದ್ದರೂ ಹಲಸು ಪ್ರಿಯರ ದಂಡು ಹರಿದು ಬರಲು ಅಡ್ಡಿಯಾಗಲಿಲ್ಲ. ಅಪರಾಹ್ನದ ವೇಳೆಗೆ ಮಳೆ ತುಸು ಬಿಡುವು ನೀಡಿದ್ದು ಮತ್ತಷ್ಟು ಸಾರ್ವಜನಿಕರು ಹಲಸಿನ ಹಬ್ಬಕ್ಕೆ ಆಗಮಿಸಲು ಅನುಕೂಲವಾಯಿತು.
ಹಲಸಿನ ಹಣ್ಣಿನ ಕಡುಬು, ಹಲಸಿನ ಕಾಯಿ ದೋಸೆ, ಹಲಸಿನ ಸೊಳೆಯಿಂದ ಮಾಡಿದ ರೊಟ್ಟಿ, ಹಲಸಿನ ಹಣ್ಣಿನ ಪಾಯಸ, ಹಪ್ಪಳ ಇತ್ಯಾದಿ ವೈವಿಧ್ಯಮಯ ಮೌಲ್ಯವರ್ಧಿತ ತಿನಿಸುಗಳು ಗ್ರಾಹಕರ ಮನತಣಿಸಿದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ